District

ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ…

ತಲಕಾವೇರಿ: ಭಕ್ತರ ಜೈ ಜೈ ಮಾತಾ ಕಾವೇರಿ ಮಾತಾ  ಘೋಷ ವಾಕ್ಯದ ನಡುವೆ, ಅರ್ಚಕ ವೃಂದದವರ ವೇದ ಪಠಣ, ಮಂಗಳಾರತಿ ನಡೆಯುತ್ತಿದ್ದಂತೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ಮಧ್ಯಾಹ್ನ 1.44ಕ್ಕೆ ಭಕ್ತರಿಗೆ ದರ್ಶನ ನೀಡಿದಳು. 

ಬೆಳಗ್ಗೆ 11:30 ಗಂಟೆಯಿಂದಲೇ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಅವರ ನೇತೃತ್ವದಲ್ಲಿ ಸಹಸ್ರ ನಾಮಾರ್ಚನೆ, ಪುಷ್ಪಾರ್ಚನೆ ಮತ್ತು ಕುಂಕುಮಾರ್ಚನೆ ನೆರವೇರಿಸಿದರು. ಮತ್ತೊಂದೆಡೆ ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಭಾಗಮಂಡಲದಿಂದ ೮8 ಕಿಮೀ ದೂರದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ರು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಕಾವೇರಿ ಮಾತೆಯ ನೆನೆಯುತ್ತಾ ತಲಕಾವೇರಿ ತಲುಪಿದರು. ಕೊಡಗು ಅಷ್ಟೇ ಅಲ್ಲದೇ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸಿದ್ದು ಕಂಡು ಬಂದಿತು.

ಈ ಸುಂದರ ಕ್ಷಣಕ್ಕೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಚ್.ಅರುಣ್ ಮಾಚಯ್ಯ, ಭಾಗಮಂಡಲ ಗ್ರಾ.ಪಂ.ಅಧ್ಯಕ್ಷರಾದ ಕಾಳನ ರವಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ತಾಲ್ಲೂಕು ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್, ಕೊಡವ ಅರೆ ಭಾಷೆ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು  ಸೇರಿದಂತೆ ಇತರ ಗಣ್ಯರು  ಸೇರಿದಂತೆ ಅಪಾರ ಭಕ್ತವೃಂದ ಸಾಕ್ಷಿಯಾಯಿತು.

ಇದನ್ನೂ ಓದಿ: ನದಿಯಾಗಿ ಹರಿದ ಕಾವೇರಿ ಕೊಡಗಿನ ಗುಹ್ಯದಲ್ಲಿ ನಿಂತಿದ್ದೇಕೆ?

ಕೊಡಗು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಕೊಡಗು   ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಶೀಲ್ದಾರ್ ಶ್ರೀಧರ, ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ.ಚಂದ್ರಶೇಖರ್, ಭಗಂಡೇಶ್ವರ ದೇವಾಲಯದ ತಕ್ಕ ಮುಖ್ಯಸ್ಥರಾದ ಬಳ್ಳಡ್ಕ ಸಿ.ಅಪ್ಪಾಜಿ, ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ.ಯು. ಮೋಟಯ್ಯ ಇತರರು ಈ ಸಂದರ್ಭ ಉಪಸ್ಥಿತರಿದ್ದರು. ಭಕ್ತಾದಿಗಳ ನೂಕು ನುಗ್ಗಲನ್ನು ತಡೆಗಟ್ಟಲು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಕೊಡಗು ಏಕೀಕರಣ ರಂಗದ ವತಿಯಿಂದ ಬೆಳಗಿಂದಲೇ ಆಹಾರ ವ್ಯವಸ್ಥೆ ಸಜ್ಜುಗೊಳಿಸಲಾಗಿತ್ತು. ಈ ಬಾರಿ ಮಧ್ಯಾಹ್ನದ ವೇಳೆ ತೀರ್ಥೋದ್ಭವಾದರಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಭಕ್ತಾದಿಗಳು ಮಾತೆ ಕಾವೇರಿ ದರ್ಶನವನ್ನು ಪಡೆದರು. ಭಾಗಮಂಡಲದಿಂದ ಅಸಂಖ್ಯ ಕೊಡವರು ತಮ್ಮ ಸಾಂಪ್ರದಾಯಿಕ ಉಡುಗೆಯೊಂದಿಗೆ ಪಾದಯಾತ್ರೆಯ ಮೂಲಕ 9 ಕಿ.ಮೀ ನಷ್ಟು ಕ್ರಮಿಸಿ ತಲಕಾವೇರಿಗೆ ಆಗಮಿಸಿದ್ದರು. ಶಾಸಕ ಕೆಎಸ್ ಪೊನ್ನಣ್ಣ ಅವರೊಂದಿಗೆ ಹೆಜ್ಜೆ ಹಾಕಿದರು. ಸಂಸದ ಒಡೆಯರ್ ರವರು ರಾಜಪೋಷಾಕಿನಲ್ಲಿ  ಭಕ್ತರೊಂದಿಗೆ ಬರಿ ಕಾಲಿನಲ್ಲಿ  ಪಾದಯಾತ್ರೆ ಮೂಲಕ ತಲಕಾವೇರಿಗೆ ಆಗಮಿಸಿದರು.

