CrimeLatest

ಕೊಡಗಿನ ಆರೇಂಜ್ ಫ್ಯಾಮಿಲಿ ಬ್ಯೂಟಿ ಪಾರ್ಲರ್ – ಸ್ಪಾ ಸೆಂಟರ್ ನಲ್ಲಿ ನಡೆಯುತ್ತಿದ್ದದ್ದು ಏನು?

ಅಂದಿನಿಂದ ಇಂದಿನವರೆಗೂ ವೇಶ್ಯಾವಾಟಿಕೆ ನಡೆಯುತ್ತಲೇ ಬಂದಿದೆ. ಅದನ್ನು ಹತ್ತಿಕ್ಕುವುದು ಸಾಧ್ಯವಾಗದ ಮಾತಾಗಿದೆ. ಕಾಲ ಕಾಲಕ್ಕೆ ಅದು ಮಗ್ಗಲು ಬದಲಿಸುತ್ತಾ ಸಾಗುತ್ತಿದ್ದು, ಇವತ್ತಿನ ಹೈಟೆಕ್ ಜೀವನದಲ್ಲಿ ಅದು ಕೂಡ ಬಹಳಷ್ಟು ಜನರಿಗೆ ಆದಾಯದ ಕೇಂದ್ರವಾಗುತ್ತಿದೆ. ಇದು ಬೇರೆ, ಬೇರೆ ರೀತಿಯಲ್ಲಿ ನಡೆಯುತ್ತಿದ್ದು, ಎಲ್ಲೆಡೆ ಪಸರಿಸಲಾರಂಭಿಸಿದೆ. ಇದರಲ್ಲಿ ಮುಳುಗಿ ದುಂಡಗಾಗಿರುವ ದಂಧೆಕೋರರು ಈ ವಿಷವರ್ತುಲಕ್ಕೆ ಅಮಾಯಕ ಹೆಣ್ಣು ಮಕ್ಕಳನ್ನು ಬೀಳಿಸಿ ಅವರ ಮೂಲಕವೇ ದಂಧೆ ನಡೆಸಿ ದುಂಡಗಾಗುತ್ತಿದ್ದಾರೆ. ಈ ದಂಧೆ ಇದೀಗ ಕೊಡಗಿಗೂ ವ್ಯಾಪಿಸಿರುವುದು ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.

ಪೊಲೀಸರ ಮತ್ತು ಜನರ ಕಣ್ಣಿಗೆ ಮಣ್ಣೆರೆಚುವ ಸಲುವಾಗಿಯೇ ಹಲವು ಕ್ಷೇತ್ರವನ್ನು ಇದಕ್ಕೆ ಬಳಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೋಟೆಲ್‌ ಗಳಲ್ಲಿ ಆಯುರ್ವೇದಿಕ್ ಮಸಾಜ್ ಮತ್ತು ಸ್ಪಾ,  ಬ್ಯೂಟಿಪಾರ್ಲರ್ ಗಳನ್ನು ತೆರೆದು ಅಲ್ಲಿ ವೇಶ್ಯವಾಟಿಕೆ ನಡೆಸುವುದು ಹೊಸದೇನಲ್ಲ. ಆದರೆ ಇದರ ವ್ಯಾಪ್ತಿ ಎಲ್ಲೆಡೆಗೆ ವಿಸ್ತರಣೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಣ ಮಾಡುವುದಕ್ಕೆ ವೇಶ್ಯಾವಾಟಿಕೆ ಸುಲಭ ದಾರಿಯಾಗಿರುವುದರಿಂದಾಗಿ ಬೇರೆ, ಬೇರೆ ಮಾರ್ಗಗಳನ್ನು ಹುಡುಕಿಕೊಂಡು ದಂಧೆ ನಡೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಯಾವುದನ್ನು ನಂಬಬೇಕು ಎಂಬುದೇ ತಿಳಿಯದಂತಾಗಿದೆ.

