ಮನೆಯಿಂದ ಹೊರಗೆ ಬರಲು ಹೆಣ್ಣುಮಕ್ಕಳು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ರಂಗಭೂಮಿಗೆ ಎಂಟ್ರಿಕೊಟ್ಟು ಮುಂದೆ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಹಿರಿಯ ನಟಿಯರಲ್ಲಿ ಕಮಲಾಬಾಯಿ ಕೂಡ ಒಬ್ಬರಾಗಿದ್ದಾರೆ. ಇವರು ನಟಿಸಿದ ಸಿನಿಮಾಗಳು ಇವತ್ತಿಗೂ ಗಮನಸೆಳೆಯುವ ಕಲಾತ್ಮಕ ಚಿತ್ರಗಳಾಗಿ ಉಳಿದು ಹೋಗಿವೆ.
ಇದನ್ನೂ ಓದಿ: ಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ…
ಹಿರಿಯ ನಟಿ ಕಮಲಾಬಾಯಿ ಅವರ ನಾಟಕ ಮತ್ತು ಸಿನಿಮಾ ಬದುಕಿನ ಬಗ್ಗೆ ನಾವೀಗ ಮೆಲುಕು ಹಾಕುತ್ತಾ ಹೋದರೆ ಅವತ್ತಿನ ಕಾಲದಲ್ಲಿ ಅವರು ನಾಟಕ ರಂಗಕ್ಕೆ ಬಂದಿದ್ದು ಮತ್ತು ಮುಂದೆ ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡಿದ್ದು, ಎಲ್ಲವೂ ಒಂದು ಕುತೂಹಲಕಾರಿ ಸಂಗತಿಯೇ… ಇವತ್ತಿನ ಜನಕ್ಕೆ ಬಹುಶಃ ಕಮಲಾಬಾಯಿಯಂತಹ ಹಿರಿಯ ನಟಿಯರ ಬಗ್ಗೆ ಗೊತ್ತೇ ಇಲ್ಲ ಎನ್ನಬೇಕು.. ಹೀಗಾಗಿ ಅಂತಹ ನಟಿಯ ಬಗ್ಗೆ ತಿಳಿಸುವ ಪ್ರಯತ್ನ ಇದಾಗಿದ್ದು, ಅವರ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಒಂದಷ್ಟು ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
1913ರ ಆಸುಪಾಸಲ್ಲಿ ಕರ್ನಾಟಕ-ಆಂಧ್ರ ಗಡಿನಾಡು ಭಾಗದ ಆದವಾನಿಯಲ್ಲಿ ಮಧ್ಯಮ ವರ್ಗದ ಮಡಿವಂತ ಕುಟುಂಬದಲ್ಲಿ ಜನಿಸಿದ ಕಮಲಾಬಾಯಿ 14ನೇ ವಯಸ್ಸಿಗೆ ನಾಟಕ ಮತ್ತು ಸಿನಿಮ ಎರಡೂ ಕ್ಷೇತ್ರದಲ್ಲಿ ಒಳ್ಳೆಹೆಸರು ಮಾಡಿದರು. ಕನ್ನಡದ ಹಿರಿಯನಟಿ ಲಕ್ಷ್ಮೀಬಾಯಿಯವರ ಸ್ವಂತಸೋದರಿ ಕಮಲಾಬಾಯಿ! ಇವರು ರಂಗಭೂಮಿಗೆ ಎಂಟ್ರಿಕೊಟ್ಟ ಹೊಸತರಲ್ಲಿ ನಟ ಆರ್. ನಾಗೇಂದ್ರರಾಯರ ಕೈಹಿಡಿದು ಹದಿವಯಸ್ಸಲ್ಲೆ ಗೃಹಿಣಿಯಾದರು. ತಮ್ಮ ಸಹೋದರಿ, ಸಹೋದ್ಯೋಗಿ ಲಕ್ಷ್ಮೀಬಾಯಿಯಂತೆ ಇವರೂ ಸಹ ಸತಿಸುಲೋಚನ ಚಿತ್ರದ 2ನೇ ಹೀರೋಯಿನ್ ಪಟ್ಟದಿಂದ ವಂಚಿತಳಾದ ನತದೃಷ್ಟೆ!
ಇದನ್ನೂ ಓದಿ: ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್ ತ್ರಿಪುರಾಂಭ… ಇವರ ಸಿನಿಮಾದಾಚೆಗಿನ ಬದುಕು ಹೇಗಿತ್ತು?
