ಚಂದನವನದಲ್ಲಿ ಮಿಂಚಿ ಹೋದ ನಟ ನಟಿಯರನ್ನು ಪರಿಚಯಿಸುವ ಮತ್ತು ಅವರ ಸಾಧನೆಗಳನ್ನು ಮೆಲುಕು ಹಾಕುವ ಕಾರ್ಯವನ್ನು ‘ಜನಮನಕನ್ನಡ’ ಮಾಡುತ್ತಾ ಬಂದಿದೆ. ಇಲ್ಲಿ ಮಿಂಚಿ ಮರೆಯಾದ ತಾರೆಗಳನ್ನು ಮತ್ತೆ ಓದುಗರ ಮುಂದೆ ತರುವ ಕಾರ್ಯವನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಮಾಡುತ್ತಾ ಬಂದಿದ್ದು ಅವರ ಸಹಕಾರವನ್ನು ಶ್ಲಾಘಿಸಬೇಕಾಗುತ್ತದೆ. ಕನ್ನಡರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡಕ್ಕೆ ತನ್ನ ಬರವಣಿಗೆ ಮೂಲಕ ಕೊಡುಗೆ ನೀಡುತ್ತಾ ಬಂದಿರುವ ಅವರಿಗೊಂದು ಸಲಾಮ್…

ಕನ್ನಡದ ಜನಪ್ರಿಯ ನಟ ಶಂಕರೇಗೌಡರು ಯಾರೆಂದು ಗೊತ್ತೇನು? ಅನೇಕ ನಟನಟಿಯರು ಚಂದನವನದಲ್ಲಿ ಹೆಸರು ಗಳಿಸಿ-ಉಳಿಸಿ ಹೋಗಿದ್ದಾರೆ. ಇಂಥವರ ನಡುವೆ ಬಂದು ಇದ್ದು ಹೋದವರು, ಆ ಹೊತ್ತು ಅಳಿದು ಹೋದರೂ ಇವತ್ತಿಗೂ ಉಳಿದುಕೊಂಡಿದ್ದಾರೆ ಹಿರಿಯನಟ ರಾಜಗಾಂಭೀರ್ಯದ ರಾಜಾಶಂಕರ್. ಹಳೆಯ ಸಿನಿಮಾಗಳನ್ನು ನೋಡಿದರೆ ಅವರ ನಟನೆ ಗಮನಸೆಳೆಯದಿರದು. ಇಂತಹ ನಟ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಹೊಸಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ವಾಸವಿದ್ದ ರೈತ ಕುಟುಂಬದ ಶ್ರೀಮತಿ ಪುಟ್ಟತಾಯಮ್ಮ ಶ್ರೀ ಸಿದ್ದೇಗೌಡ ದಂಪತಿಗೆ 15.6.1931 ರಂದು ಜನಿಸಿದ ಮುದ್ದುಕಂದನೇ ಶಂಕರ ಉರುಫ್ ಶಂಕರೇಗೌಡ… ನಟ ರಾಜಾಶಂಕರ್

ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣದ ನಂತರ ಮೈಸೂರು ನಗರಕ್ಕೆ ಬರಬೇಕಾದ ಸಂದರ್ಭ ಬಂತು. ಕಾಲೇಜು ವಿದ್ಯಾಭ್ಯಾಸದ ಜತೆ ಜತೆಗೆ ಸರಸ್ವತಿಪುರಂನಲ್ಲಿದ್ದ ನವಜ್ಯೋತಿ ಫಿಲಂ ಸ್ಟುಡಿಯೋದಲ್ಲಿ ಸಹಾಯಕನಾಗಿ ನೌಕರಿಗೆ ಸೇರಿದರು. ಉದ್ಯೋಗದ ಜತೆಗೇ ಮಹಾರಾಜ ಕಾಲೇಜು ಮೂಲಕ ಬಿ.