CinemaLatest

ನಟ ಅರುಣಕುಮಾರ್ ಹರಿಕಥಾ ವಿದ್ವಾಂಸ ಗುರುರಾಜಲುನಾಯ್ಡು ಆಗಿ ಖ್ಯಾತಿ ಪಡೆದಿದ್ದೇಗೆ? ಇಲ್ಲಿದೆ ರೋಚಕ ಕಥೆ!

ಚಂದನವನದ ಕುಮಾರತ್ರಯರ ನಂತರ ಕನ್ನಡ ಚಿತ್ರರಂಗದ ಚತುರ್ಥ ಕುಮಾರನಾಗಿ ಗುರುತಿಸಿಕೊಳ್ಳಲು ಹರಿಕಥೆ ಸಾಮ್ರಾಟ ಗುರುರಾಜಲುನಾಯ್ಡು ಚಿತ್ರರಂಗದಲ್ಲಿ ಅರುಣಕುಮಾರ್ ಆಗಿದ್ದೇ ಒಂದು ರೋಚಕ ಕಥೆಯಾಗಿದೆ. ಇವತ್ತಿನ ಬಹುತೇಕರಿಗೆ  ಅರುಣಕುಮಾರ್ ಎಂದರೆ ಗೊತ್ತೇ ಆಗುವುದಿಲ್ಲ. ಆದರೆ ಗುರುರಾಜಲು ನಾಯ್ಡು ಎಂದ ತಕ್ಷಣ ಕಣ್ ಕಿವಿ ಅರಳುತ್ತದೆ. ಅದಕ್ಕೆ ಕಾರಣವಾಗಿರುವುದು ಅವರ ಹರಿ ಕಥಾ ಶೈಲಿ.

ಇವತ್ತಿಗೂ ಹರಿಕಥೆಯನ್ನು ಕೇಳುವ ದೊಡ್ಡ ಸಮುದಾಯವಿದೆ. ಅವರೆಲ್ಲರೂ ಅರುಣ್ ಕುಮಾರ್ ಅಲಿಯಾಸ್ ಗುರುರಾಜಲು ನಾಯ್ಡು ಅವರನ್ನು ನೆನಪಿಸಿಕೊಳ್ಳದೆ ಇರಲಾರರು. ಆದರೆ ಅದರಾಚೆಗೆ ಅವರು ಅರುಣ್ ಕುಮಾರ್ ಆಗಿ ಚಿತ್ರರಂಗದಲ್ಲಿ ಮಾಡಿದ ಸಾಧನೆ, ನಟಿಸಿದ ಚಿತ್ರಗಳು, ಅವರ ನಟನಾ ವೈಖರಿಗಳು ಅವರ ಸಿನಿಮಾವನ್ನು ನೋಡಿದವರಿಗೆ ಗೊತ್ತಾಗಿ ಬಿಡುತ್ತದೆ.

ಅರುಣಕುಮಾರ್ ಅವರ ಬಗ್ಗೆ ತಿಳಿಯುತ್ತಾ ಹೋದಂತೆ ಕುತೂಹಲ ಹೆಚ್ಚುತ್ತಾ ಹೋಗುತ್ತದೆ. ಅವರ ಬದುಕಿನ ಕಥೆಯನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಬಿಚ್ಚುತ್ತಾ ಹೋಗಿದ್ದು…  ಓದುತ್ತಾ ಹೋದಂತೆ ನಟನೊಬ್ಬನ ಬದುಕಿನ ಕಥೆ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ…

ಕೀರ್ತನ ಕೇಸರಿ ಅರುಣಕುಮಾರ್ (ಗುರುರಾಜಲು ನಾಯ್ಡು) ಅವರು ಕ್ರಿ.ಶ.1930ರ ಆಸುಪಾಸಲ್ಲಿ ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಕಾಲೇಜು ಮೆಟ್ಟಿಲು ಹತ್ತುವ ಮುನ್ನವೇ ಇವರ ತಂದೆ ಅನಿವಾರ್ಯ ಕಾರಣಗಳಿಂದ ಇಡೀ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿ ಇಲ್ಲಿಯೆ ನೆಲೆಸುವ ಪರಿಸ್ಥಿತಿ ಒದಗಿ ಬಂದಾಗ ತಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಹೇಳಿಬಿಟ್ಟರು.

ಇದನ್ನೂ ಓದಿ:ಆಗಿನ ಕಾಲದಲ್ಲೆ ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್… ಇಲ್ಲಿದೆ ಅವರ ಸಿನಿಮಾಕಥೆ!

