DasaraLatest

ಮೈಸೂರಿಗೆ ದಸರಾ ಕಳೆ ಬರುತ್ತಿದೆ… ನೀವು ಬನ್ನಿ… ಇಷ್ಟಕ್ಕೂ ಮೈಸೂರು ಪ್ರವಾಸಿಗರಿಗೆ ಇಷ್ಟವಾಗುವುದೇಕೆ?

ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಇದೀಗ ನಗರದಲ್ಲಿ ಅಡ್ಡಾಡಿದರೆ ದಸರಾ ಕಳೆ ಬಂದಿರುವುದು ಗೋಚರಿಸುತ್ತದೆ. ಒಂದೆಡೆ ದಸರಾಕ್ಕೆ ತಯಾರಿಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ದೀಪಾಲಂಕಾರ ಸೇರಿದಂತೆ ಹಲವು ಕಾರ್ಯಕ್ರಮಗಳು ಆರಂಭವಾಗಿವೆ. ಹೀಗೆ ಹಲವು ರೀತಿಯಲ್ಲಿ ಮೈಸೂರು ಇದೀಗ ನಾಡಹಬ್ಬ ದಸರಾಕ್ಕೆ ತೆರೆದುಕೊಳ್ಳುತ್ತಿರುವುದು ಗೋಚರಿಸುತ್ತಿದೆ.,

ಮೈಸೂರು ದಸರಾಕ್ಕೆ ಗಜಪಯಣದ ಮೂಲಕ ಮುನ್ನುಡಿ ಬರೆಯಲಾಗುತ್ತದೆ. ನಗರವನ್ನು ಪ್ರವೇಶಿಸಿ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆ ಇದೀಗ ನಗರದಲ್ಲಿ ದಿನಕ್ಕೆರಡು ಬಾರಿ ತಾಲೀಮು ನಡೆಸುವುದರೊಂದಿಗೆ ನಗರಕ್ಕೆ ದಸರಾ ಕಳೆಯನ್ನು ಎಳೆದು ತಂದಿದ್ದು, ಜನ ತಾಲೀಮು ನಡೆಸುವುದನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತು ನೋಡುತ್ತಿದ್ದಾರೆ.

ಹಾಗೆನೋಡಿದರೆ ದಸರಾ ಬಂತೆಂದರೆ ನಗರದ ವ್ಯಾಪಾರಿಗಳು ಸೇರಿದಂತೆ ಆಟೋ, ಟ್ಯಾಕ್ಸಿ ಚಾಲಕರು, ಹೋಟೆಲ್ ಉದ್ಯಮಿಗಳು ಹೀಗೆ ಎಲ್ಲರ ಮೊಗದಲ್ಲಿ ಮಂದಹಾಸ ಮೂಡುತ್ತದೆ.. ದಸರಾ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿ ಪ್ರವಾಸಿ ತಾಣ ಸೇರಿದಂತೆ ನಗರದಾದ್ಯಂತ ಅಡ್ಡಾಡಿ ತಮಗೆ ಬೇಕಾದನ್ನು ಸವಿದು, ಒಂದಷ್ಟು ಪದಾರ್ಥಗಳನ್ನು ಖರೀದಿಸುವುದರಿಂದ  ವ್ಯಾಪಾರ ವಹಿವಾಟುಗಳು ಗರಿಗೆದರುತ್ತವೆ. ಹೀಗಾಗಿ ಬೀದಿಯಿಂದ ಆರಂಭವಾಗಿ ಅರಮನೆ ತನಕ ದಸರಾ ಸಂಭ್ರಮ ಮನೆ ಮಾಡುತ್ತದೆ.

