ArticlesLatest

ಕತ್ತಲಲ್ಲಿದ್ದ ಚಾಮರಾಜನಗರದ ಏಳು ಗ್ರಾಮಗಳಲ್ಲಿ ಈ ಬಾರಿ ದೀಪಾವಳಿ ಆಚರಣೆ…ಏಕೆ ಗೊತ್ತಾ?

ಪ್ರತಿವರ್ಷ ದೀಪಾವಳಿ ಹಬ್ಬ ಬಂದಾಗಲೆಲ್ಲ ಹಬ್ಬವನ್ನು ಆಚರಿಸದೆ ಕತ್ತಲಲ್ಲಿರುತ್ತಿದ್ದ ಚಾಮರಾಜನಗರ ಜಿಲ್ಲೆಯ  ಏಳು ಗ್ರಾಮಗಳ ಜನರು ಈ ಬಾರಿ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲದೆ ಮನೆಮನೆಗಳಲ್ಲಿ ದೀಪವನ್ನು  ಹಚ್ಚಿ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ, ಏಕೆ ಹೀಗೆ ಎಂಬ ಪ್ರಶ್ನೆ ಮೂಡದಿರದು.. ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಇದರ ಹಿಂದಿನ ಕಥೆಯನ್ನು ತಿಳಿದುಕೊಳ್ಳಲೇ ಬೇಕಾಗುತ್ತದೆ.

ಪ್ರತಿ ವರ್ಷ ದೇಶದಾದ್ಯಂತ ಹಣತೆ ಬೆಳಗಿ, ಪಟಾಕಿ ಸಿಡಿಸಿ, ಸಡಗರ, ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದರೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ, ವೀರನಪುರ, ಬನ್ನಿತಾಳಪುರ, ಮಾಡ್ರಹಳ್ಳಿ, ನಲ್ಲೂರು, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳು ದೀಪಾವಳಿ ಹಬ್ಬವನ್ನು ಆಚರಿಸುತ್ತಿರಲಿಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅದು ಏನೆಂದರೆ? ಈ ಗ್ರಾಮದಲ್ಲಿ ಬುಧವಾರ ದಿನದಂದು ಬಲಿಪಾಡ್ಯಮಿ ಬಂದರೆ ಮಾತ್ರ ದೀಪಾವಳಿ ಆಚರಿಸುವುದು ಹಿಂದಿನಿಂದಲೂ ನಡೆದು ಬಂದ ರೂಢಿಯಾಗಿದೆ.

ಇಷ್ಟಕ್ಕೂ ಈ ಆಧುನಿಕ ಕಾಲದಲ್ಲಿಯೂ ಇಂತಹ ನಂಬಿಕೆಯನ್ನಿಟ್ಟುಕೊಂಡು ಜನ ಬದುಕುತ್ತಿದ್ದಾರೆ ಎಂದರೆ ಅಚ್ಚರಿಯಾಗಬಹುದು. ಆದರೆ ತಲತಲಾಂತರದಿಂದ ರೂಢಿಸಿಕೊಂಡು ಬಂದಿರುವ ಪದ್ಧತಿಗೆ ಅಪಚಾರ ಮಾಡಲು ಇಲ್ಲಿನ ಜನ ತಯಾರಿಲ್ಲ. ಜತೆಗೆ ಆ ರೀತಿ ಮಾಡಿದರೆ ಊರಿಗೆ ಕೆಡಕಾಗುತ್ತದೆ ಎಂಬ ಭಯವೂ ಜನರನ್ನು ಕಾಡುತ್ತಿದೆ. ಹೀಗಾಗಿ ಹಿಂದಿನ ಪದ್ಧತಿಗೆ ಕಟ್ಟು ಬಿದ್ದು ಜನ ತಮ್ಮ ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನು ಮಾಡದೆ  ತಮ್ಮ ಪಾಡಿಗೆ ತಾವು ಇರುತ್ತಾರೆ.

