Crime

ಬಾಂಗ್ಲಾ ಹುಡ್ಗೀರ್ ನ ಗಡಿದಾಟಿಸಿ ಭಾರತದಲ್ಲಿ ಮಾರಾಟ ಮಾಡುತ್ತಿದ್ದ ಗುರುಮಾ ಜ್ಯೋತಿ ಅರೆಸ್ಟ್

ಬಾಂಗ್ಲಾದೇಶದಿಂದ ಬಡ ಹೆಣ್ಣುಮಕ್ಕಳನ್ನು ಅಕ್ರಮವಾಗಿ ಗಡಿದಾಟಿಸಿ ಭಾರತಕ್ಕೆ ಕರೆತಂದು ವೇಶ್ಯಾವಾಟಿಕೆಗೆ ನೂಕುತ್ತಿದ್ದ ಜಾಲವೊಂದು ಇದೀಗ ಬೆಳಕಿಗೆ ಬಂದಿದ್ದು, ಈ ದಂಧೆಯ ಕಿಂಗ್ ಪಿನ್  ʻಗುರುಮಾʼ  ಎಂದೇ ಕರೆಯಲ್ಪಡುವ ತೃತೀಯಲಿಂಗಿ ಬಾಬು ಅಯಾನ್ ಖಾನ್ ಅಲಿಯಾಸ್ ಜ್ಯೋತಿ ಎಂಬಾಕೆಯನ್ನು ಬಂಧಿಸಲಾಗಿದೆ. ಈಕೆಯ ಬಂಧನದ ನಂತರ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದ  ವೇಶ್ಯಾವಾಟಿಕೆಯ ರಹಸ್ಯವೊಂದು ಬಯಲಾದಂತಾಗಿದೆ. ಅಷ್ಟೇ ಅಲ್ಲದೆ ಬಾಂಗ್ಲಾದೇಶದ ಹೆಣ್ಣುಮಕ್ಕಳು ಮತ್ತು ತೃತೀಯಲಿಂಗಿಗಳು ಭಾರತವನ್ನು ಹೇಗೆ ಪ್ರವೇಶಿಸುತ್ತಾರೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಂತಾಗಿದೆ.

ಭಾರತದಲ್ಲಿ ನಡೆಯುವ ವೇಶ್ಯಾವಾಟಿಕೆಯಲ್ಲಿ ಬಾಂಗ್ಲಾ ಹೆಣ್ಣು ಮಕ್ಕಳಿರುವುದು ಇವತ್ತು ನಿನ್ನೆಯದಲ್ಲ. ಈ ಜಾಲ ಇಡೀ ರಾಷ್ಟ್ರದಲ್ಲಿ ಹರಡಿದ್ದು, ದಿಲ್ಲಿಯಿಂದ ಹಳ್ಳಿವರೆಗೂ ವ್ಯಾಪಿಸಿದೆ. ಇವತ್ತು ಲಾಡ್ಜ್, ರೆಸಾರ್ಟ್, ಮನೆಗಳ ಮೇಲೆ ದಾಳಿ ನಡೆದಾಗಲೆಲ್ಲ ಬಾಂಗ್ಲಾ ಹುಡ್ಗೀರು ಸಿಕ್ಕಿ ಬೀಳುತ್ತಾರೆ. ಆದರೆ ಇವರೆಲ್ಲರೂ ಹೇಗೆ ಇಲ್ಲಿಗೆ ಬರುತ್ತಿದ್ದಾರೆ ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ. ಆದರೀಗ ಗುರುಮಾಳನ್ನು ಬಂಧಿಸಿದ ಬಳಿಕ ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿದೆ.