ಆ ನಂತರ ವರ್ಷಗಳು ಉರುಳಿದಂತೆ ಅರುಣಕುಮಾರ್ ನಾಟಕ ಸಿನಿಮಾ ಹರಿಕಥೆ ಸಂಗೀತದ ಕಡೆಗೇ ಹೆಚ್ಚು ಆಸಕ್ತರಾದರು. ಇದಕ್ಕೆ ಇಂಬು ಕೊಡುವಂತೆ ಅಕ್ಕಪಕ್ಕದ ಮನೆಯ (ಪ್ರ)ವೃತ್ತಿ ಕಲಾವಿದರ ಸಹವಾಸ ಸಿಕ್ಕಿದ್ದು ಅನುಕೂಲವೇ ಆಗಿತ್ತು. ಒಮ್ಮೆ ಆಕಸ್ಮಿಕವಾಗಿ ನಾಟಕ ವೊಂದರಲ್ಲಿ ನಟಿಸುವ ಛಾನ್ಸೂ ದೊರಕಿತು. ಆ ಕ್ಷಣದಿಂದಲೆ ಶುರುವಾಯ್ತು ನಾಟಕ, ಸಿನಿಮ, ಸಂಗೀತ, ಹರಿಕಥೆ, ನಾಲ್ಕೂ ಕ್ಷೇತ್ರಗಳ ವೃತ್ತಿ-ಪ್ರವೃತ್ತಿಯ ಸಹವಾಸ. ಅನುದಿನ ಪ್ರತಿಕ್ಷಣ ತೀವ್ರ ಆಸಕ್ತಿ ಪರಿಶ್ರಮ ಹಾಗೂ ಸತತ ಅಭ್ಯಾಸದಿಂದ ನಾಲ್ಕು ವಿಭಾಗದಲ್ಲೂ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡರು.

ಇದನ್ನೂ ಓದಿ :ರಿಯಲ್ ಹೀರೋ ಮೈಸೂರಿನ ಕೆಂಪರಾಜ ಅರಸು… ಇದು ಕನ್ನಡಚಿತ್ರರಂಗದಲ್ಲಿ ಶೋಕಿಗಾಗಿ ನಟನಾದವನ ಕಥೆ!

1954ರಲ್ಲಿ ಇವರದೇ ಸ್ವಂತ ನಾಟಕ ಕಂಪನಿ ಶ್ರೀಜಯಭಾರತಿ ಕಲಾಸಂಘವನ್ನು ಸ್ಥಾಪಿಸಿದರು. ಪ್ರಾರಂಭ ದಿನಗಳಲ್ಲಿ ಪ್ರಸ್ತುತ ಪಡಿಸಿದ ಜನಪ್ರಿಯ ನಾಟಕಗಳು ಯಾವುವು ಎಂದರೆ ಮಾಗಡಿಕೆಂಪೇಗೌಡ, ಎಚ್ಚಮನಾಯಕ, ಛತ್ರಪತಿಶಿವಾಜಿ ನಾಟಕಗಳಲ್ಲದೇ ಅನೇಕ ಪೌರಾಣಿಕ ನಾಟಕದಲ್ಲೂ ನಾಯಕನಟನಾಗಿ, ಪ್ರಮುಖ ನಟನಾಗಿ ಜನಪ್ರಿಯತೆ ಗಳಿಸಿದರು. ಆದರೆ ತಮ್ಮ ಮನೆಯ ಆರ್ಥಿಕ ವಾತಾವರಣ ಸರಿಯಾಗಿಲ್ಲದ ಕಾರಣ ಬೆಂಗಳೂರಿನ ಹೆಚ್.ಎ.ಎಲ್.ವಿಮಾನ ಕಾರ್ಖಾನೆಯಲ್ಲಿ ನೌಕರಿಗೆ ಸೇರಿದರು.

