ಸೌಂದರ್ಯ ಎಂದರೇನು? ಎಂಬ ಪ್ರಶ್ನೆಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ನೀಡಬಹುದು.. ಆದರೆ ನಿಜವಾದ ಸೌಂದರ್ಯ ನೋಡುವ ಕಣ್ಣಿನಲ್ಲಿ.. ಆಸ್ವಾದಿಸುವ ಮನಸ್ಸಿನಲ್ಲಿದೆ.. ಸೌಂದರ್ಯ ಎನ್ನುವುದು ಮೇಲ್ನೋಟಕ್ಕೆ ಕಾಣದೆ ಇರಬಹುದು.. ಕುರೂಪದಲ್ಲಿಯೂ ಸೌಂದರ್ಯ ಹುಡುಕಬೇಕು ಅದು ರೂಪವೇ ಅಲ್ಲದ ಸೌಂದರ್ಯ.. ಹಾಗಾದರೆ ಸೌಂದರ್ಯ ಎಂದರೇನು? ಎಂಬುದರ ಆಳ, ಅಗಲದ ಬಗೆಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ವಿಶ್ಲೇಷಿಸುತ್ತಾ ಹೋಗಿದ್ದಾರೆ. ಈ ಬಾರಿ ಅವರು ಸೌಂದರ್ಯದ ವಿವಿಧ ಮುಖಗಳ ಬಗ್ಗೆ ಹೇಳಿದ್ದಾರೆ..
ಸೌಂದರ್ಯವನ್ನು ಅಮೋಘವಾಗಿ ಪ್ರತಿಬಂಬಿಸಿ ಅದ್ಭುತವಾಗಿ ಬಿಂಬಿಸಲು ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ, ಜಿಲ್ಲೆ, ತಾಲ್ಲೂಕು, ಶಾಲಾ ಕಾಲೇಜು ಮಟ್ಟದ ಸೌಂದರ್ಯ ಸ್ಫರ್ಧೆ ಸೇರಿದಂತೆ ಖಾಸಗಿ ಕಂಪನಿ, ಆಕಾಶವಾಣಿ, ಸಿನಿಮಾ, ಟಿ.ವಿ., ಪತ್ರಿಕೋದ್ಯಮ, ಐಟಿ-ಬಿಟಿ ಕ್ಷೇತ್ರದಿಂದಲೂ ಸೌಂದರ್ಯ ಸ್ಫರ್ಧೆ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರುಗುತ್ತದೆ. ತನು ಮನ ಧನ ಕನಕ ನವರತ್ನ ತಿಂಡಿ ತೀರ್ಥ ಅಂತಸ್ತು ಅಧಿಕಾರ ಎಲ್ಲವೂ ಅಧಿಕೃತವಾಗಿಯೆ ಭಾಗವಹಿಸಿ ಯಥೇಚ್ಚವಾಗಿ ವ್ಯಯ ಆಗುತ್ತದೆ…
ಸೌಂದರ್ಯ ಗೋಷ್ಠಿಯೂ ನಡೆಯುತ್ತದೆ ಹೇಗೆಂದರೆ, ಸಣ್ಣಪುಟ್ಟ ಗ್ರಾಮ ಊರುಗಳಿಂದ ಮೊದಲ್ಗೊಂಡು ಪ್ರಪಂಚದಾದ್ಯಂತ ಸೌಂದರ್ಯದ ಬಗ್ಗೆ ಅತಿರಥ ಮಹಾರಥ ವಿದ್ವಾಂಸರಿಂದ ಭಾಷಣ ಆಶುಭಾಷಣ ಪ್ರವಚನ ಉಪನ್ಯಾಸ ವಿಶೇಷೋಪನ್ಯಾಸ ಚರ್ಚೆ ಇತ್ಯಾದಿಯ ಗೋಷ್ಠಿ- ಸ್ಫರ್ಧೆಗಳು ಶ್ರದ್ಧಾಗಂಭೀರ ವಾತಾವರಣದಲ್ಲಿ ಶಿಸ್ತುಬದ್ಧವಾಗಿ ನೂರಾರು-ಸಾವಿರಾರು ಸಂಖ್ಯೆಯಿಂದ ಲಕ್ಷಾಂತರ-ಕೋಟ್ಯಂತರ ಸಂಖ್ಯೆ ಅಭಿಮಾನಿ ಪ್ರೇಕ್ಷಕರ ನಡುವೆ ಅಥವಾ ಸಮ್ಮುಖದಲ್ಲಿ ಅಧಿಕ ಖರ್ಚುವೆಚ್ಚದೊಡನೆ ಅದ್ಧೂರಿಯಿಂದ ನಡೆಯುತ್ತದೆ.