ಎ.ಪದವಿಯನ್ನು ಮುಗಿಸಿ ಆ ಕಾಲದ ನಾಯಕನಟರ ಪೈಕಿ ಪ್ರಪ್ರಥಮ ಗ್ರ್ಯಾಜುಯೆಟ್ ಹೀರೋ ಎನಿಸಿದರು! ಇದಕ್ಕೆಲ್ಲ ಮೂಲ ಕಾರಣವೆಂದರೆ, ಹಳ್ಳಿಯಲ್ಲಿದ್ದಾಗ ಬಾಲ್ಯದಿಂದಲೂ ನಾಟಕದ ಗೀಳು ಹೆಚ್ಚಾಗಿ ಹಿಡಿಸಿಕೊಂಡಿದ್ದು. ಕಾಲಕ್ರಮೇಣ ಇವರಿಗೆ ಮೈಸೂರಲ್ಲೊಂದು ಸುವರ್ಣಾವಕಾಶ ದೊರಕಿತು. ಆಕಸ್ಮಿಕವಾಗಿ ದಕ್ಷಿಣ ಭಾರತದ ಖ್ಯಾತ ಚಿತ್ರೋದ್ಯಮಿಗಳಾಗಿದ್ದ ಹೆಚ್.ಎಲ್.ಎನ್.ಸಿಂಹ, ಡಿ.ಶಂಕರ್‌ಸಿಂಗ್, ಮುಂತಾದ ದಿಗ್ಗಜರ ಕಣ್ಣಿಗೆಬಿದ್ದು ರಾಜಾಶಂಕರ್ ಗೆ ಶುಕ್ರದೆಸೆ ವಕ್ಕರಿಸಿ ಮಹಾನ್ ನಿರ್ಮಾಪಕ ನಿರ್ದೇಶಕರ ಬೆಂಬಲ ಮತ್ತು ಪ್ರೋತ್ಸಾಹದಿಂದ ಅದೃಷ್ಟ ಖುಲಾಯಿಸಿ ತುಸು ವೇಗವಾಗಿ ಬೆಳೆದು ಪ್ರಮುಖ (ನಾಯಕ)ನಟರಾದರು.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು
ಈ ನಡುವೆ, ಇವರ ವಿದ್ಯಾರ್ಹತೆ ಮೇಲೆ ರೆವೆನ್ಯು ಇಲಾಖೆಯಲ್ಲಿ ಕ್ಲರ್ಕ್ ಹುದ್ದೆ ದೊರಕಿತು. ಆದರೆ ನಾಟಕ ಮತ್ತು ಸಿನಿಮಾರಂಗ ಇವರನ್ನು ಕೈಬೀಸಿ ಕರೆದಿತ್ತು? ಹಾಗಾಗಿ ಸರ್ಕಾರಿ ಉದ್ಯೋಗವನ್ನು ಕೆಲವೇ ವರ್ಷ ನಿರ್ವಹಿಸಿ ಇದಕ್ಕೆ ರಾಜೀನಾಮೆ ನೀಡಿದರು. ತತ್ಪರಿಣಾಮವಾಗಿ ಪಾರ್ಟ್ ಟೈಂ ನಟನಿಂದ ಫುಲ್ ಟೈಂ ಕಲಾವಿದನಾದರು. ರಾಜಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್ ಈ ಮೂವರು ಮೇರುನಟರ ಜತೆಗೆ ಅವರಷ್ಟೇ ಪ್ರಮುಖ ಪಾತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡ ಸರಳ ಸಜ್ಜನಿಕೆಯ ನಟ ರಾಜಾಶಂಕರ್. ಆಗಿನ ಕಾಲಕ್ಕೆ ರಾಜ್- ಕಲ್ಯಾಣ್-ಉದಯ್ ಕುಮಾರತ್ರಯರ ನಂತರ 4ನೇಸ್ಥಾನ ಆಕ್ರಮಿಸಿದ್ದ ಈತ ರಾಜೇಶ್ ಗಂಗಾಧರ್ ಶ್ರೀನಾಥ್ ಈ ಮೂವರ ಎಂಟ್ರಿ ಆಗುವವರೆಗೆ ಹೆಚ್ಚು ಜನಪ್ರಿಯತೆ ಗಳಿಸಿದ್ದ ಪ್ರತಿಭಾವಂತ ನಟರಾಗಿದ್ದರು.

