ArticlesLatest

ನದಿಯಾಗಿ ಹರಿದ ಕಾವೇರಿ ಕೊಡಗಿನ ಗುಹ್ಯದಲ್ಲಿ ನಿಂತಿದ್ದೇಕೆ? ಇಲ್ಲಿರುವ ಅಗಸ್ತ್ಯ ದೇಗುಲ ನಿರ್ಮಾಣವಾಗಿದ್ದು ಹೇಗೆ?

ತಲಕಾವೇರಿಯ ಬ್ರಹ್ಮಕುಂಡಿಕೆಯಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲದಲ್ಲಿ ತನ್ನ ಸ್ವರೂಪ ಪ್ರದರ್ಶಿಸಿ ಬಳಿಕ ಕನ್ನಿಕೆ ಸುಜ್ಯೋತಿಯೊಡನೆ ಹರಿದು ಮುಂದೆ ಸಾಗಿದ ಕಾವೇರಿಯನ್ನು ಹಿಂಬಾಲಿಸಿಕೊಂಡು ಪತಿ ಅಗಸ್ತ್ಯ ಮುನಿಗಳು ಓಡೋಡಿ ಬಂದು ನಿಲ್ಲುವಂತೆ ಭಿನ್ನವಿಸಿಕೊಂಡರೂ ಎಲ್ಲಿಯೂ ನಿಲ್ಲದ ಕಾವೇರಿ ಕೊಡಗಿನ ಸಿದ್ದಾಪುರ ಬಳಿಯ ಗುಹ್ಯ ಎಂಬಲ್ಲಿ ಸಪ್ತಮಹರ್ಷಿಗಳ ಕೋರಿಕೆ ಮೇಲೆ ನಿಲ್ಲುತ್ತಾಳೆ.. ಆದರೆ ಮುಂದೇನಾಯಿತು?

ಕಾವೇರಿ ನದಿ ಹರಿದ ಸ್ಥಳಗಳಲ್ಲಿ ಹತ್ತು ಹಲವು ಪವಿತ್ರ ಕ್ಷೇತ್ರಗಳಿವೆ, ದೇಗುಲಗಳಿವೆ. ಈ ಎಲ್ಲ ದೇಗುಲಗಳಿಗೂ ಪೌರಾಣಿಕ ಮತ್ತು ಐತಿಹಾಸಿಕ ಕಥೆಗಳಿವೆ. ಕೊಡಗಿನಿಂದ ಹರಿದು ಮೈಸೂರು ಹಾಸನದ ಮೂಲಕ ಮಂಡ್ಯ, ರಾಮನಗರ, ಚಾಮರಾಜನಗರದ ಮೂಲಕ ತಮಿಳುನಾಡು ಪ್ರವೇಶಿಸಿ ಮುಂದೆ ಸಮುದ್ರ ಸೇರುವ ತನಕವೂ ಕಾವೇರಿ ಹತ್ತು ಹಲವು ವಿಶೇಷತೆಗಳ ಮೂಲಕ ಗಮನಸೆಳೆಯುತ್ತಾಳೆ. ಅದರಲ್ಲೂ ಕೊಡಗಿನಲ್ಲಿ ಕೆಲವೇ ಕೆಲವು ಕಿಲೋ ಮೀಟರ್ ಗಳಷ್ಟು ದೂರದಲ್ಲಿ ಹರಿದರೂ ಇಲ್ಲಿ ಪವಿತ್ರ ಕ್ಷೇತ್ರಗಳನ್ನು ಸೃಷ್ಟಿ ಮಾಡಿದ್ದು ಅದರಲ್ಲಿ  ಕೊಡಗಿನ ಸಿದ್ದಾಪುರದಿಂದ ಐದು ಕಿ.ಮೀ ದೂರದಲ್ಲಿರುವ ಗುಹ್ಯ ಅಗಸ್ತ್ಯ ದೇಗುಲವೂ ಒಂದಾಗಿದೆ.

