ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಮನೋಜ್ಞ ನಟಿ ಕೃಷ್ಣಕುಮಾರಿ… ಚಿತ್ರಬದುಕು ಹೇಗಿತ್ತು?

ದಕ್ಷಿಣಭಾರತದಲ್ಲಿ ಹಲವು ನಟಿಯರು ತಮ್ಮ ನಟನೆ ಮೂಲಕ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ಒಂದೊಂದು ಕಾಲಕ್ಕೆ ಒಬ್ಬೊಬ್ಬ ನಟಿಯರು ಬೇಡಿಕೆಯ ಮತ್ತು ಜನಪ್ರಿಯ ನಟಿಯರಾಗಿ ಮೆರೆದಿದ್ದಾರೆ. ಅವತ್ತಿನ ಕಾಲಕ್ಕೆ ಚಿತ್ರರಂಗಕ್ಕೆ ಕಾಲಿಡಲು ಹಿಂಜರಿಯುತ್ತಿದ್ದ ಸಮಯದಲ್ಲಿ ಕೆಲವೇ ಕೆಲವು ನಟಿಯರು ಬಣ್ಣ ಹಚ್ಚಿದಲ್ಲದೆ ತಮ್ಮ ಮನೋಜ್ಞ ಅಭಿನಯದ ಮೂಲಕ ಚಿತ್ರರಸಿಕರ ಮನದಲ್ಲಿ ಚಿರವಾಗಿ ಉಳಿದು ಬಿಟ್ಟಿದ್ದರು… ಇಂತಹ ನಟಿಯರ ಪೈಕಿ ಹಿರಿಯ ನಟಿ ಕೃಷ್ಣಕುಮಾರಿ ಒಬ್ಬರಾಗಿದ್ದಾರೆ. ಇವರ ಚಿತ್ರ ಬದುಕಿನ ಬಗ್ಗೆ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಬರೆದಿದ್ದಾರೆ… ಓದಿ ಬಿಡಿ…

ಬ್ರಿಟಿಷ್ ಆಡಳಿತ ಕಾಲದ ಭಾರತ ದೇಶದ ಅವಿಭಜಿತ ಬಂಗಾಳ ರಾಜ್ಯದ 24 ಪರಗಣ ಜಿಲ್ಲೆಯ ನೌಹಾತಿಯಲ್ಲಿ 6ನೇ ಮಾರ್ಚಿ 1933ರಂದು ಹಿರಿಯ ನಟಿ ಕೃಷ್ಣಕುಮಾರಿಯವರು ಜನಿಸಿದರೂ ಕಾರಣಾಂತರದಿಂದ ಕ್ರಮೇಣ ಆಂಧ್ರದಲ್ಲಿ ನೆಲೆಸಿದರು. ಇವರ ಒಡಹುಟ್ಟಿದ ಸಹೋದರಿ ಸಾಹುಕಾರ್ ಜಾನಕಿ ಕೂಡ ಭಾರತದ ಓರ್ವ ಖ್ಯಾತ ನಟಿ ಎಂಬುದು ವಿಶೇಷ. ಲಕ್ಷ್ಮೀಬಾಯಿ-ಕಮಲಾಬಾಯಿ ಸೋದರಿಯರು, ಪಂಡರಿಬಾಯಿ- ಮೈನಾವತಿ ಸೋದರಿಯರು ನಂತರದ 3ನೇ ಸೋದರೀ ಜೋಡಿ ಇವರಿಬ್ಬರದು. ಈ ಅಪೂರ್ವ ಜೋಡಿ ನಟಿಯರು 1950 ಮತ್ತು 1960ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಮ್ರಾಜ್ಞಿ ಯರಂತೆ ಮೆರೆದರು.
ಇದನ್ನೂ ಓದಿ: ನಟ ಅರುಣಕುಮಾರ್ ಹರಿಕಥಾ ವಿದ್ವಾಂಸ ಗುರುರಾಜಲುನಾಯ್ಡು ಆಗಿ ಖ್ಯಾತಿ ಪಡೆದಿದ್ದೇಗೆ? ಇಲ್ಲಿದೆ ರೋಚಕ ಕಥೆ!
