‘ಚಾಮಯ್ಯ ಮೇಷ್ಟ್ರು’ ಆಗಿ ಚಂದನವನದಲ್ಲಿ ನೆನಪಿನ ತಾರೆಯಾಗಿ ನಮ್ಮೊಂದಿಗಿರುವ ಹಿರಿಯನಟ ಕೆ.ಎಸ್.ಅಶ್ವಥ್…

ಕನ್ನಡದ ಸಿನಿಮಾ ರಂಗದಲ್ಲಿ ಹಿರಿಯ ನಟರು ಒಂದೊಂದು ಪಾತ್ರಕ್ಕೆ ಜೀವ ತುಂಬಿ ಹೋಗಿದ್ದಾರೆ. ಅಂಥವರ ಪೈಕಿ ಒಬ್ಬರಾಗಿ ಕೆ.ಎಸ್.ಅಶ್ವಥ್ ನಿಲ್ಲುತ್ತಾರೆ.. ಅವರ ಚಾಮಯ್ಯ ಮೇಷ್ಟ್ರ ಪಾತ್ರ ನಮ್ಮೆಲ್ಲರ ಕಣ್ಣಮುಂದೆ ಅಚ್ಚು ಒತ್ತಿದಂತೆ ಉಳಿದು ಹೋಗಿದೆ. ಮೇಷ್ಟ್ರು ಅಂದ್ರೆ ಚಾಮಯ್ಯ ಮೇಷ್ಟ್ರಂತೆ ಇರಬೇಕೆನ್ನುವ ಭಾವನೆ ನಮ್ಮೆಲ್ಲರಲ್ಲೂ ಆಳವಾಗಿ ಬೇರೂರಿ ಬಿಟ್ಟಿದೆ. ಇಂತಹ ಚಾಮಯ್ಯ ಮೇಷ್ಟ್ರು ಅರ್ಥಾತ್ ಕೆ.ಎಸ್. ಅಶ್ವಥ್ ಅವರ ಬದುಕು ಮತ್ತು ಸಿನಿಮಾದ ಕುರಿತಂತೆ ತಿಳಿಯಬೇಕೆನ್ನುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ.. ಹೀಗಾಗಿ ಅವರು ಬಗ್ಗೆ ಒಂದಷ್ಟು ವಿಚಾರಗಳನ್ನು ತೆರೆದಿಡುವ ಪ್ರಯತ್ನ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ ಅವರು ಮಾಡಿದ್ದಾರೆ..
ಚೆಲುವ ನಟರಲ್ಲೊಬ್ಬರಾಗಿದ್ದ ಕೆ.ಎಸ್. ಅಶ್ವಥ್ ಅವರಿಗೆ ಹೀರೋ ಪಾತ್ರ ಸರಿಹೊಂದುವುದಿಲ್ಲ ಕೇವಲ ಸೌಮ್ಯ ಶಾಂತ ಸ್ವಭಾವದ ಪಾತ್ರಗಳೇ ಸೂಟ್ ಆಗುತ್ತದೆ ಎಂಬುದು ಆಗಿನ ಕಾಲದ ಬಹುತೇಕ ಚಿತ್ರೋದ್ಯಮಿಗಳ ಕಾಮನ್ ಒಪಿನಿಯನ್ ಆಗಿತ್ತು.. ಮಾತ್ರವಲ್ಲದೆ ಕನ್ನಡ ಚಲನಚಿತ್ರ ಅಭಿಮಾನಿಗಳ ಅಭಿಪ್ರಾಯವೂ ಅದೇ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಬ್ಬರಾಯ ಅಶ್ವಥ್ ನಾರಾಯಣ 25.3.1925 ರಂದು ಹಾಸನ ಜಿಲ್ಲೆ ಹೊಳೆ ನರಸೀಪುರದ ಕರಗನಹಳ್ಳಿಯಲ್ಲಿ ಜನಿಸಿದರು. ಕರ್ಮ ಭೂಮಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪೂರೈಸಿದ ನಂತರ ತಮ್ಮ ಪೋಷಕರ ಇಡೀ ಕುಟುಂಬವು ಮೈಸೂರಿಗೆ ಬಂದು ನೆಲೆಸಿದ್ದ ಪ್ರಯುಕ್ತ ತಮ್ಮ ಮುಂದಿನ ಶಿಕ್ಷಣವು ಮೈಸೂರು ಡಿ.ಬನುಮಯ್ಯ ಕಾಲೇಜು ಮೂಲಕ ಮುಂದುವರೆದು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಕಾಂ.ಪದವಿ ಗಳಿಸಿದರು. ನಂತರ ಸರ್ಕಾರಿ ಕೆಲ್ಸ ಫುಡ್ ಇನ್ಸ್ಪೆಕ್ಟರ್ ಹುದ್ದೆ ದೊರಕಿದರೂ ಅದನ್ನು ತೊರೆದು ಬಣ್ಣದ ಬದುಕಿನ ಆಕರ್ಷಣೆಯಿಂದ ಮದ್ರಾಸ್ ಮತ್ತು ಮೈಸೂರು ಫಿಲಂ ಸ್ಟುಡಿಯೋಗಳಿಗೆ ಎಡತಾಕಲು ಆರಂಭಿಸಿದರು.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಲಕ್ಷ್ಮೀಬಾಯಿ… ಇವರ ಸಿನಿ ಬದುಕು ಹೇಗಿತ್ತು?
ದೈವಲೀಲೆ ಎಂಬಂತೆ ಕನಸು ನನಸಾಗುವ ಕಾಲ ಕೂಡಿ ಬಂತು. ಚಂದನವನಕ್ಕೆ ಪಾದಾರ್ಪಣೆ ಮಾಡಿದ ಪ್ರಾರಂಭದಲ್ಲಿ ಹಲವಾರು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದರೂ ಸಹ ಕ್ಲಿಕ್ ಆಗಲಿಲ್ಲ. ಆದರೆ ಪೋಷಕ ನಟನಾಗಿ ಯಶಸ್ಸಿನ ಶಿಖರ ಮುಟ್ಟಿದರು! ನಮ್ಮಮಕ್ಕಳು, ಭಾಗ್ಯವಂತ, ಸರ್ವಮಂಗಳ, ಅನುಗ್ರಹ, ನಾಗರಹಾವು ಮುಂತಾದ ಸಿನಿಮಾಗಳು ಶೇ.100 ತೆರಿಗೆ ವಿನಾಯ್ತಿ ಪಡೆದವು, ಅತ್ಯುತ್ತಮ ಚಿತ್ರಗಳೆಂದು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡವು. ಅತ್ಯುತ್ತಮ ಪೋಷಕ ನಟನೆಗೆ ಅಶ್ವಥ್ ರವರಿಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿಗಳು ಅರಸಿಕೊಂಡು ಬಂದವು.
ಸುಮಾರು 30 ವರ್ಷಕಾಲ ಪೋಷಕ ನಟನಾಗಿದ್ದು ಪುನಃ ನಾಯಕನಟನಾಗಿ ಅಭಿನಯಿಸುವ ಅವಕಾಶ ದೊರಕಿದರೂ ಒಲ್ಲದ ಅಶ್ವಥ್ ಕೇವಲ ಪೋಷಕ ನಟನ ಪಾತ್ರಕ್ಕೆ ಮಾತ್ರ ಓಕೆ ಎಂದರು. 50 ವರ್ಷಕಾಲ ತಮಗೆ ದೊರೆತ ಪ್ರತಿಯೊಂದು ಪಾತ್ರಕ್ಕೂ ಜೀವತುಂಬಿ ಸೈ ಎನಿಸಿಕೊಂಡ ಮಹಾ ಪ್ರತಿಭಾನ್ವಿತ ಅವರಾಗಿದ್ದರು. ಅಪರೂಪಕ್ಕೆ ಜೇಡರಬಲೆ ಸಿನಿಮಾ ಸೇರಿದಂತೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಖಳನಾಯಕ(ವಿಲನ್) ಪಾತ್ರದಲ್ಲೂ ಅಭಿನಯಿಸಿ ಎಲ್ಲರೂ ಆಶ್ಚರ್ಯಪಡುವಂತೆ ಮಾಡಿದರು! ಮಿನುಗುತಾರೆ ಕಲ್ಪನ ಪತಿಯಾಗಿ ಸರ್ವಮಂಗಳ ಚಿತ್ರದ ಅಭಿನಯ ಕಂಡು ಡಾ.ರಾಜ್ ಕುಮಾರ್ ಮನಸಾರೆ ಇವರನ್ನು ಅಭಿನಂದಿಸಿ ಹೊಗಳಿದ್ದರು.
