ಮೈಸೂರು: ಮೈಸೂರು ಜಿಲ್ಲೆಯಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು, ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಮೂವರು ಬಲಿಯಾಗಿದ್ದರೆ, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಈ ನಡುವೆ ಅಲ್ಲಲ್ಲಿ ಹುಲಿ ಹೆಜ್ಜೆಗಳು ಕಂಡು ಬರುತ್ತಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ, ಹುಣಸೂರು, ಹೆಚ್.ಡಿ.ಕೋಟೆ, ಸರಗೂರು ಸೇರಿದಂತೆ ಹಲವು ಕಡೆಗಳಲ್ಲಿ ಜನ ಭಯಭೀತರಾಗಿದ್ದು, ಮನೆಯಿಂದ ಹೊರಗೆ ಹೋಗಲು ಹಿಂದೇಟು ಹಾಕುವಂತಾಗಿದೆ.

ಈಗಾಗಲೇ ಹುಲಿಯನ್ನು ಸೆರೆಹಿಡಿಯುವ ಪ್ರಯತ್ನಗಳು ಹಲವೆಡೆ ನಡೆಯುತ್ತಿದ್ದರೂ ಹುಲಿಗಳು ಮಾತ್ರ ತಪ್ಪಿಸಿಕೊಳ್ಳುತ್ತಿವೆ. ಕಾಡಿನಿಂದ ನೇರವಾಗಿ ನಾಡಿಗೆ ಬರುತ್ತಿರುವ ಅವು ಜಾನುವಾರು, ಸಾಕುಪ್ರಾಣಿಗಳು ಸೇರಿದಂತೆ ರೈತರ ಮೇಲೆಯೇ ದಾಳಿ ಮಾಡುತ್ತಿವೆ. ಈ ನಡುವೆ ಸರಗೂರು ತಾಲ್ಲೂಕಿನ ಹೆಗ್ಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗನೂರು ಗ್ರಾಮದಲ್ಲಿ ಮೂರು, ನಾಲ್ಕು ತಿಂಗಳಿಂದ ಹುಲಿ ಪ್ರತ್ಯಕ್ಷವಾಗುತ್ತಿದ್ದು, ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದರೂ ಸೆರೆ ಸಿಕ್ಕದೆ ತಪ್ಪಿಸಿಕೊಳ್ಳುತ್ತಿದೆ.
ಕಳೆದ ಮೂರು ದಿನಗಳ ಹಿಂದೆ ಹೆಗ್ಗನೂರು ಗ್ರಾಮದ ಸರಗೂರಯ್ಯ ಎಂಬುವವರು ದನ ಮೇಯಿಸಲು ಹೋಗಿದ್ದು ಮಧ್ಯಾಹ್ನದ ಸಮಯದಲ್ಲಿ ಪುಟ್ಟ ಮಾಧು ಎಂಬುವವರ ಹಸುವಿನ ಮೇಲೆ ಹುಲಿ ದಾಳಿ ಮಾಡಿದ್ದು ದನ ಮೇಯಿಸುತ್ತಿದ್ದವರು ಕಂಡು ಹಸುವನ್ನು ಬಿಡಿಸಿದ್ದಾರೆ ಹಾಗೂ ಬುಧವಾರ ಸುರೇಶ್ ಎಂಬುವವರ ಹೋರಿ ಮೇಲೆ ದಾಳಿ ಮಾಡಿ ಹೋರಿ ಸಾವನ್ನಪ್ಪಿದೆ ಈ ಹಿಂದೆ ನಾಗರಾಜು ಎಂಬುವವರು ಹುಲಿಯನ್ನು ನೋಡಿ ಓಡಿ ತಪ್ಪಿಸಿಕೊಂಡಿದ್ದಾರೆ. ಅಲ್ಲದೆ ಗ್ರಾಮದ ಹಲವು ಮಂದಿ ಹುಲಿಯ ಚಲನವಲನವನ್ನು ನೋಡಿದ್ದಾರೆ. ಈ ಸಂಬಂಧ ಮಾಹಿತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ನೀಡಿದ್ದರು.