ಹೆಣ್ಣು ಮಕ್ಕಳನ್ನು ಬಾಂಗ್ಲಾದಿಂದ ಭಾರತಕ್ಕೆ ಕರೆ ತಂದು ಅವರನ್ನು  ಬಳಿಕ  ವೇಶ್ಯಾವಾಟಿಕೆಗೆ ಮಾರಾಟ ಮಾಡುತ್ತಿರುವುದು ಹಿಂದಿನಿಂದಲೂ ನಡೆದು ಬಂದಿದೆ. ಹಣಕೊಟ್ಟು ಖರೀದಿಸುವ ದಂಧೆಕೋರರು ಬಳಿಕ ಅವರನ್ನಿಟ್ಟುಕೊಂಡು ದಂಧೆ ನಡೆಸುತ್ತಾರೆ. ಬಹಳಷ್ಟು ಹೆಣ್ಣುಮಕ್ಕಳು ಲಾಡ್ಜ್ ಗಳಲ್ಲಿ ಬಂಧಿಯಾಗಿ ಗಿರಾಕಿಗಳಿಗೆ ಸೇವೆ ಸಲ್ಲಿಸುವುದರಲ್ಲಿಯೇ ಬದುಕು ಕಳೆದು ಹೋಗುತ್ತಿದೆ. ಇದೊಂದು ಅಮಾನವೀಯ ಕೃತ್ಯವಾಗಿದ್ದು, ಇದನ್ನು ತಡೆಯುವುದು ಕಷ್ಟವಾಗಿದೆ.

ಇವತ್ತು ಲಾಡ್ಜ್, ರೆಸಾರ್ಟ್, ಬಾಡಿ ಮಸಾಜ್, ಸ್ಪಾಸೆಂಟರ್, ಮಾಂಸದ ಮನೆ ಹೀಗೆ ಹಲವು ಸ್ಥಳಗಳಲ್ಲಿ ಬಾಂಗ್ಲಾದ ಯುವತಿಯರೇ ಹೆಚ್ಚು ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಈ ಜಾಲದಲ್ಲಿ ಸಿಕ್ಕಿ ಬೀಳುವ ಹೆಣ್ಣು ಮಕ್ಕಳು ಆ ಪಾಪ ಕೂಪದಿಂದ ಹೊರಬರಲಾಗದೆ, ಮದ್ಯಪಾನ, ಧೂಮಪಾನ, ಡ್ರಗ್ಸ್ ಮುಂತಾದ ಚಟಗಳಿಗೆ ಬಲಿಯಾಗಿ ಬದುಕನ್ನೇ ಕಳೆದುಕೊಳ್ಳುತ್ತಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ವೇಶ್ಯಾವಾಟಿಕೆ ಹೊರತು ಪಡಿಸಿ ಬೇರೆ ಯಾವುದನ್ನೂ ಮಾಡಲಾರದ ಪರಿಸ್ಥಿತಿಗೆ ಆ ಹೆಣ್ಣುಮಕ್ಕಳು ಬಂದು ತಲುಪಿ ಬಿಡುತ್ತಾರೆ.

