CinemaLatest

ಆ ಕಾಲದ ತಾರಾಜೋಡಿ ಪ್ರತಿಮಾದೇವಿ- ಶಂಕರ್ ಸಿಂಗ್… ಪ್ರತಿಮಾದೇವಿಯ ಸಿನಿಮಾ ಬದುಕು ಹೇಗಿತ್ತು?

ಕಾಲ ಸರಿದಂತೆಲ್ಲ ಬದಲಾವಣೆಗಳು ಆಗಲೇ ಬೇಕು… ಅದರಂತೆ ಸಿನಿಮಾ ಕ್ಷೇತ್ರದಲ್ಲಿಯೂ ಬದಲಾವಣೆಗಳಾಗಿವೆ.. ಹಲವು ತಾರಾಜೋಡಿಗಳು ಆಯಾಯ ಕಾಲಘಟ್ಟದಲ್ಲಿ ತೆರೆಯಲ್ಲಿ ಮಿಂಚಿ ಸಿನಿಮಾರಸಿಕರಿಗೆ ಮನರಂಜನೆಯನ್ನು ಉಣಬಡಿಸಿದ್ದಾರೆ. ಇಂತಹ ತಾರಾಜೋಡಿಗಳಲ್ಲಿ ಪ್ರತಿಮಾದೇವಿ –ಶಂಕರ್ ಸಿಂಗ್ ಒಂದಾಗಿದ್ದಲ್ಲದೆ, ದಂಪತಿಯಾಗಿ ಬದುಕು ಕಟ್ಟಿಕೊಂಡು ಸಿನಿಮಾಕ್ಕಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟವರು ಎಂದರೆ ತಪ್ಪಾಗಲಾರದು..

ಇದನ್ನೂ ಓದಿ: ನಾಟಕರತ್ನ ಗುಬ್ಬಿವೀರಣ್ಣರ ಪತ್ನಿ ಮೇರು ನಟಿ ಬಿ.ಜಯಮ್ಮರವರ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ..

ಉತ್ತರ ಭಾರತದಲ್ಲಿ ರಾಜಕಪೂರ್-ನರ್ಗಿಸ್ ತಾರಾಜೋಡಿ ಇದ್ದಂತೆ ದಕ್ಷಿಣ ಭಾರತದಲ್ಲಿ ಶಂಕರಸಿಂಗ್-ಪ್ರತಿಮಾದೇವಿ ತಾರಾಜೋಡಿ-ಕಂ-ರಿಯಲ್ ಕಪಲ್ಸ್ ದೇಶದಾದ್ಯಂತ ಹೆಸರು ವಾಸಿಯಾದರು! ಕನ್ನಡ ಚಿತ್ರರಂಗದ ರಾಜ್‍ಕಪೂರ್ ಎಂದೆ ಜನಪ್ರಿಯರಾಗಿದ್ದ ನಟ, ನಿರ್ಮಾಪಕ, ನಿರ್ದೇಶಕ, ಛಾಯಾಗ್ರಾಹಕ ಚಿತ್ರಸಾಹಿತಿ, ಸಂಗೀತ ನಿರ್ದೇಶಕ ಕೆ.ಶಂಕರ್ ಸಿಂಗ್‍ ರ ಪತ್ನಿ ಆದರು. ಬಹುಮುಖ ಪ್ರತಿಭಾವಂತ, ಖ್ಯಾತ ಚಿತ್ರೋದ್ಯಮಿಯ ಮಡದಿಯಾಗಿ ಕಾಲಕ್ರಮೇಣ ದಕ್ಷಿಣ ಭಾರತದ ಖ್ಯಾತ ನಟಿ, ನಿರ್ಮಾಪಕಿ ಎನಿಸಿದರು. ಇವರ ಸಿನಿಮಾ ನಿರ್ಮಾಣ ಸಂಸ್ಥೆ ಹೆಸರು ಮಹಾತ್ಮ ಪಿಕ್ಛರ್ಸ್. ಈ ಬ್ಯಾನರ್ ಅಡಿ 50ಕ್ಕೂ ಹೆಚ್ಚು ಕನ್ನಡ ಫಿಲಂಸ್ ಬಿಡುಗಡೆಯಾಗಿ ಚಂದನವನವನ ಬೆಳ್ಳಿತೆರೆಗೆ ಅಮೋಘ ಕೊಡುಗೆ ನೀಡಿದರು.