ತಮ್ಮ ಈ ಬಣ್ಣದಲೋಕದ ಪಯಣದಲ್ಲಿ ಕನಿಷ್ಟ 100ಚಿತ್ರಗಳಲ್ಲಾದರು ನಟಿಸಬೇಕೆಂಬ ಮಹದಾಸೆ ಹೊಂದಿದ್ದರು. ಆದರೆ ಇವರ ಕನಸು ನನಸಾಗಲೇ ಇಲ್ಲ. ಇದೇ ಒಂದು ಬೃಹತ್ ಚಿಂತೆಯಾಗಿ ಇವರನ್ನು ಕಾಡುತ್ತಲೇ ಇತ್ತು ಕೊನೆತನಕ? ಕನ್ನಡ ಚಲನಚಿತ್ರ ರಂಗದಲ್ಲಿ ಅರ್ಧಂಬರ್ಧ ಯಶಸ್ಸು ಕಂಡ ಈತ ಓರ್ವ ನತದೃಷ್ಟ ನಟ ಆಗಿದ್ದುದು ಸತ್ಯ. ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ ತಮ್ಮ ನಿಜ ಜೀವನದಲ್ಲೂ ಓರ್ವ ದುರಂತ ಪಾತ್ರಧಾರಿಯಾಗಿ ಇಹಲೋಕ ತ್ಯಜಿಸಿದ್ದು ವಿಷಾದನೀಯ ಇತಿಹಾಸ. ಜವರಾಯನ ಕರೆ ಬಂದಮೇಲೆ ಮುಗೀತು?! ಸಾಯೋ ವಯಸ್ಸಲ್ಲದ ಮುದ್ದುಮುಖದ ಈ ಸದೃಢ ಕಲಾವಿದ 22.7.1987ರಂದು 56ನೇ ವಯಸ್ಸಿನಲ್ಲಿ ಬಹಳ ಅನಿರೀಕ್ಷಿತವಾಗಿ ವಿಧಿವಶ ರಾದುದು ಎಲ್ಲರಿಗೂ ಆಶ್ಚರ್ಯ ತಂದಿತ್ತು. ರಾಜಗಾಂಭೀರ್ಯದ ರಾಜಾಶಂಕರ್ ಎಂದೇ ಕರೆಯಲಾಗುತ್ತಿದ್ದ ಪ್ರತಿಭಾವಂತ. ಇಂಥ ನಿಷ್ಠಾವಂತ ಕಲಾವಿದನೊಬ್ಬ ಕಣ್ಮರೆಯಾದರು ಸಹ ಇವತ್ತಿಗೂ ಅಜರಾಮರ. ಎಲ್ಲರಂಥಲ್ಲದ ಈ ನೈಜಕಲಾವಿದನ ನಿತ್ಯಸತ್ಯ ಜೀವನಶೈಲಿಯನ್ನು ಚಂದನವನ ಚರಿತ್ರೆಯಲ್ಲಿ ಯಾರೂ ಎಂದೆಂದೂ ಮರೆಯುವಂತಿಲ್ಲ!