ಲೈಫ್ ಸ್ಟೈಲ್ ಗೆ ಸಂಬಂಧಿಸಿದ ಹೆಚ್ಚಿನ ಲೇಖನಗಳನ್ನು  ನೀವು ಇದರ ಮೇಲೆ ಕ್ಲಿಕ್ ಮಾಡಿ ಓದಬಹುದು

ಇದರಿಂದ ತಮ್ಮ ಒತ್ತಡ ತಣಿಯಲು, ಮಾನಸಿಕ ನೆಮ್ಮದಿಗಾಗಿ ಮದ್ಯಪಾನ, ಡ್ರಗ್ಸ್ ಗೆ ಮೊರೆ ಹೋಗಿ ಬಿಡುತ್ತಾರೆ. ಕೆಲವೊಮ್ಮೆ ಇವರು ದಂಧೆಯಲ್ಲಿ ತೊಡಗಿದಾಗ ಸಿಕ್ಕಿಬಿದ್ದರೂ ಫೈನ್ ಕಟ್ಟಿ ಅವರನ್ನು ಬಿಡಿಸಿಕೊಂಡು ಹೋಗಲೂ ವ್ಯವಸ್ಥೆಗಳಿದ್ದು, ಮತ್ತೆ ಅವರಿಂದ ಅದೇ ದಂಧೆ ಮಾಡಿಸುತ್ತಾರೆ.  ಇದರಾಚೆಗೆ ಕೆಲವು ಹೆಣ್ಣುಮಕ್ಕಳಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ಅವರಿಗೆ ಹೋಟೆಲ್, ರೆಸಾರ್ಟ್‌ಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು ಬಳಿಕ ವಿಟಪುರುಷರ ಹಾಸಿಗೆಗೆ ಕಳುಹಿಸುವ ಪ್ರಕರಣಗಳು ಕೂಡ ನಡೆಯುತ್ತದೆ. ಇಲ್ಲಿ ಅವರು ಮೊದಲೇ ಮಾರಾಟವಾಗಿರುವ ವಿಚಾರಗಳು ಗೊತ್ತೇ ಆಗುವುದಿಲ್ಲ. ಅವರು ವೇಶ್ಯಾವಾಟಿಕೆ ದಂಧೆಕೋರರನ್ನು ತಲುಪುವ ಹೊತ್ತಿಗೆ ಹಲವು ಮಂದಿ ಇವರಿಂದ ಕಮೀಷನ್ ಪಡೆದುಕೊಂಡಿರುತ್ತಾರೆ.

ಇವತ್ತು ಬಾಂಗ್ಲಾದಿಂದ ಭಾರತಕ್ಕೆ ಹೆಣ್ಣು ಮಕ್ಕಳು, ಗಂಡು ಮಕ್ಕಳು ಎಲ್ಲರೂ ಸುಲಭವಾಗಿ ನುಸುಳಿ ಬರುತ್ತಿದ್ದಾರೆ. ಇವರು ಪಶ್ಚಿಮ ಬಂಗಾಳದ ಮೂಲಕವೇ ಬರುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಜಾಲವನ್ನು ಹತ್ತು ಹಲವು ಮಂದಿ ನಡೆಸುತ್ತಿದ್ದು, ಇದೀಗ ಗುರುಮಾ ಬಾಬು ಅಯಾನ್ ಖಾನ್ ಅಲಿಯಾಸ್ ಜ್ಯೋತಿ ಎಂಬ ತೃತೀಯ ಲಿಂಗಿ ಪೊಲೀಸರಿಗೆ ಸಿಕ್ಕಿ ಬೀಳುವ ಮೂಲಕ ಈ ದಂಧೆಯ ಹಿಂದಿನ ಕರಾಳತೆ ಬೆಳಕಿಗೆ ಬಂದಿದೆ. ಈಕೆ  ಬಾಂಗ್ಲಾದವಳಾಗಿದ್ದು, ಭಾರತದಲ್ಲಿ ಕಳೆದ ಮೂರು ದಶಕಗಳಿಂದ ಅಕ್ರಮವಾಗಿ ವಾಸ ಮಾಡಿಕೊಂಡಿರುವುದರಲ್ಲದೆ, ಗುರುಮಾ ಎಂದೇ ಕರೆಯಿಸಿಕೊಳ್ಳುತ್ತಿದ್ದ ಈಕೆ ತಾನು ಭಾರತೀಯ ಪ್ರಜೆ ಎಂದು ಹೇಳಿಕೊಂಡು ಅದಕ್ಕಾಗಿ ನಕಲಿ ಪ್ರಮಾಣ ಪತ್ರ, ಪ್ಯಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ಗಳನ್ನ ನಕಲು ಮಾಡಿಕೊಂಡು ಆಧ್ಯಾತ್ಮಿಕ ನಾಯಕಿಯಂತೆ ಫೋಸ್ ಕೊಡುತ್ತಿದ್ದಳು. ಆದರೆ ಈಕೆಯ ವ್ಯವಹಾರ ಮಾತ್ರ ಮಾನವ ಸಾಗಾಣಿಕೆಯಾಗಿತ್ತು.

