ಕಾಕನಕೋಟೆಯ ಆ ಕಾಲದ ವೈಭವ ಹೇಗಿತ್ತು? ಆನೆಗಳನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದದ್ದು ಹೇಗೆ ಗೊತ್ತಾ?

ಇವತ್ತು ಆನೆಗಳನ್ನು ಬೇರೆ, ಬೇರೆ ವಿಧಾನಗಳಿಂದ ಸೆರೆ ಹಿಡಿಯಲಾಗುತ್ತದೆ. ಅದರಲ್ಲೂ ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ನಡೆಸಿ ಪುಂಡಾನೆಗಳನ್ನು ಸೆರೆಹಿಡಿದು ಪಳಗಿಸಲಾಗುತ್ತಿದೆ. ರೈತರಿಗೆ, ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಉಪಟಳ ನೀಡುತ್ತಿದ್ದ ಹಲವು ಪುಂಡಾನೆಗಳನ್ನು ಸೆರೆಹಿಡಿದು ಪಳಗಿಸಿದ್ದು ಅವುಗಳೆಲ್ಲವೂ ಹಲವು ಶಿಬಿರಗಳಲ್ಲಿವೆ. ಇದೆಲ್ಲದರ ನಡುವೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಮೈಸೂರಿನ ಅರಸರ ಕಾಲದಲ್ಲಿ ನಡೆಯುತ್ತಿದ್ದ ಹತ್ತು ಹಲವು ಕಾರ್ಯಕ್ರಮಗಳ ನಡುವೆ ಖೆಡ್ಡಾ ಕಾರ್ಯಕ್ರಮ ಗಮನಾರ್ಹವಾಗಿದ್ದು, ಇದು ನಡೆಯುತ್ತಿದ್ದ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಾಕನಕೋಟೆ ಇವತ್ತಿಗೂ ಚಿರಪರಿಚಿತ.
ಕಾಕನಕೋಟೆ ಕುರಿತಂತೆ ನೋಡುತ್ತಾ ಹೋದರೆ, ಇದೊಂದು ಪ್ರಾಣಿ ಮತ್ತು ವೃಕ್ಷ ಸಂಕುಲವನ್ನು ಹೊಂದಿದ ಅರಣ್ಯವಾಗಿದ್ದು, ಮೈಸೂರು ಮಹಾರಾಜರ ಕಾಲದಲ್ಲಿಯೇ ಕಾಕನಕೋಟೆ ದೇಶ ವಿದೇಶಗಳಲ್ಲಿ ಹೆಸರನ್ನು ಪಡೆದಿತ್ತು. ಇದಕ್ಕೆ ಕಾರಣ ಇಲ್ಲಿದ್ದ ಖೆಡ್ಡಾವಾಗಿತ್ತು. ಖೆಡ್ಡಾ ತೋಡಿ ಆನೆಗಳನ್ನು ಹಿಡಿದು ಪಳಗಿಸಿ ಬಳಿಕ ಅವುಗಳನ್ನು ಮೈಸೂರು ದಸರಾ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದದ್ದು ಅವತ್ತಿನ ವಿಶೇಷತೆಯಾಗಿದೆ.
ಖೆಡ್ಡಾ ಮಹಾರಾಜರ ಕಾಲದಲ್ಲಿ ಹಾಗೂ ಸ್ವಾತಂತ್ರ್ಯ ನಂತರ 1972ರವರೆಗೂ ನಡೆಯುತ್ತಿತ್ತು. ಆ ನಂತರ ನಿರ್ಬಂಧ ಹೇರುವುದರೊಂದಿಗೆ ಕಾಕನಕೋಟೆಯ ಖೆಡ್ಡಾ ಇತಿಹಾಸದ ಪುಟ ಸೇರುವಂತಾಗಿದೆ. ಆದರೂ ಇವತ್ತಿಗೂ ಕಾಕನಕೋಟೆ ಎಂಬ ಹೆಸರು ಕೇಳಿದಾಕ್ಷಣ ಮೈಮನ ನವಿರೇಳುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಆ ಕಾಲದಲ್ಲಿ ಕಾಕನಕೋಟೆ ಹೇಗಿತ್ತು? ಮತ್ತು ಇಲ್ಲಿ ನಡೆಯುತ್ತಿದ್ದ ಖೆಡ್ಡಾ ಕಾರ್ಯಕ್ರಮ ಹೇಗಿರುತ್ತಿತ್ತು? ಎಂಬುದನ್ನು ನೋಡುತ್ತಾ ಹೋದರೆ ಕುತೂಹಲವೂ ಮೂಡುತ್ತದೆ.
