ದಸರಾ ಬಂದಾಗಲೆಲ್ಲ ನೆನಪಾಗುವ ಅಂಬಾರಿ ಹೊತ್ತ ಆನೆಗಳು… ಈಗಲೂ ನಮ್ಮನ್ನು ಕಾಡುವ ಧೈತ್ಯ ಗಜಗಳು!

ಮೈಸೂರು ದಸರಾ ಇತಿಹಾಸದಲ್ಲಿ ಹಲವು ಆನೆಗಳು ಅಂಬಾರಿಯನ್ನು ಹೊತ್ತು ಸಾಗಿವೆ. ಅವುಗಳ ಪೈಕಿ ಕೆಲವು ಆನೆಗಳ ಬಗ್ಗೆ ಮಾತ್ರ ದಾಖಲೆಗಳು ಸಿಗುತ್ತವೆ. ಉಳಿದಂತೆ ಅದೆಷ್ಟೋ ಆನೆಗಳ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ. ಆದರೆ ಅಂತಹ ಆನೆಗಳನ್ನು ನೆನಪು ಮಾಡುತ್ತಾ ಈಗ ಅಂಬಾರಿ ಹೊರುತ್ತಿರುವ ಆನೆಯ ಬಗ್ಗೆ ಹೆಮ್ಮೆ ಪಡುವುದು ನಮ್ಮ ಕರ್ತವ್ಯವಾಗಿದೆ. ಆದರೆ ಇದೆಲ್ಲದರ ನಡುವೆ ಈ ಹಿಂದೆ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಭಾಗವಹಿಸಿ ಚಿನ್ನದ ಅಂಬಾರಿಯನ್ನು ಹೊತ್ತು ಎಲ್ಲರ ಗಮನ ಸೆಳೆದ ಎರಡು ಆನೆಗಳ ಸಮಾಧಿ ಹಾಗೂ ಅರ್ಜುನನ ಪ್ರತಿಮೆ ಹೆಚ್.ಡಿ.ಕೊಟೆಯ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಬರುವ ಬಳ್ಳೆ ಆನೆ ಶಿಬಿರದಲ್ಲಿರುವುದು ಗಮನಾರ್ಹವಾಗಿದೆ.
ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ಮಹಾರಾಜರನ್ನು ಹೊತ್ತು ಬಹಳಷ್ಟು ಆನೆಗಳು ಸಾಗಿವೆ. ಮತ್ತೆ ಕೆಲವು ಸ್ವಾತಂತ್ರ್ಯಾನಂತರದ ಕಾಲಮಾನದಲ್ಲಿ ಅಂಬಾರಿಯನ್ನು ಹೊತ್ತು ಸಾಗಿವೆ. ಹೀಗಾಗಿ ದಸರಾ ಇತಿಹಾಸವನ್ನು ಮೆಕಲು ಹಾಕುತ್ತಾ ಹೋದರೆ ಅಲ್ಲಿ ಸಿಗುವ ಮಾಹಿತಿಗಳನ್ನು ಆದರಿಸಿ ಹೇಳುವುದಾದರೆ ಪಿರಿಯಾಪಟ್ಟಣದ ಬಳಿ ಸೆರೆ ಸಿಕ್ಕ ಕಾಡಾನೆ ಜಯಮಾರ್ತಾಂಡ ಮೊದಲಿಗೆ ಅಂಬಾರಿ ಹೊತ್ತ ಆನೆ ಎಂದು ಹೇಳಲಾಗುತ್ತಿದ್ದು, ಆತನ ನೆನಪಿಗಾಗಿ ಮೈಸೂರು ಅರಮನೆಯ ಪೂರ್ವ ದ್ವಾರಕ್ಕೆ ಜಯಮಾರ್ತಾಂಡ ಎಂದು ಹೆಸರಿಸಲಾಗಿದೆ.