ಇಂಥ ಸೌಂದರ್ಯದ ಕಾರ್ಯಕ್ರಮಗಳಲ್ಲಿ ಹೇಗಾದರೂ ಸರಿ ಬಿಡುವು ಮಾಡಿಕೊಂಡು ಸುಳ್ಳು ಹೇಳಿಕೊಂಡು ಸರ್ಕಾರೀ ಮತ್ತು ಖಾಸಗಿ ಸಂಸ್ಥೆಗಳಿಂದ ಸ್ತ್ರೀ-ಪುರುಷ ನೌಕರರು, ಸಮಾಜದ ಗಣ್ಯಾತಿಗಣ್ಯರು ಆದಿಯಾಗಿ ಎಲ್ಲಾ ವರ್ಗದ ಬಾಲಕರು, ಯುವಕರು, ಮುದುಕರು, ಮ(ಗು)ಡಿವಂತರು, ಚಿಂತಕರು, ಸಂಪ್ರದಾಯಸ್ಥರು, ಸುಸಂಸೃತರು, ಸಡಗರ ಸಂಭ್ರಮದಿಂದ ಭಾಗವಹಿಸುವ ಮೂಲಕ ಅತ್ಯಂತ ಯಶಸ್ವಿಗೊಳಿಸುತ್ತಾರೆ?!
ಇನ್ನು ಪುರಾಣ ಇತಿಹಾಸ ಕಾಲದ ಸೌಂದರ್ಯವೇನು ಎಂಬುದನ್ನು ನೋಡುತ್ತಾ ಹೋದರೆ ಪುರಾಣ ಇತಿಹಾಸ ಕಾಲದಲ್ಲೂ ಸೌಂದರ್ಯವು ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಅನೇಕ ಉದಾಹರಣೆಗಳಿವೆ. ರಾಮಾಯಣ ಮಹಾಭಾರತ ಕಾಲದಲ್ಲಿ ಸೌಂದರ್ಯವು ಸಾಮ್ರಾಜ್ಞಿಯಂತೆ ಉನ್ನತ ದರ್ಬಾರ್ ನಡೆಸಿದ ಹಾಗೂ ಸರ್ವಾಧಿಕಾರ ಮೆರೆದ ನೂರಾರು ಘಟನೆಗಳಿವೆ. ಕೈಕೇಯಿ ಸೌಂದರ್ಯಕ್ಕೆ ಶರಣಾಗಿ ದಶರಥನು ವರನೀಡದೇ ಭರತನ ಪಟ್ಟಾಭಿಷೇಕ ರಾಮನ ವನವಾಸ ಇಲ್ಲದ್ದಿದ್ದರೆ…….ಬಂಗಾರದ ಜಿಂಕೆಯ ಸೌಂದರ್ಯಕ್ಕೆ ಮಾರುಹೋದ ಜಾನಕಿ ಅದನ್ನು ತಂದುಕೊಡಲು ಬಲವಂತ ಮಾಡದಿದ್ದರೆ, ಬಹುಶಃ ರಾವಣನು ಸೀತೆಯನ್ನು ಹೊತ್ತು ಒಯ್ಯುತ್ತಿರಲಿಲ್ಲ.
ವಾಲಿಯ ಹತ್ಯೆ ಆಗುತ್ತಿರಲಿಲ್ಲ, ಹನುಮನ ಶಕ್ತಿ- ಭಕ್ತಿ-ವೀರ್ಯ ಬೆಳಕಿಗೆ ಬರುತ್ತಿರಲಿಲ್ಲ, ಮತ್ಸಾಂಜನೇಯ ಜನನ ಆಗುತ್ತಿರಲಿಲ್ಲ, ಲಕ್ಷ್ಮಣನ ಪರೀಕ್ಷೆ- ಪ್ರಜ್ಞಾಹೀನತೆ, ಸಂಜೀವಿನಿಪರ್ವತ ಪ್ರಕಟವಾಗುತ್ತಿರಲಿಲ್ಲ ಕಪಿಸೇನೆ, ಅಳಿಲುಸೇವೆ (ಪದವೇ ಇರುತ್ತಿರಲಿಲ್ಲ) ಶ್ರೀರಾಮಸೇತುವೆ ರಾವಣ- ಕುಂಭಕರ್ಣ ಸಂಹಾರ, ಲಂಕಾದಹನ ವಿಭೀಷಣನ ಪಟ್ಟಾಭಿಷೇಕ..ಇತ್ಯಾದಿ ಪುರಾಣವೇ ಮಾಯವಾಗುತ್ತಿತ್ತು. ಇದರಿಂದಲೆ ತಿಳಿಯ(ಸ) ಬಹುದು ಸೌಂದರ್ಯದ ತಾಕತ್, ವಿಶಾಲತೆ, ಇತ್ಯಾದಿ,….