9.4.1933ರಂದು ಮಂಗಳೂರು-ಬಂಟ್ವಾಳ ರಸ್ತೆ ನಡುವೆ ಇರುವ ಕಲ್ಲಢ್ಕ ಎಂಬ ಗ್ರಾಮದಲ್ಲಿ ವಾಸವಿದ್ದ ಶ್ರೀಮತಿ ಸರಸ್ವತಿ ಬಾಯಿ ಶ್ರೀಉಪೇಂದ್ರಶೆಣೈ ದಂಪತಿಯ ಕಿರಿಯ ಮಗಳಾಗಿ ಉತ್ತಮ ಕುಟುಂಬದಲ್ಲಿ ಜನಿಸಿದ ಪ್ರತಿಮಾದೇವಿಯ ಜನ್ಮಸ್ಥಳ ಬ್ರಿಟಿಷರ ಕಾಲದ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿತ್ತು. ನಂತರ ಮೈಸೂರು (ಕರ್ನಾಟಕ) ರಾಜ್ಯಕ್ಕೆ ಸೇರಿತು. ಪ್ರತಿಮಾದೇವಿ ಐದು ವರ್ಷದ ಎಳೆಮಗು ಆಗಿದ್ದಾಗ ಇವರ ತಂದೆ ನಿಧನರಾದರು. ವಿಧಿ ಇಲ್ಲದೆ ಇವರ ತಾಯಿ ನಾಲ್ಕು ಪುಟ್ಟ ಮಕ್ಕಳೊಡನೆ ಕುಟುಂಬ ಸಮೇತ ತಮ್ಮ ಹಿರಿಯ ಮಗಳ ಗಂಡ (ಅಳಿಯ) ಟೆಕ್ಸ್ ಟೈಲ್ ಉದ್ಯಮಿಯಿದ್ದ ಅಹ್ಮದಾಬಾದ್ ನಗರಕ್ಕೆ ಪಯಣ ಬೆಳೆಸಿದರು. ಕ್ರಮೇಣ ಅಲ್ಲಿಂದ ಹಿಂದಿರುಗಿ ಉಡುಪಿಯಲ್ಲಿ ನೆಲೆನಿಂತರು. ಬಾಲ್ಯದಿಂದಲು ಅಭಿನಯ ನೃತ್ಯ ನಾಟಕ ಇವುಗಳ ಬಗ್ಗೆ ಹೆಚ್ಚಿನ ಆಸಕ್ತಿ-ಆಸೆ ಇದ್ದ ಪ್ರತಿಮಾದೇವಿ ಓರ್ವ ಹುಟ್ಟುಕಲಾವಿದೆ ಹಾಗೂ ಸೌಂದರ್ಯವತಿ! ಕಾರಣಾಂತರದಿಂದ ಉನ್ನತ ಶಿಕ್ಷಣದವರೆಗೆ ತಮ್ಮ ವಿದ್ಯಾಭ್ಯಾಸ ಮುಂದುವರೆಸಲಾಗಲಿಲ್ಲ?!