ಹುಲಿ ಗ್ರಾಮದ ಆಸುಪಾಸಿನಲ್ಲಿ ಅಡ್ಡಾಡುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸುತ್ತ ಮುತ್ತಲ ಗ್ರಾಮದ ರೈತರುಗಳು ತಮ್ಮ ಜಮೀನುಗಳಿಗೆ ಹೋಗಿ ಬರಲು ಹಾಗೂ ಈ ಹಿಂದೆ ಬೆಳ್ಳಂಬೆಳಗ್ಗೆ ರೈತರು ತಮ್ಮ ದನ ಕರುಗಳು, ಜಮೀನಿನ ಕೆಲಸಕ್ಕೆ ಹೋಗಲು 10 ಗಂಟೆ ಮೇಲೆ ಹಾಗೂ 4 ರಿಂದ 5 ಗಂಟೆ ಒಳಗೆ ತಮ್ಮ, ತಮ್ಮ ಮನೆ ಸೇರಿಕೊಳ್ಳಲು ಸೂಚಿಸಿದ್ದರು. ಇನ್ನು ಜಮೀನಿಗೆ ಹೋದವರು ಮರಳಿ ಬರುವುದನ್ನೇ ಕಾಯುತ್ತಾ ಮನೆಯವರು ನಿಲ್ಲುವಂತಾಗಿದೆ.
ಈ ನಡುವೆ ಹುಲಿ ಉಪಟಳದ ಬಗ್ಗೆ ಅರಿತ ಅರಣ್ಯ ಇಲಾಖೆಯ ಎಸಿಎಫ್ ಪರಮೇಶ್ ರವರು ಹಾಗೂ ಸರಗೂರು ವಲಯದ ಅಕ್ಷಯ್ ಕುಮಾರ್ ಮತ್ತು ಬೇಗೂರು ವಲಯದ ಆರ್ ಎಫ್ ಓ ಅಮೃತೇಶ್ವರ್ ಗುಂಡ್ರೆ ವಲಯ, ಎಲ್ ಟಿ ಎಫ್, ಆನೆಪಡೆ, ಇಟಿ ಎಫ್, ಎಸ್ ಟಿ ಪಿ ಎಫ್ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಹುಲಿಯನ್ನು ಹಿಡಿಯಲು ಡ್ರೋನ್ ಕ್ಯಾಮೆರಾ ಹಾಗೂ ಆನೆಗಳ ಮುಖಾಂತರ ಕಾರ್ಯಚರಣೆ ನಡೆಸಲಾಯಿತು. ಆದರೆ ಹುಲಿ ಚಲನವಲನ ಹೆಜ್ಜೆ ಗುರುತು ಸಿಗುತ್ತದೆ ಮತ್ತು ಕೊಂದ ಹಸುವನ್ನು ತಿನ್ನಲು ಬಂದಿಲ್ಲ.

ಇದೀಗ ದುಬಾರೆಯಿಂದ ಬಂದ ಪ್ರಶಾಂತ ಮತ್ತು ಲಕ್ಷ್ಮಣ ಈ ಎರಡು ಆನೆಗಳ ಮೂಲಕ ಮತ್ತು ಡ್ರೋಣ್ ಕ್ಯಾಮೆರಾ ಬಿಟ್ಟು ಕಾರ್ಯಾಚರಣೆ ನಡೆಸಲಾಯಿತು ಆದರೆ ಎಲ್ಲಿಯೂ ಹುಲಿಯ ಚಲನ ವಲನ ಬಗ್ಗೆ ಮಾಹಿತಿ ಸಿಗಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಗ್ರಾಮಸ್ಥರು ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ. ಸದ್ಯ ಗ್ರಾಮಸ್ಥರು ಯಾವಾಗ ಹುಲಿ ಸೆರೆ ಸಿಕ್ಕುತ್ತದೆಯೋ ಎಂದು ಕಾಯುತ್ತಿದ್ದಾರೆ.