ಸೌಂದರ್ಯ ಸ್ತ್ರೀಯರಿಂದ ಮಹಾಭಾರತ ಕುರುಕ್ಷೇತ್ರ ಸೌಂದರ್ಯ ಸ್ತ್ರೀಯರ ಸಮೂಹವೆ ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ಮೂಲಕಾರಣ?! ಹೇಗೆ ಅಂದರೆ.. *ಶಂತನೂ ಚಕ್ರವರ್ತಿ ಸತ್ಯವತಿ ಸೌಂದರ್ಯಕ್ಕೆ ಶರಣಾಗದೇ ಇದ್ದಿದ್ದರೆ….?! *ರುಕ್ಮಿಣಿಯ ಸೌಂದರ್ಯಕ್ಕೆ ಶರಣಾದ ಶ್ರೀಕೃಷ್ಣನು ಅವಳನ್ನು ಅಪಹರಿಸದೆ ಇದ್ದಿದ್ದರೆ…..?! *ಸತ್ಯಭಾಮೆಯ ಸೌಂದರ್ಯಕ್ಕೆ ಶರಣಾಗದೆ ಇದ್ದಿದ್ದರೆ…..?! *ಕುಂತಿಯ ಭಕ್ತಿಸೌಂದರ್ಯಕ್ಕೆ ಶರಣಾದ ಸೂರ್ಯದೇವ ಕರ್ಣನ ಜನನಕ್ಕೆ ಕಾರಣವಾಗದೇ ಇದ್ದಿದ್ದರೆ….?! *ಸುಭದ್ರಳ ಸೌಂದರ್ಯಕ್ಕೆ ಶರಣಾಗಿ ಪಾರ್ಥ ಅವಳನ್ನು ಅಪಹರಿಸದೆ ಇದ್ದಿದ್ದರೆ……?! *ದ್ರೌಪದಿ ಸೌಂದರ್ಯಕ್ಕೆ ಮನಸೋತ ಅನೇಕ ರಾಜಕುಮಾರರು ಸ್ವಯಂವರದಲ್ಲಿ ಮುಖಭಂಗ ಆಗದೆ ಇದ್ದಿದ್ದರೆ…..?!
*ದ್ರೌಪದಿ ಸೌಂದರ್ಯಕುಹಕದ ನಗೆಪಾಟಲಿಗೆ ಎದುರಾಗಿ ಸುಯೋಧನ ಪಂದ್ಯ ಗೆದ್ದ ನೆಪದಲ್ಲಿ ಅವಳನ್ನು ತೊಡೆಮೇಲೆ ಕೂರುವಂತೆ ಕರೆಯದೆ ಇದ್ದಿದ್ದರೆ…..?! *ಬಲಭೀಮನ ದೇಹಸೌಂದರ್ಯಕ್ಕೆ ಹಿಡಂಭಿಯು ಶರಣಾಗಿ ಘಟೋತ್ಕಚ ಜನಿಸದೇಇದ್ದಿದ್ದರೆ…..?! *ಸೈರಂಧ್ರಿ ಸೌಂದರ್ಯಕ್ಕೆ ಹುಚ್ಚಾದ ಕೀಚಕ ಅವಳನ್ನು ಮೋಹಿಸಿ ಏಕಾಂತಕ್ಕೆ ಕರೆಯದೆ ಇದ್ದಿದ್ದರೆ….?! ಇನ್ನೂ ಮುಂತಾದ ನೂರಾರು ಸೌಂದರ್ಯ ಕಾರಣದಿಂದ ಜರುಗಿದ ಇತಿಹಾಸ
