ArticlesLatest

ಮರಗಳನ್ನೇ ಮಕ್ಕಳಂತೆ ಬೆಳೆಸಿದ ಸಾಲು ಮರದ ತಿಮ್ಮಕ್ಕ… ಹಸಿರನ್ನೇ ಉಸಿರಾಗಿಸಿದ ಜೀವ

ಮಕ್ಕಳನ್ನಷ್ಟೆ ಹೆತ್ತು ಬೆಳೆಸಿ ಸಂಸಾರದ ಬಗ್ಗೆಯಷ್ಟೆ ಆಲೋಚಿಸುತ್ತಿದ್ದ ಕಾಲದಲ್ಲಿ ಬರಡು ನೆಲದಲ್ಲಿ ಮರಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿ ಬೆಳೆಸಿ ಪರಿಸರಕ್ಕೆ  ಮತ್ತು ಸಮಾಜಕ್ಕೆ ಕೊಡುಗೆಯಾಗಿ ನಿಂತ ಸಾಲು ಮರದ ತಿಮ್ಮಕ್ಕ ಇವತ್ತು ನಮ್ಮ ಜೊತೆಗಿಲ್ಲದೆ ಇರಬಹುದು ಆದರೆ ಅವರು ನೆಟ್ಟು ಬೆಳೆಸಿದ ಮರಗಳು ಅವರ ಹೆಸರನ್ನು ಹಸಿರಾಗಿಸಿವೆ… ಉಸಿರಾಗಿವೆ.. ಇಂತಹ  ಪದ್ಮಶ್ರೀ ಶತಾಯುಷಿ ಸಾಲು ಮರದ ತಿಮ್ಮಕ್ಕರ ಬಗ್ಗೆ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಬರೆದಿದ್ದಾರೆ.

1911ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಪುಟ್ಟಗ್ರಾಮ ಕಕ್ಕೇನಹಳ್ಳಿಯ ಸಾಧಾರಣ ರೈತ ಕುಟುಂಬದಲ್ಲಿ ಜನಿಸಿದ 7ನೇ ಸಂತಾನವೇ ತಿಮ್ಮಕ್ಕ. ಆಗಿನ ಕಾಲದ ಗ್ರಾಮೀಣ ಪದ್ದತಿಯ ಬಾಲ್ಯವಿವಾಹ ಜೇಡರ ಬಲೆಗೆ ಸಿಲುಕಿ 8ನೇ ವಯಸ್ಸಿಗೇ ಕಂಕಣ ಕೂಡಿ ಬಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಯಜಮಾನ್ ದೊಡ್ಡಯ್ಯನ ಪುತ್ರ ಬಿಕ್ಕಲುಚಿಕ್ಕಯ್ಯ ಎಂಬುವ 17 ವರ್ಷದ ಹುಡುಗನೊಡನೆ ಹಳ್ಳಿ ಸಂಪ್ರದಾಯದಂತೆ ವಿವಾಹವಾಗಿ ಗೃಹಿಣಿ ಯಾದರು. ಎಳೆಬಾಲೆ ಮದುವೆಯಾಗಿ 20ವರ್ಷ ಕಳೆದರೂ ಮಕ್ಕಳಭಾಗ್ಯ ಸಿಗಲಿಲ್ಲ. ಇದೇ ಚಿಂತೆಗೊಳಗಾಗಿದ್ದ ದಂಪತಿಗೆ ದೇವರು ತೋರಿಸಿದ ಮಾರ್ಗವೇ “ಮರಗಿಡಮಕ್ಕಳ” ತಂದೆ ತಾಯಿ ಆಗುವ ಸದವಕಾಶ.

