ಮೈಸೂರು ದಸರಾದ ಮುನ್ನುಡಿ ಎನ್ನುವಂತೆ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯ ಕೇಂದ್ರದ ಬಳಿ ಗಜಪಯಣ ಚಾಲನೆ ನೀಡಿದ್ದು ಅಲ್ಲಿ ಗಜಪಡೆಗಳಿಗೆ ವಿಧಿವಿಧಾನಗಳಂತೆ ಸಂಪ್ರದಾಯಬದ್ಧವಾಗಿ ಬೀಳ್ಕೊಡುಗೆಯನ್ನು ನೀಡಲಾಗಿದ್ದು ಅಲ್ಲಿಂದ ಹೊರಟ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳನ್ನೊಳಗೊಂಡ ಗಜಪಡೆ ಸುರಕ್ಷಿತವಾಗಿ ಮೈಸೂರು ನಗರವನ್ನು ತಲುಪಿದ್ದು ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿವೆ.. ಮುಂದಿನ ದಿನಗಳಲ್ಲಿ ಅವುಗಳನ್ನು ಸರ್ವಾಲಂಕಾರದಲ್ಲಿ ಮೆರವಣಿಗೆಯೊಂದಿಗೆ ಅರಣ್ಯ ಭವನದಿಂದ ಮೆರವಣಿಗೆಯಲ್ಲಿ ಕರೆತಂದು ಭವ್ಯಸ್ವಾಗತದೊಂದಿಗೆ ಅರಮನೆ ಆವರಣಕ್ಕೆ ಕರೆದೊಯ್ಯಲಾಗುತ್ತದೆ.
ಸೋಮವಾರ ಹುಣಸೂರಿನ ದೊಡ್ಡ ಹೆಜ್ಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರನಹೊಸಳ್ಳಿಯ ವಲಯ ಕಚೇರಿ ಬಳಿ (ಸಫಾರಿ ಕೌಂಟರ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಗಜಪಯಣಕ್ಕೆ ಸಾಕ್ಷಿಯಾದರು. ಮಧ್ಯಾಹ್ನ 12.34ರಿಂದ 12.59ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ವಿಶೇಷವಾಗಿ ಅಲಂಕೃತಗೊಂಡು ಸಾಲಾಗಿ ನಿಂತಿದ್ದ ಮತ್ತಿಗೋಡು ಆನೆ ಶಿಬಿರದ ಕ್ಯಾಪ್ಟನ್ ಅಭಿಮನ್ಯು, ಭೀಮ, ಏಕಲವ್ಯ, ಕೊಡಗು ಜಿಲ್ಲೆಯ ದುಬಾರೆ ಶಿಬಿರದ ಧನಂಜಯ, ಪ್ರಶಾಂತ, ಕಂಜನ್, ಕಾವೇರಿ, ಬಳ್ಳೆ ಶಿಬಿರದ ಮಹೇಂದ್ರ, ಲಕ್ಷ್ಮೀ ಆನೆಗಳು ಹೀಗೆ ಏಳು ಗಂಡಾನೆ ಮತ್ತು ಎರಡು ಹೆಣ್ಣಾನೆ ಸೇರಿ ಸಾಲಾಂಕೃತವಾಗಿ ನಿಂತ ಒಂಬತ್ತು ಆನೆಗಳಿದ್ದ ಗಜಪಡೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಗಣ್ಯರು ದೀಪ ಬೆಳಗಿ, ಪುಷ್ಪಾರ್ಚನೆ ನೆರವೇರಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.
ಆ ನಂತರ ವಿವಿಧ ಕಲಾತಂಡಗಳು ಮಂಗಳವಾದ್ಯದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಕಾಡಿನಿಂದ ಮೈಸೂರು ಕಡೆಗೆ ಸಾಗಿ ಬಂದ ಗಜಪಡೆಗೆ ಗಜಪಡೆಯ ಅರ್ಚಕ ಮೈಸೂರಿನ ಪ್ರಹ್ಲಾದ್ ರಾವ್ ಅವರು ಪಾದ ತೊಳೆದು, ಆನೆಗಳ ಮೇಲಿನ ದೃಷ್ಟಿದೋಷ ತೆಗೆದರು. ಇದಾದ ನಂತರ ಆನೆಗಳ ಪಾದದ ಬಳಿ ಕುಂಕುಮ, ಅರಿಶಿಣ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸಿದರಲ್ಲದೆ, ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ ಶೋಡಷೋಪಚಾರ ಪೂಜೆ ಮಾಡಿದರು.
