News

ಕೊಲ್ಹಾಪುರಿ ಚಪ್ಪಲಿಗೆ ಭೌಗೋಳಿಕ ಸೂಚನೆ (ಜಿಐ) ಟ್ಯಾಗ್ – ಲಿಡ್ ಕರ್ – ಲಿಡ್ ಕಾಮ್ ನಿಗಮದಿಂದ ಮಾಹಿತಿ..!

ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾಂಪ್ರದಾಯಿಕ ಮತ್ತು ಐತಿಹಾಸಿಕ ಪಾದರಕ್ಷೆಯಾದ ಕೊಲ್ಹಾಪುರಿ ಚಪ್ಪಲಿಗೆ ಭೌಗೋಳಿಕ ಸೂಚನೆ (Geographical Identification) ಟ್ಯಾಗ್ ನೀಡಲಾಗಿದೆ. ಜಿಐ ಟ್ಯಾಗ್‍ಅಧಿಕೃತ ನೋಂದಾಯಿತ ಮಾಲೀಕತ್ವವು ಡಾ. ಬಾಬು ಜಗಜೀವನ್ ರಾಮ್ ಲೆದರ್ ಇಂಡಸ್ಟ್ರೀಸ್ ಡೆವಲಪ್ ಮೆಂಟ್  ಕಾರ್ಪೋರೇಷನ್ ಲಿಮಿಟೆಡ್ (ಲಿಡ್‍ಕರ್) ಮತ್ತು ಸಂತ ರೋಹಿದಾಸ್ ಲೆದರ್ ಇಂಡಸ್ಟ್ರೀಸ್ ಮತ್ತು ಚರ್ಮಕಾರ್ ಡೆವಲೆಪ್‍ಮೆಂಟ್ ಕಾಪೋರೇಷನ್ ಲಿಮಿಟೆಡ್ (ಲಿಡ್‍ಕಾಮ್) ಜೊತೆಗಿದೆ ಎಂದು ಎರಡೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಜೂನ್ 2025 ರಲ್ಲಿ, ಪ್ರಸಿದ್ಧ ಇಟಾಲಿಯನ್ ಬ್ರಾಂಡ್ ‘ಪ್ರಾಡಾ’ ಪುರುಷರಿಗಾಗಿ ತನ್ನ ‘ವಸಂತ ಬೇಸಿಗೆ’ ಸಂಗ್ರಹವನ್ನು ಪ್ರಸ್ತುತಪಡಿಸಿತ್ತು. ಈ ಫ್ಯಾಷನ್ ಶೋನಲ್ಲಿ ಮಾಡೆಲ್ ಧರಿಸಿದ್ದ ಚರ್ಮದ ಸ್ಯಾಂಡಲ್‍ಗಳ ವಿನ್ಯಾಸವು ಸಾಂಪ್ರದಾಯಿಕ ಮತ್ತು ಜಿಐ ನೋಂದಾಯಿತ ಕೊಲ್ಲಾಪುರಿ ಪಾದರಕ್ಷೆಗೆ ಹೋಲುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಸಾಂಪ್ರದಾಯಿಕ ಚರ್ಮ ಕುಶಲಕರ್ಮಿ ಗುಂಪುಗಳಿಂದ ಬಲವಾದ ವಿರೋಧ ಪ್ರತಿಕ್ರಿಯೆ ವ್ಯಕ್ತವಾಯಿತು.