ಇಷ್ಟಾದರೂ ತಾವು ನಂಬಿದ್ದ ತಮ್ಮ ಪತಿ, ಸಹೋದ್ಯೋಗಿ-ಗಾಡ್ ಫಾದರ್ ನಾಗೇಂದ್ರರಾಯರ ಬೆಂಬಲದಿಂದ ಬಹುಬೇಗ ಕೀರ್ತಿಶಿಖರ ಏರಿದರು. ಪತಿಯ ಬಳಿ ಸಾಕಷ್ಟು ಆರ್ಥಿಕಾನುಕೂಲ ಇಲ್ಲದೆ ಹೋದ್ದರಿಂದ ಕನ್ನಡದ ಮೊಟ್ಟಮೊದಲ ವಾಕ್ಚಿತ್ರದ ಹೀರೋ-ಹೀರೋಯಿನ್ ಆಗುವ ಈ ಮೂವರ ಕನಸು, ನನಸಾಗಲೇ ಇಲ್ಲ. ಭಾರತೀಯ ಸಂಪ್ರದಾಯ ಸಂಸ್ಕೃತಿ ಮಡಿವಂತಿಕೆಯಿಂದ ತುಂಬಿಹೋಗಿದ್ದ ಮತ್ತು ಮಹಿಳಾ ಕಲಾವಿದೆ ದೊರಕದೇ ಇರುವ ಬರಗಾಲದಲ್ಲೂ ಪ್ರಮುಖ ನಟಿಯಾಗಿ ಮೆರೆದ ಕಮಲಾಬಾಯಿ ಅನೇಕ ಸಾಮಾಜಿಕ ಪೌರಾಣಿಕ ಐತಿಹಾಸಿಕ ನಾಟಕ-ಸಿನಿಮಾ ಕ್ಷೇತ್ರದ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡು ತಮ್ಮದೇ ಛಾಪು ಮೂಡಿಸಿದರು.
ಪ್ರತಿಯೊಂದು ಚಿತ್ರದಲ್ಲು ಏನಾದರೊಂದು ವಿಶೇಷ ಕೌಶಲ್ಯ ವಿಶಿಷ್ಟಾಭಿನಯ ಮೂಲಕ ಪ್ರೇಕ್ಷಕರನ್ನ ಕಟ್ಟಿಹಾಕಿ ಎಲ್ಲ ವಯಸ್ಸಿನ ಕಲಾರಾಧಕರನ್ನ ಆಯಸ್ಕಾಂತದಂತೆ ಸೆಳೆದು, ಎಲ್ಲ ವರ್ಗದ ರಸಿಕರ ತನುಮನ ಗೆದ್ದರು! ಇವತ್ತಿನಂತೆ ಅಭಿಮಾನಿ ಸಂಘ-ಸಂಸ್ಥೆಗಳ ಭರಾಟೆ ಇಲ್ಲದ ಆ ಕಾಲದಲ್ಲಿ ಕಂಡು ಕೇಳರಿಯದ ಇವರ ಅಭಿಮಾನಿ ಗುಂಪು ಹುಟ್ಟಿಕೊಂಡಿದ್ದೇ ಇತಿಹಾಸ!
ಇದನ್ನೂ ಓದಿ: ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮ… ಇವರು ದೇಶದ ಮೊಟ್ಟ ಮೊದಲ ನಿರ್ಮಾಪಕಿ!
ತಮಗೆ ದೊರಕಿದ ಪ್ರತಿಯೊಂದು ಪಾತ್ರವನ್ನು ಪ್ರಾಮಾಣಿಕತೆ, ಶ್ರದ್ಧೆಯಿಂದ ನಿರ್ವಹಿಸಿ, ಆಯಾಯಪಾತ್ರ, ನಿರ್ಮಾಪಕ, ನಿರ್ದೇಶಕ, ನಾಯಕನಟ, ಪ್ರೇಕ್ಷಕವರ್ಗ, ಎಲ್ಲರಿಗೂ ಸಂಪೂರ್ಣ ನ್ಯಾಯ ದೊರಕಿಸಿಕೊಡುತ್ತಿದ್ದ ಸಮರ್ಪಕ ನಟಿ. ಈ ಕಾರಣಕ್ಕೇ, ಸಿನಿಮಾ, ನಾಟಕ, ಪತ್ರಕರ್ತ ವರ್ಗದವರಿಂದ ಮೊದಲ್ಗೊಂಡು ರಾಜ ಮಹಾರಾಜ ದೇಶಿ, ವಿದೇಶೀ ಅಭಿಮಾನಿಗಳಾದಿ ಎಲ್ಲರಿಂದಲೂ ಸಭೆ ಸಮಾರಂಭಗಳಲ್ಲಿ ಶಹಬ್ಬಾಸ್ ಗಿರಿ ಸನ್ಮಾನ ಬಿರುದು ಬಹುಮಾನ ಪಡೆಯುತ್ತಿದ್ದ ಕಮಲಬಾಯಿ ಓರ್ವ ಸರಳ ಸಜ್ಜನ ಸಾರ್ಥಕ ಕಲಾವಿದೆ, ಎನಿಸಿದ್ದರು.