ಇದನ್ನೂ ಓದಿ: ಚಂದನವನದಲ್ಲಿ ಮಿಂಚಿ ಮರೆಯಾದ ಹಿರಿಯ ನಟಿ ಕಮಲಾಬಾಯಿರವರ ಬಗ್ಗೆ ನಿಮಗೆಷ್ಟು ಗೊತ್ತು?
ಖ್ಯಾತ ಹಿರಿಯನಟಿ ಪಂಡರೀಬಾಯಿ ಜತೆ ಅತಿ ಹೆಚ್ಚು ಸಿನಿಮಗಳಲ್ಲಿ ನಟಿಸಿ ಪಂಡರೀಬಾಯಿ-ಅಶ್ವಥ್ ಭರ್ಜರಿಜೋಡಿ ಎನಿಸಿ ಇನ್ನಷ್ಟು ಪ್ರಸಿದ್ಧರಾದರು! ಇವರ ಹಲವಾರು ಚಿತ್ರಗಳು ಬೇರೆ ಭಾಷೆಗೂ ಡಬ್-ರಿಮೇಕ್ ಆಗಿ ದೇಶಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡರು. ರಾಜ್-ಕಲ್ಯಾಣ್-ಉದಯ್ ಕುಮಾರತ್ರಯರ ಸಮಕಾಲೀನರಾದ ಅಶ್ವಥ್ ಈ ಮೂವರ ಜತೆಗೇ ತಂದೆ/ ಅಣ್ಣ/ ಮಾವ ಪಾತ್ರಾಭಿನಯ ಮಾಡಿ ಭೇಷ್ ಎನಿಸಿಕೊಂಡದ್ದು ಇತಿಹಾಸ. ಕಾಲಕ್ರಮೇಣ ವಯೋಸಹಜವಾಗಿ ಸುಸಂಸ್ಕೃತ ಕುಟುಂಬದ ಶಾರದ ಎಂಬುವರನ್ನು ವಿವಾಹವಾಗಿ 2 ಹೆಣ್ಣು 2 ಗಂಡು ಮಕ್ಕಳ ತಂದೆಯಾದರು.
ಕನ್ನಡದ ಬಹುತೇಕ ಎಲ್ಲಾ ಹೀರೋಯಿನ್-ಹೀರೋಗಳ ಜತೆಗೆ ತಂದೆ ಅಣ್ಣ ಮಾವ ಪಾತ್ರವನ್ನು ಅಮೋಘವಾಗಿ ಅಭಿನಯಿಸಿ ದಾಖಲೆ ಮಾಡಿದರು. ಶೇ30ರಷ್ಟು ರಾಜಕುಮಾರ್ ಚಿತ್ರಗಳಲ್ಲೂ, ಶೇ.20ರಷ್ಟು ವಿಷ್ಣುವರ್ಧನ್ ಚಿತ್ರಗಳಲ್ಲೂ, ಶೇ.50ರಷ್ಟು ಪಾಲು ಕನ್ನಡ ಚಿತ್ರರಂಗದ ಇತರೆ 35ಕ್ಕೂ ಹೆಚ್ಚು ನಾಯಕ ನಟ-ನಟಿಯರ ಸಿನಿಮಾಗಳಲ್ಲಿ ನಟಿಸಿ ನೂತನ ದಾಖಲೆ ಬರೆದ ಕನ್ನಡದ ಏಕೈಕ ಪೋಷಕ ನಟ! ತುಂಬು ಜೀವನ ನಡೆಸಿ ಸಂತುಷ್ಟ ಮತ್ತು ಸಾರ್ಥಕ ಜೀವನದ ಬದುಕು ಸಾಗಿಸುತ್ತಿರುವಾಗ ದಿನಾಂಕ 18.1.2010ರಂದು ಮೈಸೂರಿನ ತಮ್ಮ ಸ್ವಂತ ಮನೆಯಲ್ಲಿ ಸ್ವರ್ಗಸ್ಥರಾದರು. ಇಂಥ ಮಹಾನ್ ಕಲಾವಿದನ ಪುತ್ರ ಶಂಕರ್ ಅಶ್ವಥ್ ಸುಮಾರು 150ಕ್ಕು ಹೆಚ್ಚು ಫಿಲಂಸ್ ಮತ್ತು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದರೂ ಸಹ ನೆಲೆ ಬೆಲೆ ಕಾಣದೇ ಕ್ಯಾಬ್ ಮಾಲೀಕ-ಕಂ-ಚಾಲಕನಾಗಿ ಸ್ವಾಭಿಮಾನದ ಜೀವನ ಸಾಗಿಸಿದ್ದನ್ನು ಕಾಣಬಹುದಾಗಿದೆ.