ಈಗಾಗಲೇ ಬಾಂಗ್ಲಾ ಸೇರಿದಂತೆ ಉತ್ತರ ಭಾರತದ ಹೆಣ್ಣು ಮಕ್ಕಳು ವೇಶ್ಯಾವಾಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅವರನ್ನು ನಿಗದಿತ ಖರೀದಿಸಿಟ್ಟು ಕೊಳ್ಳುವ ತಲೆಹಿಡುಕರು ಬಳಿಕ ಬೇರೆಡೆಗೆ ಅವರನ್ನು ಸಾಗಿಸುತ್ತಾರೆ. ಹೆಣ್ಮಕ್ಕಳ ಬಡತನವನ್ನೇ ಬಂಡವಾಳ ಮಾಡಿಕೊಂಡಿರುವ ತಲೆಹಿಡುಕರು ಕೆಲಸ ನೀಡುವ ನೆಪವೊಡ್ಡಿ ಕರೆತಂದು ಮೈಮಾರುವುದಕ್ಕೆ ಬಿಡುತ್ತಿದ್ದಾರೆ. ಸಾಮಾನ್ಯವಾಗಿ ಪೊಲೀಸರು ದಾಳಿ ಮಾಡಿದಾಗ ಸಿಕ್ಕಿ ಬೀಳುವ ಹೆಣ್ಮಕ್ಕಳೆಲ್ಲ ಉತ್ತರ ಭಾರತದವರೇ ಆಗಿರುತ್ತಾರೆ. ಆದರೆ ಇವರನ್ನು ಇಲ್ಲಿಗೆ ಸಾಗಿಸುತ್ತಿರುವವರು ಯಾರು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದು ಹೋಗುತ್ತಿದೆ.

ಇದನ್ನೂ ಓದಿ :  ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ವೀಕ್ ನೆಸ್ಸೇ  ವಂಚಕರಿಗೆ ಮಹಾಅಸ್ತ್ರ!

ಇದೆಲ್ಲದಕ್ಕಿಂತ ಹೆಚ್ಚಾಗಿ ಒಮ್ಮೆ ವೇಶ್ಯಾವಾಟಿಕೆ ಕೂಪದಲ್ಲಿ ಸಿಕ್ಕಿ ಬೀಳುವ ಮಹಿಳೆಯರನ್ನು ರಕ್ಷಿಸಿದರೂ ಅವರು ಮತ್ತೆ ಅದನ್ನೇ ಮಾಡುತ್ತಾರೆ. ಇನ್ನು ಮಸಾಜ್ ಸೆಂಟರ್ ಗಳಂತು ನಗರದಿಂದ ಹಳ್ಳಿಕಡೆ ಮುಖ ಮಾಡಿದ್ದು, ನಗರ, ಜಿಲ್ಲೆ ಹೀಗೆ ಗಡಿದಾಟಿ ಎಲ್ಲೆಡೆ ಸದ್ದಿಲ್ಲದೆ ತಲೆ ಎತ್ತುತ್ತಿವೆ. ಮೇಲ್ನೋಟಕ್ಕೆ ಇವುಗಳನ್ನು ಮಸಾಜ್ ಸೆಂಟರ್ ಅಂದುಕೊಂಡರೆ ತಪ್ಪಾಗಿ ಬಿಡುತ್ತದೆ. ಅಲ್ಲಿ ನಡೆಯುವ ವ್ಯವಹಾರ ಬೇರೆಯದ್ದೇ ಆಗಿರುತ್ತದೆ. ಇಲ್ಲಿ ದುಡ್ಡು ಆಗುವುದು ಗಂಡಸರಿಗೆ ಮಸಾಜ್ ಮಾಡುವುದರಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೆಣ್ಮಕ್ಕಳ ಕೈನಲ್ಲಿ ಮಸಾಜ್ ಮಾಡಿಸಿಕೊಳ್ಳಲೆಂದೇ ಬರುವ ಗಂಡಸರು ಕೇಳಿದಷ್ಟು ಹಣ ಕೊಟ್ಟು ಮಸಾಜ್ ಮಾಡಿಸಿಕೊಳ್ಳುತ್ತಾರೆ. ಇಲ್ಲಿ ನಡೆಯುವ ಮಸಾಜ್ ಗಳೇ ಬೇರೆಯದ್ದೇ ಆಗಿರುತ್ತದೆ. ಮುಂದುವರೆದು ಹಣಕ್ಕಾಗಿ ಮಸಾಜ್ ಜತೆಗೆ ಸೆಕ್ಸ್ ಗೂ ಅವಕಾಶ ಮಾಡಿಕೊಟ್ಟು ಹಣ ಪೀಕುತ್ತಾರೆ. ಇದಕ್ಕೆಂದೇ ಕೆಲವೊಂದು ಆಪ್ ಗಳನ್ನು ಬಳಸಿಕೊಂಡು ಅದರ ಮೂಲಕವೇ ಗಿರಾಕಿಗಳನ್ನು ಕರೆಯಿಸಿಕೊಳ್ಳುವುದು ಇವರ ಜಾಣತನವಾಗಿದೆ. ಕೆಲವೊಮ್ಮೆ ಈ ಮಸಾಜ್ ಸೆಂಟರ್ ಗಳ ಮಾಲೀಕರು ಒಂದು ಕಡೆಯಲ್ಲಿ ಪೊಲೀಸರ ದಾಳಿಯಾದರೆ ಅಲ್ಲಿ ಮುಚ್ಚಿ ಮತ್ತೊಂದು ಕಡೆ ತೆರೆಯುತ್ತಾರೆ.