ದಸರಾ ಸಮಯದಲ್ಲಿ ಮೈಸೂರಿಗೆ ಭೇಟಿ ಕೊಡುವುದು ಒಂಥರಾ ಖುಷಿ ಕೊಡುತ್ತದೆ.  ಈ ಸಮಯದಲ್ಲಿ ನಗರದ ಪ್ರತಿ ಬೀದಿಯಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಎಲ್ಲರೂ ದಸರಾವನ್ನು ಸ್ವಾಗತಿಸುವ ಸಡಗರದಲ್ಲಿರುತ್ತಾರೆ. ಹಗಲೆಲ್ಲ ದೂರದಿಂದ ಬಂದಿರುವ ಪ್ರವಾಸಿಗರು ಕಾಣಿಸಿದರೆ, ರಾತ್ರಿಯಾಯಿತೆಂದರೆ ನಗರದ ಜನ ತಮ್ಮ ಮನೆಗಳಿಂದ ಕುಟುಂಬದೊಂದಿಗೆ ಹೊರ ಬಂದು ಎಲ್ಲೆಂದರಲ್ಲಿ ಅಡ್ಡಾಡಿ ಸಂಭ್ರಮಿಸುವ ಆ ಸೊಗಸು ಮತ್ತೆಲ್ಲೂ ಕಾಣಲಾಗದು..

ಇನ್ನು ಪ್ರವಾಸಿಗರು  ಮೈಸೂರನ್ನು ಇಷ್ಟಪಡಲು ಹಲವು ಕಾರಣಗಳಿವೆ. ಏಕೆಂದರೆ ಇದು ಜಗತ್ತಿನ ಸುಂದರ ನಗರಗಳಲ್ಲೊಂದಾಗಿದೆ. ಹಿಂದಿನಿಂದಲೂ ತನ್ನದೇ ಆದ ವಿಶೇಷತೆಗಳಿಂದ ದೇಶ ವಿದೇಶಗಳ ಜನರ ದೃಷ್ಠಿ ಇತ್ತ ನೆಡುವಂತೆ ಮಾಡಿದೆ. ಅಷ್ಟೇ ಅಲ್ಲದೆ ತನ್ನದೇ ಮಹತ್ವದೊಂದಿಗೆ ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಪಾರಂಪರಿಕ ನಗರಿ, ನಿವೃತ್ತರ ಸ್ವರ್ಗ ಹೀಗೆ ವಿವಿಧ ಹೆಸರುಗಳಿಂದಲೂ ಕರೆಯಿಸಿಕೊಂಡು ದೇಶ ವಿದೇಶಗಳ ಹಲವು ಪ್ರಥಮಗಳಿಗೂ ಸಾಕ್ಷಿಯಾಗಿ ನಿಂತಿದೆ.

ಇದನ್ನೂ ಓದಿ: ಮೈಸೂರು ದಸರಾಕ್ಕೆ ಮೆರಗು ನೀಡುವ ದೀಪಾಲಂಕಾರಕ್ಕೆ ತಯಾರಿ ಹೇಗೆ ನಡೆಯುತ್ತಿದೆ ಗೊತ್ತಾ?

ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ ಮೈಸೂರಿನ ಹಿರಿಮೆ, ಗರಿಮೆಗಳೆಲ್ಲವೂ ಒಂದೊಂದಾಗಿ ನಮ್ಮ ಮುಂದೆ ಹಾದು ಹೋಗುತ್ತದೆ. ಮೈಸೂರು ಸಂಸ್ಥಾನವನ್ನು. 1399 ರಿಂದ 1950ರವರೆಗೆ ಸುಮಾರು 550 ವರ್ಷಗಳ ಕಾಲ 25ಮಂದಿ ಮಹಾರಾಜರು ಆಳಿದ್ದಾರೆ. ಆ ಮೂಲಕ ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಹೀಗೆ ಆಳ್ವಿಕೆ ನಡೆಸಿದ ಮಹಾರಾಜರಲ್ಲಿ ಅನೇಕರು ಮೇಧಾವಿಗಳೂ, ಶೂರರೂ, ಸ್ವತಃ ಸಾಹಿತಿಗಳೂ, ಕವಿಗಳು, ದೇಶಭಕ್ತರೂ, ಆಡಳಿತದಲ್ಲಿ ಮಹಾದಕ್ಷರೂ  ಆಗಿದ್ದರು ಎನ್ನುವುದೇ ವಿಶೇಷ.. ಕೇವಲ ಪಾಳೇಗಾರ ಮಟ್ಟದಲ್ಲಿದ್ದ ಮೈಸೂರನ್ನು ತಮ್ಮ ಧೈರ್ಯ ಪರಾಕ್ರಮಗಳಿಂದ ರಾಜ್ಯಮಟ್ಟಕ್ಕೆ ಕೊಂಡೊಯ್ದು ಇಡೀ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಕೀರ್ತಿಯನ್ನು ಬೆಳಗಿಸಿದ್ದು ಇಲ್ಲಿನ ಮಹಾರಾಜರ ಸಾಧನೆಯಾಗಿದೆ.  ಇದೆಲ್ಲದರ ನಡುವೆ ಈಗಿನ “ಮೈಸೂರು” ಎಂಬ ಹೆಸರು ಹೇಗೆ ಬಂತು ಎಂಬುವುದನ್ನು ನಾವು ನೋಡಿದರೆ ಪುರಾಣದ ಕಥೆಯೊಂದು ಬಿಚ್ಚಿಕೊಳ್ಳುತ್ತದೆ.