ಇದನ್ನೂ ಓದಿ:ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮ… ಇವರು ದೇಶದ ಮೊಟ್ಟ ಮೊದಲ ನಿರ್ಮಾಪಕಿ!
ಇನ್ನು ಕೆ.ಎಸ್.ಅಶ್ವಥ್ ನಟಿಸಿದ ಚಿತ್ರಗಳನ್ನು ಪಟ್ಟಿ ಮಾಡುತ್ತಾ ಹೋದರೆ ಶಿವಶರಣೆನಂಬೆಕ್ಕ[1955], ಸ್ತ್ರೀರತ್ನ, ಕಚದೇವಯಾನಿ, ಕೋಕಿಲವಾಣಿ, ಚಿಂತಾಮಣಿ, ಪ್ರಭುಲಿಂಗಲೀಲೆ, ಭೂಕೈಲಾಸ, ಭಕ್ತಪ್ರಹ್ಲಾದ, ಮನೆತುಂಬಿದಹೆಣ್ಣು, ಅಣ್ಣತಂಗಿ, ಮನೆಗೆಬಂದ ಮಹಾಲಕ್ಷ್ಮಿ, ಜಗಜ್ಯೋತಿ ಬಸವೇಶ್ವರ, ಮಹಿಷಾಸುರಮರ್ಧಿನಿ, ಶಿವಲಿಂಗಸಾಕ್ಷಿ, ರಣಧೀರಕಂಠೀರವ, ದಶಾವತಾರ, ಭಕ್ತಕನಕದಾಸ, ಕಿತ್ತೂರು ಚೆನ್ನಮ್ಮ, ಕೈವಾರಮಹಾತ್ಮೆ, ನಾಗಾರ್ಜುನ, ರತ್ನಮಂಜರಿ, ಗಾಳಿಗೋಪುರ, ಭೂದಾನ, ಸ್ವರ್ಣಗೌರಿ, ಕರುಣೆಯೇ ಕುಟುಂಬದ ಕಣ್ಣು, ತಾಯಿಕರುಳು, ವಿಧಿವಿಲಾಸ, ತೇಜಸ್ವಿನಿ, ನಂದಾದೀಪ, ಕನ್ಯಾರತ್ನ, ಜೀವನತರಂಗ, ಗೌರಿ, ಮಲ್ಲಿಮದುವೆ, ಕುಲವಧು, ಕಲಿತರೂಹೆಣ್ಣೆ, ಮಧುಮಾಲತಿ.