ಇದೆಲ್ಲವನ್ನು ಗಮನಿಸಿದರೆ ಹುಡ್ಗ, ಹುಡ್ಗೀರು ಹಣ ಮಾಡುವ ಸುಲಭ ಹಾದಿಗಳನ್ನು ಹುಡುಕುತ್ತಿದ್ದು, ಎಲ್ಲರೂ ಸೆಕ್ಸ್ ಧೋಖಾಕ್ಕೆ ಇಳಿದಿರುವುದು ಇತ್ತೀಚೆಗೆ ಎದ್ದು ಕಾಣಿಸುತ್ತಿದೆ. ಮೊದಲೆಲ್ಲ ವೇಶ್ಯಾವಾಟಿಕೆ ಮಾಡಿ ಹಣ ಪೀಕುತ್ತಿದ್ದರೆ, ಈಗ ಆನ್ ಲೈನ್ ನಲ್ಲಿ ಎಂಜಾಯ್ ಮಾಡಲು ಹುಡ್ಗೀರು ಸಿಗುತ್ತಾರೆ ಎಂಬಂತಹ ಜಾಹೀರಾತುಗಳನ್ನು ಹರಿದಾಡಿಸಿ, ಅದನ್ನು ನೋಡಿ ಫೋನ್ ಮಾಡುವ ಕಾಮುಕರಿಂದ ಹಣ ಕೀಳುವ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದೆಲ್ಲದರ ನಡುವೆ ಸೆಕ್ಸ್ ಮಸಾಜ್  ಮಾಡಲು ಹುಡ್ಗೀರು ಸಿಗುತ್ತಾರೆ ಎಂಬಂತಹ ಸಂದೇಶಗಳನ್ನು ಆನ್ ಲೈನ್ ನಲ್ಲಿ ಹರಿದಾಡಿಸಿ ಕಾಮುಕರಿಗೆ ಬಲೆ ಬೀಸಿ ಹಣ ಕೀಳುವ ಕಾಮುಕರು ಇಲ್ಲದಿಲ್ಲ.

ಇದನ್ನೂ ಓದಿ :  ಜನ ಸ್ಪಾಗಳನ್ನು ಅನುಮಾನದಿಂದ ನೋಡುತ್ತಿರುವುದೇಕೆ? ಇಷ್ಟಕ್ಕೂ ಇಲ್ಲಿ ನಡೆಯುವುದೇನು?