ಗಿಡನೆಟ್ಟು ಮರಬೆಳೆಸಿ ನೂರ್ಕಾಲ ಬದುಕಿರಿ ಎಂಬ ಭಗವಂತನ ವರಪ್ರಸಾದದಿಂದ ಪ್ರೇರಣೆಗೊಂಡ ಈ ದಂಪತಿ ಉತ್ಸಾಹ ಉಲ್ಲಾಸದ ಚಿಲುಮೆಯಾಗಿ 1932ರಿಂದಲೇ ಕಾರ್ಯೋನ್ಮುಖರಾದರು. ದೈವಸಂಕಲ್ಪದಂತೆ ತಿಮ್ಮಕ್ಕ-ಚಿಕ್ಕಯ್ಯ ಸಸ್ಯಮಹಾಯಜ್ಞ ಪ್ರಾರಂಭಿಸಿದರು. ಮೊಟ್ಟಮೊದಲಿಗೆ ಒಂದು ಡಜನ್ ಗಿಡ ನೆಟ್ಟು ಪೋಷಿಸುವುದರಿಂದ ಆರಂಭಿಸಿ ಸುಮಾರು 800 ಮರಗಳನ್ನು ಬೆಳೆಸುವಲ್ಲಿ ಸತತ 70 ವರ್ಷ ಪರ್ಯಂತ ನಿಸರ್ಗಯಾಗ ಮಾಡಿದರು. ಈ ಪೈಕಿ 500ಕ್ಕೂ ಹೆಚ್ಚಿನ ಆಲದ ಮರ ಸಾಲುಗಳನ್ನೆ ಸೃಷ್ಟಿಸಿ ವಿಶ್ವ ಕೀರ್ತಿಗೆ ಭಾಜನರಾದರು. ಪ್ರತಿದಿನ ತಮ್ಮ ನಿತ್ಯಕರ್ಮ ಮರೆತರೂ ಗಿಡ ನೆಟ್ಟು ಮರ ಪೋಷಿಸುವ ಸತ್ಕಾರ್ಯ ತಪ್ಪದೆ ಸಾಗುತ್ತಿತ್ತು. ಮಕ್ಕಳಿಲ್ಲವೆಂಬ ಕೊರಗು ನೀಗಿಸಿಕೊಳ್ಳಲು ಮರಗಿಡವನ್ನೇ ಸ್ವಂತ ಮಕ್ಕಳಂತೆ ಕಂಡು ನಿರಂತರ ಪೋಷಿಸಿದರು.

ಇಂತಹ ಶ್ರೇಷ್ಠ ಕಾರ್ಯದಲ್ಲಿ ಹಗಲಿರುಳು ಜತೆಯಲ್ಲಿದ್ದು ಒಬ್ಬರಿಗೊಬ್ಬರು ನೆರವಾಗಿ ಕಾಯಕ ಮಾಡಿ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟರು. ದನ- ಜನಗಳಿಗೆ ನೆರಳು ನೀಡುವ, ಪ್ರಾಣಿಪಕ್ಷಿಗೆ ನೆಲೆ ಆಗುವ ಬೃಹತ್ ಮರಗಳನ್ನ ಬೆಳೆಸುವ ಮೂಲಕ ಅನೇಕ ಜೀವ ಸಂಕುಲಕ್ಕೆ ಆಶ್ರಯದಾತರಾದರು. ಆ ಮೂಲಕ ತೃಪ್ತಿ ನೆಮ್ಮದಿ ಪಡೆದುಕೊಳ್ಳುವಲ್ಲಿ ಯಶಸ್ವಿ ಆದರು. ಇವರಿಬ್ಬರ ನಿಸ್ವಾರ್ಥ ನಿರಪೇಕ್ಷ ಶ್ಲಾಘನೀಯ ವಂದನಾರ್ಹ ಚಿರಸ್ಮರಣೀಯ ಕೈಂಕರ್ಯಕ್ಕೆ ಸ್ಪಂದಿಸಿದ ಪ್ರಕೃತಿಮಾತೆ ಇವತ್ತಿಗೂ ತನ್ನೊಡಲ ಬಸುರನ್ನು ಹಸಿರಾಗಿಸಿ ನಿತ್ಯನಿರ್ಮಲ ಸತ್ಯಸುಂದರಳಾಗಿ ನಿರಂತರ ಫಳಫಳ ಹೊಳೆಯುತ್ತ ಬೆಳಗಿ ಬಾಳುತ್ತಿದ್ದಾಳೆ. ಇವರಿಬ್ಬರ ತ್ಯಾಗ ಬಲಿದಾನ ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಅಸಾಧಾರಣ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ.