ಇದನ್ನೂ ಓದಿ: ಲೋಪಾಮುದ್ರೆ ಕಾವೇರಿಯಾಗಿದ್ದು ಹೇಗೆ? ನದಿಯಾಗಿ ಹರಿದಿದ್ದರ ಹಿಂದಿನ ಕಥೆ ನಿಮಗೆ ಗೊತ್ತಾ?

ಸಿದ್ದಾಪುರದಿಂದ ವೀರಾಜಪೇಟೆ ಮಾರ್ಗವಾಗಿ ಎರಡು ಕಿ.ಮೀ ಕ್ರಮಿಸಿ ಇಲ್ಲಿಂದ ಬಲ ಭಾಗಕ್ಕಿರುವ ರಸ್ತೆಯಲ್ಲಿ ಮೂರು ಕಿ.ಮೀ ಸಾಗಿದರೆ ಗುಹ್ಯ ಗ್ರಾಮವನ್ನು ತಲುಪಬಹುದಾಗಿದೆ. ಕಾವೇರಿ ನದಿ ತಟದಲ್ಲಿದ್ದು, ಅಗಸ್ತ್ಯೇಶ್ವರ ದೇಗುಲವನ್ನು ಹೊಂದಿರುವುದರಿಂದ ಗುಹ್ಯ ಇವತ್ತು ಪವಿತ್ರ ತಾಣವಾಗಿ ಗಮನಸೆಳೆಯುತ್ತದೆ. ಮೊದಲಿಗೆ ಗುಹ್ಯದ ಬಗ್ಗೆ ಹೇಳಲೇ ಬೇಕಾಗುತ್ತದೆ.  ಈ ಸ್ಥಳಕ್ಕೆ ಗುಹ್ಯ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಇಲ್ಲಿನವರು ಹಲವಾರು ಕಾರಣಗಳನ್ನು ನೀಡುತ್ತಾರೆ. ಗುಹ್ಯ ಎಂಬ ಪದಕ್ಕೆ ಗುಟ್ಟು ಎಂಬ ಅರ್ಥವಿರುವುದರಿಂದ ವಿಷ್ಣು ಗುಟ್ಟಾಗಿ ಅಡಗಿದ ಜಾಗ ಗುಹ್ಯವಾಯಿತೆಂದೂ ಕೆಲವರು ಅಭಿಪ್ರಾಯ ಪಟ್ಟರೆ, ಇನ್ನು ಕೆಲವರು ಹಿಂದಿನ ಕಾಲದಲ್ಲಿ ಇಲ್ಲಿನ ಗುಹೆಗಳಲ್ಲಿ ಋಷಿಗಳು ತಪಸ್ಸು ಮಾಡಿದ ಕಾರಣ ಈ ಹೆಸರು ಬಂದಿತೆನ್ನುತ್ತಾರೆ.

ಮತ್ತೆ ಕೆಲವರ ಅಭಿಪ್ರಾಯದ ಪ್ರಕಾರ ಕಾವೇರಿ ನದಿಯ ಆಳದಲ್ಲಿ ಹಿಂದಿನ ಕಾಲದ ದೇವಾಲಯವೊಂದು ಮುಳುಗಿ ಹೋಗಿದ್ದು, ಆ ಗುಟ್ಟು ಇನ್ನೂ ಯಾರಿಗೂ ತಿಳಿದಿಲ್ಲವೆಂದು, ಹಾಗಾಗಿ ’ಗುಹ್ಯ’ ಹೆಸರು ಬಂದಿತೆನ್ನುತ್ತಾರೆ. ಅದೇನೆ ಇರಲಿ ಇಲ್ಲಿನ ಅಗಸ್ತ್ಯೇಶ್ವರ ದೇಗುಲ ಮಾತ್ರ ಸುಂದರವಾಗಿರುವುದಲ್ಲದೆ ಹಲವಷ್ಟು ವೈಶಿಷ್ಯಗಳನ್ನೊಳಗೊಂಡು ಭಕ್ತಾದಿಗಳನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಅಗಸ್ತ್ಯೇಶ್ವರ ದೇಗುಲದ ಬಗ್ಗೆ ಹೇಳುವುದಾದರೆ  ಬೇರೆಲ್ಲ ದೇಗುಲಗಳಿಗಿಂತ ಇದು ಭಿನ್ನವಾಗಿದೆ ಅಷ್ಟೇ ಅಲ್ಲದೆ ಆಕರ್ಷಕವಾಗಿದೆ. ದೇವಾಲಯದ ಗರ್ಭ ಗುಡಿಯು ವೃತ್ತಾಕಾರದಲ್ಲಿದೆ. ಇಲ್ಲಿರುವ ಈಶ್ವರ ಲಿಂಗವು ಅಗಸ್ತ್ಯ ಮಹರ್ಷಿಯು ಪ್ರತಿಷ್ಠಾಪಿಸಿದ್ದು ಎನ್ನಲಾಗಿದ್ದು, ಇದು ಬಹಳ ಆಳದಲ್ಲಿದೆ. ಗರ್ಭ ಗುಡಿಯು ಎರಡು ಅಂಕಣದಲ್ಲಿ ರಚಿತವಾಗಿದೆ.