ವಿವಿಧ ರೀತಿಯ ಸೆಕ್ಸ್ ದಂಧೆ ಗಳಲ್ಲಿ ಮತ್ತು ಅದರ ಹೆಸರಲ್ಲಿ ಹಣ ಕೀಳುವುದು ಖತರ್ ನಾಕ್ ಗ್ಯಾಂಗ್ ಗಳಿಗೆ ಸುಲಭದ ಹಾದಿಯಾಗಿದೆ. ಇದರಲ್ಲಿ ಹುಡುಗಿಯರು ಕೈಜೋಡಿಸುತ್ತಿರುವುದು ಮಾತ್ರ ದುರಂತದ ಸಂಗತಿಯಾಗಿದೆ. ಈಗಾಗಲೇ ಹನಿಟ್ರ್ಯಾಪ್ ನಂತಹ ದಂಧೆ ಸಕ್ರಿಯವಾಗಿದ್ದು, ಸೆಕ್ಸ್ ವಿಚಾರದಲ್ಲಿ ಗಂಡಸರು ಅದರಲ್ಲೂ ಹಣವಂತರು, ಅಧಿಕಾರಿಗಳು, ಪ್ರಭಾವಿಗಳನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿದ್ದು, ಸ್ವಲ್ಪ ಯಾಮಾರಿದರೂ ಲಕ್ಷ, ಲಕ್ಷ ಪೀಕಲು ರೆಡಿಯಾಗಿ ಬಿಡುತ್ತಾರೆ.

ಈಗಾಗಲೇ ಕೆಲವೊಂದು ಮಸಾಜ್ ಸೆಂಟರ್ ಗಳು ಸೆಕ್ಸ್ ಮಸಾಜ್ ಮಾಡಿ ಸಿಕ್ಕಿ ಬಿದ್ದ ಉದಾಹರಣೆಗಳು ಬೇಕಾದಷ್ಟಿವೆ. ಜತೆಗೆ ಮತ್ತೊಂದಷ್ಟು ಲಾಡ್ಜ್ ಗಳು ಗ್ರಾಹಕರು ಸಿಗದ ಕಾರಣದಿಂದಾಗಿ ವೇಶ್ಯಾವಾಟಿಕೆಗೆ ಅವಕಾಶ ಮಾಡಿ ಪೊಲೀಸರ ದಾಳಿಗೊಳಗಾದ ಘಟನೆಗಳು ಇವೆ. ಇನ್ನು ಸದಾ ಮೊಬೈಲ್ ನಲ್ಲಿರುವ ಕೆಲವರು ಸೆಕ್ಸ್ ಸಂಬಂಧಿಸಿದ ವಿಚಾರಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುತ್ತಿರುವ ಕಾರಣ ವೆಬ್ ಸೈಟ್ ಮತ್ತು  ವಿವಿಧ ಆಪ್ ಗಳ ಮೂಲಕ ಯಾಮಾರಿಸುವುದು ಖತರ್ ನ್ಯಾಕ್ ಗ್ಯಾಂಗ್ ಗಳಿಗೆ ಸುಲಭವಾಗುತ್ತಿದೆ. ಜತೆಗೆ ವೇಶ್ಯಾವಾಟಿಕೆಗೂ ಇದು ಹಾದಿ ಮಾಡಿಕೊಡುತ್ತಿದೆ.

ಸೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಎಷ್ಟೇ ಪ್ರಕರಣಗಳು ಹೊರ ಬರುತ್ತಿದ್ದರೂ  ಕೆಲವು ಗಂಡಸರು ಅದರ ಬಗ್ಗೆ ಎಚ್ಚೆತ್ತು ಕೊಳ್ಳದೆ ಸೆಕ್ಸ್ ಆಸೆಯಿಂದ ಹೋಗಿ ಸಿಕ್ಕಿ ಬೀಳುತ್ತಲೇ ಇರುತ್ತಾರೆ. ಎಲ್ಲಿ ತನಕ ಮೋಸ ಹೋಗುವವರು ಇರುತ್ತಾರೋ? ಅಲ್ಲಿ ತನಕ ಮೋಸ ಮಾಡುವವರು ಇರುತ್ತಾರೆ ಎಂಬುದಕ್ಕೆ ಸೆಕ್ಸ್ ದೋಖಾ ಪ್ರಕರಣಗಳು ಸಾಕ್ಷಿಯಾಗಿವೆ. ಪ್ರತಿದಿನವೋ ಒಂದಲ್ಲ ಒಂದು ರೀತಿ ಸೆಕ್ಸ್ ಗೆ ಸಂಬಂಧಿಸಿದ ವಂಚನೆ ಪ್ರಕರಣಗಳು ನಡೆಯುತ್ತಲೇ ಇವೆ. ಕೆಲವರು ಹಣ ಪಡೆದುಕೊಂಡು ಗಿರಾಕಿಗಳ ಬಯಕೆ ನೆರವೇರಿಸಿದರೆ ಇನ್ನು ಕೆಲವರು ಸೆಕ್ಸ್ ಹೆಸರಲ್ಲಿ ವಂಚನೆಗಿಳಿಯುತ್ತಾರೆ. ಇನ್ನು ಹನಿಟ್ರ್ಯಾಪ್ ಜಾಲವೂ ಇಲ್ಲದಿಲ್ಲ