ಪ್ರಾರಂಭದಲ್ಲಿ ಐದಾರು ಕಿ.ಮೀ.ದೂರದಿಂದ ನೀರು ತುಂಬಿದ ಬಿಂದಿಗೆಯೊಂದಿಗಿನ ಬಿದಿರಿನ ಅಡ್ಡೆಯನ್ನು ಹೆಗಲಮೇಲೆ ಹೊತ್ತು ತಂದು ಸಾಕಿ ಬೆಳೆಸಿದರು. ಕಡುಬೇಸಿಗೆ ಕಾಲದಲ್ಲೂ ಸುಡುಬಿಸಿಲಿನ ತಾಪದಲ್ಲೂ ಬರಿಗಾಲಲ್ಲೇ ನಡೆದು ಗಂಟೆಗಳ ಕಾಲ ಬೋರ್ವೆಲ್ ಒತ್ತಿ, ಒಮ್ಮೊಮ್ಮೆ ತಾವು ಕುಡಿಯುವ ನೀರನ್ನೇ ಎರೆದು ಸಾಕಿ ಸಲಹಿದ್ದರು. ಒಣಗಿಹೋದ ಸಣ್ಣಪುಟ್ಟ ಕೆರೆಕುಂಟೆಗಳ ಹೂಳುತೆಗೆವ ಮತ್ತು ಇಬ್ಬರೂ ಸೇರಿ ತಿಂಗಳು ಗಟ್ಟಲೆ ತೋಡಿದ್ದ ನೆಲ ಬಾವಿಯ ಮಣ್ಣು ತೆಗೆದು ಆಳ ಹೆಚ್ಚಿಸುವ ಮೂಲಕ ಮಳೆಗಾಲದ ನೀರು ಹೆಚ್ಚು ಸಂಗ್ರಹ ಆಗುವಂತೆ ಬುದ್ದಿ ಉಪಯೋಸುತ್ತಿದ್ದರು.

ಕಾಲಕ್ರಮೇಣ ಬಿಕ್ಕಲು ಚಿಕ್ಕಯ್ಯ ಸ್ವರ್ಗಸ್ಥರಾದ ಮೇಲೆ ತಿಮ್ಮಕ್ಕ ಏಕಾಂಗಿಯಾಗಿ ಗಿಡ ನೆಡುವ ಮರ ಬೆಳೆಸುವ ಕೆಲಸವನ್ನ ಆತ್ಮವಿಶ್ವಾಸದಿಂದ ಮುಂದುವರಿಸಿದರು. ತಮ್ಮ ಸತ್ಕಾರ್ಯವನ್ನು ಸಾರ್ಥಕವಾಗಿ ಸಮರ್ಪಕವಾಗಿ ಮಾಡುತ್ತಲೇ ಸಾಲುಮರದ ತಿಮ್ಮಕ್ಕ ಹೆಸರಿಂದ ಪ್ರಸಿದ್ಧಿ ಪಡೆದು ಶತಾಯುಷ್ಯಳಾಗಿದ್ದರು. ಇವರ ಉತ್ಕೃಷ್ಟ ಸೇವೆಯ ಪರಿಮಳ ವಿಶ್ವದಾದ್ಯಂತ ಹರಡಿತು. ಇಡೀ ಜಗತ್ತು ಮೆಚ್ಚಿ ಕೊಂಡಾಡಿತು. ರಾಜ್ಯ ದೇಶ ವಿದೇಶಗಳಿಂದ ಪ್ರಶಸ್ತಿ ಬಿರುದು ಬಹುಮಾನ ಸನ್ಮಾನ ಇವರನ್ನ ಹುಡುಕಿ ಬಂದವು. ದೇಶದ ಸಾಮಾನ್ಯ ಪ್ರಜೆಯಿಂದ ಮೊದಲ್ಗೊಂಡು ಪ್ರಥಮಪ್ರಜೆ ರಾಷ್ಟ್ರಪತಿವರೆಗೂ ಜನಪ್ರಿಯತೆ ಗಳಿಸಿದರು.

