ಡಾ. ಎಸ್. ಎಲ್. ಭೈರಪ್ಪ – ಕನ್ನಡ ಸಾಹಿತ್ಯದ ಧ್ರುವತಾರೆ.. ಇದು ಅವರ ಬರಹದ ಬದುಕಿನ ಸಂಕ್ಷಿಪ್ತ ಬರಹ

ಡಾ. ಎಸ್. ಎಲ್. ಭೈರಪ್ಪರು ಆಧುನಿಕ ಕನ್ನಡ ಸಾಹಿತ್ಯದ ಅಗ್ರಗಣ್ಯ ಕಾದಂಬರಿಕಾರರು, ಅವರ ಕೃತಿಗಳು ಜೀವನದ ನೈಜ ಅನುಭವ, ತತ್ವಶಾಸ್ತ್ರ, ಇತಿಹಾಸ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಆಳವಾಗಿ ಪ್ರತಿಬಿಂಬಿಸುತ್ತವೆ. “ಪರ್ವ”, “ವಂಶವೃಕ್ಷ”, “ಸಾರ್ಥ” ಮುಂತಾದ ಕಾದಂಬರಿಗಳ ಮೂಲಕ ಅವರು ಕನ್ನಡ ಓದುಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಪಾತ್ರರಚನೆ, ಸಂಭಾಷಣೆ, ಘಟನೆಗಳ ನೈಜತೆ ಮತ್ತು ವಿಚಾರಸರಣಿಯ ಗಂಭೀರತೆಯಿಂದ ಅವರ ಸಾಹಿತ್ಯವು ವಿಭಿನ್ನವಾದ ಗುರುತನ್ನು ಹೊಂದಿದೆ.
ಸಮಾಜದ ಸಂಕಟಗಳು, ಮಾನವೀಯ ಮೌಲ್ಯಗಳು ಮತ್ತು ಆಳವಾದ ತಾತ್ವಿಕ ವಿಚಾರಗಳನ್ನು ಕಾದಂಬರಿಗಳ ಮೂಲಕ ಬೆಳಕಿಗೆ ತಂದುಕೊಂಡು, ಭೈರಪ್ಪರು ಕನ್ನಡ ಸಾಹಿತ್ಯವನ್ನು ಸಾಂಸ್ಕೃತಿಕ ಮತ್ತು ತಾತ್ವಿಕ ದೃಷ್ಟಿಯಿಂದ ಶ್ರೀಮಂತ ಮಾಡಿರುವ ಶ್ರೇಷ್ಠ ಲೇಖಕರು. ಕನ್ನಡ ಸಾಹಿತ್ಯದ ಇಂದಿನ ಇತಿಹಾಸದಲ್ಲಿ ಕಾದಂಬರಿಕಾರರ ನಡುವೆ ಅಪ್ರತಿಮ ಸ್ಥಾನ ಪಡೆದಿರುವ ಹೆಸರು ಡಾ. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ. ಅವರು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೊಸ ದಾರಿಗಳನ್ನು ತೆರೆದವರು, ಕೇವಲ ಕನ್ನಡಿಗರಲ್ಲದೆ ಭಾರತದಾದ್ಯಂತ ಓದುಗರನ್ನು ಆಳವಾಗಿ ಪ್ರಭಾವಿಸಿದ ವಿದ್ವಾಂಸರು. ತತ್ತ್ವಶಾಸ್ತ್ರ, ಭಾರತೀಯ ಸಂಸ್ಕೃತಿ, ಮಾನವೀಯ ಮನೋವಿಜ್ಞಾನ, ಇತಿಹಾಸ ಮತ್ತು ಸಮಕಾಲೀನ ಪ್ರಶ್ನೆಗಳ ವಿಶ್ಲೇಷಣೆಯನ್ನು ಸಾಹಿತ್ಯದಲ್ಲಿ ಬೆರೆಸಿದ ಶೈಲಿ ಭೈರಪ್ಪರದೇ ವಿಶೇಷ.
ಬಾಲ್ಯ ಮತ್ತು ವಿದ್ಯಾಭ್ಯಾಸವನ್ನು ನೋಡಿದ್ದೇ ಆದರೆ, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ 1934 ಜುಲೈ 26ರಂದು ಲಿಂಗಣ್ಣಯ್ಯ– ಗೌರಮ್ಮ ದಂಪತಿಯ ಪುತ್ರರಾಗಿ ಜನಿಸಿದ ಅವರು, ಬಾಗೂರು, ನುಗ್ಗೇಹಳ್ಳಿ ಶಾಲೆಗಳಲ್ಲಿ ಪ್ರಾಥಮಿಕ, ಮೈಸೂರಿನ ಶಾರದಾವಿಲಾಸದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ 2 ಚಿನ್ನದ ಪದಕಗಳೊಂದಿಗೆ ಎಂ.ಎ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದರು.