ಇದನ್ನೂ ಓದಿ: ದಕ್ಕಿಣ ಕೊಡಗಿನ ಹಾತೂರಿನ ವನಭದ್ರಕಾಳೇಶ್ವರಿ  ಇಲ್ಲಿನ  ವಿಶೇಷತೆಗಳೇನು?

ಅಗಸ್ತ್ಯೆಶ್ವರ ದೇವಾಲಯವು ಹೇಗೆ ನಿರ್ಮಾಣವಾಯಿತು ಎಂಬುವುದಕ್ಕೊಂದು ಪುರಾಣ ಕಥೆಯಿದೆ. ತನ್ನನ್ನು ಏಕಾಂಗಿಯಾಗಿ ಬಿಟ್ಟು ಸ್ನಾನಕ್ಕೆ ಹೋದ ಪತಿ ಅಗಸ್ತ್ಯಮುನಿಗಳು ಹಿಂತಿರುಗುವ ಮುನ್ನವೇ ನೀರಾಗಿ ಹರಿದ  ಕಾವೇರಿ, ಭಾಗಮಂಡಲ ಚೇರಂಬಾಣೆ, ಹರಿಶ್ಚಂದ್ರ, ಬಲಮುರಿ, ಬೇತ್ರ್ರಿಯ ಮೂಲಕ ರಭಸದಿಂದ ಹರಿಯುತ್ತಾಳೆ. ಈ ಸಂದರ್ಭ ಆಕೆಯ ಹಿಂದೆಯೇ ಪತಿ ಅಗಸ್ತ್ಯ ಮಹರ್ಷಿಯೂ ಧಾವಿಸುತ್ತಾರೆ. ಅಲ್ಲದೆ ಆಕೆಯನ್ನು ನಿಲ್ಲುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಅದ್ಯಾವುದೂ ಸಾಧ್ಯವಾಗದೆ ಹೋದಾಗ ಮರಳಿನ ಲಿಂಗ ಮಾಡಿಯೂ ಪೂಜಿಸುತ್ತಾರೆ. ಆದರೆ, ಇದ್ಯಾವುದಕ್ಕೂ ಮಣಿಯದ ಕಾವೇರಿ ಮುಂದಕ್ಕೆ ಹರಿಯ ತೊಡಗುತ್ತಾಳೆ. ಗುಹ್ಯಕ್ಕೆ ಬರುತ್ತಿದ್ದಂತೆಯೇ ಅಗಸ್ತ್ಯ ಮಹರ್ಷಿಯು ಕಡೆಯ ಪ್ರಯತ್ನ ಎಂಬಂತೆ ಸಪ್ತ ಮಹರ್ಷಿಗಳ ಮೊರೆ ಹೋಗುತ್ತಾರೆ. ಪ್ರತ್ಯಕ್ಷರಾದ ಮಹರ್ಷಿಗಳು ಕಾವೇರಿಯನ್ನು ನಿಲ್ಲುವಂತೆ ಕೇಳಿಕೊಳ್ಳುತ್ತಾರೆ. ಮಹರ್ಷಿಗಳ ಕೋರಿಕೆಗೆ ಮನ್ನಣೆ ನೀಡಿ ಕಾವೇರಿಯು ನಿಲ್ಲುತ್ತಾಳೆ. ಆಕೆ ಅವತ್ತು ನಿಂತ ಸ್ಥಳವೇ ಇಂದಿನ ಗುಹ್ಯವಾಗಿದೆ. ಬಳಿಕ ಇಲ್ಲಿರುವ ಅಶ್ವತ್ಥ ಮರದ ಕೆಳಗೆ ಸಂಧಾನದ ಮಾತುಕತೆಯೂ ನಡೆಯುತ್ತದೆ.