ಮೈಸೂರು ದಸರಾ ಆರಂಭ 1610ರಲ್ಲಿ ಆಗಿದ್ದು, ಆಚರಣೆ ವರ್ಷದಿಂದ ವರ್ಷಕ್ಕೆ ಬಹುರೂಪ ಪಡೆದು ಸಾಗಿ ಬಂದಿದೆ ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ. ರಾಜರ ಕಾಲದಲ್ಲಿ ನಡೆದ ಜಂಬೂಸವಾರಿಯಲ್ಲಿ ಪಾಲ್ಗೊಂಡ ಆನೆಗಳ ಬಗ್ಗೆ ಮಾಹಿತಿ ಇಲ್ಲವಾದರೂ 1902ರ ನಂತರದ ಆನೆಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಆ ನಂತರ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್, ಸುಂದರ್ ರಾಜ್, ಐರಾವತ, ಗಜೇಂದ್ರ, ಬಿಳಿಗಿರಿ, ರಾಜೇಂದ್ರ, ದ್ರೋಣ, ಬಲರಾಮ, ಅರ್ಜುನ ಸದ್ಯ ಅಭಿಮನ್ಯು ಅಂಬಾರಿ ಹೊರುತ್ತಿದ್ದಾನೆ.
ಇದನ್ನೂ ಓದಿ: ಮೈಸೂರು ದಸರೆಗೆ ಧರೆಗಿಳಿದ ಪುಷ್ಪಲೋಕ… ಫಲಪುಷ್ಪ ಪ್ರದರ್ಶನದ ಈ ಬಾರಿಯ ವಿಶೇಷತೆಗಳೇನು?
ಈ ಅಂಬಾರಿ ಆನೆಗಳು ಕೇವಲ ಅಂಬಾರಿ ಮಾತ್ರ ಹೊತ್ತಿದಲ್ಲ. ಹಲವು ರೀತಿ ಕಾರ್ಯಾಚರಣೆ, ಸಿನಿಮಾಗಳಲ್ಲಿಯೂ ಭಾಗವಹಿಸಿವೆ. ಐರಾವತ ಆನೆ ಮಾವುತನಾಗಿದ್ದ ಮೈಸೂರು ಸಾಬು ಎಂಬ ಏಳು ವರ್ಷದ ಬಾಲಕನ ಇಟ್ಟುಕೊಂಡು 1935ರಲ್ಲಿ ಹಾಲಿವುಡ್ ಚಿತ್ರ ‘ದಿ ಎಲಿಫೆಂಟ್ ಬಾಯ್’ ಸಿನಿಮಾವನ್ನು ತೆಗೆಯಲಾಗಿತ್ತು. ಈ ಸಿನಿಮಾ ಜಗತ್ತಿನಾದ್ಯಂತ ಪ್ರದರ್ಶನಗೊಂಡಿತ್ತು.
ರಾಜರ ಕಾಲದಲ್ಲಿ ಆನೆ ಮೇಲಿನ ಅಂಬಾರಿಯಲ್ಲಿ ರಾಜರು ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಆದರೆ ರಾಜರನ್ನು ಹೊತ್ತ ಕೊನೆಯ ಅಂಬಾರಿ ಆನೆ ಬಿಳಿಗಿರಿಯಾಗಿದೆ. ಸ್ವಾತಂತ್ರ್ಯ ಬಳಿಕ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸುವುದು ಜಾರಿಗೆ ಬಂದಿತು. ಹೀಗಾಗಿ ಜಯಚಾಮರಾಜೇಂದ್ರ ಒಡೆಯರ್ ಅಂಬಾರಿ ಮೆರವಣಿಗೆಯಲ್ಲಿ ಸಾಗಿದ ಕೊನೆಯ ರಾಜರಾದರೆ, ಬಿಳಿಗಿರಿ ಕೊನೆಯ ಆನೆಯಾಗಿದೆ. 1975ರಲ್ಲಿ ಈ ಆನೆ ಮೃತಪಟ್ಟಿತು.