ಸಾಹಿತ್ಯ ಪಯಣ – ಹೆಜ್ಜೆ ಗುರುತುಗಳನ್ನು ಹುಡುಕುತ್ತಾ ಹೋದರೆ ರೋಮಾಂಚನಕಾರಿಯಾಗಿದೆ. ಅದು ಹೇಗಿದೆ ಎಂದರೆ ಅವರು ವಿದ್ಯಾರ್ಥಿಯಾಗಿದ್ದಾಗಲೇ ‘ಭೀಮಕಾಯ’, ‘ಬೆಳಕು ಮೂಡಿತು’ ಕಾದಂಬರಿಗಳನ್ನು ಬರೆದಿದ್ದ ಅವರ ಮೊದಲ ಕಾದಂಬರಿ ‘ಧರ್ಮಶ್ರೀ’ 1961ರಲ್ಲಿ ಪ್ರಕಟಗೊಂಡಿತ್ತು. ದೂರ ಸರಿದರು (1962), ಮತದಾನ, ವಂಶವೃಕ್ಷ (1965), ಜಲಪಾತ (1967), ನಾಯಿನೆರಳು (1968), ತಬ್ಬಲಿಯು ನೀನಾದೆ ಮಗನೆ (1970), ಗೃಹಭಂಗ (1970), ನಿರಾಕರಣ (1971), ಗ್ರಹಣ (1972), ದಾಟು (1973), ಅನ್ವೇಷಣ (1976), ಪರ್ವ (1979), ನೆಲೆ (1983), ಸಾಕ್ಷಿ (1986), ಅಂಚು (1990), ತಂತು (1993), ಸಾರ್ಥ (1998), ಮಂದ್ರ (2002), ಆವರಣ (2007), ಕವಲು (2010), ಯಾನ (2014), ಉತ್ತರಕಾಂಡ (2017) ಅವರ ಕಾದಂಬರಿಗಳು.
ಭಿತ್ತಿ (1996) ಅವರ ಆತ್ಮಕಥನ, ಸಾಹಿತ್ಯ ಮತ್ತು ಪ್ರತೀಕ (1966), ಸತ್ಯ ಮತ್ತು ಸೌಂದರ್ಯ (1967), ಕಥೆ ಮತ್ತು ಕಥಾವಸ್ತು (1969) ಅವತ ಸಾಹಿತ್ಯ ಮೀಮಾಂಸೆ ಮತ್ತು ಚಿಂತನಾ ಕೃತಿಗಳಾಗಿವೆ. ಹಿಂದೂಸ್ತಾನಿ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು ‘ಗಂಗೂಬಾಯಿ ಹಾನಗಲ್’ ಕೃತಿಯ ಸಂಪಾದಕರೂ ಆಗಿದ್ದರು. ವಂಶವೃಕ್ಷ ಕಾದಂಬರಿಗೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ, ದಾಟು ಕಾದಂಬರಿಗೆ 1975ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, 1985ರಲ್ಲಿ ಮಾಸ್ತಿ, 2005ರಲ್ಲಿ ಪಂಪ ಪ್ರಶಸ್ತಿ, 2010ರಲ್ಲಿ ಸರಸ್ವತಿ ಸಮ್ಮಾನ್, 2011ರಲ್ಲಿ ನಾಡೋಜ, 2014ರಲ್ಲಿ ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ, 2017ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ದೊರೆತಿದೆ.