ಇದನ್ನೂ ಓದಿ : ಮಗಳು ಮನೆ ಬಿಟ್ಟಳು.. ಹೆತ್ತವರು ಹೆಣವಾದರು.. ಇದೆಂತಹ ದುರಂತ ಕಥೆ ಅಲ್ವಾ…!

ಇದೆಲ್ಲದರ ನಡುವೆ ಕೊಡಗಿನ ಹುಡುಗಿಯರನ್ನು ತೋರಿಸಿ ದಂಧೆ ನಡೆಸುವುದು ಹೊಸದೇನಲ್ಲ. ಸೆಕ್ಸ್ ದಂಧೆ ನಡೆಸುವವರು ಕೊಡಗಿನ ಹುಡುಗಿಯರು ಎಂದು ಹೇಳಿ ಗಿರಾಕಿಗಳಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿರುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಇದೆಲ್ಲದರ ನಡುವೆ ಹೊರಗಿನಿಂದ ಬಂದು ಇಲ್ಲಿ ಮಸಾಜ್ ಸ್ಪಾ ಸೆಂಟರ್ ತೆರೆದು ಅದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದು ಗುಟ್ಟಾಗಿ ನಡೆಯುತ್ತಿದ್ದು, ಇದೀಗ ಅಂತಹದೊಂದು ಪ್ರಕರಣ ಬಯಲಾಗಿದೆ.

ಕೊಡಗಿನ ವೀರಾಜಪೇಟೆ ಗಾಂಧಿನಗರದಲ್ಲಿ ಖಾಸಗಿ ಕಟ್ಟಡವನ್ನು ಬ್ಯೂಟಿಪಾರ್ಲರ್ ನಡೆಸುವುದಾಗಿ ಹೇಳಿ ಕಳೆದ ಆರು ತಿಂಗಳ ಹಿಂದೆ ಬಾಡಿಗೆ ಪಡೆದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪ್ರದೀಪನ್ ಮತ್ತು ಶಿಜು ಎಂಬಿಬ್ಬರು ನಂತರ ಅದನ್ನು ಹೈಟೆಕ್ ಆಗಿ ಅಲಂಕರಿಸಿ ಆರೇಂಜ್ ಫ್ಯಾಮಿಲಿ ಬ್ಯೂಟಿ ಪಾರ್ಲರ್ ಮತ್ತು ಸ್ಪಾ ಸೆಂಟರ್ ಬೋರ್ಡ್ ತಗಲಿಸಿದ್ದರು. ಮೇಲ್ನೋಟಕ್ಕೆ ಅದ್ಧೂರಿಯಾಗಿದ್ದರಿಂದ ಹತ್ತಿರದವರು ಇಲ್ಲಿಗೆ ಹೋಗುತ್ತಿರಲಿಲ್ಲ. ಆದರೆ ಖತರ್ ನಾಕ್ ಗಳಾಗಿದ್ದ ಪ್ರದೀಪನ್ ಮತ್ತು ಶಿಜು ಅದರಲ್ಲಿ ಸೆಕ್ಸ್ ಮಸಾಜ್ ಸೇರಿದಂತೆ ವೇಶ್ಯಾವಾಟಿಕೆ ದಂಧೆಯನ್ನು ಆರಂಭಿಸಿದ್ದರು.

