ಮೈಸೂರು ದಸರಾ ವಿಶೇಷತೆಗಳಲ್ಲೊಂದಾದ ಫಲಪುಷ್ಪ ಪ್ರದರ್ಶನ ನೋಡುಗರ ಮೈಮನ ಸೆಳೆಯುತ್ತಿದ್ದು, ಮೇಲ್ನೋಟಕ್ಕೆ ಪುಷ್ಪಲೋಕವೇ ಧರೆಗಿಳಿದು ಬಂದಿದೆಯೇನೋ ಎಂಬಂತೆ ಭಾಸವಾಗುತ್ತಿದೆ..
ಪುಷ್ಪಗಳಲ್ಲಿ ನಿರ್ಮಾಣವಾದ ಕನ್ಯಾಕುಮಾರಿಯಲ್ಲಿರುವ ಮಹಾತ್ಮ ಗಾಂಧಿ ಮಂಟಪದ (ಮಹಾತ್ಮ ಗಾಂಧಿ ಮೊಮೊರಿಯಲ್ ಮ್ಯೂಸಿಯಂ) ಆಕೃತಿ, ದಂಡೀಯಾತ್ರೆ ಪ್ರತಿಕೃತಿ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ದಿಟ್ಟತನದಿಂದ ಹೋರಾಟ ಮಾಡಿ ನಮ್ಮ ದೇಶಕ್ಕೆ ಕೀರ್ತಿ ತಂದಂತಹ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವ್ಯೋಮಿಕಾ ಸಿಂಗ್ ಪ್ರತಿಕೃತಿ, ಮಿಲಿಟರಿ ಟ್ರಕ್, ಏರ್ ಜೆಟ್ ಮತ್ತು ಯುದ್ಧ ನೌಕೆ.. ಅದರಾಚೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ, ಅಂಬಾರಿ ಹೊತ್ತ ಆನೆ, ನವದುರ್ಗೆಯರು, ಭೂಮಿಯನ್ನು ರಕ್ಷಿಸಿ ಸಂದೇಶ, ತಂಡಿ ಸಡಕ್, ಮಿಕ್ಕಿ ಮೌಸ್, ಡಾಲ್ಫಿನ್ ಹೀಗೆ ಹತ್ತಾರು ವಿಶೇಷತೆಗಳನ್ನು ನೋಡಬೇಕೆಂದರೆ ಮೈಸೂರಿನ ಹೃದಯಭಾಗದಲ್ಲಿರುವ ಹಾರ್ಡಿಂಜ್ ವೃತ್ತದ ಪಕ್ಕದ ಕುಪ್ಪಣ್ಣ ಪಾರ್ಕ್ ಗೆ ಬರಬೇಕಾಗುತ್ತದೆ.
ಇಲ್ಲಿನ ಪುಷ್ಪಲೋಕ ತನ್ನತ್ತ ಬಂದವರನ್ನು ಆಕರ್ಷಿಸಿ ಅವರಿಗೆ ಖುಷಿ ಕೊಡುವುದರಲ್ಲಿ ಎರಡು ಮಾತಿಲ್ಲ. ಇಲ್ಲಿಗೆ ಭೇಟಿ ನೀಡಿ ಒಳಗೊಂದು ಸುತ್ತು ಬಂದರೆ ಅಲ್ಲಿದ್ದಷ್ಟು ಹೊತ್ತು ನಾವು ಪುಷ್ಪಲೋಕದಲ್ಲಿ ತೇಲಿದ ಅನುಭವವಾಗುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಸರ್ಕಾರದ ಪಂಚಗ್ಯಾರಂಟಿಗಳು ರಾರಾಜಿಸುತ್ತಿದ್ದು ಪುಷ್ಪಗಳಲ್ಲಿಯೇ ಭಾರತದ ಸಂವಿಧಾನ, ಸಂಸತ್ತಿನ ಕುರಿತಂತೆ ಜನರಿಗೆ ಜಾಗೃತಿ ಮೂಡಿಸುತ್ತದೆ.
ಇದನ್ನೂ ಓದಿ: ಮೈಸೂರು ದಸರಾ ವೈಭವದ ಆ ದಿನಗಳು ಹೇಗಿದ್ದವು? ಈಗ ಹೇಗಿದೆ? ವಿಶೇಷತೆಗಳು ಏನಿವೆ?
ಇನ್ನು ಹಾಗೆ ನೋಡುತ್ತಾ ಹೋದರೆ ನಮಗೆ ಫಲಪುಷ್ಪ ಪ್ರದರ್ಶನದ ವಿಶೇಷತೆಗಳು ಕಣ್ತುಂಬುತ್ತಾ ಹೋಗುತ್ತವೆ. ಇಲ್ಲಿ ಪುಷ್ಪಗಳಲ್ಲಿ ತಯಾರಾಗಿರುವ ವಿವಿಧ ಆಕೃತಿಗಳು ಒಂದಕ್ಕಿಂತ ಒಂದು ವಿಶಿಷ್ಟವಾಗಿದ್ದು ತನ್ನದೇ ಆದ ಚೆಲುವಿನೊಂದಿಗೆ ಆಕರ್ಷಿಸುತ್ತದೆ.