ಪ್ರಮುಖ ಕಾದಂಬರಿಗಳು ಯಾವುದೆಂದರೆ? 1. ವಂಶವೃಕ್ಷ (1965) – ಪಾರಂಪರಿಕ ಸಂಸ್ಕಾರಗಳು ಮತ್ತು ಆಧುನಿಕ ಮೌಲ್ಯಗಳ ಸಂಘರ್ಷವನ್ನು ಒಳಗೊಂಡ ಕಾದಂಬರಿ. ನಂತರ ಇದನ್ನು ಗಿರೀಶ್ ಕರ್ಣಾಡ್ ಚಲನಚಿತ್ರವಾಗಿಯೂ ಮೂಡಿಸಿದರು. 2. ಪರ್ವ (1979) – ಮಹಾಭಾರತದ ಪಾರಂಪರಿಕ ಕಥೆಯನ್ನು ಹೊಸ ಮಾನವೀಯ-ತತ್ತ್ವಶಾಸ್ತ್ರೀಯ ದೃಷ್ಟಿಯಿಂದ ನಿರೂಪಿಸಿದ ಅಸಾಧಾರಣ ಕಾದಂಬರಿ. 3. ಮಂದ್ರ (2001) – ಸಂಗೀತ ಲೋಕದ ಹಿನ್ನೆಲೆಯಲ್ಲಿರುವ ಕಲಾವಿದರ ಆಂತರಿಕ ಸಂಘರ್ಷಗಳನ್ನು ಚಿತ್ರಿಸಿದ ಕೃತಿ. ಇದಕ್ಕಾಗಿ ಅವರಿಗೆ ಸರಸ್ವತಿ ಸಮ್ಮಾನ್ ದೊರೆಯಿತು.4. ಆವರಣ (2007) – ಧಾರ್ಮಿಕ ಸಹಿಷ್ಣುತೆ, ಇತಿಹಾಸದ ವ್ಯಾಖ್ಯಾನ ಮತ್ತು ಸಮಕಾಲೀನ ವಿವಾದಗಳನ್ನು ಸ್ಪರ್ಶಿಸಿದ ಕೃತಿ. ಇದು ಭಾರೀ ಚರ್ಚೆಗೆ ಕಾರಣವಾಯಿತು. ಕವಲು (2010), ಯಾನ (2014) ಮತ್ತು ಉತ್ತರಕಾಂಡ (2017) – ಇತ್ತೀಚಿನ ದಿನಗಳಲ್ಲಿ ಓದುಗರಲ್ಲಿ ಸಂಚಲನ ಮೂಡಿಸಿದ ಕಾದಂಬರಿಗಳು.
ತತ್ತ್ವಶಾಸ್ತ್ರ ಮತ್ತು ಪ್ರಬಂಧಗಳ ಬಗ್ಗೆ ಹೇಳುವುದಾದರೆ, ಭೈರಪ್ಪರು ಕೇವಲ ಕಾದಂಬರಿಕಾರರಲ್ಲ, ತತ್ತ್ವಶಾಸ್ತ್ರಜ್ಞರೂ ಹೌದು. ಸತ್ಯ ಮತ್ತು ಸೌಂದರ್ಯ (1966) – ಪಿ.ಎಚ್.ಡಿ ಪ್ರಬಂಧ ಸಾಹಿತ್ಯ, ಮತ್ತು ಪ್ರತೀಕ (1967), ಕಥೆ ಮತ್ತು ಕಥಾವಸ್ತು (1969), ಸಂದರ್ಭ: ಸಂವಾದ (2011) ಅವರ ಪ್ರಬಂಧಗಳು ಕಥನಶೈಲಿಯ ತತ್ತ್ವ, ಸಾಹಿತ್ಯದ ಅರ್ಥ ಮತ್ತು ಸಂಕೇತಗಳ ಕುರಿತು ಆಳವಾದ ಚಿಂತನೆಗಳನ್ನು ಒಳಗೊಂಡಿವೆ. ಇದರ ಜತೆಗೆ ಭಿತ್ತಿ (2000) – ಇದು ಭೈರಪ್ಪರ ಆತ್ಮಕಥನ. ತಮ್ಮ ಜೀವನದ ಹಾದಿ, ಹೋರಾಟ, ಕುಟುಂಬ, ವೃತ್ತಿ, ಬರವಣಿಗೆಯ ಪ್ರೇರಣೆ – ಇವೆಲ್ಲವನ್ನೂ ಸರಳ ಶೈಲಿಯಲ್ಲಿ ಹೇಳಿಕೊಂಡಿದ್ದಾರೆ. ಇದು ಓದುಗರಿಗೆ ಅವರ ವ್ಯಕ್ತಿತ್ವವನ್ನು ಸಮೀಪದಿಂದ ಅರ್ಥಮಾಡಿಕೊಳ್ಳುವ ಅವಕಾಶ ನೀಡುತ್ತದೆ.
ಭೈರಪ್ಪರ ಕೃತಿಗಳು ಭಾರತದ 14ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. ದಾಟು ಮತ್ತು ಗೃಹಭಂಗ ಹೀಗೆ ಹಲವು ಕೃತಿಗಳು ರಾಷ್ಟ್ರದಾದ್ಯಂತ ಓದುಗರನ್ನು ತಲುಪಿವೆ. ಚಲನಚಿತ್ರಗಳಾಗಿ ರೂಪುಗೊಂಡ ಕಾದಂಬರಿಗಳು: ವಂಶವೃಕ್ಷ (1972), ತಬ್ಬಲಿಯು ನೀನಾದೆ ಮಗನೆ (1977), ಮತದಾನ (2001), ನಾಯಿ ನೆರಳು (2006). ಟಿವಿ ಧಾರಾವಾಹಿಗಳಾಗಿ ಬಂದವು: ಗೃಹಭಂಗ, ದಾಟು (ಹಿಂದಿ)
ಭೈರಪ್ಪರ ಬರಹಗಳು ಯಾವಾಗಲೂ ಪ್ರಶ್ನಾರ್ಥಕವಾಗಿದ್ದವು. ಆವರಣ ಸೇರಿದಂತೆ ಅನೇಕ ಕೃತಿಗಳು ಧಾರ್ಮಿಕ ಮತ್ತು ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾದವು. ಕೆಲವರು ಅವರ ಬರಹವನ್ನು ಸಂಪ್ರದಾಯಪರವೆಂದು ಟೀಕಿಸಿದರೆ, ಹಲವರು ಅದನ್ನು ಬೌದ್ಧಿಕ ಸತ್ಯವಿಚಾರವೆಂದು ಹೊಗಳಿದರು. ಯಾವ ದೃಷ್ಟಿಕೋನವಾದರೂ – ಓದುಗರನ್ನು ಚಿಂತಿಸಲು ಪ್ರೇರೇಪಿಸುವ ಶಕ್ತಿ ಅವರ ಸಾಹಿತ್ಯದಲ್ಲಿತ್ತು.