ಈಕೆಗೆ ಸುಮಾರು ಮುನ್ನೂರಕ್ಕೂ ಹೆಚ್ಚು ಅನುಯಾಯಿಗಳಿದ್ದರು ಎನ್ನಲಾಗಿದೆ. ಮೇಲ್ನೋಟಕ್ಕೆ ಧರ್ಮ ದೇವರು ಎನ್ನುತ್ತಿದ್ದ ಗುರುಮಾ ಧ್ಯಾನ, ಭಜನೆ ಆಚೆಗೆ ಮಾಡುತ್ತಿದ್ದದ್ದು ಮಾತ್ರ ಮಾಂಸ ದಂಧೆಯಾಗಿತ್ತು. ಈಕೆ ಇದುವರೆಗೆ ಅದೆಷ್ಟು ಹೆಣ್ಣು ಮಕ್ಕಳಿಗೆ ನರಕ ತೋರಿಸಿದ್ದಾಳೋ ಗೊತ್ತಿಲ್ಲ. ಆದರೆ ಪಾಪದ ಕೊಡ ಎನ್ನುವುದು ಇದ್ದೇ ಇದೆಯಲ್ಲ. ಹೀಗಾಗಿ ಅದು ತುಂಬಿದ್ದರಿಂದ ಸಿಕ್ಕಿ ಬಿದ್ದಿದ್ದಾಳೆ. ಮೇಲ್ನೋಟಕ್ಕೆ ಈಕೆ ಸುಮಾರು ಇನ್ನೂರಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಬಾಂಗ್ಲಾದಿಂದ ಕರೆತಂದು ಭಾರತದಲ್ಲಿ ಮಾರಾಟ ಮಾಡಿದ್ದಾಳೆ ಎನ್ನಲಾಗಿದೆ.

ಇನ್ನು ಗುರುಮಾಳ  ದಂಧೆಯ ಜಾಲವೂ ಗಟ್ಟಿಯಾಗಿ ಬೇರೂರಿದ್ದು, ಈಕೆ ಗೋವಂಡಿಯ ರಫೀಕ್ ನಗರದಲ್ಲಿ 20ಕ್ಕೂ ಹೆಚ್ಚು ಮನೆಗಳನ್ನು ಹೊಂದಿದ್ದಳು. ಇವಳ ಅನುಯಾಯಿಗಳು ಎಂದು  ಹೇಳುತ್ತಿದ್ದವರು ಮಾಡುತ್ತಿದ್ದ ಕಿರಿಕ್ ಮತ್ತು ಅನೈತಿಕ ವ್ಯವಹಾರಗಳು, ಇಷ್ಟೇ ಅಲ್ಲದೆ  ಮುಂಬೈನ ಶಿವಾಜಿ ನಗರ, ನಾರ್ಪೋಲಿ, ದೇವನಾರ್, ಟ್ರೊಂಬೇ ಮತ್ತು ಕುರ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಹಲ್ಲೆ ಮತ್ತು ಸಾರ್ವಜನಿಕ ಗಲಭೆಗಳಿಗೆ ಸಂಬಂಧಿಸಿದ ದೂರುಗಳು ಸೇರಿದಂತೆ ಹಲವು ಪ್ರಕರಣಗಳು ಗುರುಮಾ ಅಲಿಯಾಸ್  ಜ್ಯೋತಿ ಮೇಲಿತ್ತು. ಹೀಗಾಗಿ ಪೊಲೀಸರು ಆಕೆಯ ಮೇಲೆ ಕಣ್ಣಿಟ್ಟಿದ್ದರು.