ಕಾರ್ಖಾನೆಯಲ್ಲೂ ಲಲಿತಕಲಾಸಂಘ ಮೂಲಕ ಸಾಮಾಜಿಕ ಮತ್ತು ಹಾಸ್ಯ ನಾಟಕಗಳಲ್ಲಿ ಅಭಿನಯಿಸುವಾಗ ರಂಗಭೂಮಿ ದಿಗ್ಗಜ ಎಂ.ವಿ. ಸುಬ್ಬಯ್ಯನಾಯ್ಡು ಆಹ್ವಾನದ ಮೇರೆಗೆ ಅವರ ಕಂಪನಿ ನಾಟಕಗಳಲ್ಲೂ ಪಾಲ್ಗೊಂಡರು. ಎಚ್ಚಮನಾಯಕದ ‘ಚಾಂದ್ ಖಾನ್’ ಪಾತ್ರ ಮತ್ತು ಶ್ರೀರಾಮವಿಜಯದ ರಾವಣನ ಪಾತ್ರ ಅಪಾರ ಖ್ಯಾತಿ ತಂದಿತು. ‘ಭಕ್ತಅಂಬರೀಷ’ ರಮಾಕಾಂತನ ಪಾತ್ರ ಇನ್ನಷ್ಟು ಹೆಸರು ತಂದುಕೊಟ್ಟಿತು.

ಶ್ರೀಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಯ ರಾತ್ರಿಹೊತ್ತಿನ ನಾಟಕಗಳಲ್ಲಿ ಅಭಿನಯಿಸುತ್ತಾ ಬೆಳಗಿನಹೊತ್ತು ವಿಮಾನ ಕಾರ್ಖಾನೆಯಲ್ಲು ದುಡಿಯುತ್ತಿದ್ದರು. ಈ ಹಗಲೂ-ರಾತ್ರಿಯ  ಅಡ್ಜಸ್ಟ್ಮೆಂಟ್ ಬಹಳದಿನ ಸಾಗಲಿಲ್ಲ. ಫ್ಯಾಕ್ಟರಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ನಾಟಕ, ಸಿನಿಮ, ಹರಿಕಥೆಗೆ ಮಾತ್ರ  ಜೀವನ ಮುಡಿಪಾಗಿಟ್ಟರು. ದೈವಸಂಕಲ್ಪದಂತೆ ಹೆಚ್ಚಿನ ಅದೃಷ್ಟ-ಯಶಸ್ಸು ದೊರಕಿದ್ದು ಹರಿಕಥೆ ಮತ್ತು ಸಿನಿಮ ವಿಭಾಗದಲ್ಲಿ! ಆದರೆ ಹರಿಕಥಾ ಕ್ಷೇತ್ರದಲ್ಲಿ ಹೆಚ್ಚು ಖ್ಯಾತರಾದರು. ದೇಶ ವಿದೇಶದಲ್ಲೂ ಅರುಣಕುಮಾರ್, ಅಚ್ಯುತದಾಸ್, ಕೇಶವದಾಸ್ ಮೂವರೂ ರತ್ನತ್ರಯ ಹರಿಕಥಾ ವಿದ್ವಾಂಸರೆಂದೇ ಜನಪ್ರಿಯರಾದರು.

ಇದನ್ನೂ ಓದಿ:ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಮಹಾಕಲಾವಿದ ಜಿ.ವಿ.ಅಯ್ಯರ್… ಇವರ ಬಣ್ಣದ ಬದುಕು ಹೇಗಿತ್ತು? ಸಾಧನೆಗಳೇನು?

45 ವರ್ಷ ಪರ್ಯಂತ ವಿದೇಶಗಳು ಸೇರಿದಂತೆ ಸಾವಿರಾರು ವೇದಿಕೆಗಳಲ್ಲಿ ಈ ಮೂವರ ಹರಿಕಥೆ ಕೇಳಲು ಹಾತೊರೆಯುತ್ತಿದ್ದರು. ಅದರಲ್ಲೂ ಅರುಣಕುಮಾರ್‌ ಹರಿಕಥೆ ಕೇಳಲು ಮಾಡ್ರನ್ ಗರ್ಲ್ಸ್-ಬಾಯ್ಸ್ ಯುವಪೀಳಿಗೆ ಉತ್ಸುಕರಾಗಿ ಇಷ್ಟಪಡುತ್ತಿದ್ದರು. ವಿದ್ಯಾರ್ಥಿಗಳು, ವಕೀಲರು, ಎಂಜಿನಿಯರು, ವೈದ್ಯರು, ಉದ್ಯಮಿಗಳು, ಗೃಹಿಣಿಯರು, ಮುಂತಾದ ಎಲ್ಲವರ್ಗದವರು ಮುಗಿಬೀಳುತ್ತಿದ್ದರು. ಆ ಬಾಲವೃದ್ಧರಾದಿಯಾಗಿ ಜಾತಿಮತ, ವೃತ್ತಿಹುದ್ದೆ, ಅಧಿಕಾರಅಂತಸ್ತು ಭೇದಭಾವ ಇಲ್ಲದೆ ಕಿಕ್ಕಿರಿದ ಜನಸಂದಣಿ ಇರುತ್ತಿತ್ತು.