ತರುವಾಯ, ಭೌಗೋಳಿಕ ಸೂಚನೆ (ಜಿಐ) ಟ್ಯಾಗ್‍ ನಿಂದ ರಕ್ಷಿಸಲ್ಪಟ್ಟ ಕೊಲ್ಲಾಪುರಿ ಚಪ್ಪಲ್‍ ಗೆ ಹೋಲುವ ವಿನ್ಯಾಸವನ್ನು ಬಳಸುವ ಮೂಲಕ ಪ್ರಾಡಾ ಕಾನೂನು ಉಲ್ಲಂಘಿಸಿದ್ದಕ್ಕಾಗಿ ವಕೀಲರ ಗುಂಪು ಬಾಂಬೆ ಹೈಕೋರ್ಟ್‍ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿತು. 2025ರ ಜುಲೈ 16 ರಂದು, ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ಪೀಠವು, ಕೊಲ್ಹಾಪುರಿ ಚಪ್ಪಲ್‍ನ ಭೌಗೋಳಿಕ ಸೂಚನೆಯ ನೋಂದಾವಣೆ ಹೊಂದಿರುವವರು, ಅಂದರೆ ಕರ್ನಾಟಕದ ಲಿಡ್‍ಕರ್ ಮತ್ತು ಮಹಾರಾಷ್ಟ್ರದ ಲಿಡ್‍ಕಾಂ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮಗಳು ಮಾತ್ರ ನಿಜವಾದ ದೂರುದಾರರಾದ್ದರಿಂದ ಅಂತಹ ನಾಗರಿಕ ಮೊಕದ್ದಮೆ ಹೂಡಲು ಕಾನೂನುಬದ್ಧ ಹಕ್ಕನ್ನು ಸದರಿ ನಿಗಮಗಳು ಹೊಂದಿವೆ ಎಂದು ತೀರ್ಪು ನೀಡಿತು.

ಕೊಲ್ಲಾಪುರಿ ಗ್ಲೋಬಲ್ ಜಿಐ ಟ್ಯಾಗ್‍ನ ಅಧಿಕೃತ ನೋಂದಾಯಿತ ಮಾಲೀಕ ನಿಗಮಗಳಾದ ಲಿಡ್‍ಕರ್ ಮತ್ತು ಲಿಡ್‍ ಕಾಂ, ‘ಪ್ರಾಡಾ’ ಅಥವಾ ಅಂತಹುದೇ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಯಾವುದೇ ರೀತಿಯಲ್ಲಿ ಸಂವಹನ ಮಾಡಲು, ಚರ್ಚಿಸಲು ಅಥವಾ ಪ್ರತಿನಿಧಿಸಲು ಬೇರೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಹಕ್ಕಿಲ್ಲ ಎಂದು ತಮ್ಮ ನಿಲುವನ್ನು ಜಂಟಿಯಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿವೆ.

ಕೊಲ್ಲಾಪುರಿ ಚಪ್ಪಲ್‍ಗಳ ಇತಿಹಾಸವು 12 ನೇ ಶತಮಾನದ ವಚನ ಚಳವಳಿಯ ಸಮಯದಲ್ಲಿ ವಿಶ್ವಗುರು ಬಸವಣ್ಣ ಮತ್ತು ಸಂತ ಹರಳಯ್ಯ ರವರ ಪ್ರಗತಿಪರ ನೀತಿಗಳೊಂದಿಗೆ ಸಂಬಂಧ ಹೊಂದಿದ್ದು, ಲಿಡ್‍ಕರ್  ಮತ್ತು ಲಿಡ್‍ಕಾಂ ನ ಜಂಟಿ ಉದ್ದೇಶ ಭೌಗೋಳಿಕ ಸೂಚನೆಯನ್ನು ರಕ್ಷಿಸುವುದು ಮಾತ್ರವಲ್ಲದೆ ಸಾವಿರಾರು ಸ್ಥಳೀಯ ಚರ್ಮದ ಕುಶಲಕರ್ಮಿಗಳ ಹಕ್ಕುಗಳನ್ನು ರಕ್ಷಿಸುವುದು ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಂಪ್ರದಾಯದ ಮೇಲೆ ಬಲವಾದ ಛಾಪು ಮೂಡಿಸುವುದು ಎಂದು ಲಿಡ್‍ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ.ಎಂ. ವಸುಂಧರಾ ಮತ್ತು ಲಿಡ್‍ಕಾಂ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪ್ರೇರಣಾ ದೇಶಭ್ರತರ್ ಸ್ಪಷ್ಟಪಡಿಸಿದ್ದಾರೆ.

admin
the authoradmin

Leave a Reply