ಆದರೆ, ಕಾವೇರಿಯು ತಾನು ಲೋಕ ಕಲ್ಯಾಣಕ್ಕೆ ಹೊರಟಿದ್ದು, ತನ್ನನ್ನು ತಡೆಯಬಾರದಾಗಿ ಕಾವೇರಿ ವಿನಂತಿಸಿಕೊಳ್ಳುತ್ತಾಳೆ. ಅಲ್ಲದೆ, ಯಾರ ಮಾತಿಗೂ ಮನ್ನಣೆ ನೀಡದೆ ಮುಂದಕ್ಕೆ ಹರಿಯುತ್ತಾಳೆ. ಇತ್ತ ನೊಂದ ಅಗಸ್ತ್ಯ ಮಹರ್ಷಿಯು ಸಂಧಾನ ನಡೆದ ಊರಿನಲ್ಲಿ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಇದೇ ಗುಹ್ಯದ ಅಗಸ್ತ್ಯೇಶ್ವರವಾಗಿದೆ. ಸಂಧಾನ ನಡೆಸಿದ ಅಶ್ವತ್ಥ ಮರವು ಈಗಲೂ ದೇವಾಲಯದ ಬಳಿ ಇರುವ ಮರವೇ ಆಗಿದೆ ಎಂಬ ನಂಬಿಕೆ ಜನರಲ್ಲಿದೆ.

ಇದನ್ನೂ ಓದಿ:  ಕಾವೇರಿಗೆ ಶಾಂತಳಾಗುವಂತೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಪೂಜೆ…. 

ಗುಹ್ಯ ಅಗಸ್ತ್ಯೇಶ್ವರ ದೇವಾಲಯದ ವಾರ್ಷಿಕ ಹಬ್ಬವು ದೀಪಾವಳಿ ಸಮಯದಲ್ಲಿ ಐದು ದಿನಗಳ ಕಾಲ ನಡೆಯುತ್ತದೆ. ಇಲ್ಲಿನ ತೀರ್ಥ ಸ್ನಾನವು ಬಹಳ ಖ್ಯಾತಿ ಪಡೆದಿದ್ದು, ದೀಪಾವಳಿ ಅಮಾವಾಸ್ಯೆಯಂದು  ಕಾವೇರಿ ನದಿಯಲ್ಲಿ ಮಿಂದರೆ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ನರಕ ಚತುರ್ದಶಿಯಂದು ಅಗಸ್ತ್ಯೇಶ್ವರನಿಗೆ ನೆರಪು ಇದ್ದು, ಅಮಾವಾಸ್ಯೆಯಂದು ನಡೆಯುವ ಜಳಕದೊಂದಿಗೆ ಉತ್ಸವವು ಪೂರ್ಣಗೊಳ್ಳುತ್ತದೆ. ಗುಹ್ಯ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲದೆ ವಿವಿಧ ಕಡೆಯಿಂದಲೂ ಭಕ್ತರು ಆಗಮಿಸುವುದನ್ನು ನಾವು ಕಾಣಬಹುದಾಗಿದೆ.