ಇದನ್ನೂ ಓದಿ: ಸಕಲಕಲಾವಲ್ಲಭ ಅಚ್ಚಕನ್ನಡಿಗ ಹೊನ್ನಪ್ಪ ಭಾಗವತರ್
ಪ್ರಾರಂಭದಲ್ಲಿ ಪೋಷಕನಟನಾಗಿ ಎಂಟ್ರಿ ಕೊಟ್ಟು ಆನಂತರ ನಾಯಕನಟನಾಗಿ ಬಡ್ತಿ ಪಡೆದ ಸೌಮ್ಯ ಗುಣದ ಹೀರೋ. ಚಂದನವನದಲ್ಲಿ ಸಹನಿರ್ಮಾಪಕನಾಗಿ ನಂತರ ಪೂರ್ಣ ಪ್ರಮಾಣದ ನಿರ್ಮಾಪಕನಾಗಿ ಹಲವಾರು ಕನ್ನಡ ಚಿತ್ರಗಳ ಕೊಡುಗೆ ನೀಡಿದರು. ಇವುಗಳಲ್ಲಿ ಉತ್ತಮ ಉದಾಹರಣೆ ಡಾ.ರಾಜ್ ಕುಮಾರ್ ಅಭಿನಯದ ಹಾಸ್ಯಮಯ ಚಿತ್ರ ‘ಬಂಗಾರದ ಪಂಜರ’ ಕೂಡ ಇವರ ನಿರ್ಮಾಣಗಳಲ್ಲೊಂದು. ಕಾಲಕ್ರಮೇಣ ಪಾರ್ವತಮ್ಮ ರಾಜಕುಮಾರ್ ನಿರ್ಮಾಣ ಸಂಸ್ಥೆಯಲ್ಲು ಕೆಲವರ್ಷಕಾಲ ಅಮೋಘ ಸೇವೆ ಸಲ್ಲಿಸಿದರು.

ಅಂದಾಜು 56 ಸಿನಿಮಾಗಳಲ್ಲಿ ಪೋಷಕನಟ ಪಾತ್ರದಲ್ಲಿ ನಟಿಸಿದರು. ತಾಯಿದೇವರು, ಕಸ್ತೂರಿನಿವಾಸ, ನಮ್ಮಸಂಸಾರ, ಸಂಪತ್ತಿಗೆ ಸವಾಲ್ ಮುಂತಾದ ಹಲವಾರು ಚಿತ್ರಗಳಲ್ಲಿ ಇವರ ಪ್ರತಿಭೆ ಅಗಾಧ. ಚಂದ್ರಕುಮಾರ, ಜಾಣರಜಾಣ ಸೇರಿದಂತೆ ಐದಾರು ಚಿತ್ರಗಳಲ್ಲಿ ಹೀರೋ ಪಾತ್ರ, ಸುಮಾರು 18 ಚಿತ್ರಗಳಲ್ಲಿ 2ನೇ ಹೀರೋ ಆಗಿ ನಟಿಸಿದ್ದು ಚಿರಸ್ಮರಣೀಯ ಇತಿಹಾಸ.1959ರಲ್ಲಿ ತೆರೆಕಂಡ ಅಬ್ಬಾ ಆ ಹುಡುಗಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದು ಮಲ್ಲಿಮದುವೆ ಸಿನಿಮಾದಲ್ಲಿ ಲೀಲಾವತಿ ಜೋಡಿಯಾಗಿ ಅಭಿನಯಿಸಿ ಜನಪ್ರಿಯತೆ ಗಳಿಸಿದರು. ಜೀವನತರಂಗ, ಕನ್ಯಾರತ್ನ, ಚಿತ್ರಗಳಲ್ಲಿ ರಾಜ್ ಕುಮಾರ್, ಉದಯ ಕುಮಾರ್ ಅವರಷ್ಟೆ ಮನ್ನಣೆ ಗಳಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಕಿತ್ತೂರುಚೆನ್ನಮ್ಮ, ಮಯೂರ, ರೌಡಿರಂಗಣ್ಣ, ಬಹದ್ದೂರ್ ಗಂಡು, ಕಸ್ತೂರಿನಿವಾಸ ಶ್ರೀನಿವಾಸಕಲ್ಯಾಣ ಹಾಗೂ ಭಕ್ತಕುಂಬಾರ ಚಿತ್ರಗಳಲ್ಲಿ ಡಾ.ರಾಜಕುಮಾರ್ ಅವರಷ್ಟೆ ಉತ್ತಮ ಅಭಿನಯ ನೀಡುವ ಮೂಲಕ ಸ್ವಯಂ ರಾಜಣ್ಣ ಸೇರಿದಂತೆ ಎಲ್ಲರಿಂದಲೂ ಹೊಗಳಿಸಿ ಕೊಂಡ ಮಹಾನ್ ಕಲಾವಿದ.
