ArticlesLatest

ಕರಿಮೆಣಸು ಬಳ್ಳಿಗಳಿಗೆ ಮಾರಕವಾದ ಬಿಡುವಿಲ್ಲದ ಮಳೆ.. ಬೆಳೆಗಾರರಿಗೆ ಬಳ್ಳಿಗಳನ್ನು ರಕ್ಷಿಸಿಕೊಳ್ಳುವುದೇ ಸವಾಲ್!

ಕೊಡಗಿನಲ್ಲಿ  ಈ ಬಾರಿ ಬಿಡುವು ನೀಡದೆ ಮುಂಗಾರು ಮತ್ತು ಹಿಂಗಾರು ಮಳೆ ಸುರಿಯುತ್ತಿರುವ ಕಾರಣ ವಾತಾವರಣದಲ್ಲಿ  ಏರುಪೇರಾಗಿದ್ದು ಅಧಿಕ ತೇವಾಂಶದ ಪರಿಣಾಮ ಕರಿಮೆಣಸು  ಫಸಲು ಮಾತ್ರವಲ್ಲ ಬಳ್ಳಿಯನ್ನು ರಕ್ಷಿಸಿಕೊಳ್ಳುವುದು ಸವಾಲ್ ಆಗಿ ಪರಿಣಮಿಸಿದೆ. ಈಗಾಗಲೇ ಅಲ್ಲಲ್ಲಿ ಫಸಲು ಉದುರಿ ಭೂಮಿ ಸೇರುತ್ತಿದ್ದರೆ, ಬಳ್ಳಿ ಕೊಳೆತು ಸಾಯುತ್ತಿದೆ. ಹೀಗಾಗಿ  ಕರಿಮೆಣಸು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.

ಕೊಡಗು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಕರಿಮೆಣಸನ್ನು ಪ್ರತ್ಯೇಕವಾಗಿ ಬೆಳೆಸದೆ ಮಿಶ್ರಬೆಳೆಯಾಗಿಯೇ ಬೆಳೆಯುವುದು ಹೆಚ್ಚಾಗಿ ಕಂಡು ಬರುತ್ತದೆ. ಜತೆಗೆ ವೈಜ್ಞಾನಿಕವಾಗಿ ಇದರ ಕೃಷಿಗೆ ಹೆಚ್ಚು ಒತ್ತು ನೀಡಿಲ್ಲ. ಇದರಿಂದ ನಾವು ಹೆಚ್ಚೆಂದರೆ ಹೆಕ್ಟೇರಿಗೆ ಇನ್ನೂರರಿಂದ ಇನ್ನೂರೈವತ್ತು ಕಿ.ಗ್ರಾಂ,ನಷ್ಟು ಇಳುವರಿ ಪಡೆದರೆ, ದೂರದ ಥಾಯ್ಲೆಂಡ್‌ ನಲ್ಲಿ ಹೆಕ್ಟೇರಿಗೆ 4200 ಕಿ.ಗ್ರಾಂ.ನಷ್ಟು ಇಳುವರಿ ಪಡೆಯುತ್ತಾರಂತೆ.  ನಮ್ಮಲ್ಲಿ  ಕೆಲವೊಂದು ರೋಗಗಳು ಅದಕ್ಕೆ ಕರಿಮೆಣಸಿಗೆ ಫಸಲು ಬಿಡಲು ಆರಂಭಿಸಿದ ನಂತರವೇ ಕಾಡುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಬೆಳೆಗಾರರದ್ದಾಗಿದೆ.

ಇದನ್ನೂ ಓದಿ: ಕರಿಮೆಣಸು ಬಳ್ಳಿಯನ್ನು ರಕ್ಷಿಸಿ ಫಸಲು ಪಡೆಯುವುದೇ ರೈತರಿಗೆ ಸವಾಲ್…

ಕೊಡಗಿನ ಮಟ್ಟಿಗೆ ಹೆಚ್ಚು ಆದಾಯ ಪಡೆಯುವ ಬೆಳೆಯಾಗಿರುವ ಕರಿಮೆಣಸಿಗೆ ಇತ್ತೀಚೆಗಿನ ವರ್ಷಗಳಲ್ಲಿ ಉತ್ತಮ ದರ ದೊರೆಯುತ್ತದೆಯಾದರೂ ಅದನ್ನು ನೆಟ್ಟು ಆರೈಕೆ ಮಾಡಿ ಬೆಳೆಸಿದರೂ ಫಸಲು ನೀಡುವ ಸಮಯಕ್ಕೆ ಯಾವುದಾದರೂ ಒಂದು ರೋಗ ತಗುಲಿ ಇಡೀ ಬಳ್ಳಿ ಸಾವನ್ನಪ್ಪುತ್ತದೆ. ಆದರೆ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಸಮಸ್ಯೆಗಳು ಉದ್ಭವಿಸಿದೆ. ಕರಿಮೆಣಸನ್ನು ಇಲ್ಲಿನ ಬೆಳೆಗಾರರು ಪ್ರತ್ಯೇಕವಾಗಿ ಬೆಳೆಯುತ್ತಿಲ್ಲ. ಕಾಫಿ ತೋಟದ ನಡುವೆ ಇರುವ ಮರಗಳಿಗೆ ಬಳ್ಳಿಯನ್ನು ನೆಟ್ಟು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಹಿಂದೆ ಇದಕ್ಕೆ ಹೆಚ್ಚಿನ ರೋಗಗಳು ತಗುಲದೆ ಇದ್ದಾಗ ಇದು ಬೆಳೆಗಾರರ ಪಾಲಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವ ಬೆಳೆಯಾಗಿತ್ತು.