ಕಳೆದ ಮೂರು ತಲೆಮಾರುಗಳಿಂದ ಈ ಏಳು ಗ್ರಾಮದವರು ಬುಧವಾರವೇ ಹಬ್ಬ ಆಚರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಒಂದು ವೇಳೆ ಬುಧವಾರದ ದಿನ ಹಬ್ಬ ಬಂದರೆ ಊರಿಗೆ ಊರೇ ಸಂಭ್ರಮದಿಂದ ತೇಲಾಡುತ್ತದೆ. ಅವತ್ತು ಹೊಸ ಬಟ್ಟೆ ತೊಟ್ಟು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಸುಗಳಿಗೆ ಸ್ನಾನ ಮಾಡಿಸಿ ಮನೆಯಲ್ಲಿ ಸಿಹಿ ಊಟ ಮಾಡುತ್ತಾರೆ. ಈ ಬಾರಿ ಬುಧವಾರ ಬಂದಿರುವುದರಿಂದ ಜನ ಖುಷಿಯಲ್ಲಿ ತೇಲಾಡುತ್ತಿದ್ದಾರೆ.

ಇಷ್ಟಕ್ಕೂ ಬುಧವಾರ ಹೊರತು ಬೇರೆ ದಿನ ಹಬ್ಬ ಆಚರಿಸಿದರೆ ಏನಾಗುತ್ತದೆ ಎಂಬ ಕುತೂಹಲ ಎಲ್ಲರನ್ನು ಕಾಡದಿರದು. ಈ ಆಚರಣೆ ಹಿಂದಿನ ನಂಬಿಕೆಯನ್ನು ತೆರೆದಿಡುವ ಗ್ರಾಮಸ್ಥರು ಬುಧವಾರ ಹೊರತುಪಡಿಸಿ ಬೇರೆ ಯಾವುದೇ ದಿನಗಳಲ್ಲಿ ಹಬ್ಬ ಆಚರಿಸಿದರೇ ಊರಿಗೆ ಕೆಡಕಾಗುತ್ತವೆ. ಜಾನುವಾರುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತವೆಯಂತೆ. ಹೀಗಾಗಿ  ಬುಧವಾರದಂದು ದೇವಸ್ಥಾನದಿಂದ ತೀರ್ಥ ತಂದು ಹಸುಗಳಿಗೆ ಸಿಂಪಡಿಸಿ, ಪೂಜೆ ಮಾಡಿ, ಬಳಿಕ ಹಸುಗಳನ್ನು ಊರಿನ ಸುತ್ತ ಒಂದು ಸುತ್ತು ಹಾಕಿಸುವ ಸಂಪ್ರದಾಯವೂ ಊರಲ್ಲಿದೆ.

ಆಧುನಿಕ ಕಾಲದಲ್ಲಿಯೂ ಇಂತಹದೊಂದು ಆಚರಣೆ ನಮ್ಮ ನಡುವೆ ಇರುವುದು ಅಚ್ಚರಿ ತರಬಹುದು. ಆದರೆ ದೀಪಾವಳಿ ಆಚರಣೆ ವಿಚಾರದಲ್ಲಿ ಏಳು ಗ್ರಾಮಗಳ ಜನರು ಮುಂದುವರೆಸಿಕೊಂಡು ಬಂದಿರುವ ಸಂಪ್ರದಾಯದ ಹಿಂದೆ ಬಲವಾದ ಕಾರಣಗಳು ಇಲ್ಲದೆ ಯಾವುದನ್ನೂ ಮಾಡುವುದಿಲ್ಲ. ಹೀಗಾಗಿಯೇ ಹಿರಿಯರ ನಂಬಿಕೆಯನ್ನು ಉಳಿಸಿಕೊಂಡು ಇಲ್ಲಿನವರು ಮುಂದೆ ಸಾಗುತ್ತಿರುವುದು ಎದ್ದು ಕಾಣಿಸುತ್ತಿದೆ. ಅದು ಏನೇ ಇರಲಿ ಈ ಬಾರಿ ಬುಧವಾರದಂದು ದೀಪಾವಳಿ ಬಂದಿರುವುದರಿಂದ ಹಬ್ಬದ ಸಂಭ್ರಮ ಮನೆ ಮಾಡಿರುವುದಂತು ನಿಜ..

ಇದನ್ನೂ ಓದಿ: ಕತ್ತಲಲ್ಲಿದ್ದ ಚಾಮರಾಜನಗರದ ಏಳು ಗ್ರಾಮಗಳಲ್ಲಿ ಈ ಬಾರಿ ದೀಪಾವಳಿ ಆಚರಣೆ…ಏಕೆ ಗೊತ್ತಾ?

B.M.Lavakumar

admin
the authoradmin

Leave a Reply