ಇದನ್ನೂ ಓದಿ: ಲೋಪಾಮುದ್ರೆ ಕಾವೇರಿಯಾಗಿದ್ದು ಹೇಗೆ? ನದಿಯಾಗಿ ಹರಿದಿದ್ದರ ಹಿಂದಿನ ಕಥೆ ನಿಮಗೆ ಗೊತ್ತಾ?

ಬೆಳಗಿನಿಂದಲೇ, ಬಾಳೆಲೆಯ ವತ್ಸಲ ನಾರಾಯಣರವರ  ಕಾವೇರಿ ಕಲಾತಂಡದಿಂದ ಸುಗಮ ಸಂಗೀತ ಹಾಗೂ ಭಕ್ತಿಗೀತೆಗಳ ಕಾರ್ಯಕ್ರಮ, ಕೊಡವ ಸಾಹಿತ್ಯ ಅಕಾಡೆಮಿ, ಅರಭಾಷೆ ಸಾಹಿತ್ಯ ಅಕಾಡೆಮಿ, ನಿರ್ಮಲ ಬೊಪಣ್ಣ ತಂಡದ ವತಿಯಿಂದ ಭಕ್ತಿ ಗೀತೆಗಳ ಕಾರ್ಯಕ್ರಮ ಜರಗಿತು. ಈ ಬಾರಿ ಪ್ಲಾಸ್ಟಿಕ್ ಬಾಟಲ್ ಹಾಗೂ ಬಿಂದಿಗೆಯಲ್ಲಿ ಭಕ್ತಾದಿಗಳಿಗೆ ತೀರ್ಥವನ್ನು ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿಲ್ಲ. ಸ್ಟೀಲ್ ಹಾಗೂ ತಾಮ್ರದ ಬಿಂದಿಗೆಯಲ್ಲಿ ತೀರ್ಥವನ್ನು ತುಂಬಿಸಿಕೊಂಡು ಹೋಗುವ ದೃಶ್ಯ ಕಂಡು ಬಂತು.

ಭಾಗಮಂಡಲದಿಂದ  ಕಾವೇರಿ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಸಾಗಿದ ಸಂಸದ ಯದುವೀರ್ ಅವರಿಗೆ ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಪ್ರಮುಖರಾದ ಮಹೇಶ್ ಜೈನಿ, ಹೊಸೂರು ಸತೀಶ್ ಕುಮಾರ್, ತಳೂರು ಕಿಶೋರ್ ಕುಮಾರ್, ಯಮುನಾ ಚಂಗಪ್ಪ, ಸೇರಿದಂತೆ  ಪ್ರಮುಖರು ಸಾಥ್ ನೀಡಿದರು. ತಲಕಾವೇರಿಯಿಂದ ಕೊಂಡೊಯ್ದ ತೀರ್ಥವನ್ನು  ಐನ್ ಮನೆಗಳಲ್ಲಿಟ್ಟು ಕಣಿಪೂಜೆ ನೆರವೇರಿಸಲಾಗುತ್ತದೆ. ಇದರ ಜತೆಗೆ ಗದ್ದೆಯಲ್ಲಿ ಬೊತ್ತು ಚುಚ್ಚಿ ಪೂಜೆ ಸಲ್ಲಿಸುವ ಕಾರ್ಯವೂ ನಡೆಯುತ್ತದೆ.

 

admin
the authoradmin

Leave a Reply