ಅವರನ್ನು ಹುಡುಕಿಕೊಂಡು ಬಂದಿರುವ ಪ್ರಶಸ್ತಿಗಳು ಮತ್ತು ಗೌರವಗಳು ಯಾವುವು ಎಂದರೆ? ಭೈರಪ್ಪರ ಸಾಹಿತ್ಯಕ ಸೇವೆಗೆ ಅನೇಕ ಉನ್ನತ ಗೌರವಗಳು ಸಂದಿವೆ: ಸರಸ್ವತಿ ಸಮ್ಮಾನ್ – 2010, ಪದ್ಮಶ್ರೀ – 2016, ಪದ್ಮಭೂಷಣ – 2023 ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಅವರ ಸಾಹಿತ್ಯದ ಆಳ ಮತ್ತು ಪ್ರಭಾವವನ್ನು ಪರಿಗಣಿಸಿದರೆ, ಜ್ಞಾನಪೀಠ ಪ್ರಶಸ್ತಿ ಅವರಿಗೆ ದೊರಕಲೇಬೇಕು ಎಂಬುದು ಕನ್ನಡ ಸಾಹಿತ್ಯಾಭಿಮಾನಿಗಳ ಹಾರೈಕೆ.
2025ರ ಸೆಪ್ಟೆಂಬರ್ 24ರಂದು ಮಧ್ಯಾಹ್ನ ಬೆಂಗಳೂರು ನಗರದಲ್ಲಿ ಅವರು 94ನೇ ವಯಸ್ಸಿನಲ್ಲಿ ನಿಧನರಾದರು. ದಸರಾ ಹಬ್ಬದ ಸಂಭ್ರಮದ ಹೊತ್ತಿಗೆಯಲ್ಲೇ ಈ ದುಃಖದ ಸುದ್ದಿ ಬಂದಿರುವುದು ಕನ್ನಡಿಗರಿಗೆ ದೊಡ್ಡ ನಷ್ಟ. ಡಾ. ಎಸ್. ಎಲ್. ಭೈರಪ್ಪರು ಕನ್ನಡ ಸಾಹಿತ್ಯದ ಗಗನದಲ್ಲಿ ಶಾಶ್ವತವಾಗಿ ಬೆಳಗುವ ನಕ್ಷತ್ರ. ಅವರ ಕೃತಿಗಳು ಮುಂದಿನ ಪೀಳಿಗೆಗಳಿಗೂ ಓದಬೇಕಾದ ಚಿಂತನಾ ಮೂಲಗಳು. ಮಾನವ ಮನಸ್ಸಿನ ಆಳವನ್ನು ಅರಿಯಲು, ಸಮಾಜದ ಪ್ರಶ್ನೆಗಳನ್ನು ಪರಿಶೀಲಿಸಲು, ತತ್ತ್ವಶಾಸ್ತ್ರದ ದಾರಿಯಲ್ಲಿ ಬೆಳಕನ್ನು ಹುಡುಕಲು – ಅವರ ಸಾಹಿತ್ಯ ಸದಾ ಪ್ರೇರಣೆ.ಸರಸ್ವತಿ ಪುತ್ರ, ಸಾಹಿತ್ಯದ ಧ್ರುವತಾರೆ – ಡಾ. ಎಸ್. ಎಲ್. ಭೈರಪ್ಪನವರಿಗೆ ಗೌರವದ ನಮನಗಳು. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂಬ ಭಾವ ನಮ್ಮದು.
ಉತ್ತಮ ಲೇಖನ, ಖಂಡಿತ ಬಹುಕಾಲದವರೆಗೆ ಮುಂದುವರೆಯಲಿ ನಿಮ್ಮ ಬರವಣಿಗೆ, ಒಳ್ಳೆಯದಾಗಲಿ