ಪ್ರತಿಮಾದೇವಿ ಅವರನ್ನು ಸಿನಿಮಾ ರಂಗಕ್ಕೆ ಕಾಲಿಡುವಂತೆ ಪ್ರಚೋದನೆ ಮಾಡಿದ್ದು ಅಥವಾ ಪ್ರಭಾವ ಬೀರಿದವರು ಖ್ಯಾತ ಸಂಗೀತ ವಿದುಷಿ ಎಂ.ಎಸ್.ಸುಬ್ಬಲಕ್ಷ್ಮಿ. 1941ರಲ್ಲಿ ಸಾವಿತ್ರಿ  ತಮಿಳು ಸಿನಿಮಾದಲ್ಲಿ ಸುಬ್ಬಲಕ್ಷ್ಮಿಯವರು ನಿರ್ವಹಿಸಿದ್ದ ನಾರದನ ಪಾತ್ರವೂ ಸಹ ಒಂದು ಸಕಾರಣ. ಹಾಗಾಗಿ ಪ್ರತಿಮಾ ದೇವಿ ತಮ್ಮ13ನೆ ವಯಸ್ಸಲ್ಲೇ 1947ರಲ್ಲಿ ತೆರೆಕಂಡ ಕೃಷ್ಣಲೀಲ ಕನ್ನಡ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟ್ಟರು. 1951ರಲ್ಲಿ ಪ್ರತಿಮಾದೇವಿ ನಟಿಸಿ ತೆರೆಕಂಡ ಜಗನ್ಮೋಹಿನಿ ಚಿತ್ರವು 100ದಿನ ಪ್ರದರ್ಶನ ಕಂಡ ಮೊಟ್ಟಮೊದಲ ಕನ್ನಡ ಫಿಲಂ!

ಇದನ್ನೂ ಓದಿ: ಚಂದನವನದಲ್ಲಿ ಮಿಂಚಿ ಮರೆಯಾದ ಹಿರಿಯ ನಟಿ ಕಮಲಾಬಾಯಿರವರ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರತಿಮಾದೇವಿ ಅಪರೂಪಕ್ಕೆ 3 ವರ್ಷಕ್ಕೊಮ್ಮೆ ನಟಿಸಿದರೂ ಹೀರೋಯಿನ್ ಪಾತ್ರದಲ್ಲೆ ಹೆಚ್ಚು ಅಭಿನಯಿದ್ದು ವಿಶೇಷತೆ. ಆದರೆ ಎರಡನೇ ನಾಯಕಿಯಾಗಿ, ನಂತರ ಪೋಷಕ ನಟಿಯಾಗಿ ಪಾತ್ರವಹಿಸಲು ಹಿಂಜರಿಯದ ಸಹೃದಯವಂತ ಕಲಾವಿದೆ. ಪಾತ್ರ ಮತ್ತು ಸಂದರ್ಭಗಳನ್ನು ಅರ್ಥೈಸಿಕೊಳ್ಳುವ ದೊಡ್ಡಗುಣ ಇತ್ತು! ಇವರ ಕಲಾರಾಧನೆ ಜತೆಗೆ ಕರ್ತವ್ಯಪ್ರಜ್ಞೆ ಮೆರೆದಂಥ ಸಹಜನಟಿ. ನಮ್ಮ ರಾಜ್ಯದ ಪ್ರಥಮ ಸಿನಿಮಾ ಸ್ಟುಡಿಯೊ ನವಜ್ಯೋತಿ ಸ್ಟುಡಿಯೊ ರೂವಾರಿ ಅಂದು ಮೈಸೂರಿನಲ್ಲಿ ವಾಸವಿದ್ದ  ಖ್ಯಾತ ನಟ, ನಿರ್ಮಾಪಕ, ಕೆ.ಶಂಕರಸಿಂಗ್ ಪರಿಚಯವಾಗಿ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು ಇತಿಹಾಸ.

