ಸಾಮಾನ್ಯವಾಗಿ ಪಾಯಸಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ತಮ್ಮ ಮನೆಗಳಲ್ಲಿ ಆಗಾಗ್ಗೆ ಒಂದಲ್ಲ ಒಂದು ಬಗೆಯ ಪಾಯಸವನ್ನು ಮಾಡುತ್ತಲೇ ಇರುತ್ತಾರೆ. ಊಟದ ಜತೆಯಲ್ಲಿ ಒಂದು ಕಪ್ ಪಾಯಸವಿದ್ದರೆ ಖುಷಿಕೊಡುತ್ತದೆ. ಇದರಲ್ಲಿ ಬಾರ್ಲಿ ಮತ್ತು ಗಸಗಸೆ ಪಾಯಸ ಆರೋಗ್ಯಕ್ಕೆ ಹಲವು ವಿಧದಲ್ಲಿ ಸಹಕಾರಿಯಾಗಿದೆ.
ಇದನ್ನೂ ಓದಿ: ನಿತ್ಯದ ಸೇವನೆಗೆ ಅನುಕೂಲವಾಗುವಂತೆ ಅಕ್ಕಿಯಿಂದ ಏನೆಲ್ಲ ತಿಂಡಿ ತಯಾರಿಸಬಹುದು…?
ಬಾರ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ತಂಪಾಗಿಡುತ್ತದೆ. ಜತೆಗೆ ಬೇರೆ, ಬೇರೆ ಆರೋಗ್ಯ ಸಂಬಂಧಿತ ತೊಂದರೆಯನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಇನ್ನು ಗಸಗಸೆಯಲ್ಲಿಯೂ ಹಲವು ರೀತಿಯ ಔಷಧೀಯ ಗುಣಗಳಿದ್ದು, ರಾತ್ರಿ ವೇಳೆಯಲ್ಲಿ ಪಾಯಸ ಕುಡಿದು ಮಲಗಿದರೆ ಕಣ್ತುಂಬ ನಿದ್ದೆ ಮಾಡಲು ಸಾಧ್ಯವಾಗುತ್ತದೆ ಇದೆರಡರಿಂದ ರುಚಿಯಾದ ಪಾಯಸವನ್ನು ಮಾಡಬಹುದಾಗಿದ್ದು, ಹೇಗೆ ಮಾಡುವುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ರುಚಿಯಾದ ಬಾರ್ಲಿ ಪಾಯಸ
ಬೇಕಾಗುವ ಪದಾರ್ಥಗಳು: ಬಾರ್ಲಿ- ಒಂದು ಕಪ್, ಹಾಲು- ಒಂದು ಕಪ್, ಬಾದಾಮಿ, ದ್ರಾಕ್ಷಿ, ಗೋಡಂಬಿ- ಸ್ವಲ್ಪ, ಸಕ್ಕರೆ- ಸಿಹಿಗೆ ತಕ್ಕಂತೆ, ಕೇಸರಿ-ಸ್ವಲ್ಪ
ಮಾಡುವ ವಿಧಾನ: ಬಾರ್ಲಿಯನ್ನು ಹಿಂದಿನ ದಿನ ರಾತ್ರಿಯೇ ನೆನೆಯಲು ಹಾಕಬೇಕು. ಬೆಳಗ್ಗೆ ಅದನ್ನು ತೆಗೆದು ಚೆನ್ನಾಗಿ ಬೇಯಿಸಿಕೊಳ್ಳಬೇಕು. ಆ ನಂತರ ಒಂದು ಪಾತ್ರೆಯಲ್ಲಿ ಬೇಯಿಸಿದ ಬಾರ್ಲಿ ಹಾಕಿ ಅದಕ್ಕೆ ಹಾಲು ಹಾಕಬೇಕು. (ತೆಳು ಅಥವಾ ಮಂದ ಹೇಗೆ ಬೇಕೋ ಹಾಗೆ ಹಾಲನ್ನು ಹಾಕಬೇಕು) ನಿಧಾನ ಉರಿಯಲ್ಲಿ ಸೌಟುನಿಂದ ತಿರುಗಿಸುತ್ತಾ ಚೆನ್ನಾಗಿ ಕುದಿಸಬೇಕು.
ಇದನ್ನೂ ಓದಿ: ಪಾಲಕ್ ನಿಂದ ಏನೆಲ್ಲ ಮಾಡಬಹುದು ಗೊತ್ತಾ? ಈಗಲೇ ನೀವೇ ಮನೆಯಲ್ಲಿ ತಯಾರಿಸಿ..
