Mysore

ಮೈಸೂರಿನಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ… ಭಾಷಣಕಾರ ಸಾಹಿತಿ ಬಿ.ಎನ್.ನಟರಾಜ್ ಹೇಳಿದ್ದೇನು?

ಮೈಸೂರು: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ಸಹಯೋಗದೊಂದಿಗೆ ನಗರದ ಕಲಾಮಂದಿರದ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ತನ್ವೀರ್ ಸೇಠ್ ಅವರು, ನಮ್ಮ ವೃತ್ತಿ ಏನೇ ಇರಬಹುದು. ಆದರೆ ನಾವೆಲ್ಲರೂ ವಿಶ್ವಕರ್ಮರು ಎಂಬ ಭಾವ ಎಲ್ಲರಲ್ಲೂ ಇರಬೇಕು. ನಾರಾಯಣ ಗುರು ಹೇಳಿದಂತೆ, ಭಗವಂತನ ರೂಪಗಳು ಬೇರೆ ಬೇರೆ ಇರಬಹುದು. ಆದರೆ, ಎಲ್ಲರಿಗೂ ಮೂಲ ದೇವ ಒಬ್ಬನೇ ಆಗಿದ್ದಾನೆ. ಹಾಗೆಯೇ ನಮ್ಮೆಲ್ಲರ ಕಸುಬುಗಳು ಬೇರೆ ಬೇರೆ ಇದ್ದರೂ ನಮ್ಮೆಲ್ಲರ ಅಸ್ತಿತ್ವ ಕಾಪಾಡಿಕೊಳ್ಳಲು ಎಲ್ಲರೂ ಒಂದಾಗುವ ಅವಶ್ಯಕತೆ ಇದೆ ಎಂದು ಹೇಳಿದರು

ವಿಶ್ವಕರ್ಮ ಕೃಪೆ ಮತ್ತು ದಯೆಯಿಂದಾಗಿ ಚಿನ್ನ ಬೆಳ್ಳಿ, ಕಲ್ಲುಬಂಡೆಗಳಿಗೆ, ಮರಗಳಿಗೆ ರೂಪ ಕೊಡುವ ಶಕ್ತಿ ವಿಶ್ವಕರ್ಮದವರಿಗೆ ನೀಡಿದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕು. ಜನಾಂಗದ ಸಮಸ್ಯೆ ಪರಿಹಾರಕ್ಕೆ ದಾರಿ ತಪ್ಪದೇ ಎಲ್ಲರೂ ಒಗ್ಗೂಡಬೇಕಿದ್ದು, ಸಾಂಪ್ರದಾಯಿಕವಾದ ನಮ್ಮ ಕಲೆಗಳನ್ನು ಕಾಪಾಡಿಕೊಳ್ಳಬೇಕಿದೆ ಎಂದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಹಿರಿಯ ಸಾಹಿತಿ ಬಿ.ಎನ್.ನಟರಾಜ್ (ಕುಮಾರಕವಿ) ಅವರು ದೇವಶಿಲ್ಪಿ ವಿಶ್ವಕರ್ಮನ ವಿದ್ವತ್ ಬಗ್ಗೆ, ಗಾಯತ್ರಿಮಂತ್ರ ತಾತ್ಪರ್ಯ, ಇವರಿಬ್ಬರಿಂದ ಪೌರಾಣಿಕ ಐತಿಹಾಸಿಕ ಸಾಮಾಜಿಕ ಕೊಡುಗೆ, ಕಲಾಪ್ರತಿಭಾ ವಿಶ್ಲೇಷಣೆ, ಬೃಹಸ್ಪತಿ ಮತ್ತು ಶುಕ್ರಾಚಾರ್ಯ ವಿವರಣೆ, ಮತ್ತಿತರ ವಿಚಾರ ಪೂರ್ಣ ಮಾಹಿತಿ, ಅಂಕಿಅಂಶದ ಅನೇಕ ಹೊಸಾಹೊಸ ಅಪರೂಪದ ಆಶ್ಚರ್ಯಕರ ಮಾಹಿತಿಯನ್ನು ನೀಡಿದರಲ್ಲದೆ, ಅಮರಶಿಲ್ಪಿ ಜಕಣಾಚಾರಿಯಿಂದ ಅರುಣಯೋಗಿರಾಜ್ ವರೆಗೆ ಒಟ್ಟು 21 ಪ್ರಮುಖ ವಾಸ್ತುಶಿಲ್ಪಿಗಳ ಶಿಲ್ಪಕಲೆ ವೈಭವದ ಬಗ್ಗೆ ಮಾಹಿತಿ ನೀಡಿದರಲ್ಲದೆ, ಇತಿಹಾಸ ಘಟನೆಗಳ ಬಗ್ಗೆ ಸತ್ಯದ ಬೆಳಕು ಚೆಲ್ಲುವ ಮೂಲಕ ಗಮನಸೆಳೆದರು.

ಕಾರ್ಯಕ್ರಮದಲ್ಲಿ ಹಾಸನದ ಅರೆಮಾದನಹಳ್ಳಿ ವಿಶ್ವ ಬ್ರಾಹ್ಮಣರ ಮಹಾ ಸಂಸ್ಥಾನ ಮಠದ ವಿಶ್ವ ಜಗದ್ಗುರು ಪೀಠದ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಿಲ್ಪಿ ಅರುಣ್ ಯೋಗಿರಾಜ್, ವಸ್ತು ಪ್ರದರ್ಶನ ಪ್ರಾಧಿಕಾರದ ನಿರ್ದೇಶಕ ಹೇಮಂತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಹುಚ್ಚಪ್ಪ, ಪದಾಧಿಕಾರಿಗಳಾದ ಸಿ.ಟಿ.ಆಚಾರ್, ರೇವಣ್ಣ, ಎ.ಎನ್.ಸ್ವಾಮಿ, ಜಯಕುಮಾರ್, ಎನ್.ಚಂದ್ರು, ನಿಂಗಾಚಾರ್, ಜಯರಾಮಾಚಾರ್ ಸೇರಿದಂತೆ ಆಚರಣಾ ಸಮಿತಿಯ ವಿವಿಧ ಸಂಘ ಸಂಸ್ಥೆ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಇರ್ವಿನ್ ರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನದಿಂದ ಹೊರಟ ಮೆರವಣಿಗೆ ಕೆ.ಟಿ.ಸ್ಟ್ರೀಟ್, ಅಶೋಕ ರಸ್ತೆ ಮೂಲಕ ದೊಡ್ಡ ಗಡಿಯಾರ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆ, ಮೆಟ್ರೋಪೋಲ್ ರಸ್ತೆ ಮೂಲಕ ಹುಣಸೂರು ರಸ್ತೆಯಲ್ಲಿರುವ ಕಲಾಮಂದಿರಕ್ಕೆ ಆಗಮಿಸಿತು.

admin
the authoradmin

14 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ

Translate to any language you want