ಇಷ್ಟೇ ಅಲ್ಲದೆ ಗಣಪತಿ ಅರ್ಚನೆ ಜತೆಗೆ ವನದೇವತೆ, ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಪೂಜೆಯ ನಂತರ ಸಚಿವರು, ಶಾಸಕರು ಸೇರಿದಂತೆ ಇತರೆ ಜನಪ್ರತಿನಿಧಿಗಳು ಪುಷ್ಪಾರ್ಚನೆ ನೆರವೇರಿಸುವುದರೊಂದಿಗೆ ಗಜಪಡೆಯನ್ನು ಕಾಡಿನಿಂದ ನಾಡಿಗೆ ಸ್ವಾಗತಿಸಿದರು.
ಇದನ್ನೂ ಓದಿ: ಮೈಸೂರು ದಸರಾ ಸುಸೂತ್ರವಾಗಿ ನಡೆಸಲು 19 ಉಪಸಮಿತಿ ರಚನೆ… ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?
ಪೂಜೆ ಬಳಿಕ ಗಜಪಡೆ ವೀರನಹೊಸಳ್ಳಿಯ ವಲಯ ಕಚೇರಿ ಬಳಿಯಿಂದ ವೀರನಹೊಸಳ್ಳಿ ಆಶ್ರಮ ಶಾಲೆವರೆಗೆ ಒಂದು ಕಿ.ಮೀ ದೂರ ಕಾಲ್ನಡಿಗೆ ಮೂಲಕ ಬಂದವು. ಈ ವೇಳೆ ಸುತ್ತ-ಮುತ್ತಲಿನ ಗ್ರಾಮಗಳ ಮತ್ತು ಆಡಿಗಳ ನೂರಾರು ಮಹಿಳೆಯರು ಗಜಪಡೆಗೆ ಪೂರ್ಣಕುಂಭ ಸ್ವಾಗತ ಕೋರಿದರು. ಜತೆಗೆ ಚಂಡೆ, ನಗಾರಿ, ವೀರಗಾಸೆ, ಸೇರಿದಂತೆ ನಾನಾ ಕಲಾವಿದರ ತಂಡಗಳು ಗಜಪಡೆಯ ಮೆರವಣಿಗೆಗೆ ಮೆರುಗು ನೀಡಿದವು. ಗಜಪಯಣದ ಅಂಗವಾಗಿ ಆನೆಗಳನ್ನು ವಿಶೇಷವಾಗಿ ಶೃಂಗರಿಸಲಾಗಿತ್ತು. ಗಜಪಯಣ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಆದಿವಾಸಿಗಳು, ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ಅಧಿಕಾರಿಗಳು, ಬೇರೆ ಬೇರೆ ಇಲಾಖೆ ನೌಕರರು ಕೂಡ ಆಗಮಿಸಿ ಸಂಭ್ರಮಿಸಿದ್ದು, ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ಕೆ.ವೆಂಕಟೇಶ್, ಶಾಸಕರಾದ ಜಿ.ಡಿ.ಹರೀಶ್ ಗೌಡ, ಡಿ.ರವಿಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇನ್ನು ವೀರನಹೊಸಹಳ್ಳಿಯಿಂದ ಹೊರಟ ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಭೀಮ, ಕಂಜನ್, ಏಕಲವ್ಯ, ಪ್ರಶಾಂತ, ಮಹೇಂದ್ರ, ಕಾವೇರಿ, ಬಳ್ಳೆ ಲಕ್ಷ್ಮೀ ಆನೆಗಳ ತಂಡ ಸೋಮವಾರ ಮಧ್ಯಾಹ್ನ ಮೈಸೂರಿನತ್ತ ಪಯಣ ಬೆಳೆಸಿ ಸಂಜೆ ವೇಳೆಗೆ ಮೈಸೂರಿನ ಅರಣ್ಯ ಭವನದ ಆವರಣಕ್ಕೆ ಆಗಮಿಸಿ ವಾಸ್ತವ್ಯ ಹೂಡಿದವು.
ಇನ್ನು ಗಜಪಡೆಯ ಎರಡನೇ ತಂಡ ಕೆಲವು ಸಮಯಗಳ ಬಳಿಕ ಮೈಸೂರಿಗೆ ಆಗಮಿಸಲಿವೆ. ಈ ಎರಡನೆಯ ತಂಡದಲ್ಲಿ ಮೂರು ಹೊಸ ಆನೆಗಳಿವೆ. ಅಂದರೆ ಮೊದಲ ಬಾರಿಗೆ ದಸರಾದಲ್ಲಿ ಇವು ಭಾಗವಹಿಸುತ್ತಿವೆ. ಅದರಲ್ಲೂ ಈ ಬಾರಿಯ ದಸರಾ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಅಜಾನುಬಾಹು ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಆನೆಯೂ ಭಾಗವಹಿಸುತ್ತಿದ್ದು, ನಾಡಹಬ್ಬಕ್ಕೆ ಮೆರುಗು ನೀಡಲಿದೆ.