ಇಲ್ಲಿಗೆ ಶ್ರೀಮಂತ ಗ್ರಾಹಕರೇ ಬರುತ್ತಿದ್ದರಲ್ಲದೆ, ಹೆಚ್ಚಿನವರನ್ನು ಆನ್ ಲೈನ್ ಮೂಲಕವೇ ಸಂಪರ್ಕಿಸಲಾಗುತ್ತಿತ್ತು. ಮಸಾಜ್ ಜತೆಗೆ ಬೇರೆ ಬೇರೆ ರೀತಿಯ ಸಮಾರಾಧನೆಗಳು ನಡೆಯುತ್ತಿದ್ದವು. ಇದಕ್ಕೆಂದೇ ಕೊಡಗು ಜಿಲ್ಲೆಯ ಮತ್ತು ಮಂಗಳೂರು ಹಾಗೂ ತಮಿಳುನಾಡು ಮೂಲದ ಆರು ಜನ ಹೆಣ್ಮಕ್ಕಳನ್ನು ಇಟ್ಟುಕೊಂಡಿದ್ದರು. ಅವರು ಬರುವ ಗಿರಾಕಿಗಳನ್ನು ಸಂತೃಪ್ತಿಗೊಳಿಸಬೇಕಾಗುತ್ತಿತ್ತು. ಇವರ ಮಾಂಸದಂಧೆ ಬಿಸಿನೆಸ್ ನಿರೀಕ್ಷೆಗೂ ಮೀರಿ ಚೆನ್ನಾಗಿ ನಡೆಯುತ್ತಿದ್ದರಿಂದಾಗಿ ಪಾರ್ಲರ್ ಗೆ ಬರುವ ಗಿರಾಕಿಗಳ ಸಂಖ್ಯೆ ಹೆಚ್ಚಾಗಿತ್ತು.

ಪ್ರತಿದಿನವೂ ಪಾರ್ಲರ್ ಮುಂದೆ ಕಾರು ಜೀಪುಗಳಲ್ಲಿ ಗಂಡಸರು, ಹುಡುಗರು ಬರುತ್ತಿದ್ದರು. ಅಷ್ಟೇ ಆಗಿದ್ದರೆ ಯಾವುದೇ ಅನುಮಾನಗಳು ಬರುತ್ತಿರಲಿಲ್ಲ. ಆದರೆ ಟೈಟ್ ಜೀನ್ ಟೀ ಶರ್ಟ್ ಹಾಕಿಕೊಂಡು ಬರುತ್ತಿದ್ದ ಯುವತಿಯರು, ಮಹಿಳೆಯರು ಅವರ ಕಿಲಕಿಲ ನಗು ಎಲ್ಲವೂ ಸುತ್ತಮುತ್ತಲಿನವರಲ್ಲಿ ಅನುಮಾನವನ್ನು ಹುಟ್ಟು ಹಾಕಿತ್ತು. ಹೀಗಾಗಿ ಕೆಲವರು ಪೊಲೀಸರಿಗೆ  ಮೌಖಿಕವಾಗಿ ಮಾಹಿತಿಗಳನ್ನು ನೀಡಿದ್ದರು. 

ಇದನ್ನೂ ಓದಿ : ಭಾರತಕ್ಕೆ ಬಾಂಗ್ಲಾ-ನೇಪಾಳಿ ಹುಡ್ಗೀರ್ ಬರೋದ್ಯಾಕೆ?…

ಆರೇಂಜ್ ಫ್ಯಾಮಿಲಿ ಬ್ಯೂಟಿ ಪಾರ್ಲರ್ ಮತ್ತು ಸ್ಪಾ ಸೆಂಟರ್ ನ ಮೇಲೆ ದಿನದಿಂದ ದಿನಕ್ಕೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ಕಾಡಲಾರಂಭಿಸಿದ್ದರಿಂದ ಡಿವೈಎಸ್ಪಿ ಮಹೇಶ್ ಕುಮಾರ್, ಸಿಪಿಐ ಅನೂಪ್ ಮಾದಪ್ಪ  ವಿರಾಜಪೇಟೆ ನಗರ ಪೊಲೀಸ್ ಠಾಣೆ ಪಿಎಸ್‌ಐ ಪ್ರಮೋದ್, ಗ್ರಾಮಾಂತರ ಠಾಣೆ ಪಿಎಸ್‌ಐ ಲತಾ. ಎನ್.ಜೆ. ಮತ್ತು ಸಿಬ್ಬಂದಿಯನ್ನೊಳಗೊಂಡ  ತಂಡ ಪಾರ್ಲರ್ ಮೇಲೆ ದಾಳಿ ಮಾಡಿತ್ತು.