ಕಬಿನಿ ನದಿಯ ಜುಳು ಜುಳು ನಿನಾದದ ಜತೆಗೆ ಮುಗಿಲೆತ್ತರಕ್ಕೆ ಬೆಳೆದು ನಿಂತ ಮರಗಿಡಗಳು, ಅವುಗಳ ನಡುವೆ ಆಸರೆ ಪಡೆದ ಕಾಡಾನೆ, ಹುಲಿ, ಚಿರತೆ, ಜಿಂಕೆ, ಕಾಡೆಮ್ಮೆ ಹೀಗೆ ವಿವಿಧ ಬಗೆಯ ಜೀವಸಂಕುಲಗಳು ಕಾಕನಕೋಟೆಯ ಕಥೆಯನ್ನು ಹೇಳುತ್ತವೆ. ಇಂತಹ ಗೊಂಡಾರಣ್ಯದಲ್ಲಿಯೇ ಆಗಿನ ಕಾಲದಲ್ಲಿ ಕಾಡಾನೆಗಳನ್ನು ಸೆರೆಹಿಡಿಯುವ ಖೆಡ್ಡಾ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಮೈಸೂರಿನ ರಾಜಮಹಾರಾಜರು ಮಾತ್ರವಲ್ಲದೆ, ದೇಶ ವಿದೇಶಗಳ ಅತಿಥಿಗಳು ಇರುತ್ತಿದ್ದರು. ಕಾಡಿನ ನಡುವೆಯೂ ಸಂಭ್ರಮ ಏರ್ಪಡುತ್ತಿತ್ತು.
ಇದನ್ನೂ ಓದಿ: ಮೈಸೂರು ದಸರೆಗೆ ಧರೆಗಿಳಿದ ಪುಷ್ಪಲೋಕ… ಫಲಪುಷ್ಪ ಪ್ರದರ್ಶನದ ಈ ಬಾರಿಯ ವಿಶೇಷತೆಗಳೇನು?
ಈ ಖೆಡ್ಡಾ ಕಾರ್ಯಕ್ರಮ ಏಕೆ ನಡೆಯುತ್ತಿತ್ತು ಎಂದರೆ ಮೊದಲನೆಯದಾಗಿ ಅರಮನೆ ಕಾರ್ಯಕ್ರಮ ಸೇರಿದಂತೆ ಇತರೆ ಚಟುವಟಿಕೆಗೆ ಬೇಕಾದ ಆನೆಗಳಿಗಾಗಿ, ಎರಡನೆಯದಾಗಿ ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುವುದನ್ನು ತಪ್ಪಿಸಲು ಎಂದು ಹೇಳಲಾಗುತ್ತಿದೆ. ಖೆಡ್ಡಾ ಕಾರ್ಯಕ್ರಮಕ್ಕೆ ಒಂದು ತಿಂಗಳ ಮೊದಲೇ ನೂರಾರು ಜನ ತಮಟೆ ಹೊಡೆಯುವವರನ್ನು, ನುರಿತ ಬೇಟೆಗಾರರನ್ನು ಒಂದೆಡೆ ಸೇರಿಸುತ್ತಿದ್ದರು. ಈ ಬೇಟೆಗಾರರು ದಕ್ಷರು, ಬುದ್ಧಿವಂತರು, ಕೌಶಲತೆ ಹೊಂದಿದವರು, ಶ್ರಮಜೀವಿಗಳೂ ಆಗಿರುತ್ತಿದ್ದರು.
ಇವರಿಗೆ ಕಾಡು ಪ್ರಾಣಿಗಳ ಚಲನವಲನದ ಬಗ್ಗೆ ಚೆನ್ನಾಗಿ ಗೊತ್ತಿರುತ್ತಿತ್ತು. ಈ ಖೆಡ್ಡಾ ಕಾರ್ಯದಲ್ಲಿ ಭಾಗವಹಿಸುವವರಿಗೆ ಮೂರು ಹಂತದ ಕಾರ್ಯಚಟುವಟಿಕೆಯ ಅನುಭವ ಬೇಕಾಗುತ್ತಿತ್ತು. ಅದು ಏನೆಂದರೆ ಮೊದಲನೆಯದಾಗಿ ಕಾಡಾನೆಗಳನ್ನು ತಮಟೆ ಇತರೆ ಸದ್ದು ಮಾಡುತ್ತಾ ಕಾಡಿನಿಂದ ನದಿಗೆ ನುಗ್ಗುವಂತೆ ಮಾಡುವುದು, ಎರಡನೆಯದು ಖೆಡ್ಡಾಕ್ಕೆ ಬಿದ್ದ ಆನೆಗಳನ್ನು ಹಗ್ಗದಿಂದ ಕಟ್ಟುವುದು, ಮೂರನೆಯದು ಪಳಗಿಸುವುದಾಗಿದೆ. ಇಷ್ಟೆಲ್ಲ ಮಾಡುವ ಕಾರ್ಯಕ್ಷಮತೆಯನ್ನು ಕಾವಾಡಿಗರು ಮತ್ತು ಮಾವುತರು ಹೊಂದಿರುತ್ತಿದ್ದರು.