ಮೈಸೂರು ರಾಜವಂಶಸ್ಥರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2013ರಲ್ಲಿ ನಿಧನರಾದ ಬಳಿಕ ಅವರ ನೆನಪಿಗೆ 2014ರಲ್ಲಿ ಶನಿವಾರಸಂತೆ ಅರಣ್ಯ ಭಾಗದಲ್ಲಿ ಸೆರೆಹಿಡಿದಿದ್ದ ನಾಲ್ಕು ಆನೆಗಳ ಪೈಕಿ ಅಜಾನುಬಾಹುವಾಗಿದ್ದ ಆನೆಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿತ್ತು.
ಇದನ್ನೂ ಓದಿ: ಮೈಸೂರು ದಸರಾಕ್ಕೆ ಮುನ್ನುಡಿ ಬರೆಯಲಿರುವ ಗಜಪಯಣ… ಸಿದ್ಧತೆಗಳು ಹೇಗೆಲ್ಲ ನಡೆಯುತ್ತಿವೆ ಗೊತ್ತಾ?
ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆನೆಯು ಶಾಂತ ಸ್ವಭಾವದಾಗಿದ್ದು, ಇದೀಗ 56 ವರ್ಷ ವಯಸ್ಸಾಗಿದೆ. ಈ ಆನೆ 2.86 ಮೀಟರ್ ಎತ್ತರ, 3.25 ಮೀಟರ್ ಉದ್ದ ಹಾಗೂ 5500 ತೂಕ ಹೊಂದಿದ್ದು, ಅಜಾನುಬಾಹುವಾಗಿದೆ. ಕ್ಯಾಪ್ಟನ್ ಅರ್ಜುನಂತೆ ಭಾರಿ ಮೈಕಟ್ಟು ಹೊಂದಿರುವ ಈ ಕಾಡಾನೆ ಮತ್ತು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಳಗಿದೆ. ಅದರಲ್ಲೂ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಯಾವ ಅಂಜಿಕೆಯಿಲ್ಲದೇ ಮುನ್ನುಗ್ಗುವ ಶ್ರೀಕಂಠ ಅಜಾನುಬಾಹು ಅಷ್ಟೇ ಅಲ್ಲದೇ ಧೈರ್ಯಶಾಲಿಯೂ ಆಗಿದ್ದು, ಇದರ ಮಾವುತರಾಗಿ ರಾಧಾಕೃಷ್ಣ ಮತ್ತು ಕಾವಡಿಯಾಗಿ ಓಂಕಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಕಂಠನ ಜತೆಗೆ 44 ವರ್ಷದ ರೂಪಾ ಮತ್ತು 11 ವರ್ಷದ ಹೇಮಾವತಿ ಆನೆಯೂ ಮೊದಲ ಬಾರಿಗೆ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿವೆ. ಇನ್ನುಳಿದಂತೆ ದುಬಾರೆ ಶಿಬಿರದ ಸುಗ್ರೀವ (43), ಗೋಪಿ (42) ಎರಡನೇ ತಂಡದಲ್ಲಿ ಇರಲಿವೆ.
ಈಗಾಗಲೇ 5 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಕ್ಯಾಪ್ಟನ್ ಅಭಿಮನ್ಯುವಿಗೆ 59-60 ವರ್ಷ ವಯಸ್ಸಾಗಿದ್ದು, ಈ ಬಾರಿಯೂ ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯು ಆನೆಯನ್ನು 1970ರಲ್ಲಿ ಕೊಡಗು ಜಿ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಈ ಆನೆ ಹುಲಿ, ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಳಗಿದ್ದು, 2012ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 60ವರ್ಷ ಮೇಲ್ಪಟ್ಟ ಆನೆಗಳಿಗೆ ಭಾರ ಹೊರಿಸಬಾರದು ಎಂಬ ನಿಯಮ ಹಿನ್ನೆಲೆ 2026ರ ದಸರೆಯಲ್ಲಿ ಅಭಿಮನ್ಯು ಅಂಬಾರಿ ಹೊರುವುದು ಅನುಮಾನ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.