ದಾಳಿಯ ವೇಳೆ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಪರವಾನಗಿ ಪಡೆದು ಅಕ್ರಮವಾಗಿ ಸ್ಪಾ ಮಸಾಜ್ ಸೆಂಟರ್ ನಡೆಸುತ್ತಿರುವುದು ತಿಳಿದುಬಂದಿದೆ. ಅಲ್ಲದೆ ಕೆಲವು ಯುವತಿಯರನ್ನು ಮತ್ತು ಮಹಿಳೆಯರನ್ನು ಗಿರಾಕಿಗಳಿಗೆ ಪೂರೈಸುತ್ತಿದ್ದುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸದ್ಯ ಕೊಡಗು, ಮಂಗಳೂರು ಹಾಗೂ ತಮಿಳುನಾಡು ಮೂಲದ ಆರು ಮಹಿಳೆಯರನ್ನು ಪೊಲಿಸರು ರಕ್ಷಣೆ ಮಾಡಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಆರೋಪಿಗಳಾದ ಪ್ರದೀಪನ್ ಪಿ.ಪಿ, (48), ಕಲೇಶ್ ಕುಮಾರ್(45), ಶಾಜಿ(38), ವಿರಾಜಪೇಟೆ ತಾಲೂಕು ಅಮ್ಮತ್ತಿ ಗ್ರಾಮದ ನೆಲ್ಲಮಕ್ಕಡ ಎ. ಪೊನ್ನಣ್ಣ(48) ಎಂಬುವರನ್ನು ಬಂಧಿಸಲಾಗಿದೆ. ತಂಡದ ಕಾರ್ಯವನ್ನು ಜಿಲ್ಲಾ ಎಸ್ಪಿ ಕೆ. ರಾಮರಾಜನ್‌ ಶ್ಲಾಘಿಸಿದ್ದಾರೆ.

ಇದನ್ನೂ ಓದಿ : ಹನಿಟ್ರ್ಯಾಪ್… ಇದು ಮಾಯಾಂಗನೆಯರ ವಿಷವರ್ತುಲ… ಇಲ್ಲಿ ಸಿಕ್ಕಿಬಿದ್ದರೆ ಹಣ, ಮಾನ ಮಾರ್ಯಾದೆ ಖತಂ

ಸಾರ್ವಜನಿಕರೇ ಎಚ್ಚರವಾಗಿರಿ!

ಆನ್ ಲೈನ್ ನಲ್ಲಿ ಮಹಿಳೆಯರಿಂದ ಸೆಕ್ಸ್, ಮಸಾಜ್, ವೇಶ್ಯಾವಾಟಿಕೆ ಸೇವೆಗಳು ಲಭ್ಯ ಎಂಬುದಾಗಿ ಮೊಬೈಲ್ ಸಂಖ್ಯೆಯನ್ನು ನೀಡಿ ಕರೆ ಮಾಡುವಂತೆ ಸೃಷ್ಟಿಸಿರುವ ವೆಬ್ ಸೈಟ್ ಗಳನ್ನು ಬಳಸಿ ವಂಚನೆಗೆ ಮಾಡುತ್ತಿದ್ದು, ಇದರತ್ತ ಯಾವುದೇ ಕಾರಣಕ್ಕೂ ಹೋಗಬೇಡಿ. ಇನ್ನು ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳಲ್ಲಿ  ಅಥವಾ ಇನ್ನಿತರ ಯಾವುದೇ ಸಮಾಜದ ಸ್ವಾಸ್ಥ್ಯ ಹದಗೆಡುವ ರೀತಿಯ ಅನೈತಿಕ ಅಕ್ರಮ ಚಟುವಟಿಕೆಗಳು ನಡೆಸುತ್ತಿರುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಿ ಅಥವಾ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಬಹುದಾಗಿದೆ.

-ಬಿ.ಎಂ.ಲವಕುಮಾರ್

admin
the authoradmin

Leave a Reply