ಆಗಿನ ಕಾಲದಲ್ಲಿ ಅತ್ಯುತ್ತಮ ಅಭಿನಯಕ್ಕೂ “ಪ್ರಶಸ್ತಿ” ಎಂಬುದು ಕನಸಾಗಿತ್ತು! ಆದರೆ ಪ್ರತಿಭಾವಂತರನ್ನು ಗುರುತಿಸಿ, ಕಲೆಕ್ಟರ್ ಸಾಹುಕಾರ್ ಮಹಾರಾಜರಿಂದ ನೀಡುತ್ತಿದ್ದ ಪುರಸ್ಕಾರ ಬಿರುದು ಬಹುಮಾನ ಅಸ್ತಿತ್ವದಲ್ಲಿತ್ತು. ಹೀಗಾಗಿ ಧೀಮಂತನಟಿ ಸಹಜಕಲಾವಿದೆ ತುಂಬಿದಕೊಡ ಕಮಲಬಾಯಿಗೂ ಹಲವು ಬಾರಿ ದೊರಕಿತ್ತು. ಲಕ್ಷ್ಮೀಬಾಯಿ-ಕಮಲಾಬಾಯಿ ಸಹೋದರಿಜೋಡಿ 20ಕ್ಕೂಹೆಚ್ಚು ಕನ್ನಡ ತೆಲುಗು ಚಿತ್ರಗಳಲ್ಲಿ ನಟಿಸಿದರು.
ಇವರ ನಂತರ ಸ್ಯಾಂಡಲ್ ವುಡ್ ನ ಮತ್ತೊಂದು ಸೋದರಿಜೋಡಿ ಪಂಡರಿಬಾಯಿ-ಮೈನಾವತಿ. ಇವರು ಅಚ್ಚ ಕನ್ನಡತಿಯರು ಮಾತ್ರವಲ್ಲ ಚಂದನವನಕಂಡ ಅಪರೂಪದ ಒಡಹುಟ್ಟಿದವರೂ ಹೌದು! ಕಾಲಕ್ರಮೇಣ ಲಕ್ಷ್ಮೀಬಾಯಿ ನಿಧನರಾದ ಆಸುಪಾಸಲ್ಲೇ ಕಮಲಾಬಾಯಿ ಕೂಡ ಅನಾರೋಗ್ಯದಿಂದ ತಮ್ಮ 65ನೇ ವಯಸ್ಸಲ್ಲಿ 1978ರಲ್ಲಿ ವಿಧಿವಶರಾದರು?!
ಇದನ್ನೂ ಓದಿ: ಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…
ಕಮಲಾಬಾಯಿ ನಟಿಸಿದ ಸಿನಿಮಾಗಳು ಯಾವುವು ಎಂದರೆ, ಸುಭದ್ರಾ, ಸತ್ಯಹರಿಶ್ಛಂದ್ರ, ಹೇಮರೆಡ್ಡಿಮಲ್ಲಮ್ಮ, ಮಹಾತ್ಮಕಬೀರ್, ಭಕ್ತರಾಮದಾಸ, ಗೋರಾಕುಂಬಾರ, ಚಂಚಲಕುಮಾರಿ, ಶ್ರೀರಾಮಪೂಜ, ಶಿವಶರಣೆನಂಬಿಯಕ್ಕ, ಭಕ್ತಮಲ್ಲಿಕಾರ್ಜುನ, ಗಂಧರ್ವಕನ್ಯೆ, ಭಕ್ತಮಾರ್ಕಂಡೇಯ, ಜಾತಕಫಲ, ಜಗಜ್ಯೋತಿ ಬಸವೇಶ್ವರ, ಮುಂತಾದ ಚಿತ್ರಗಳು. ಇವರು ನಟಿಸಿದ ಮೊಟ್ಟಮೊದಲ ಚಿತ್ರ 1937ರಲ್ಲಿ ಬಿಡುಗಡೆಯಾದ ’ಪುರಂದರದಾಸರು’ ಮತ್ತು ಕಟ್ಟಕಡೆಯ ಫ಼ಿಲಂ 1971ರಲ್ಲಿ ತೆರೆಕಂಡ ಪದ್ಮಿನಿ ಪಿಕ್ಛರ್ಸ್ ರವರ ಕನ್ನಡ ಸಿನಿಮಾ ಅಳಿಯಗೆಳೆಯ.