ನಾಡ ಹಬ್ಬ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ದಸರಾ ಸಂಬಂಧ ವಿವಿಧ ಕಾರ್ಯಕ್ರಮಗಳು, ಪ್ರದರ್ಶನಗಳಿಗೂ ಚಾಲನೆ ದೊರೆಯಲಿದೆ. ಹೀಗಾಗಿ ಸೆ.22ರಿಂದ ಅ.2ರವರೆಗ ಇಡೀ ಮೈಸೂರು ನಗರ ದಸರಾ ಸಂಭ್ರಮದಲ್ಲಿ ಮುಳುಗಿ ಏಳಲಿದೆ. ಒಂದೆಡೆ ದಸರಾ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಮತ್ತೊಂದೆಡೆ ನವರಾತ್ರಿಯ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಲಿವೆ.
ಇದನ್ನೂ ಓದಿ: ಮೈಸೂರು ದಸರಾ ಒಂದೇ ಆದರೂ ಅದರ ಸುತ್ತ ಹರಡಿಕೊಂಡಿರುವ ಮನರಂಜನೆಗೆ ಲೆಕ್ಕವಿಲ್ಲ… ನೀವೂ ಬನ್ನಿ
ದಸರಾ ಆರಂಭದ ದಿನ ದಸರಾ ಉದ್ಘಾಟಕರಾದ ಸಾಹಿತಿ ಭಾನುಮುಷ್ತಾಕ್ ಅವರು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಬಳಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ನಾಡ ಹಬ್ಬ ಮೈಸೂರು ದಸರಾಗೆ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಚಾಮುಂಡಿಬೆಟ್ಟದಲ್ಲಿ ದಸರಾಕ್ಕೆ ಚಾಲನೆ ಸಿಗುತ್ತದೆಯಾದರೂ ದಸರಾ ಕಾರ್ಯಕ್ರಮಗಳೆಲ್ಲವೂ ಮೈಸೂರು ನಗರದಲ್ಲಿಯೇ ನಡೆಯಲಿದೆ. ಹಾಗಾದರೆ ದಸರಾ ಹಿನ್ನಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲವೆ? ಎಂಬ ಪ್ರಶ್ನೆಗಳು ಮೂಡದಿರದು..
ನಿಜಹೇಳಬೇಕೆಂದರೆ ಚಾಮುಂಡಿಬೆಟ್ಟ ಹಾಗೂ ಅರಮನೆ ನಡುವೆ ಅವಿನಾಭಾವ ಸಂಬಂಧವಿದ್ದು, ಎರಡೂ ಕಡೆಗಳಲ್ಲಿ ಒಂದೇ ರೀತಿಯ ಪೂಜೆ ನಡೆಯುವುದನ್ನು ನಾವು ಕಾಣಬಹುದಾಗಿದೆ. ಇನ್ನು ಕೊನೆಯ ದಿನ ಅಂದರೆ ವಿಜಯದಶಮಿಯಂದು ಜಂಬೂಸವಾರಿ ನಡೆಯುವ ಮುನ್ನ ವಿಧಿ ವಿಧಾನದಂತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಪೂಜಾ ಕೈಂಕರ್ಯ ನೆರವೇರಿಸಿ ಮೆರವಣಿಗೆಯಲ್ಲಿ ಚಾಮುಂಡಿಬೆಟ್ಟದಿಂದ ಅರಮನೆಗೆ ಕೊಂಡೊಯ್ದು ಆ ನಂತರ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿ ಜಂಬೂಸವಾರಿ ಮೆರವಣಿಗೆ ನಡೆಸಲಾಗುತ್ತದೆ.
ಇದನ್ನೂ ಓದಿ: ದಸರಾ ವೇಳೆ ಮೈಸೂರು ಅರಮನೆಯಲ್ಲಿ ನಡೆಯುತ್ತಿದ್ದ ದರ್ಬಾರ್… ಅವತ್ತು ಹೇಗಿತ್ತು? ಇವತ್ತು ಹೇಗಿದೆ?
ಇನ್ನು ದಸರಾ ಸಂದರ್ಭದಲ್ಲಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಆದರಂತೆ ನವರಾತ್ರಿ ಆರಂಭದ ದಿನವಾದ ಸೆ.22ರಂದು ಬ್ರಾಹ್ಮೀ, 23ರಂದು ಮಹೇಶ್ವರಿ, 24ರಂದು ಕೌಮಾರಿ, 25ರಂದು ವೈಷ್ಣವಿ, 26ರಂದು ವಾರಾಹಿ, 27ರಂದು ಇಂದ್ರಾಣಿ, 28ರಂದು ಸಿದ್ಧಿ ಧಾತ್ರಿ, 29ರಂದು ಸರಸ್ವತಿ, 30ರಂದು ಮಹಾಲಕ್ಷ್ಮಿ ಹಾಗೂ ಅ.1ರಂದು ಅಶ್ವಾರೋಹಣ ಅಲಂಕಾರ ಮಾಡಲಾಗುತ್ತದೆಯಲ್ಲದೆ, ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ.