ಕೃಷ್ಣಕುಮಾರಿ ತಮ್ಮ 18ನೇ ವಯಸ್ಸಿನಲ್ಲಿ 1951ರಲ್ಲಿ ತೆರೆಕಂಡ ನವ್ವಿತೆ ನವರತ್ನಾಲು ತೆಲುಗು ಫಿಲಂ ಮೂಲಕ ಪಾದಾರ್ಪಣೆ ಮಾಡಿದರು. ಆದರೆ ಇವರು ಖ್ಯಾತರಾಗಿದ್ದು ಅದೇ ವರ್ಷ ತೆರೆಕಂಡ ಇವರು ನಟಿಸಿದ 2ನೇ ಸಿನಿಮಾ“ಪಾತಾಳ ಭೈರವಿ” ತೆಲುಗು ಚಿತ್ರದ ಮೂಲಕ. ನೂತನ ದಾಖಲೆ ನಿರ್ಮಿಸಿದ ಈಚಿತ್ರದ ಕಥೆ ಆಧಾರಿಸಿ ನಿರ್ಮಿಸಿದ 8 ವಿವಿಧ ಭಾಷೆಗಳಲ್ಲಿ ರೀಮೇಕ್ ಅಥವಾ ಡಬ್ಡ್ ಚಿತ್ರವು ಭಾರತದಾದ್ಯಂತ ರಿಲೀಸ್ ಆಗಿ ಧೂಳೆಬ್ಬಿಸಿದ್ದು ಅಮೋಘ ಇತಿಹಾಸ!

ಕೃಷ್ಣಕುಮಾರಿ ತಮ್ಮ ಚಿತ್ರರಂಗದ ಜೀವಿತ ಅವಧಿಯಲ್ಲಿ ಒಟ್ಟು 200ಕ್ಕೂ ಹೆಚ್ಚಿನ ಕನ್ನಡ, ಹಿಂದಿ, ತಮಿಳು, ತೆಲುಗು, ಬಂಗಾಲಿ ಹಾಗೂ ಮಲಯಾಳಂ, ಆರು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದರು. ಈ ಪೈಕಿ ಹತ್ತಾರು ಕನ್ನಡ ಚಿತ್ರಗಳೂ ಒಳಗೊಂಡಿವೆ. ಇವರು ನಟಿಸಿದ ಚೊಚ್ಚಲ ಕನ್ನಡ ಸಿನಿಮಾ 1953ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಫಿಲಂ ಗುಣಸಾಗರಿ. ಆದರೆ ಇವರು ಕನ್ನಡನಾಡಿನ ಜನಮನಗೆದ್ದು ಮನೆ ಮಾತಾದುದು 1954ರಲ್ಲಿ ಬಿಡುಗಡೆ ಯಾದ ಜಲದುರ್ಗ ಕನ್ನಡ ಚಿತ್ರದ ಮೂಲಕ…
ಇದನ್ನೂ ಓದಿ: ಕನ್ನಡ ಕಲಾ ರಸಿಕರ ಮನದಲ್ಲಿ ಅಚ್ಚಳಿಯದ ಹಿರಿಯ ನಟ ಕಲ್ಯಾಣಕುಮಾರ್… ಇವರು ನಟಿಸಿದ ಸಿನಿಮಾಗಳೆಷ್ಟು?