ಈ ಖೆಡ್ಡಾ ಕಾರ್ಯಕ್ರಮಗಳ ಬಗ್ಗೆ ನೋಡಿದ್ದೇ ಆದರೆ 1906ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಡೆದ ಖೆಡ್ಡಾಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಿತ್ತು. ಅವತ್ತು ಬ್ರಿಟಿಷ್ ರಾಣಿ ಮತ್ತು ಅವರ ಪತಿ ಮೈಸೂರು ಅರಮನೆಗೆ ಭೇಟಿ ನೀಡಿದವರು ಈ ಖೆಡ್ಡಾ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರಂತೆ. ಇನ್ನು ಖೆಡ್ಡಾ ಕಾರ್ಯಕ್ರಮದ ಬಗ್ಗೆ ನೋಡುವುದಾದರೆ ಖೆಡ್ಡಾ ಕಾರ್ಯಕ್ರಮ ನಿಗದಿಪಡಿಸಿದ ದಿನಕ್ಕಿಂತ ಕೆಲವು ದಿನಗಳ ಮೊದಲು ನೂರಾರು ಆದಿವಾಸಿಗಳು ಕಪಿಲ ನದಿಯ ದಂಡೆಯಲ್ಲಿ ಕಾಡಿನ ಸುತ್ತಲಿರುವ ಕಾಡಾನೆಗಳನ್ನು ಅಟ್ಟಿಸಿಕೊಂಡು ಬಂದು ಒಂದೆಡೆ ಸೇರುವಂತೆ ನೋಡಿಕೊಳ್ಳುತ್ತಿದ್ದರು.
ಹೊಳೆಯ ಮತ್ತೊಂದು ದಂಡೆಯಲ್ಲಿ ಅನೇಕ ಸರಳುಗಳ ಒಂದು ಅಟ್ಟಣೆಯ ಮನೆಯನ್ನು ಕಟ್ಟಲಾಗುತ್ತಿತ್ತು. ಇದಕ್ಕೆ ಸ್ವಲ್ಪ ದೂರದಲ್ಲಿ ಮತ್ತೊಂದು ದೊಡ್ಡ ಅಟ್ಟಣೆ ನಿರ್ಮಿಸಲಾಗುತ್ತಿತ್ತು. ಇದರಲ್ಲಿ ಕುಳಿತು ಖೆಡ್ಡಾ ಕಾರ್ಯಕ್ರಮವನ್ನು ವೀಕ್ಷಿಸಲು ಅತಿಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಅಟ್ಟಣೆಯ ಈ ಮನೆಗೆ ನಾಲ್ಕು ಗಜ ಅಗಲದ ಪ್ರವೇಶದ್ವಾರವಿರುತ್ತಿತ್ತು. ಆನೆಗಳು ಪ್ರವೇಶಿಸುವ ಹಾದಿಯುದ್ದಕ್ಕೂ ದೊಡ್ಡ ಕಂಬಗಳನ್ನು ನೆಟ್ಟು ಎರಡೂ ಕಡೆ ಬೇಲಿಯನ್ನು ಹಾಕಲಾಗುತ್ತಿತ್ತು. ಬೇಲಿಯ ಮೂಲಕ ಆದಿವಾಸಿಗಳು ಕಾಡಾನೆಗಳನ್ನು ಅಟ್ಟಣೆ ಮನೆಯ ಕಡೆಗೆ ಓಡಿಸುತ್ತಿದ್ದರು. ಈ ಅಟ್ಟಣೆಯ ಮನೆಯ ಒಳಭಾಗದ ಕೆಳಗೆ ನಾಲ್ಕು ಅಡಿ ಅಗಲದ ಮತ್ತು ನಾಲ್ಕು ಅಡಿ ಆಳದ ಹಳ್ಳವನ್ನು ತೋಡಲಾಗುತ್ತಿತ್ತು.
ಇದನ್ನೂ ಓದಿ: ಮೈಸೂರು ದಸರಾದಲ್ಲಿ ಮನೆ, ಮನೆಗಳಲ್ಲಿ ಬೊಂಬೆಗಳ ಮೆರವಣಿಗೆ… ಬೊಂಬೆ ಪ್ರದರ್ಶನ ನಡೆದು ಬಂದಿದ್ದು ಹೇಗೆ?
