ಮೈಸೂರು: ಮೈಸೂರಿನ ವಿಜಯನಗರ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ವಿಜಯನಗರದಲ್ಲಿರುವ ಮುಡಾ ಮೈದಾನದಲ್ಲಿ ಆರೋಗ್ಯ ಮತ್ತು ಸದೃಢತೆಗಾಗಿ ನಡೆದ ಮ್ಯಾರಥಾನ್ ನಲ್ಲಿ ಸೀರೆಯುಟ್ಟ ಮಹಿಳೆಯರು ಸೇರಿದಂತೆ ಬಾಲಕರು, ಯುವಕರು ಮತ್ತು ಮಕ್ಕಳ ಭಾಗವಹಿಸಿ ಗಮನಸೆಳೆದಿದ್ದಾರೆ.
ವಿವಿಧ ಹಂತಗಳಲ್ಲಿ ಏರ್ಪಡಿಸಲಾಗಿದ್ದ ಮ್ಯಾರಥಾನ್ ಅನ್ನು ಉದ್ಯಮಿ ಶ್ರೀಮತಿ ಖುಷಿ ವಿನು ಅವರು ನಿಶಾನೆ ತೋರುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿ, ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಆರೋಗ್ಯ ಮತ್ತು ದೇಹದ ಸದೃಢತೆಗಾಗಿ ಜಾಗೃತಿ ಮೂಡಿಸಲು ಏರ್ಪಡಿಸಲಾಗಿರುವ ಈ ಕಾರ್ಯಕ್ರಮ ಶ್ಲಾಘನೀಯವಾದುದು ಮತ್ತು ಯಶಸ್ವಿಯಾಗಲಿ ಎಂದರು.
17 ವರ್ಷ ಮೇಲ್ಪಟ್ಟವರಿಗೆ ಏರ್ಪಡಿಸಲಾಗಿದ್ದ 10 ಕಿ.ಮೀ. ಓಟವೂ ಮುಂಜಾನೆ ಆರಂಭವಾಯಿತು. ಇದರಲ್ಲಿ ನೂರಾರು ಯುವಕರು ಪಾಲ್ಗೊಂಡಿದ್ದರು. ಮೊದಲ ಬಹುಮಾನವಾಗಿ 10 ಸಾವಿರ ರೂ. ಎರಡನೇ ಬಹುಮಾನ-5 ಸಾವಿರ ರೂ., ಹಾಗೂ ಮೂರನೇ ಬಹುಮಾನವಾಗಿ 3 ಸಾವಿರ ರೂ.ಗಳನ್ನು ವಿಜೇತರಿಗೆ ನೀಡಲಾಯಿತು.
ಇದೇ ರೀತಿ 5 ಕಿ.ಮೀ. ಓಟವೂ ಮುಂಜಾನೆ 7.45ಕ್ಕೆ ಆರಂಭವಾಯಿತು. ಇದರಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. 1೦ ರಿಂದ 17 ವರ್ಷದೊಳಗಿನ ಮಕ್ಕಳಿಗೂ 5 ಕಿ.ಮೀ. ಓಟವನ್ನು ಏರ್ಪಡಿಸಲಾಗಿತ್ತು. ಇದರಲ್ಲೂ ಕೂಡ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಹಿಳೆಯರಿಗಾಗಿ ಸೀರೆ ಓಟ ನಡೆಯಿತು. ಸೀರೆಯುಟ್ಟ ನೂರಾರು ಮಹಿಳೆಯರು ಈ ಓಟದಲ್ಲಿ ಭಾಗವಹಿಸಿ ಗಮನ ಸೆಳೆದರು. ಈ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ ರೂ., 2ನೇ ಬಹುಮಾನವಾಗಿ 3 ಸಾವಿರ ರೂ., ಮೂರನೇ ಬಹುಮಾನವಾಗಿ 1 ಸಾವಿರ ರೂ.ಗಳ ನಗದು ಬಹುಮಾನ ನೀಡಲಾಯಿತು. ಶ್ರೀಮತಿ ಖುಷಿ ವಿನು ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಟ್ರಸ್ಟ್ನ ಪದಾಧಿಕಾರಿಗಳು ಭಾಗವಹಿಸಿದ್ದರು