ಇದನ್ನೂ ಓದಿ: ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಜಿ.ವಿ.ಅಯ್ಯರ್…
ರಾಜ್‌ಕುಮಾರ್ ನಟಿಸಿದ ಹಲವು ಚಿತ್ರಗಳಲ್ಲಿ 2ನೇ ಹೀರೋ ಆಗಿ ಅಭಿನಯಿಸುವ ಮೂಲಕ ಖ್ಯಾತಿ ಪಡೆದರು. ರಾಜ್ ಕುಮಾರ್ ಅಣ್ಣ-ತಮ್ಮನ ಪಾತ್ರದಲ್ಲಿ ಒಪ್ಪವಾಗಿ ಅಭಿನಯಿಸುತ್ತಿದ್ದ ಗಾಂಭೀರ್ಯನಟ ಎನಿಸಿದ್ದರು. ಹಲವಾರು ಸಿನಿಮಾಗಳ ಮನೋಜ್ಞ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಗೌರವಕ್ಕೆ ಪಾತ್ರನಾಗಿ ರಾಜ್ಯ ಪ್ರಶಸ್ತಿ ಪಡೆದರಲ್ಲದೆ ಅನೇಕ ಸಂಘ ಸಂಸ್ಥೆಗಳಿಂದ ಬಿರುದು ಬಹುಮಾನ ಪಡೆದಿದ್ದರು. ಕರ್ನಾಟಕ ರಾಜ್ಯದ ಪ್ರತಿಯೊಂದು ಹಳ್ಳಿಗಾಡು ಪ್ರದೇಶದಲ್ಲು ಕನ್ನಡ ಚಿತ್ರಾಭಿಮಾನಿಗಳನ್ನು ಪಡೆದಿದ್ದ ಕೆಲವೇ ಪ್ರಮುಖ ನಟರಲ್ಲಿ ರಾಜಾ ಶಂಕರ್ ಕೂಡ ತಮ್ಮದೇ ಆದ ಒಂದು ಸುಭದ್ರ ಸ್ಥಾನ ಪಡೆದಿದ್ದರು.

ರಾಜಾಶಂಕರ್ ನಟಿಸಿದ ಸಿನಿಮಾಗಳು ಯಾವುದೆಂದರೆ ದಶಾವತಾರ, ಕಿತ್ತೂರುಚೆನ್ನಮ್ಮ, ಕರುಣೆಯೇ ಕುಟುಂಬದಕಣ್ಣು, ತೇಜಸ್ವಿನಿ, ಸಾಕುಮಗಳು, ಕನ್ಯಾರತ್ನ, ಜೀವನತರಂಗ, ಮಲ್ಲಿಮದುವೆ, ಬೇವುಬೆಲ್ಲ, ಚಂದ್ರಕುಮಾರ, ಜೇನುಗೂಡು, ಮಂಗಳಮುಹೂರ್ತ, ಚಿನ್ನದಗೊಂಬೆ, ಅನ್ನಪೂರ್ಣ, ಅಮರಜೀವಿ, ಒಂದೇಬಳ್ಳಿಯ ಹೂಗಳು, ಅನುರಾಧ, ಸತೀಸುಕನ್ಯ, ಮನಸ್ಸಿದ್ದರೆಮಾರ್ಗ, ಶ್ರೀಪುರಂದರದಾಸರು, ಜಾಣರಜಾಣ, ಮಹಾಸತಿ ಅರುಂಧತಿ, ಗೌರಿ ಗಂಡ, ರೌಡಿರಂಗಣ್ಣ, ಬ್ರೋಕರ್ ಭೀಷ್ಮಾಚಾರಿ,
ಇದನ್ನೂ ಓದಿ: ಕನ್ನಡ ಸಿನಿಲೋಕಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನ ಕೊಡುಗೆಯೇನು?