ಬಳಿಕ ಅದಕ್ಕೆ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಹಾಕಬೇಕು. ಆ ನಂತರ ಒಲೆಯಿಂದ ಇಳಿಸಿ ಬಾದಾಮಿ ಚೂರುಗಳನ್ನು ಹಾಗೂ ಹಾಲಿನಲ್ಲಿ ಅದ್ದಿದ ಕೇಸರಿ ಎಳೆಗಳನ್ನು ಅದರ ಮೇಲೆ ಹಾಕಿ ಅಲಂಕರಿಸಬೇಕು. ಅಲ್ಲಿಗೆ ಬಾರ್ಲಿ ಪಾಯಸ ರೆಡಿಯಾದಂತೆಯೇ…
ಗಸಗಸೆ ಪಾಯಸ ಮಾಡುವುದು ಹೇಗೆ?
ಬೇಕಾಗುವ ಪದಾರ್ಥಗಳು: ಗಸಗಸೆ- 1ಕಪ್, ಬಾದಾಮಿ- 7, ಅಕ್ಕಿ- 1ಚಮಚ, ಹಾಲು- ಅರ್ಧ ಲೀಟರ್, ಏಲಕ್ಕಿ- 5, ಸಕ್ಕರೆ- ಅರ್ಧ ಕಪ್, ತುಪ್ಪ- 2ಚಮಚ, ದ್ರಾಕ್ಷಿ, ಗೋಡಂಬಿ- ಸ್ವಲ್ಪ, ಕೇಸರಿ- ಸ್ವಲ್ಪ, ಜಾಯಿಕಾಯಿ ರಸ- ಸ್ವಲ್ಪ, ಲವಂಗ-3
ಇದನ್ನೂ ಓದಿ: ಆಲೂಪರೋಟ, ಆಲೂ ಬಟಾಣಿ ಗಸಿ, ಆಲೂ ಸಮೋಸ, ಆಲೂ ಕುರ್ಮಾ ಮಾಡೋದು ಹೇಗೆ?
ಮಾಡುವ ವಿಧಾನ: ಮೊದಲಿಗೆ ಅಕ್ಕಿಯನ್ನು ನೆನೆಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ಕೇಸರಿಯನ್ನು ಹಾಲಿನಲ್ಲಿ ಅದ್ದಿಟ್ಟುಕೊಳ್ಳಬೇಕು. ಮತ್ತೊಂದೆಡೆ ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ಆ ನಂತರ ಗಸಗಸೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಇದರ ಜತೆಯಲ್ಲೇ ಬಾದಾಮಿಯನ್ನು ಹಾಕಿ ಹುರಿಯಬೇಕು. ನಂತರ ಬೇರೊಂದು ಪಾತ್ರೆಂiಲ್ಲಿ ಕಾಯಿಸಿದ ಹಾಲನ್ನು ತೆಗೆದಿಟ್ಟುಕೊಳ್ಳಬೇಕು.
ಇಷ್ಟಾದ ಬಳಿಕ ಹುರಿದ ಗಸಗಸೆ, ಬಾದಾಮಿ, ನೆನೆಸಿಟ್ಟ ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಬೇಕು. ಬಳಿಕ ತೆಗೆದು ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಕಾಯಿಸಿದ ಹಾಲನ್ನು ಸೇರಿಸಿ ನಿಧಾನ ಉರಿಯಲ್ಲಿ ಕುದಿಸಬೇಕು. ಕುದಿಯುವಾಗಲೇ ಸಕ್ಕರೆಯನ್ನು ಸೇರಿಸಬೇಕು. ತಳ ಹಿಡಿಯದಂತೆ ಮತ್ತು ಗಂಟು ಕಟ್ಟದಂತೆ ಮಾಡಲು ಸೌಟುನಿಂದ ತಿರುಗಿಸುತ್ತಿರಬೇಕು.
ಇದನ್ನೂ ಓದಿ: ಆಲೂ ಕಟ್ಲೆಟ್, ಆಲೂಚಾಟ್, ಆಲೂಪಲಾವ್ ಮಾಡುವುದು ಹೇಗೆ?
ಅದು ಚೆನ್ನಾಗಿ ಕುದಿಯುವಾಗ ಜಾಯಿಕಾಯಿ ರಸ ಮತ್ತು ಲವಂಗವನ್ನು ಹಾಕಬೇಕು. ಪಾಯಸ ಚೆನ್ನಾಗಿ ಕುದಿದ ಬಳಿಕ ಅದನ್ನು ಇಳಿಸಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಗೂ ಹಾಲಿನಲ್ಲಿ ಅದ್ದಿಟ್ಟ ಕೇಸರಿಯನ್ನು ಹಾಕಿ ಅಲಂಕರಿಸಿದರೆ ಘಮಘಮಿಸುವ ಗಸಗಸೆ ಪಾಯಸ ರೆಡಿಯಾಗುತ್ತದೆ.