ಸ್ವಘೋಷಿತ ಗುರುಮಾ ಆಗಿದ್ದ  ಬಾಬು ಅಯಾನ್ ಖಾನ್ ಅಲಿಯಾಸ್ ಜ್ಯೋತಿಯ ಆಶೀರ್ವಾದ ಪಡೆಯಲು ಹಲವರು ಸರತಿಸಾಲಿನಲ್ಲಿ ನಿಲ್ಲುತ್ತಿದ್ದರು.  ಇನ್ನೊಂದೆಡೆ ಭಯೋತ್ಪಾದನಾ ನಿಗ್ರಹ ಘಟಕ (ಎಟಿಎಸಿ) ತಂಡವು ಈ ಹಿಂದೆ ಮಾರ್ಚ್ 24 ರಂದು ಶಿವಾಜಿ ನಗರದ ರಫೀಕ್ ನಗರ ಪ್ರದೇಶದಿಂದ ಎಂಟು ಬಾಂಗ್ಲಾದೇಶದ ತೃತೀಯಲಿಂಗಿಗಳನ್ನು ಬಂಧಿಸಿತ್ತು. ಆ ಕಾರ್ಯಾಚರಣೆಯ ಸಮಯದಲ್ಲಿ, ಜ್ಯೋತಿ  ವಿಚಾರ ಬಂದಿತ್ತು. ಆಕೆ ಭಾರತೀಯ ಪ್ರಜೆ ಎಂದು ಹೇಳಿಕೊಂಡು ಜೀವನ ಸಾಗಿಸುತ್ತಿದ್ದಳು ಅದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿದ್ದಳು. ಇಷ್ಟೇ ಅಲ್ಲದೆ ಹೆಣ್ಣುಮಕ್ಕಳು ಹಾಗೂ ತೃತೀಯ ಲಿಂಗಿಗಳನ್ನು ಬಾಂಗ್ಲಾದಿಂದ ಕರೆತಂದು ತನ್ನ ಮನೆಯಲ್ಲಿಟ್ಟುಕೊಂಡು ಅವರನ್ನು ದಂಧೆಗೆ ಕಳುಹಿಸಿ ಅವರಿಂದ ತಿಂಗಳಿಗೆ ಇಂತಿಷ್ಟು ಹಣ ಪಡೆಯುತ್ತಿದ್ದಳು. ಅವರಿಗೆ ಕೊಲ್ಕತ್ತಾದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಕೆಲಸ ನಡೆಯುತ್ತಿತ್ತು ಎಂಬುದು ಅವತ್ತು ಪೊಲೀಸರಿಗೆ ಗೊತ್ತಾಗಿತ್ತು.

ಪೊಲೀಸರಿಗೆ ಸಿಕ್ಕ ಮಾಹಿತಿಯಂತೆ ಗುರುಮಾ  ಮಾನವ ಕಳ್ಳಸಾಗಣೆಯನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಗಡಿಯ ಮೂಲಕ ಮಾಡುತ್ತಿದ್ದಳು. ಇತ್ತೀಚೆಗೆ ಬಾಂಗ್ಲಾದಿಂದ  ಹೆಣ್ಣುಮಕ್ಕಳು ಸೇರಿದಂತೆ ಹಲವರನ್ನು ಭಾರತಕ್ಕೆ ದಾಟಿಸಿದ್ದಳು. ಭಾರತದ ಒಳಗೆ ಪ್ರವೇಶಿಸಿದ ಅವರಿಗೆ ಕೊಲ್ಕತ್ತಾದಲ್ಲಿ ನಕಲಿ ಜನನ ಪ್ರಮಾಣಪತ್ರಗಳು ಮತ್ತು ಶಾಲೆಯಿಂದ ನೀಡುವ ಪ್ರಮಾಣಪತ್ರಗಳನ್ನು ತಯಾರಿಸಿ ಆ ನಂತರ ಅವರನ್ನು ಮುಂಬೈಗೆ ಕರೆತಂದು ಶಿವಾಜಿ ನಗರದಲ್ಲಿ ಇರಿಸಲಾಗಿತ್ತು. ಪ್ರತಿ ಕೊಠಡಿಯಲ್ಲಿ 3-4 ಜನರಿದ್ದು, ಗುರು ಮಾತೆಗೆ ತಿಂಗಳಿಗೆ 5,000-10,000 ರೂಪಾಯಿಯನ್ನು ಅವರು ಕೊಡಬೇಕಾಗುತ್ತಿತ್ತು.