ಗಂಧದಗುಡಿ ಸಿನಿಮಾ ನೋಡಿದವರಿಗೆ ಡಾ.ರಾಜ್ ಕುಮಾರ್ ಅವರನ್ನು ಹೊತ್ತು ಸಾಗುವ ಆನೆ ನೆನಪಾಗಬಹುದು ಆ ಆನೆಯೇ ರಾಜೇಂದ್ರ. ಇದು ಕೂಡ ಅಂಬಾರಿ ಹೊತ್ತು ಸಾಗುವಲ್ಲಿ ನಿಸ್ಸೀಮನಾಗಿತ್ತು. ಇನ್ನು ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ದಿ ಸೋರ್ಡ್ ಆಫ್ ಟಿಪ್ಪುಸುಲ್ತಾನ್’ನ ಟಿಪ್ಪು ಪಾತ್ರಧಾರಿಯನ್ನು ಹೊತ್ತೊಯ್ದ ದ್ರೋಣ ಕೂಡ ಅಂಬಾರಿ ಹೊತ್ತ ಆನೆಯೇ. ಇದು ಧೈತ್ಯ ಆನೆಯಾಗಿತ್ತು ಸುಮಾರು 18 ವರ್ಷ ಅಂಬಾರಿ ಹೊತ್ತಿರುವುದು ಇದರ ವಿಶೇಷವಾಗಿದೆ. ಆದರೆ ಇದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪುವಂತಾಯಿತು.
ಹಿರಿತೆರೆ ಮತ್ತು ಕಿರುತೆರೆಯಲ್ಲಿ ಕಾಣಿಸಿಕೊಂಡ ರಾಜೇಂದ್ರ ಮತ್ತು ದ್ರೋಣ ಈ ಎರಡು ಆನೆಗಳು ಹೆಚ್.ಡಿ.ಕೋಟೆಯ ಬಳ್ಳೆ ಆನೆಶಿಬಿರದಲ್ಲಿದ್ದವು. ಈ ಆನೆಗಳೆರು ಇತರೆ ಆನೆಗಳಿಗಿಂತ ಸಾಧು ಮತ್ತು ದೈತ್ಯ ಬಲ ಹೊಂದಿದ್ದವು. ಮೈಸೂರು ದಸರಾ ಸಂದರ್ಭದ ವೇಳೆ ತಮ್ಮದೇ ಆದ ಗತ್ತು ಗೈರತ್ತು, ಗಾಂಭೀರ್ಯದ ನಡಿಗೆಯಿಂದ ಎಲ್ಲರ ಗಮನಸೆಳೆಯುತ್ತಿದ್ದವು.
ಇದನ್ನೂ ಓದಿ:ದಸರಾ ಬಂದಾಗಲೆಲ್ಲ ನೆನಪಾಗುವ ಅಂಬಾರಿ ಹೊತ್ತ ಆನೆಗಳು… ಈಗಲೂ ನಮ್ಮನ್ನು ಕಾಡುವ ಧೈತ್ಯ ಗಜಗಳು!
ದ್ರೋಣ ಜಂಬೂಸವಾರಿಯಲ್ಲಿ 18ಬಾರಿ ಚಿನ್ನದ ಅಂಬಾರಿ ಹೊತ್ತಿದ್ದರೆ, ರಾಜೇಂದ್ರ ಮೂರು ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದನು. ವಯಸ್ಸಾಗಿದ್ದ ರಾಜೇಂದ್ರನಿಗೆ ಹೆಚ್ಚು ಬಾರಿ ಅಂಬಾರಿ ಹೊರುವ ಅವಕಾಶ ದೊರೆತಿಲ್ಲವಾದರೂ ಜಂಬೂಸವಾರಿಯಲ್ಲಿ ಇತರೆ ಆನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದನು. ವಯೋಸಹಜ ಕಾಯಿಲೆಯಿಂದ ಮೃತಪಟ್ಟನು.