ಬಾಗೀರಥಿ, ಗೃಹಲಕ್ಷ್ಮಿ, ಚದುರಂಗ, ವಾಗ್ಧಾನ, ಸುಖಸಂಸಾರ, ಕಸ್ತೂರಿನಿವಾಸ, ಸಿಗ್ನಲ್‌ಮನ್ ಸಿದ್ಧಪ್ಪ, ಹೂಬಿಸಿಲು, ಸೇಡಿನಕಿಡಿ, ನಮ್ಮ ಸಂಸಾರ, ಅಮರಭಾರತಿ, ಧರ್ಮಪತ್ನಿ, ಮೂರೂವರೆ ವಜ್ರಗಳು, ಬಂಗಾರದಪಂಜರ, ಹೇಮರೆಡ್ಡಿಮಲ್ಲಮ್ಮ, ಸಂಪತ್ತಿಗೆಸವಾಲ್, ಭಕ್ತಕುಂಬಾರ, ಪ್ರೊ,ಹುಚ್ಚೂರಾಯ, ಶ್ರೀನಿವಾಸಕಲ್ಯಾಣ, ದಾರಿತಪ್ಪಿದಮಗ, ಮಯೂರ, ಪ್ರೇಮದಕಾಣಿಕೆ, ಬಹದ್ದೂರ್ ಗಂಡು, ವಿಜಯವಾಣಿ, ಮುತ್ತುಒಂದುಮುತ್ತು, ಏಟು ಎದಿರೇಟು, ಮರೆಯದ ಹಾಡು, ನಮ್ಮಮ್ಮ ತಾಯಿ ಅಣ್ಣಮ್ಮ, ಅಂದದ ಅರಮನೆ, ರಾಗಾತಾಳ, ಅವಳಚರಿತ್ರೆ, ಮುಂತಾದವುಗಳಾಗಿವೆ.










ಈ ರಾಜಾಶಂಕರ್ ನಟನ ಬಗ್ಗೆ ನಮಗೆ ಇಷ್ಟೊಂದು ವಿಷಯ ಗೊತ್ತಿರಲಿಲ್ಲ, ತಿಳಿಸಿಕೊಟ್ಟ ಲೇಖಕರಿಗೆ ಮತ್ತು ಪ್ರಕಟಿಸಿದ ಜನಮನ ಕನ್ನಡ ಬಳಗಕ್ಕೆ ಧನ್ಯವಾದ ಸರ್
ಈಗಲೇ ನಮಗೆಲ್ಲ ಗೊತ್ತಾಗಿದ್ದು ರಾಜಾಶಂಕರ್ ಕೂಡ ಒಬ್ಬ ಹೀರೋ ಆಗಿದ್ದರು ಎಂದು
ಅತ್ತ್ಯುತ್ತಮ ಕಲಾವಿದ ನ ಬಗ್ಗೆ ಒಂದೊಳ್ಳೆ ಲೇಖನ ಪ್ರಕಟಿಸಿದ ನಿಮಗೆ ಧನ್ಯವಾದ
ಅಪರೂಪದ ಶ್ರೇಷ್ಠ ಕಲಾವಿದ ರಾಜಾಶಂಕರ್ ಸೈಲೆಂಟ್ ಪಾತ್ರದಲ್ಲಿ ಹೆಚ್ಚಾಗಿ ನಟಿಸಿದ್ದರು
ಉತ್ತಮ ಅಂಕಿ-ಅಂಶ ಇರುವ ಬರಹ, ಧನ್ಯವಾದ
First class article about silent actor RAJASHANKARR
ಧನ್ಯವಾದ ಲವ ಸರ್
ರಾಜಾಶಂಕರ್ ಲೇಖನ ಓದಿ ಖುಷಿಯಾಯ್ತು ಸರ್
ಬಹಳ ದಿನಗಳ ನಂತರ ಸಿನಿಮಾ ನಟನಟಿಯರ ಕುರಿತಾದ ಒಂದು ಉತ್ತಮ ಲೇಖನ ಓದಿದಂತಾಗಿ ಮನಸ್ಸಿಗೆ ಏನೋ ಒಂಥರ ಸಮಾಧಾನ ಆಯ್ತು, ಇದಕ್ಕೆ ಕಾರಣರಾದ ಎಲ್ಲರಿಗೂ ನನ್ನ ಮನಂಪೂರ್ವಕ ಅಭಿನಂದನೆಗಳು