ಪೊಲೀಸರ ಪರಿಶೀಲನೆಯ ನಂತರ ಗುರುಮಾಳ ಮುಖವಾಡ ಬಯಲಾಗಿದ್ದು, ಜ್ಯೋತಿ ಸಲ್ಲಿಸಿದ ದಾಖಲೆಗಳು ನಕಲಿ ಎಂದು ಕಂಡು ಬಂದಿದೆ, ಹೀಗಾಗಿ ಆಕೆಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಅನಘಾ ಶಾತವಾಸೆ ಹೇಳಿದ್ದಾರೆ. ಆದರೆ  ಬಂಧನದ ಸುದ್ದಿ ಹರಡಿದಾಗ, ಅನುಯಾಯಿಗಳು ಶಿವಾಜಿ ನಗರ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ, ಆಕೆಯ ಬಿಡುಗಡೆಗೆ ಒತ್ತಾಯಿಸಿದ್ದರು. ಆದರೆ ಪೊಲೀಸರು ಆಕೆಯ ಮೇಲೆ ವಿದೇಶಿ ಪ್ರಜೆಗಳು ಮತ್ತು ವಲಸೆ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಈ ಪ್ರಕರಣದಲ್ಲಿ ದೂರು ನೀಡಿದ ಶಿವಾಜಿ ನಗರ ಪೊಲೀಸ್ ಠಾಣೆಯ ಎಟಿಸಿ ಘಟಕಕ್ಕೆ ಸೇರಿದ ಪೊಲೀಸ್ ಅಧಿಕಾರಿ ವಿಪಿನ್ ನಿಕಮ್ ಅವರು ಈ ಹಿಂದೆ ಬೈಸಾಖಿ ಶಹಾಬುದ್ದೀನ್ ಖಾನ್, ರಿಡೋಯ್ ಮಿಯಾ ಪಖಿ, ಮರುಖ್ ಇಕ್ಬಾಲ್ ಧಾಲಿ, ಶಾಂತಕಾಂತ್ ವಾಹಿದ್ ಖಾನ್, ವರ್ಷಾ ಕೋಬಿರ್ ಖಾನ್, ಅಫ್ಜಲ್ ಮೊಜನೂರ್ ಹುಸೇನ್, ಮಿಝಾನೂರ್ ಇಬ್ರಾಹಿಂ ಕೊಲಿಲ್ ಮತ್ತು ಶಹಾದತ್ ಅಮೀರ್ ಅಲಿ ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಗುರುಮಾಳ ದಂಧೆ ಬಯಲಾಗಿತ್ತು.

ಸದ್ಯ ಗುರುಮಾ ಅಲಿಯಾಸ್ ಜ್ಯೋತಿ ವಿರುದ್ಧ ಪಾಸ್ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆ, 1950, ವಿದೇಶಿಯರ ಆದೇಶ, 1948, ವಿದೇಶಿಯರ ಕಾಯ್ದೆ, 1946 ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಭಾರತದಲ್ಲಿ ಗುರುಮಾ ಅಲಿಯಾಸ ಜ್ಯೋತಿಯಂಥವರು ಇನ್ನೆಷ್ಟು ಮಂದಿಯಿದ್ದಾರೋ ಗೊತ್ತಿಲ್ಲ ಸಂಬಂಧಿಸಿದವರು ಗಂಭೀರವಾಗಿ ಪರಿಗಣಿಸಿ ಈ ದಂಧೆಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ.

ಕ್ರೈಂ ಸುದ್ದಿಗಳಿಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

-ಬಿ.ಎಂ.ಲವಕುಮಾರ್

 

admin
the authoradmin

Leave a Reply