ನವರಸಭರಿತ ಭಾವಭಂಗಿಯಿಂದ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳನ್ನು ಎಲ್ಲರ ಕಣ್ಣಮುಂದೆ ನಿಲ್ಲಿಸುತ್ತಿದ್ದರು. ಹರಿಕಥೆ ನಡುವೆ ಉಪಕಥೆಗಳ ವರ್ಣಿಸಿ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದ್ದರು. ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು ಹಾಗೆಯೇ ಬಿಕ್ಕಿಬಿಕ್ಕಿ ಅಳಿಸುತ್ತಿದ್ದರು. ಇವರ ಉಪಕಥೆಗಳಲ್ಲಿ ಹಾಸ್ಯದ ಮೂಲಕ ನೀತಿಬೋಧಕ ಸಾಮಾಜಿಕ ಸಂದೇಶವಿದ್ದು ಸರ್ವರೀತಿ ಆಪ್ಯಾಯಮಾನ ಆಗಿರುತ್ತಿತ್ತು. ತಮ್ಮದೇ ವಿಶಿಷ್ಟಶೈಲಿ ಕಲೆಯನ್ನು ಕರಗತ ಮಾಡಿಕೊಂಡಿದ್ದ ಮಹಾನ್‌ ವಿದ್ವಾಂಸ.

ಇದನ್ನೂ ಓದಿ: ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು.. ಇವರಿಗೆ ಕನ್ನಡ ಚಿತ್ರರಂಗದ ನಂಟು ಹೇಗಿತ್ತು?

ಸುಮಾರು 30 ವರ್ಷಕಾಲ ಸಾರ್ವಜನಿಕರ ಒತ್ತಾಯದ ಮೇರೆಗೆ ದಿನಕ್ಕೆ 18ಗಂಟೆ ದುಡಿದರು. ಗಣೇಶೋತ್ಸವ ಶಿವರಾತ್ರಿ ರಾಮನವಮಿ ಹನುಮಜ್ಜಯಂತಿ ರಾಜ್ಯೋತ್ಸವ ಮುಂತಾದ ಸಂದರ್ಭದಲ್ಲಿ ಒಂದು(ವರೆ)ಗಂಟೆಗೆ ಒಂದರಂತೆ ಪ್ರತಿದಿನ 12 ಕಾರ್ಯಕ್ರಮ ನೀಡಿ ದಾಖಲೆ ನಿರ್ಮಿಸಿದ್ದರು. ಹಲವು ಸಲ ಇವರನುಪಸ್ಥಿತಿಯಲ್ಲಿ ಇವರ ಕ್ಯಾಸೆಟ್(ಟೇಪ್) ರೆಕಾರ್ಡರ್ ಮತ್ತು ಸಾಕ್ಷ್ಯಚಿತ್ರಗಳನ್ನೆ ವಿಧಿಇಲ್ಲದೇ ಉಪಯೋಗಿಸುವ ಮೂಲಕ ಕಾರ್ಯಕ್ರಮಗಳು ಯಶಸ್ವಿಕಂಡವು. ಗದ್ಯ-ಪದ್ಯ ಉಚ್ಛಾರಣೆ ಅಮೋಘವಾಗಿ ಮಾಡುತ್ತಿದ್ದ ಕಂಚುಕಂಠದ ಸಂಗೀತಶಾರೀರದ ಸ್ವಾಮಿವಿವೇಕಾನಂದರ ನೆನಪಿಸುವಂಥ ಕಾಷಾಯ ವಸ್ತ್ರಧಾರಿ ಹರಿಕಥಾ ಸಾರ್ವಭೌಮ 35ಕ್ಕೂ ಹೆಚ್ಚುಬಗೆಯ ಹರಿಕಥೆಗಳ ಸಾವಿರಾರು ಕಾರ್ಯಕ್ರಮಗಳನ್ನು ಮೂರು ರಾಜ್ಯಗಳ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ನಡೆಸಿಕೊಟ್ಟರು.