ಜಗತ್ತಿನಲ್ಲಿ ಹಲವು ಘಟನೆಗಳು ನಡೆದು ಹೋಗಿವೆ.. ಹೆಲೆನ್ ಆಫ್ ಟ್ರಾಯ್ ಮತ್ತು ರಾಜಕುಮಾರ ಪ್ಯಾರಿಸ್ ಇದೊಂದು ಇತಿಹಾಸದ ಕಥೆ.. ಆ ಕಾಲಕ್ಕೆ ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಬೃಹತ್ ಸೇನಾಶಕ್ತಿಯುಳ್ಳ 2 ಮಹಾಸಾಮ್ರಾಜ್ಯದ ಮಹಾನ್ ಚಕ್ರಾಧಿಪತ್ಯಗಳು ಸರ್ವನಾಶವಾಗಿ ಎಂಭತ್ತು ಲಕ್ಷಕ್ಕೂ ಅಧಿಕಸಂಖ್ಯೆ ಸೇನೆಯು ಪತನವಾಗಲು ಪ್ರಮುಖ ಕಾರಣವೇ ಟ್ರಾಯ್ ನ ಅತ್ಯಂತ ಸೌಂದರ್ಯವತಿ ಹೆಲೆನ್..?! ಅದು ಜಗತ್ತಿನ ಏಕಮೇವ ಕರಾಟೆ ಛಾಂಪಿಯನ್ ಬ್ಲೂಸ್ ಲೀ ಅತಿಸೌಂದರ್ಯವತಿ ಷಡ್ಯಂತ್ರಕ್ಕೆ ಬಲಿಯಾದ ಘಟನೆ..
1960ರ ದಶಕದಲ್ಲಿ ಸಿನಿಮಾನಟನಾಗಿ Mixed Martial Arts (MMA) ಶಿಕ್ಷಕನಾಗಿ ಹಾಗು ಕ್ರೀಡಾಸ್ಫರ್ಧಿಯಾಗಿ ಮೂರೂ ವಿಭಾಗದಲ್ಲಿ ಪ್ರಪಂಚದಾದ್ಯಂತ ಜಗದ್ ವಿಖ್ಯಾತರಾಗಿದ್ದರು. ಈ ಬಗೆಯ ಮಹಾನ್ ಫೈಟರ್-ಆಕ್ಟರ್-ಟೀಚರ್ ಬ್ಲೂಸ್ ಲೀ. ಅಂಥವರನ್ನೂ ಬಿಡದ ಶತ್ರುಗಳು ಓರ್ವ ಸೌಂದರ್ಯವತಿಯೊಬ್ಬಳ ಸಹಕಾರ ಸಹಾಯದಿಂದ ಆ ಕಾಲಕ್ಕೆ ಜಗತ್ತಿನ ಅತ್ಯಂತ ಜನಪ್ರಿಯ ಮಹಾಶಕ್ತಿಯುತ ಕರಾಟೆ ಕುಂಗ್‌ಫ಼ು ಛಾಂಪಿಯನ್ ಹಾಲಿವುಡ್ ಸೆಲಬ್ರಿಟಿ ಕಿಂಗ್ ಬ್ಲೂಸ್ ಲೀ ಅವರನ್ನು ವಿಷಪ್ರಾಶನ, ಫುಡ್ ಪಾಯ್ಸನ್ ಷಡ್ಯಂತ್ರ ಮೂಲಕ ಹತ್ಯೆ ಮಾಡಲಾಯಿತು. 1940ರಲ್ಲಿ ಜನಿಸಿದ ಈತ ಕೇವಲ 32ನೇ ವಯಸ್ಸಿಗೇ Cerebral edema ಖಾಯಿಲೆಯಿಂದ 1973ರಲ್ಲಿ ವಿಧಿವಶರಾದರು… ನೀತಿಪಾಠವೇನು ಗೊತ್ತಾ?.. ಸೌಂದರ್ಯವನ್ನು ಸದುಪಯೋಗ ಪಡಿಸಿಕೊಂಡಾಗ ಪೂರಕ ಆಗುತ್ತದೆ. ಇದನ್ನು ದುರುಪಯೋಗ ಪಡಿಸಿಕೊಂಡಾಗ ಮಾತ್ರ ಮಾರಕ ಆಗುತ್ತದೆ..
ಇದನ್ನೂ ಓದಿ: ಸೌಂದರ್ಯ ಒಲ್ಲದ ಮೂರ್ಖ ಯಾರು? ಈ ಪ್ರಶ್ನೆಗೆ ಉತ್ತರ ಬೇಕಾದರೆ.. ಇಲ್ಲಿದೆ ತಪ್ಪದೆ ಓದಿ..