ಪೌರಾಣಿಕ ಯುಗದಲ್ಲಿ ಮಹಿಷಾಸುರನೆಂಬ ಅಸುರ ಇಲ್ಲಿದ್ದನೆಂದೂ ಆತ ತನ್ನ ತಪಸ್ಸಿನ ಮೂಲಕ ಶಿವನಿಂದ ಅಧಿಕ ಶಕ್ತಿಯನ್ನು ಪಡೆದಿದ್ದನಂತೆ. ಹೀಗಾಗಿ ದೇವತೆಗಳು ಸೇರಿದಂತೆ ಜನರನ್ನು ವಿವಿಧ ರೀತಿಯ ತೊಂದರೆ ನೀಡಿ ಹಿಂಸಿಸುತ್ತಿದ್ದನಂತೆ. ಈತನ ಉಪಟಳ ತಾಳಲಾರದೆ ಜನರು ಶ್ರೀ ಚಾಮುಂಡೇಶ್ವರಿಯಲ್ಲಿ ಮೊರೆಯಿಟ್ಟರಂತೆ ಆಗ ಚಾಮುಂಡೇಶ್ವರಿ ಮಹಿಷಾಸುರನೊಂದಿಗೆ ಯುದ್ದ ಮಾಡಿ ಸಹರಿಸಿದಂಳಂತೆ. ಮಹಿಷಾಸುರ ನೆಲೆಸಿದ ಊರು “ಮಹಿಷೂರು” ಆಯಿತೆಂದೂ ಕ್ರಮೇಣ ಬಾಯಿಯಿಂದ ಬಾಯಿಗೆ ಮೈಸೂರಾಗಿ ಬದಲಾಯಿತೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಮೈಸೂರು ದಸರಾ ಸುಸೂತ್ರವಾಗಿ ನಡೆಸಲು 19 ಉಪಸಮಿತಿ ರಚನೆ… ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?

ಹತ್ತನೇ ಶತಮಾನದಿಂದಲೂ ಮೈಸೂರು ಎಂದೇ ಕರೆಯುತ್ತಾ ಬರಲಾಗಿದೆ. ಮೈಸೂರು ನಗರ ಮತ್ತು ಸುತ್ತಮುತ್ತ ದೊರೆತ ಹಳೆಯ ಶಾಸನಗಳ ಪ್ರಕಾರ ಮೈಸೂರು ಸುಮಾರು 70 ಹಳ್ಳಿಗಳಿಂದ ಕೂಡಿ “ಮೈಸೂರು ನಾಡು” ಎಂದು ಕರೆಯಲ್ಪಡುತ್ತಿತ್ತಂತೆ. ಮೈಸೂರು   ಬೆಟ್ಟ, ಅರಮನೆ, ಸುಂದರ ಉದ್ಯಾನವನ, ಕೆರೆ, ಪಾರಂಪರಿಕ ಕಟ್ಟಡಗಳಿಂದ  ಹಾಗೂ ದೊಡ್ಡ ದೊಡ್ಡ ರಸ್ತೆಗಳಿಂದ ಕೂಡಿದ ಸುಂದರ ನಗರವಾಗಿದೆ. ಹೇಳಿಕೊಳ್ಳುವಷ್ಟು ಬೃಹತ್ ಕೈಗಾರಿಕೆಗಳು ಇಲ್ಲಿ ಇಲ್ಲವಾದರೂ ಉತ್ತಮ ವ್ಯಾಪಾರ ಕೇಂದ್ರವಾಗಿದೆ.

ಜೊತೆಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಕಾಲೇಜುಗಳು ಇಲ್ಲಿವೆ. ಸಮುದ್ರಮಟ್ಟದಿಂದ ಸುಮಾರು 2525ಅಡಿ ಎತ್ತರದಲ್ಲಿದ್ದು, ಬೇಸಿಗೆಯಲ್ಲಿ ಹೆಚ್ಚು ಸೆಖೆಯೂ ಇಲ್ಲದೆ, ಚಳಿಗಾಲದಲ್ಲಿ ಹೆಚ್ಚು ಚಳಿಯೂ ಇಲ್ಲದೆ ಆಹ್ಲಾದಕರ ವಾತಾವರಣದಿಂದ ಕೂಡಿರುತ್ತದೆ. ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ, ಸುಂದರ ಬೃಂದಾವನದ ಕೃಷ್ಣರಾಜಸಾಗರ ಜಲಾಶಯ, ಮೃಗಾಲಯ, ಚಾಮುಂಡಿಬೆಟ್ಟ, ಸುಂದರ ಕೆರೆಗಳಲ್ಲದೆ, ವಿವಿಧ ಐತಿಹಾಸಿಕ ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು  ಪ್ರವಾಸಿ ತಾಣಗಳಾಗಿವೆ.

ಇದನ್ನೂ ಓದಿ:ಮೈಸೂರು ದಸರಾ ಸುಸೂತ್ರವಾಗಿ ನಡೆಸಲು 19 ಉಪಸಮಿತಿ ರಚನೆ… ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?

ಮೈಸೂರಿಗೆ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು, ದೂರದಿಂದ ಬರುವ ಪ್ರವಾಸಿಗರಿಗೆ ಸ್ವರ್ಗವಾಗಿದೆ. ಮೈಸೂರು ಮಸಾಲೆ, ಮೈಸೂರು ಪಾಕ, ಮೈಸೂರು ಮಲ್ಲಿಗೆ, ಮೈಸೂರು ಪೇಟ, ಮೈಸೂರು ವೀಳ್ಯದೆಲೆ ಎಲ್ಲವೂ ಮೈಸೂರಿನ ವಿಶೇಷತೆಗೆ ಸಾಕ್ಷಿಯಾಗಿವೆ.ಹಲವು ವಿಶೇಷತೆಗಳನ್ನು ತನ್ನೊಳಗೆ ಹುದುಗಿಸಿಕೊಂಡು ದೇಶ, ವಿದೇಶಿಗರನ್ನು ಸೆಳೆಯುತ್ತಿರುವ ಮೈಸೂರು ಮುಂದೆ ಬರಲಿರುವ ದಸರಕ್ಕಾಗಿ ನಿಧಾನವಾಗಿ ಸಜ್ಜಾಗುತ್ತಿದೆ. ಒಂದೆಡೆ ಸರ್ಕಾರ ದಸರಾಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಜನಸಾಮಾನ್ಯರು ಕೂಡ ಬರಲಿರುವ ದಸರಾದಲ್ಲಿ ಸಂಭ್ರಮಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನೀವು ಕೂಡ ಮೈಸೂರಿಗೆ ಬರುತ್ತೀರ ತಾನೆ…?

 

B M Lavakumar

 

admin
the authoradmin

1 Comment

  • ಮೈಸೂರು ದಸರ ಬಗ್ಗೆ ಲವಕುಮಾರ್ ಮತ್ತು ಕುಮಾರಕವಿಯವರ ಅರ್ಥಪೂರ್ಣ ಮತ್ತು ಅಂಕಿಅಂಶ ಸಮೇತ ಆಕರ್ಷಕ ಲೇಖನಗಳು ಬೊಂಬಾಟ್, ಮತ್ತೆ ಮತ್ತೆ ಓದುವ ಹಾಗಿದೆ

Leave a Reply