ಈ ನಡುವೆ ಕರಿಮೆಣಸಿಗೆ ನಂಜಾಣುರೋಗ ಕಾಣಿಸಿಕೊಳ್ಳುತ್ತಿದ್ದು ಈ ರೋಗ ತಗುಲಿದ ಕರಿಮೆಣಸಿನ ಬಳ್ಳಿಗಳಲ್ಲಿ ಎಲೆಗಳು ಚಿಕ್ಕದಾಗಿ, ಬಳ್ಳಿಗಳು ಸಾಯುವುದು ಇಲ್ಲ ಅಥವಾ ಬೆಳವಣಿಗೆಯೂ ಇಲ್ಲದೆ, ಕಾಳುಮೆಣಸು ಬಿಡದೆ ಇರುವುದು ಕಂಡು ಬರುತ್ತಿದೆ. ಇದು ಬೆಳೆಗಾರರನ್ನು ಕಂಗೆಡಿಸಿದೆ. ನಂಜಾಣುವಿನ ಬಾಧೆಯಿಂದ ಉಂಟಾಗಿರುವ ಸಮಸ್ಯೆ ಬೆಳೆಗಾರರಲ್ಲಿ ನಿರಾಸಕ್ತಿಯನ್ನುಂಟು ಮಾಡುತ್ತಿದೆ. ಹೀಗಾಗಿ ಈ ನಂಜುರೋಗಕ್ಕೆ ಮದ್ದು ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ.

ಇದನ್ನೂ ಓದಿ: ಕೊಡಗಿನ ಕಿತ್ತಳೆಯ ವೈಭವ ಮರುಕಳಿಸಲು ಸಾಧ್ಯನಾ?..

ಈ ಹಿಂದೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಂಜಾಣುವಿನ ಭಾದೆಗೆ ತುತ್ತಾಗಿರುವ ಬಳ್ಳಿಗಳನ್ನು ಪುನಶ್ಚೇತನಗೂಳಿಸಲು ಕೇರಳ ರಾಜ್ಯದ ಕ್ಯಾಲಿಕಟ್ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನ ಸಂಸ್ಥೆ ಅವರು ಶಿಫಾರಸ್ಸು ಮಾಡಿರುವ ಸಮಗ್ರ ತಂತ್ರಜ್ಞಾನಗಳ ಪರಿಚಯವನ್ನು ರೈತರಿಗೆ ತಿಳಿಸಿ ಆ ಮೂಲಕ ಬಳ್ಳಿಗಳನ್ನು ಕಾಪಾಡುವ ಕೆಲಸಕ್ಕೆ ಕೈಹಾಕಲಾಗಿತ್ತು   ನಂಜಾಣುರೋಗವನ್ನು ನಿಯಂತ್ರಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ  ಸಸ್ಯ ಸಂರಕ್ಷಣಾ ತಜ್ಞರು ಒಂದಷ್ಟು ಮಾಹಿತಿಗಳನ್ನು ನೀಡಿದ್ದರು.

ಸಸ್ಯ ಸಂರಕ್ಷಣಾ ತಜ್ಞರ ಪ್ರಕಾರ ಅಕ್ಟೋಬರ್ ತಿಂಗಳಿನಲ್ಲಿ ಪೆಪ್ಪೆರ್ ಸ್ಪೆಷಲ್ ಮತ್ತು ಸಮುದ್ರ ಕಳೆಯ ಸಿಂಪರಣೆ ಮಾಡಲು, ಅಲ್ಲದೆ ಕಹಿ ಬೇವಿನ ಹಿಂಡಿಯ ಪುಡಿಯನ್ನು ಬಳ್ಳಿಯ ಬುಡಕ್ಕೆ ಹಾಕುವಂತೆಯೂ ಸಲಹೆಗಳನ್ನು ನೀಡಿದ್ದಾರೆ. ಇಷ್ಟೇ ಅಲ್ಲದೆ ಡಿಸೆಂಬರ್ ತಿಂಗಳಿನಲ್ಲಿ ಪೊಟ್ಯಾಷಿಯಂ ನೈಟ್ರೇಟ್ ನ ಸಿಂಪರಣೆ ಮಾಡುವಂತೆ ತಿಳಿಸಲಾಗಿದೆ. ಆದರೆ ಇದೆಲ್ಲವನ್ನು ಮಾಡಿ ನಂಜುರೋಗವನ್ನು ತಡೆಯುವ ಮುನ್ನವೇ ಮಳೆಗೆ ಇಡೀ ಬಳ್ಳಿಗಳು ಸಾಯುತ್ತಿರುವುದು ಕರಿಮೆಣಸು ಬೆಳೆದ ಬೆಳೆಗಾರರನ್ನು ಆಸಕ್ತಿ ಕಳೆದುಕೊಳ್ಳುವಂತೆ ಮಾಡುತ್ತಿದೆ. ಇಲ್ಲಿ ಕರಿಮೆಣಸು ಬಳ್ಳಿಗೆ ಯಾವುದೇ ರೀತಿಯ  ಔಷಧೋಪಚಾರ ಮಾಡಿದರೂ ಮಳೆ ನಿಂತು ಬಿಸಿಲು ಬಾರದೆ ಹೋದರೆ ಬಳ್ಳಿಯನ್ನು ರಕ್ಷಿಸಿಕೊಳ್ಳುವುದೇ ಕಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: ಮರೆಯಾಗುತ್ತಿರುವ ಮಲೆನಾಡಿನ ಕಾಡು ಹಣ್ಣು ಕರ್ಮಂಜಿ..

B M Lavakumar

admin
the authoradmin

Leave a Reply