ಇವರು 1993ರಲ್ಲಿ ನಿಧನರಾದರೂ ಇವರ ಶಿಷ್ಯರು ಮಕ್ಕಳು ಮೊಮ್ಮಕ್ಕಳು ಇವರ ಹರಿಕಥೆಗಳನ್ನ ನೀಡುವ ಮೂಲಕ ಇವರ ನೆನಪನ್ನು ಅಜರಾಮರವಾಗಿಸಿದ್ದಾರೆ!ಇವತ್ತಿಗೂ ಸಹ ಅರುಣಕುಮಾರ್ ಹರಿಕಥೆಗಳ ಆಡಿಯೊ ವೀಡಿಯೊ ಕ್ಯಾಸೆಟ್ ಸೀಡಿ ಯುಟ್ಯೂಬ್ ಪ್ರಪಂಚದಾದ್ಯಂತ ಮನೆಮಾತಾಗಿದೆ! ಇವರ ಸನ್ನಡತೆ ಪ್ರತಿಭೆ ಚಿರಸ್ಮರಣೀಯ! ಅಂತಾರಾಷ್ಟ್ರ ದಾಖಲೆ ನಿರ್ಮಿಸಿದ್ದ ಹರಿಕಥಾ ಚಕ್ರವರ್ತಿ ಕಂ-ಚಿತ್ರನಟ ಅರುಣ್‌ಕುಮಾರ್ 31 ಸಿನಿಮಾದಲ್ಲಿ ಅಭಿನಯಿಸಿ ಪ್ರಶಸ್ತಿ ಬಹುಮಾನ ಗಳಿಸಿದ್ದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು ಬಗ್ಗೆ ನಿಮಗೆಷ್ಟು ಗೊತ್ತು?

ಅರುಣಕುಮಾರ್ ನಟಿಸಿದ ಸಿನಿಮಾಗಳನ್ನು ನೋಡಿದ್ದೇ ಆದರೆ, ಮಕ್ಕಳರಾಜ್ಯ(1960), ಆನಂದಬಾಷ್ಪ, ಮಿಸ್‌ಲೀಲಾವತಿ, ಪ್ರೇಮಮಯಿ, ಮನೆಕಟ್ಟಿನೋಡು ಸುಬ್ಬಾಶಾಸ್ತ್ರಿ, ನಕ್ಕರೇ ಅದೇಸ್ವರ್ಗ, ಸತೀಸುಕನ್ಯ ಮಧುಮಾಲತಿ, ಮಿಸ್‌ ಬೆಂಗಳೂರ್, ಇಮ್ಮಡಿ ಪುಲಿಕೇಶಿ, ಪ್ರೇಮಕ್ಕೂಪರ್ಮಿಟ್ಟೇ, ಮಹಾಸತಿ ಅರುಂಧತಿ, ಹಣ್ಣೆಲೆಚಿಗುರಿದಾಗ, ಸಿಗ್ನಲ್‌ಮನ್‌ ಸಿದ್ಧಪ್ಪ, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ, ಸುಭದ್ರಾ ಕಲ್ಯಾಣ, ಮೂರೂವರೆವಜ್ರಗಳು, ದೇವದಾಸಿ, ಶಿವಕನ್ಯೆ, ಶಬ್ಧಗಳು, ಐದುಬೆರಳು, ಮಹಡಿಮನೆ, ಸಾವಿರಮೆಟ್ಟಿಲು, ಮರ್ಯಾದೆ ಮಹಲು, ಸಂಪ್ರದಾಯ, ಅಭಿಮನ್ಯು, ಪ್ರೇಮಮತ್ಸರ, ಜೀವನಸಂಘರ್ಷ, ಜನುಮದಜೋಡಿ, ಪ್ರೇಮಗೀತೆ ಮೊದಲಾದವುಗಳಾಗಿವೆ.

admin
the authoradmin

2 Comments

  • ಗುರುರಾಜಲು ನಾಯ್ಡು(ಅರುಣಕುಮಾರ್) ಬಗ್ಗೆ ಕನ್ನಡಿಗರೆಲ್ಲರೂ ತಿಳಿದುಕೊಳ್ಳುವ ಬಹಳಷ್ಟು ಮಾಹಿತಿಯುಳ್ಳ ಲೇಖನ ನೀಡಿದ ತಮಗೆ ಧನ್ಯವಾದ

  • ಬಹಳ ಚೆನ್ನಾಗಿ ಬರೆದ ಲೇಖನವನ್ನು ಅಷ್ಟೇ ಅಂದ ಮತ್ತು ಅಚ್ಚುಕಟ್ಟಾಗಿ ಪರಕಟಿಸಿರುವ ಕನ್ನಡಿಗರ ಅಚ್ಚುಮೆಚ್ಚಿನ ಜನಮನ ಪತ್ರಿಕೆಯವರಿಗೆ ಧನ್ಯವಾದ ನಮಸ್ಕಾರ

Leave a Reply