ವರನಟ ರಾಜಕುಮಾರ್ ಮತ್ತು ಕಲಾರತ್ನ ರಾಜೇಶ್ ಸೇರಿದಂತೆ ಭಾರತದ ದಿಗ್ಗಜ ನಟರಾದ ಕಿಶೋರ್ ಕುಮಾರ್, ಎಂ.ಜಿ.ರಾಮ ಚಂದ್ರನ್ (MGR), ಶಿವಾಜಿಗಣೇಶನ್, ಎನ್.ಟಿ. ರಾಮರಾವ್, ಎ.ನಾಗೇಶ್ವರರಾವ್, ಕಾಂತಾರಾವ್ ಜಗ್ಗಯ್ಯ ಕೃಷ್ಣ ಮುಂತಾದವರ ಜತೆ ನಟಿಸಿದ್ದ ಅಪ್ರತಿಮ ಕಲಾವಿದೆ. ಇವರ ಅತ್ಯುತ್ತಮ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಜತೆಗೆ ವಿವಿಧ ರಾಜ್ಯಗಳ ರಾಜ್ಯಪ್ರಶಸ್ತಿ ಹಾಗೂ ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿ ದೊರಕಿತ್ತು.

ಆಗಿನ ಇಂಡಿಯಾದ ಅತ್ಯಧಿಕ ಪ್ರಸಾರದ ಟಾಪ್ ನಂ.1ವೀಕ್ಲೀ ಎನಿಸಿದ್ದ ಸುಪ್ರಸಿದ್ಧ ‘ಸ್ಕ್ರೀನ್’ [ಬಿಸಿನೆಸ್ಮನ್, ಇಂಡಿಯನ್ ಎಕ್ಸ್ಪ್ರೆಸ್ ಸಂಸ್ಥೆ] ಸಿನಿವಾರಪತ್ರಿಕೆ ಸಂಪಾದಕ ಅಜಯ್ ಮೋಹನ್ ಖೇತಾನ್ರನ್ನು 1969ರಲ್ಲಿ ವಿವಾಹವಾದರು. ಈ ದಂಪತಿಯ ಏಕೈಕ ಮಗಳು ದೀಪಿಕಾಳನ್ನು ಸುಪ್ರಸಿದ್ಧ ಎಂ.ಟಿ.ಆರ್. ಹೋಟೆಲ್, ಎಂ.ಟಿ.ಆರ್. ಮಸಾಲೆ ಇತ್ಯಾದಿ ತಯಾರಿಕಾ ಖ್ಯಾತಸಂಸ್ಥೆಯ ವಿಕ್ರಂಮಯ್ಯ ಅವರೊಡನೆ ಮದುವೆ ಮಾಡಿ ಕೊಡಲಾಯಿತು. ಆ ನಂತರ ತಮ್ಮ ಮಗಳು ಮೊಮ್ಮಕ್ಕಳ ಜತೆ ಬೆಂಗಳೂರಲ್ಲಿ ವಾಸವಿದ್ದರು ಕೃಷ್ಣಕುಮಾರಿಯ ಪತಿ ಅಜಯ್ಮೋಹನ್ ಖೇತಾನ್ 2012ರಲ್ಲೆ ನಿಧನರಾಗಿದ್ದರು.
ಇದನ್ನೂ ಓದಿ: ರಿಯಲ್ ಹೀರೋ ಮೈಸೂರಿನ ಕೆಂಪರಾಜ ಅರಸು… ಇದು ಕನ್ನಡಚಿತ್ರರಂಗದಲ್ಲಿ ಶೋಕಿಗಾಗಿ ನಟನಾದವನ ಕಥೆ!
ಭಾರತ ದೇಶದಾದ್ಯಂತ ಬಹುತೇಕ ಎಲ್ಲ ಪ್ರಮುಖ ನಗರ,ಜಿಲ್ಲೆ,ರಾಜ್ಯಗಳನ್ನು ಕಣ್ಣಾರೆ ಕಂಡು ಅಲ್ಲೆ ವಸತಿಯೂಡಿ ಅನುಭವ ಪಡೆದ ಈ ಹಿರಿಯ ನಟಿ ತೆಲುಗು ಮೂಲದ ಕಲಾವಿದೆ ಆಗಿದ್ದರೂ ಕನ್ನಡನಾಡು, ಕನ್ನಡಿಗರನ್ನು ತುಂಬ ಇಷ್ಟಪಡುತ್ತಿದ್ದರು. ಇವರಂತೆಯೇ ಈಕೆಯ ಸೋದರಿ ಸಾಹುಕಾರ್ ಜಾನಕಿಯವರೂ ಸಹ ಕರ್ನಾಟಕ ಮತ್ತು ಕನ್ನಡ ಎರಡನ್ನೂ ಬಹಳ ಮೆಚ್ಚಿಕೊಂಡಿದ್ದ ತೆಲುಗು ಚಿತ್ರರಂಗದವರಲ್ಲಿ ಪ್ರಮುಖರಾಗಿದ್ದರು.