ದಸರಾದ ಬಗ್ಗೆ ನೋಡುವುದಾದರೆ ಇದರ ಆಚರಣೆಯಲ್ಲಿ ಹಲವು ವಿಶೇಷತೆಗಳನ್ನು ನಾವು ಕಾಣಬಹುದಾಗಿದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ ಎಂದರ್ಥ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತು ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ ಎಂದರ್ಥ. ಇದನ್ನು ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿಂದಲೂ ಕರೆಯುತ್ತಾ ಬರಲಾಗುತ್ತದೆ.
ಇದನ್ನೂ ಓದಿ: ಮೈಸೂರು ದಸರಾ ವೈಭವದ ಆ ದಿನಗಳು ಹೇಗಿದ್ದವು? ಈಗ ಹೇಗಿದೆ? ವಿಶೇಷತೆಗಳು ಏನಿವೆ?
ಇದು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ‘ಆಶ್ವಯುಜ ಶುಕ್ಲ ದಶಮಿ’ಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿ ಮುಗಿದ ನಂತರದ ದಿನವಾಗಿದೆ. ಆದುದರಿಂದ ಇದನ್ನು ನವರಾತ್ರಿಯ ಸಮಾಪ್ತಿಯ ದಿನ ವೆಂದೂ ಪರಿಗಣಿಸುತ್ತಾರೆ. ಕೆಲವು ಮನೆತನ ಗಳಲ್ಲಿ ನವರಾತ್ರಿಯ ದೇವಿಯನ್ನು ನವಮಿ ಯಂದು ಮತ್ತು ಕೆಲವರು ದಶಮಿಯಂದು ವಿಸರ್ಜನೆ ಮಾಡುತ್ತಾರೆ. ಈ ದಿನ ಸೀಮೋ ಲ್ಲಂಘನ, ಶಮೀ ಪೂಜೆ, ಅಪರಾಜಿತಾ ಪೂಜೆ ಮತ್ತು ಆಯುಧಪೂಜೆ ಈ ನಾಲ್ಕು ಕಾರ್ಯಗಳನ್ನು ಮಾಡುವುದನ್ನು ನಾವು ಕಾಣಬಹುದಾಗಿರುತ್ತದೆ.
ದಸರಾ ಸಂದರ್ಭದ ಧಾರ್ಮಿಕ ಆಚರಣೆಯಲ್ಲಿ ಸೀಮೋಲ್ಲಂಘನ ಒಂದಾಗಿದ್ದು, ಅಪರಾಹ್ನ ಕಾಲದಲ್ಲಿ (ಮಧ್ಯಾಹ್ನ, 3ನೆಯ ಪ್ರಹರದಲ್ಲಿ) ಊರಿನ ಗಡಿಯಾಚೆ ಈಶಾನ್ಯ ದಿಕ್ಕಿನ ಕಡೆಗೆ ಸೀಮೋಲ್ಲಂಘನಕ್ಕಾಗಿ ಹೋಗುತ್ತಾರೆ ಮತ್ತು ಶಮೀವೃಕ್ಷ ಅಥವಾ ಮಂದಾರದ ವೃಕ್ಷವಿರುವಲ್ಲಿ ನಿಲ್ಲುತ್ತಾರೆ. (ಶಮೀಯನ್ನು ಅಪರಾಜಿತಾ ಮತ್ತು ಮಂದಾರವನ್ನು ಅಶ್ಮಂತಕ ಎಂದೂ ಕರೆಯುತ್ತಾರೆ. ಇವೆರಡರ ಅರ್ಥ ಶತ್ರುವಿನ ನಾಶ ಮಾಡು ವವನು ಎಂದಾಗಿದೆ.) ಏಕೆಂದರೆ ಶಮಿ ವೃಕ್ಷಕ್ಕೆ ಪಾಪವನ್ನು ನಾಶ ಮಾಡುವ ಶಕ್ತಿಯಿದೆ ಎಂಬ ನಂಬಿಕೆ ಹಿಂದಿನಿಂದಲೂ ಬಂದಿದೆ.
ಇದನ್ನೂ ಓದಿ: ಮೈಸೂರು ದಸರ ಬರೀ ಉತ್ಸವವಲ್ಲ… ಇದು ಪೌರಾಣಿಕ, ಐತಿಹಾಸಿಕ ಸಾಂಸ್ಕೃತಿಕ ಮೆರವಣಿಗೆ
ಒಟ್ಟಾರೆಯಾಗಿ ದಸರಾದಲ್ಲಿ ಧಾರ್ಮಿಕ ವಿಧಿವಿಧಾನಗಳು, ಪೂಜಾಕೈಂಕರ್ಯಗಳು ಹಲವಿದ್ದು ಅವುಗಳಾಚೆಗೆ ಸಾಮಾಜಿಕವಾಗಿ ಎಲ್ಲರನ್ನೂ ಒಗ್ಗೂಡಿಸಿ ಸಂಭ್ರಮಿಸುವ ಶಕ್ತಿಯೂ ದಸರಾಕ್ಕಿದೆ. ಹೀಗಾಗಿ ಇದು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮನರಂಜನೆ ಮಾತ್ರವಲ್ಲದೆ, ಬದುಕನ್ನು ಕಟ್ಟಿಕೊಡುವ ಹಬ್ಬವಾಗಿದೆ. ಹೀಗಾಗಿಯೇ ಇದು ನಾಡಹಬ್ಬವಾಗಿ ದೇಶ ವಿದೇಶಿಗರ ಗಮನಸೆಳೆಯುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
B M Lavakumar