12ನೇ ಶತಮಾನದಲ್ಲಿ ಅಲ್ಲಮಪ್ರಭು, ಬಸವಣ್ಣ ಸೇರಿದಂತೆ ನೂರಾರು ಶರಣರು ಒಟ್ಟುಗೂಡಿ ಸಮಾಜ ಸುಧಾರಣೆಗಾಗಿ ಚರ್ಚೆ ನಡೆಸುತ್ತಿದ್ದ ಅನುಭವ ಮಂಟಪ, ಶಿಕ್ಷಣ ಕ್ರಾಂತಿಯ ಬಗ್ಗೆ ಬೆಳಕು ಚೆಲ್ಲಿದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಎಲ್ಲರೂ ಗಮನಸೆಳೆಯುತ್ತಾರೆ. ಇನ್ನು ತೋಟಗಾರಿಕೆ ಇಲಾಖೆ ವತಿಯಿಂದ 60 ಸಾವಿರ ಹೂವಿನ ಗಿಡಗಳನ್ನು ಬೆಳೆಸಿ ಕುಪ್ಪಣ್ಣ ಪಾರ್ಕ್ ಅನ್ನು ಹೂವುಗಳಿಂದ ರುವುದು ವಿಶೇಷವಾಗಿದೆ.
ಇಲ್ಲಿ ಯಾವ ಹೂಗಳಿವೆ ಎಂದು ನೋಡಿದ್ದೇ ಆದರೆ ಕಾಕ್ಸ್ ಕೂಂಬ್, ಸೆಲೋಸಿಯಾ, ಮಾರಿಗೋಲ್ಡ್, ಫ್ರೆಂಚ್ ಮಾರಿಗೋಲ್ಡ್, ಝೆನಿಯಾ, ಟುರೇನಿಯಾ, ಪೆಟೂನಿಯಾ, ಇಂಪೇಷಿಯನ್‌ಸ್, ಕಾಸ್ಮೊಸ್, ದಹಾಲಿಯಾ, ಅನಿಯಲ್ ಕ್ರೈಸಾಂಥೆಮಮ್, ಬಟನ್ ಕ್ರೈಸಾಂಥೆಮಮ್,, ಆಸ್ಟರ್, ಆಂಟಿರಿರಿನ, ಸಾಲ್ವಿಯಾ, ಗೊಂಫೆರ್ನಿಯಾ, ಗಿಲ್ಲಾರ್ಡಿಯಾ, ವರ್ಬೆನಾ, ಡಯಾಂಥಸ್, ಸ್ಪೆಂಡರ್, ಲಿಲ್ಲಿ, ವಿಶೇಷವಾದ ಪಾಯ್ನಸಿಟ್ಟಿಯಾ, ಕ್ಯಾಲಾಂಚೊ, ಕಾರ್ಕುಮಾ, ಆಕ್ಸಾಲಿಸ್, ಪೆಂಟಾಸ್ ಕಾರ್ನಿಯಾ, ಆರ್ಕಿಡ್ ಗಳು, ಲಿಮೋನಿಯಮ್, ಹಿಲ್ ಬಾಲ್ಸಾಮ್, ಆಂಥೂರಿಯ ಗಿಡಗಳಿದ್ದು, ಇವುಗಳೆಲ್ಲವನ್ನು ಅತ್ಯಂತ ಆಕರ್ಷಕವಾಗಿ ಜೋಡಿಸಿಡಲಾಗಿದೆ.
ಇದನ್ನೂ ಓದಿ: ಮೈಸೂರು ದಸರ ಬರೀ ಉತ್ಸವವಲ್ಲ… ಇದು ಪೌರಾಣಿಕ, ಐತಿಹಾಸಿಕ ಸಾಂಸ್ಕೃತಿಕ ಮೆರವಣಿಗೆ
ಇಲ್ಲಿ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಸಾವಯವ ಕೃಷಿ, ಕೃಷಿಗೆ ಸಂಬಂಧಿಸಿದ ಮಳಿಗೆಗಳು ಹಾಗೂ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ವಿವಿಧ ಕಡೆಯ ಕೃಷಿ ವಿಜ್ಞಾನ ಕೇಂದ್ರಗಳಿಂದ ಮಳಿಗೆಗಳನ್ನು ತೆರೆಯಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಸಸ್ಯ ಸಂತೆ ಆಯೋಜಿಸಿದ್ದು, ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರ, ನರ್ಸರಿಗಳಲ್ಲಿ ಬೆಳೆಸಿರುವಂತಹ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಇಲಾಖಾ ದರದಲ್ಲಿ ಮಾರಾಟಕ್ಕೆ ಇಡಲಾಗಿದೆ.
ಒಟ್ಟಾರೆಯಾಗಿ ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನ ಹಲವು ಹೊಸತನಗಳಮತ್ತು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೂವುಗಳಿಂದ ಮತ್ತು ಹೂವಿನ ಕುಂಡಗಳಿಂದ ಸೃಷ್ಟಿ ಮಾಡಲಾಗಿದ್ದು, ಫಲಪುಷ್ಪ ಪ್ರದರ್ಶನದೊಳಗೆ ತೆರಳಿದ್ದೇ ಆದರೆ ಇಲ್ಲಿನ ಗಾಜಿನ ಮನೆಯಲ್ಲಿ ಪುಷ್ಪಲೋಕವೇ ಎದ್ದು ಬಂದಂತೆ ಭಾಸವಾಗುವ ಮೂಲಕ ಮೈಮನಕ್ಕೆ ಪುಳಕ ನೀಡುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ತಯಾರಾದ ‘ಸಿಹಿ’ಪಾಕ ‘ಮೈಸೂರು’ ಪಾಕ ಆಗಿದ್ದೇಗೆ? ಇಲ್ಲಿದೆ ಕಥೆ
B M Lavakumar
Excellent and extraordinary articles