ಶ್ರೀಕನ್ಯಕಾ ಪರಮೇಶ್ವರಿಕಥೆ, ಒಂದೇಬಳ್ಳಿಯಹೂಗಳು, ಸಂಧ್ಯಾರಾಗ, ಅನುರಾಧ, ಪಾರ್ವತಿಕಲ್ಯಾಣ, ವೀರಕೇಸರಿ, ಮನಮೆಚ್ಚಿದಮಡದಿ, ಬಂಗಾರಿ, ಆನಂದಬಾಷ್ಪ, ಜೇನುಗೂಡು, ಸತಿಶಕ್ತಿ, ಸಂತತುಕಾರಾಂ, ಶ್ರೀರಾಮಾಂಜನೇಯ ಯುದ್ಧ, ಮಂಗಳಮುಹೂರ್ತ, ಶಿವರಾತ್ರಿಮಹಾತ್ಮೆ, ನವಜೀವನ, ಅನ್ನಪೂರ್ಣ, ತುಂಬಿದಕೊಡ, ಶಿವಗಂಗೆಮಹಾತ್ಮೆ, ಮುರಿಯದಮನೆ, ಪ್ರತಿಜ್ಞೆ, ಚಿನ್ನದಗೊಂಬೆ, ಪತಿಯೇದೈವ, ಮನೆಅಳಿಯ, ಬೆರೆತಜೀವ, ಚಂದ್ರಹಾಸ, ಸರ್ವಜ್ಞಮೂರ್ತಿ, ಸತ್ಯಹರಿಶ್ಚಂದ್ರ, ಅಮರಜೀವಿ, ಮಹಾಸತಿ ಅನುಸೂಯ, ಮಾವನಮಗಳು, ಮಿಸ್ ಲೀಲಾವತಿ, ಬೆಟ್ಟದಹುಲಿ, ಸತಿಸಾವಿತ್ರಿ, ಮದುವೆಮಾಡಿನೋಡು, ಮಹಾಶಿಲ್ಪಿ, ಗೃಹಲಕ್ಷ್ಮಿ, ಮಮತೆಯ ಬಂಧನ, ಕಾಣಿಕೆ, ಪ್ರೇಮಮಯಿ, ದೇವಮಾನವ, ಸುಬ್ಬಾಶಾಸ್ತ್ರಿ, ಭಲೇರಾಜ, ಅದೇ ಹೃದಯ ಅದೇ ಮಮತೆ, ಎಲ್ಲೆಲ್ಲೂನಾನೆ.
ಇದನ್ನೂ ಓದಿ: ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್ ತ್ರಿಪುರಾಂಭ… ಇವರ ಸಿನಿಮಾದಾಚೆಗಿನ ಬದುಕು ಹೇಗಿತ್ತು?
ಸತಿಸುಕನ್ಯ, ಗಂಗೆಗೌರಿ, ಕಲ್ಲುಸಕ್ಕರೆ, ಬೆಳ್ಳಿಮೋಡ, ಉಯ್ಯಾಲೆ, ಮುದ್ದುಮೀನ, ಮನಸ್ಸಿದ್ದರೆಮಾರ್ಗ, ಮಮತೆ, ಧನಪಿಶಾಚಿ, ಶ್ರೀಪುರಂದರದಾಸರು, ಇಮ್ಮಡಿ ಪುಲಿಕೇಶಿ, ಜೇಡರಬಲೆ, ಗಾಂಧಿನಗರ, ಸರ್ವಮಂಗಳ, ಭಾಗ್ಯದೇವತೆ, ಬೆಂಗಳೂರು ಮೈಲ್, ಹಣ್ಣೆಲೆಚಿಗುರಿದಾಗ, ನಮ್ಮಊರು, ಭಾಗ್ಯದಬಾಗಿಲು ಮುಂತಾದ 400ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಕಲಾರತ್ನ ಕೆ.ಎಸ್.ಅಶ್ವಥ್ ವಿವಿಧ ಪಾತ್ರಗಳನ್ನ ಮನೋಜ್ಞವಾಗಿ ಅಭಿನಯಿಸುವ ಮೂಲಕ ಚಿರಸ್ಮರಣೀಯರಾಗಿ ಉಳಿದಿದ್ದಾರೆ. ಅದರಲ್ಲೂ ಚಾಮಯ್ಯ ಮೇಷ್ಟ್ರು ಪಾತ್ರಕ್ಕೆ ಅಂತ್ಯವೇ ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.
ಅಶ್ವಥ್ ರವರ ಬಗ್ಗೆ ಅತ್ಯಂತ ಆಕರ್ಷಕ ಮತ್ತು ಸದಾ ನೆನಪಿನಲ್ಲಿ ಉಳಿಯುವ ಥರ ಬರೆದಿರುವ ಒಂದು ಮನಮೋಹಕ ಲೇಖನ
Beautiful and nice article