ಇಷ್ಟೆಲ್ಲ ಸಿದ್ಧತೆಯನ್ನು ಮಾಡಿಕೊಂಡ ಬಳಿಕ ಖೆಡ್ಡಾ ಕಾರ್ಯಕ್ರಮದಂದು ನದಿಯ ಆಚೆಗಿನ ದಂಡೆಯಿಂದ ನೂರಾರು ಆದಿವಾಸಿಗಳು ಜಾಗಟೆ, ತಮಟೆ, ಶಂಖ ಸೇರಿದಂತೆ ಹಲವು ಪರಿಕರಗಳನ್ನು ಬಳಸಿ ಸದ್ದು ಮಾಡುತ್ತಾ ಕಾಡಾನೆಗಳನ್ನು ಅಟ್ಟಿಸಿಕೊಂಡು ನದಿಗೆ ಇಳಿಸಿ ಆ ನಂತರ ಇನ್ನೊಂದು ಬದಿಯಲ್ಲಿ ಅಟ್ಟಣೆ ನಿರ್ಮಿಸಿರುವ ಸ್ಥಳದಲ್ಲಿ ಕಾಡಾನೆಗಳು ಹತ್ತುವಂತೆ ಮಾಡುತ್ತಿದ್ದರು. ಭಯಂಕರ ಸದ್ದಿಗೆ ಹೆದರಿ ನದಿಗೆ ಇಳಿದ ಕಾಡಾನೆಗಳು ಬದುಕಿದೆ ಜೀವ ಎನ್ನುವಂತೆ ಅಟ್ಟಣೆಯ ಬೋನಿನ ಕಡೆಗೆ ನುಗ್ಗುತ್ತಿದ್ದವು.
ಈ ವೇಳೆ ಬೋನಿನಲ್ಲಿ ಸಾಕಾನೆಗಳ ಮೇಲೆ ಮಾವುತರು ಮತ್ತು ಆ ಸಾಕಾನೆಯ ಹಿಂದೆ ಕಾವಾಡಿಗರು ಇರುತ್ತಿದ್ದರು. ಸಾಕಾನೆಗಳು ಬೋನಿನ ಕಡೆಗೆ ನುಗ್ಗುವ ಕಾಡಾನೆಗಳ ಸಂಗಾತಿಗಳನ್ನು ಒಂದೊಂದಾಗಿ ಬೇರ್ಪಡಿಸುತ್ತಿದ್ದವು. ಆಗ ಅವುಗಳ ಕಾಲನ್ನು ದಪ್ಪವಾದ ಹಗ್ಗದಿಂದ ಕಟ್ಟಲಾಗುತ್ತಿತ್ತು. ನಂತರ ಅದನ್ನು ನೆಲಕ್ಕೆ ಜಾರಿಸಿ, ತದನಂತರ ಸಿಕ್ಕಿದ ಆನೆಯ ಕತ್ತಿಗೆ ಸುತ್ತಲೂ ಹಗ್ಗವನ್ನು ಕಟ್ಟಿ ಹೊರಕ್ಕೆ ಎಳೆದು ತಂದು ಹತ್ತಿರದ ಕಾಡಿಗೆ ಎಳೆದೊಯ್ದು ಬಳಿಕ ಪಳಗಿಸಲಾಗುತ್ತಿತ್ತು.
ಇದನ್ನೂ ಓದಿ: ದಸರಾ ಬಂದಾಗಲೆಲ್ಲ ನೆನಪಾಗುವ ಅಂಬಾರಿ ಹೊತ್ತ ಆನೆಗಳು… ಈಗಲೂ ನಮ್ಮನ್ನು ಕಾಡುವ ಧೈತ್ಯ ಗಜಗಳು!
ಇದೊಂದು ರೋಮಾಂಚನಕಾರಿ ಸಾಹಸಮಯ ದೃಶ್ಯವಾಗಿತ್ತು. ಇವತ್ತಿಗೂ ಆ ದಿನಗಳನ್ನು ನೆನಪಿಸಿಕೊಳ್ಳುವ ಹಿರಿಯರು ಖೆಡ್ಡಾದ ಬಗ್ಗೆ ತಮ್ಮದೇ ಆದ ಕಥೆಗಳನ್ನು ಹೇಳುತ್ತಿರುತ್ತಾರೆ. ಅದು ಏನೇ ಇರಲಿ ಖೆಡ್ಡಾ ಕಾರ್ಯಕ್ರಮಕ್ಕೆ ಹೆಚ್.ಡಿ.ಕೋಟೆಯ ಕಾಕನಕೋಟೆ ಗತಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ಇವುಗಳೆಲ್ಲವನ್ನು ಕೇಳುತ್ತಾ ಹೋದರೆ ಮೈಸೂರಿನ ಅವತ್ತಿನ ವೈಭವಗಳು ಕಣ್ಮುಂದೆ ಹಾದು ಹೋದ ಅನುಭವವಾಗುತ್ತವೆ.
B M Lavakumar