ಇದೇ ಕಾರಣಕ್ಕಾಗಿಯೇ ಕೃಷ್ಣಕುಮಾರಿಯು ಕನ್ನಡನಾಡಿನ ರಾಜಧಾನಿಯಲ್ಲಿ ತಮ್ಮ ಜೀವಿತದ ಕಡೆಯತನಕ ನೆಲೆಸಿದ್ದರು. ಕಾಲಾಯ ತಸ್ಮೈನಮಃ ಎಂಬಂತೆ ಈ ಖ್ಯಾತ ಹಿರಿಯ ನಟಿ ಕೃಷ್ಣಕುಮಾರಿ ವಯೋಸಹಜ ಖಾಯಿಲೆಯಿಂದಾಗಿ ದಿನಾಂಕ 24ನೆ ಜನವರಿ 2018 ರಂದು ತಮ್ಮ 85ನೆಯ ವಯಸ್ಸಲ್ಲಿ ಬೆಂಗಳೂರಿನ ತಮ್ಮದೇ ಸ್ವಂತ ಫಾರ್ಮ್ ಹೌಸ್ ನಿವಾಸದಲ್ಲಿ ದೈವಾಧೀನರಾದರು!
ಇಂಥ ಓರ್ವ ಶ್ರೇಷ್ಠ ಹಿರಿಯ ಅಭಿನೇತ್ರಿ ಕಣ್ಮರೆಯಾದುದರ ಪರಿಣಾಮವಾಗಿ ಚಂದನವನಕ್ಕೆ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಯಿತು ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ! ಕೃಷ್ಣಕುಮಾರಿಯವರು ಎಂದೂ ಪ್ರಶಸ್ತಿ ಬಹುಮಾನ ಬಿರುದು ಜನಪ್ರಿಯತೆಯನ್ನು ಹಿಂಬಾಲಿಸಿ ಹೋದವರಲ್ಲ, ಬದಲಿಗೆ ಅವೆಲ್ಲವೂ ಸಹ ಇವರನ್ನೆ ಹುಡುಕಿ ಬಂದು ಇವರ ಪ್ರತಿಭಾ ಕಿರೀಟಕ್ಕೆ ಸೇರಿದವು. ಕೃಷ್ಣಕುಮಾರಿ ನಟಿಸಿದ ಕನ್ನಡ ಫಿಲಂಸ್ ಗಳು ಯಾವುವು ಎಂದರೆ, ಗುಣಸಾಗರಿ, ಜಲದುರ್ಗ, ಆಶಾಸುಂದರಿ, ದಶಾವತಾರ, ಭಕ್ತಕನಕದಾಸ,ಸ್ವರ್ಣಗೌರಿ, ಶ್ರೀಶೈಲಮಹಾತ್ಮೆ, ಸಂಪೂರ್ಣರಾಮಾಯಣ, ಮಹಾತ್ಮಕಬೀರ್, ಚಂದ್ರಕುಮಾರ, ಸತಿಸಾವಿತ್ರಿ ನಮ್ಮಊರು, ಮುಂತಾದವು.