ದ್ರೋಣನ ಸಾವು ಮಾತ್ರ ದುರಂತ ಸಾವಾಗಿತ್ತು. ದೃಢಕಾಯನಾಗಿದ್ದ ದ್ರೋಣ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದನು. ಬಳ್ಳೆ ಆನೆಶಿಬಿರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಇವರಿಬ್ಬರ ನೆನಪಿಗಾಗಿ ಸುಮಾರು ಹದಿನೆಂಟು ವರ್ಷಗಳ ಹಿಂದೆ ಅಂದಿನ ಅರಣ್ಯಾಧಿಕಾರಿಗಳು ಸಮಾಧಿ ನಿರ್ಮಿಸಿ ಅವರಿಬ್ಬರ ನೆನಪುಗಳನ್ನು ಶಾಶ್ವತವಾಗಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ಕಾಕನಕೋಟೆಯ ಆ ಕಾಲದ ವೈಭವ ಹೇಗಿತ್ತು? ಆನೆಗಳನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದದ್ದು ಹೇಗೆ ಗೊತ್ತಾ?
ಈ ಸಮಾಧಿಗಳನ್ನು ಇಂದಿಗೂ ಇಲ್ಲಿನ ಮಾವುತ ಕಾವಾಡಿಗಳು ಜತನದಿಂದ ಕಾಪಾಡಿಕೊಂಡು ಬಂದಿದ್ದು, ಅರಣ್ಯದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಾಸ್ತಮ್ಮ ಪೂಜಾ ಮಹೋತ್ಸವದ ಸಂದರ್ಭ ದ್ರೋಣ ಮತ್ತು ರಾಜೇಂದ್ರರ ಸಮಾಧಿಗೂ ಪೂಜಾ ಕಾರ್ಯ ನಡೆಯುತ್ತದೆ. ಸಮಾಧಿಯತ್ತ ಹೋದಾಗ ಜನ ಅದಕ್ಕೊಂದು ನಮನ ಸಲ್ಲಿಸಿ ಬರುತ್ತಾರೆ. ಅಷ್ಟೇ ಅಲ್ಲದೆ, ಶಿಬಿರದಲ್ಲಿರುವ ಆನೆಗಳಿಂದ ಮಾವುತರು ಆಗಾಗ್ಗೆ ಸಲಾಮ್ ಹೊಡೆಸುತ್ತಾರೆ.
ಇನ್ನು ಗತ್ತು, ಗೈರತ್ತು, ಗಾಂಭೀರ್ಯದ ನಡಿಗೆ ಮೂಲಕ ಜನಮನ ಗೆದ್ದಿದ್ದ ಸಾಕಾನೆ ಅರ್ಜುನ 2023ರಲ್ಲಿ ಕಾಡಾನೆಯ ದಾಳಿಗೆ ಬಲಿಯಾಗಿದ್ದು, ಇಂದಿಗೂ ಅದರ ನೆನಪು ಎಲ್ಲರನ್ನೂ ಕಾಡುತ್ತಿದೆ. ಅರ್ಜುನನೂ ಈಗ ಬಳ್ಳೆ ಶಿಬಿರದಲ್ಲಿ ನೆನಪಾಗಿ ಉಳಿದಿದ್ದು, ಇಲ್ಲಿರುವ ಆತನ ಪ್ರತಿಮೆ ಅದಕ್ಕೆ ಸಾಕ್ಷಿಯಾಗಿ ನಿಂತಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಸೂರು ದಸರಾ ಬಂದಾಗಲೆಲ್ಲ ಅಂಬಾರಿ ಹೊತ್ತ ಆನೆಗಳು ನೆನಪಾಗುತ್ತಲೇ ಇರುತ್ತವೆ…
B M Lavakumar
Superb informative and statistical article sir thanks