ಕಾಲಕ್ರಮೇಣ ಸರಿದಾರಿಯಲ್ಲಿ ಸಾವಕಾಶವಾಗಿ ನಡೆದು ಪ್ರಾಮಾಣಿಕವಾಗಿ ದುಡಿದು ಸ್ವತಃ ತಾವೇ ನಿರ್ಮಾಪಕಿಯಾದ ಪ್ರತಿಮಾದೇವಿ ತಮಗಿದ್ದ ಅನುಭವದಿಂದಾಗಿ ಆಗಾಗ್ಗೆ ಬಂದೊದಗುತ್ತಿದ್ದ ಅನಿವಾರ್ಯ (ದು)ಸ್ಥಿತಿ-ಗತಿ ಅರಿತು ನಿರ್ಮಾಪಕ, ನಿರ್ದೇಶಕರಿಗೆ ತೊಂದರೆ ಕೊಡದೆ ಸಹಕಾರ ಸಹಾಯ ನೀಡುತ್ತಿದ್ದರು. ಪ್ರತಿಯೊಬ್ಬ ಸಹಕಲಾವಿದ, ಸಹೋದ್ಯೋಗಿ, ತಾಂತ್ರಿಕವರ್ಗದ ಎಲ್ಲರೊಡನೆ ಹೊಂದಿಕೊಂಡು ಹೋಗುತ್ತಿದ್ದ ಸರಳ ಸಜ್ಜನಿಕೆಯ ಅಭಿನೇತ್ರಿ. ತಾವು ಬದುಕಿರುವವರೆಗೂ ಪ್ರತಿಯೊಬ್ಬರಿಂದ ಅಜಾತಶತ್ರು ಎನಿಸಿಕೊಂಡರು. 1947ರಿಂದ 2005ವರೆಗೆ ಸುಮಾರು 6 ದಶಕ ಪರ್ಯಂತ ಸತತ 100ಕ್ಕೂ ಹೆಚ್ಚು ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡದ ಮೊಟ್ಟಮೊದಲ ತ್ರಿಭಾಷಾ ನಟಿ ಎನಿಸಿದ ಹೆಗ್ಗಳಿಕೆ ಇವರದು. 2005ರಲ್ಲಿ ತೆರೆಕಂಡ ಕಮಲಹಾಸನ್ ಮತ್ತು ರಮೇಶ್‍ಅರವಿಂದ್ ನಟಿಸಿದ ಬ್ಲಾಕ್ ಬಸ್ಟರ್ ಫಿಲಂ ರಾಮಶಾಮಭಾಮ ಇವರ ಕಟ್ಟಕಡೇ ಚಿತ್ರ.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಲಕ್ಷ್ಮೀಬಾಯಿ… ಇವರ ಸಿನಿ ಬದುಕು ಹೇಗಿತ್ತು?https://janamanakannada.com/lakshmibai-old-actor/

ವಯೋಸಹಜ ಅನಾರೋಗ್ಯದಿಂದ ಅಸ್ವಸ್ಥರಾಗಿ ಕೆಲಕಾಲ ಆಸ್ಪತ್ರೆಯ ಶುಶ್ರೂಷೆ ಪಡೆದರು. ಆದರೆ ಯಾವುದೇ ಅನುಕೂಲ ಆಗದೇ 6.4.2021ರಂದು ಮೈಸೂರಿನಲ್ಲಿ ಸ್ವರ್ಗಸ್ಥರಾದರು. ಗತಕಾಲದ ಹಿರಿಯ ನಟಿಯರ ಸ್ವರ್ಣಮಾಲೆಯ ಮತ್ತೊಂದು ಚಿನ್ನದಕೊಂಡಿ ಕಳಚಿ ಚಂದನವನ ದುರ್ಬಲವಾಯಿತು! ಒಂದು ಕಾಲದ ಸ್ಯಾಂಡಲ್ವುಡ್ ಬ್ಯೂಟಿ, ಸೂಪರ್ ಹೀರೋಯಿನ್-ಕಂ- ಪ್ರೊಡ್ಯುಸರ್ ಪ್ರತಿಮಾದೇವಿ ತಮ್ಮ ತುಂಬುಜೀವನದ 88ನೇ ವಯಸ್ಸಿನಲ್ಲಿ ಅಗಲಿದರು. ದಿ. ಕೆ.ಶಂಕರಸಿಂಗರ 3 ತಲೆಮಾರಿನ ಕಲಾವಿದರ (ರಾಜೇಂದ್ರಸಿಂಗ್‍ಬಾಬು, ಸಂಗ್ರಾಂಸಿಂಗ್, ವಿಜಯಲಕ್ಷ್ಮಿಸಿಂಗ್ ಜೈಜಗದೀಶ್) ಕುಟುಂಬಗಳಿಗೆ ಮಾತ್ರವಲ್ಲ ಇಡೀ ಕನ್ನಡ ಚಿತ್ರಲೋಕಕ್ಕೆ ತುಂಬಲಾರದ ನಷ್ಟ ಉಂಟಾಯ್ತು. ಮೇರುನಟಿ ಪ್ರತಿಮಾದೇವಿ ಕಣ್ಮರೆಯಾಗಿದ್ದರೂ ನಾಡಿನ ಸಿನಿರಸಿಕರ ತನುಮನದಲ್ಲಿ ಚಿರಸ್ಮರಣೀಯ, ಅಮರ!