Thank you very much LAVAKUMAR sir 🙏
ಭಕ್ತ ಕನಕದಾಸ, ಸ್ವರ್ಣಗೌರಿ, ನಮ್ಮಊರು(ರಾಜೇಶ್) ಸಿನಿಮಾದ ಶ್ರೇಷ್ಠ ಅಭಿನೇತ್ರಿ ಕೃಷ್ಣಕುಮಾರಿ ರವರ ಲೇಖನ ಸೂಪರ್.. ನಮಸ್ಕಾರ ಧನ್ಯವಾದ ಸರ್
ನಮ್ಮ ತಲೆಮಾರಿನ ಕನ್ನಡದ ಮಾತ್ರವಲ್ಲ ದಕ್ಷಿಣ ಭಾರತದ ಖ್ಯಾತ ನಟಿ ಕೃಷ್ಣಕುಮಾರಿ ಬಗ್ಗೆ ಅಮೋಘ ಲೇಖನ. ಇದಕ್ಕೆ ಕಾರಣರಾದ ಎಲ್ಲರಿಗೂ ನಮೋ ನಮಃ
ಹಿರಿಯ ನಟಿ ಕೃಷ್ಣಕುಮಾರಿ ರವರ ಬಗ್ಗೆಲ್ಲ ಬರೆದಿರುವ ಕುಮಾರಕವಿಯವರ ಲೇಖನ ಉಪಯುಕ್ತ ಲೇಖನವಾಗಿದ್ದು ನಮಂಥ ಈಗಿನ ಯುವ ಪೀಳಿಗೆಗೆ ಬಹಳ ವಿಷಯ ತಿಳಿಸುವಂತಿದೆ, ಧನ್ಯವಾದ ಸರ್ ನನಗಂತೂ ನಿಮ್ಮ ಜನಮನ ಕನ್ನಡ ಪತ್ರಿಕೆ ಅಚ್ಚುಮೆಚ್ಚಿನದ್ದಾಗಿದೆ. ಕವಿಯವರು status ಗೆ ಹಾಕಿದ ಕೂಡಲೇ ಬಕ ಪಕ್ಷಿಯಂತೆ ಕಾಯುತ್ತಿದ್ದು ಓದಿಬಿಡುತ್ತೇನೆ, ಮತ್ತೊಮ್ಮೆ ಧನ್ಯವಾದಗಳು
ಭಕ್ತಕನಕದಾಸ, ಸ್ವರ್ಣಗೌರಿ, ನಮ್ಮಊರು(ರಾಜೇಶ್) ಸಿನಿಮಾದ ಶ್ರೇಷ್ಠ ಅಭಿನೇತ್ರಿ ಕೃಷ್ಣಕುಮಾರಿ ರವರ ಲೇಖನ ಸೂಪರ್.. ನಮಸ್ಕಾರ ಧನ್ಯವಾದ ಸರ್
ನಮ್ಮ ತಂದೆ ಕಾಲದ ಆಗಿನ ನಟನಟಿಯರ ಸಿನಿಮಾ ಸೋಶಿಯಲ್ ಮೆಸೇಜ್ ಇರುವಂತದ್ದಾಗಿತ್ತು. ಕೃಷ್ಣಕುಮಾರಿ ಅವರ ಕುರಿತು ಬರೆದ ಈವತ್ತಿನ ಆರ್ಟಿಕಲ್ ಏಕ್ ದಂ ಫಸ್ಟ್ ಕ್ಲಾಸ್
Excellent article written about legendary actress KRISHNAKUMARI, thanks sir 👍 🙏
ಹಳೇ ಕಾಲದ ಸಿನಿಮ ತಾರೆ ಕೃಷ್ಣಕುಮಾರಿಯ ಲೇಖನ ಬಹಳ ಚೆನ್ನಾಗಿದೆ
ಕೃಷ್ಣ ಕುಮಾರಿ ಅವರ ಬಗ್ಗೆ ಈ ಲೇಖನ ಓದುವ ಮೊದಲು ನನಗೇನೂ ಗೊತ್ತೇ ಇರಲಿಲ್ಲ, ಧನ್ಯವಾದ ಸರ್
ಬೊಂಬಾಟ್ ಆಗಿ ಬರೆದ ಪುರಾತನ ಹೀರೋಯಿನ್ ಕೃಷ್ಣಕುಮಾರಿ ಬಗ್ಗೆ ಚೆನ್ನಾಗಿ ತಿಳಿಸಿದ ನಿಮಗೆ ನಮಸ್ಕಾರ