ಗುಹ್ಯದಲ್ಲಿ ಅಗಸ್ತ್ಯೇಶ್ವರ ದೇವಾಲಯವಲ್ಲದೆ ವಿಷ್ಣುಮೂರ್ತಿ ದೇವಾಲಯವೂ ಇದ್ದು, ಇದು ಅಗಸ್ತ್ಯೇಶ್ವರ ದೇವಾಲಯಕ್ಕಿಂತಲೂ ಹಿಂದಿನದು ಎಂದು ಹೇಳಲಾಗಿದೆ. ಈ ದೇವಾಲಯ ನಿರ್ಮಾಣವಾದ ಬಗ್ಗೆಯೂ ಮತ್ತೊಂದು ರೋಚಕ ಕಥೆಯಿರುವುದನ್ನು ಕಾಣಬಹುದು. ಹಿಂದೆ ದೇವತೆಗಳ ಕಾಲದಲ್ಲಿ ಲೋಕ ಪಾಲಕ ವಿಷ್ಣು ತನ್ನ ಮದುವೆಗಾಗಿ ಕುಬೇರನಲ್ಲಿ ಸಾಲ ಮಾಡಿದ್ದನಂತೆ, ಸಾಲ ಮಾಡಿದ ಹಣದಲ್ಲಿ ಬಹಳ ಅದ್ದೂರಿಯಾಗಿ ವಿಷ್ಣು ಮದುವೆಯಾಗಿದ್ದನಂತೆ, ಮದುವೆಯಾದ ಬಳಿಕ ಸಾಲ ತೀರಿಸಬೇಕಲ್ಲವೇ? ಕೊಟ್ಟ ಸಾಲವನ್ನು ಮರಳಿ ಕೊಡುವಂತೆ ಕುಬೇರನೂ ಕೇಳತೊಡಗಿದನಂತೆ.

ಇದನ್ನೂ ಓದಿ:ಚಾಮುಂಡಿಬೆಟ್ಟದಲ್ಲೀಗ ಹಿಮಮಳೆ… ನೀವೇಕೆ ಒಮ್ಮೆ ಹಿಮದ ಮಳೆಯಲ್ಲಿ ಮಿಂದೇಳಬಾರದು?

ಕುಬೇರನ ಕಾಟವನ್ನು ತಡೆಯಲಾರದ ವಿಷ್ಣು ದೇವ ಲೋಕದಿಂದ ಭೂಲೋಕದತ್ತ ಓಡಿ ಬಂದು ಗುಹ್ಯದಲ್ಲಿ ಅಡಗಿ ಕುಳಿತನಂತೆ. ಆದರೆ ಪ್ರತಿವರ್ಷವೂ ಕುಬೇರ ವಿಷ್ಣುವನ್ನು ಹುಡುಕಿಕೊಂಡು ಬರುತ್ತಿದ್ದನಂತೆ. ಈಗಲೂ ಬರುತ್ತಾನಂತೆ ಮೀನು ರೂಪದಲ್ಲಿ ಎಂದು ಜನರು ನಂಬುತ್ತಾರೆ. ಇದಕ್ಕೆ ಪೂರಕವಾಗಿ ವರ್ಷಕ್ಕೊಮ್ಮೆ ಕಾವೇರಿ ನದಿಯಲ್ಲಿ ನೀಲಿ ಮೀನೊಂದು ಕಾಣ ಸಿಗುತ್ತದೆ ಎನ್ನಲಾಗಿದೆ. ಅದು ಏನೇ ಇರಲಿ ಒಟ್ಟಾರೆಯಾಗಿ ಗುಹ್ಯವು ಆಸ್ತಿಕ, ನಾಸ್ತಿಕರೆನ್ನದೆ ಎಲ್ಲರನ್ನೂ ಕೈಬೀಸಿ ಕರೆಯುವ ಪ್ರಶಾಂತ ತಾಣವಾಗಿದೆ.  ಕಾವೇರಿ ನದಿ ತಟದ ಕ್ಷೇತ್ರ ನಿಸರ್ಗ ಚೆಲುವಿನಿಂದ ಎಲ್ಲರನ್ನು ಸೆಳೆಯುವ ತಾಣವೂ ಹೌದು.

B M Lavakumar

admin
the authoradmin

Leave a Reply