ಇದನ್ನೂ ಓದಿ: ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮ… ಇವರು ದೇಶದ ಮೊಟ್ಟ ಮೊದಲ ನಿರ್ಮಾಪಕಿ!

ಇವರು ಕೃಷ್ಣಲೀಲ, ಶಿವಪಾರ್ವತಿ, ಜಗನ್ಮೋಹಿನಿ, ದಲ್ಲಾಳಿ, ಭಕ್ತಚೇತ, ಪ್ರಭುಲಿಂಗಲೀಲೆ, ಶ್ರೀನಿವಾಸಕಲ್ಯಾಣ, ಧರ್ಮಸ್ಥಳಮಹಾತ್ಮೆ, ಶಿವಶರಣೆನಂಬಿಯಕ್ಕ, ಪಾಲಿಗೆ ಬಂದದ್ದೇ ಪಂಚಾಮೃತ, ಚಂಚಲಕುಮಾರಿ, ರಾಜಾಸತ್ಯವ್ರತ, ಪಾತಾಳಮೋಹಿನಿ, ಶಿವಲಿಂಗ ಸಾಕ್ಷಿ, ಮುಟ್ಟಿದ್ದೆಲ್ಲಚಿನ್ನ, ಮಾಡಿದ್ದುಣ್ಣೊಮಹರಾಯ,  ಮಂಗಳಸೂತ್ರ, ನಾಗರಹಾವು, ಭರ್ಜರಿಬೇಟೆ, ಬಂಗಾರದಕಳ್ಳ, ಧರಣಿ ಮಂಡಲ ಮಧ್ಯದೊಳಗೆ, ನಾಗಕನ್ಯೆ, ನಾರದವಿಜಯ, ಬಂಧನ, ರಾಮಶಾಮಭಾಮ ಮೊದಲಾದವುಗಳಾಗಿವೆ.

admin
the authoradmin

5 Comments

  • ಉತ್ತಮ ಮಾಹಿತಿಯ ಅಚ್ಚುಮೆಚ್ಚಿನ ಲೇಖನ

  • ಮೈಸೂರಿನ ಸೊಸೆಯಾದ ನನಗೆ ಬಹಳ ಇಷ್ಟವಾದ ಲೇಖನ ಏಕೆಂದರೆ ನನ್ನ ಪತಿಯ ಮನೆ ಕನ್ನೇಗೌಡ್ರ ಕೊಪ್ಪಲ್ ಸರಸ್ವತಿಪುರದ ಪ್ರತಿಮಾದೇವಿಯವರ
    ಮನೆಗೆ ಹತ್ತಿರದಲ್ಲೇ ಇದ್ದರೂ ವಿಷಯ ತಿಳಿದಿರಲಿಲ್ಲ, ಧನ್ಯವಾದ

    • ಹಳೇ ಕಾಲದ ಸೌಂದರ್ಯವತಿ ನಟಿ ನಿರ್ಮಾಪಕಿ ಪ್ರತಿಮಾದೇವಿ ಕೆ.ಶಂಕರಸಿಂಗ್ ಲೇಖನ ಬಹಳ ಚೆನ್ನಾಗಿ ಬರೆದಿದ್ದಾರೆ, ಸಂಗ್ರಾಂಸಿಂಗ್ ರಾಜೇಂದ್ರಸಿಂಗ್ ವಿಜಯಲಕ್ಷ್ಮೀಸಿಂಗ್ ರವರ ತಾಯಿ ಎಂದು ಬಹಳ ಜನರಿಗೆ ಗೊತ್ತೇ ಇಲ್ಲ, ಥ್ಯಾಂಕ್ಸ್ ಸರ್

Leave a Reply