ವೃಕ್ಷಮಾತೆಗೆ ದೊರಕಿದ ಗೌರವ ಪುರಸ್ಕಾರಗಳ ಕೆಲವು ಉದಾಹರಣೆ: ರಾಷ್ಟ್ರೀಯನಾಗರಿಕ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ವೃಕ್ಷಮಾತೆ ಬಿರುದು, ಮಹಿಳಾರತ್ನ ಪ್ರಶಸ್ತಿ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಇಂದಿರಾಪ್ರಿಯದರ್ಶಿನಿ ಸ್ಮರಣಾರ್ಥ ವೃಕ್ಷಮಿತ್ರ ಪ್ರಶಸ್ತಿ, ವೀತರೋಗಿನ್ ಅಂತಾರಾಷ್ಟ್ರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗಾಡ್ ಫ್ರೀ ಫಿಲಿಪ್ಸ್ ಅಂತಾರಾಷ್ಟ್ರ ಧೈರ್ಯ ಪ್ರಶಸ್ತಿ, ಸೆಂಟ್ರಲ್ ಯುನಿವರ್ಸಿಟಿ ಗೌರವ ಡಾಕ್ಟರೆಟ್, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವಿಶಾಲಾಕ್ಷಿ ಪ್ರಶಸ್ತಿ, ಇನ್ನೂ ಮುಂತಾದ ಅನೇಕ ಪ್ರತಿಷ್ಠಿತ ಪ್ರಶಸ್ತಿ, ಬಿರುದು ಬಹುಮಾನ-ಸನ್ಮಾನಗಳು ಸಂದಿವೆ.

ಕೆಲವು ವರ್ಷದಿಂದ ಹಿಲಕಲ್ ಗ್ರಾಮ ತೊರೆದು ಬೆಂಗಳೂರಿನಲ್ಲಿ ವಾಸವಿದ್ದು, ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. 14.11.2025 ಮಕ್ಕಳ ದಿನಾಚರಣೆಯಂದು ಇಹಲೋಕ ತ್ಯಜಿಸಿದ ನೂರಾರು (ವೃಕ್ಷ) ಮಕ್ಕಳ ಮಹಾತಾಯಿ ಪರಲೋಕ(ಸ್ವರ್ಗ)ದಲ್ಲೂ ಸಹಸ್ರಾರು ಸಸಿನೆಟ್ಟು ಮರಬೆಳೆಸುವ ಇರಾದೆ ಹೊತ್ತು ಶುಭ ಶುಕ್ರವಾರದಂದು ಪಯಣ ಬೆಳೆಸಿದರು. 114 ಋತುಗಳನ್ನು ಕಂಡಿದ್ದ ಸಾಲುಮರದ ತಿಮ್ಮಕ್ಕ ಆಚಂದ್ರಾರ್ಕ ಅಜರಾಮರ. ಪೂಜ್ಯ ವೃಕ್ಷಮಾತೆಯ ಪರಮ ಪಾವನ ಜೀವ- ಜೀವನ ಅಂತ್ಯದ ಪ್ರಯುಕ್ತ ಇಡೀ ಮನುಕುಲದ ಭಾವಪೂರ್ಣ ಶ್ರದ್ಧಾಂಜಲಿ….

admin
the authoradmin

22 ಪ್ರತಿಕ್ರಿಯೆಗಳು

  • ನನ್ನ 72 ವರ್ಷದ ಜೀವಮಾನದಲ್ಲಿ ಈ ತಹಲ್ ವರೆಗೂ ನೂರಾರು ಲೇಖಕರ
    ಸಾವಿರಾರು ಲೇಖನ ಓದಿದ್ದೇನೆ. ವಿಶೇಷವಾಗಿ ಎಚ್ಚೆಸ್ಕೆ, ಹಾ.ಮಾ.ನಾಯಕ, ಸಿ.ಪಿ.ಕೆ. ಬೀchi,ಟಿ.ಪಿ.ಅಶೋಕ,ಶ್ಯಾಮಸುಂದರಕುಲಕರ್ಣಿ,ಜಿ.ಹೆಚ್.ನಾಯಕ,
    ಭೂಸನೂರಮಠ, ಹನ್ನೆರಡುಮಠ, ಮುಂತಾದ ಖ್ಯಾತ ಲೇಖಕರ ಬರವಣಿಗೆ ಬಹಳ ಸೊಗಸು. ಈಗಿನ ಕಾಲದ ಹಿರಿಯ ಲೇಖಕರಲ್ಲಿ ಕುಮಾರಕವಿಯವರ ಬರವಣಿಗೆಯ ಸೊಗಡು, ಸೊಬಗು, ವಿಚಾರವಂತಿಕೆ, ಸಾಮಾಜಿಕ ಕಳಕಳಿ ಇದೆ.
    ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ಪತ್ರಿಕೋದ್ಯಮ, ಸಿನಿಮಾರಂಗ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಅಗಾಧ ಪ್ರತಿಭೆ ತೋರಿಸುತ್ತ ಬಂದಿರುವ ಸಾಹಿತ್ಯರತ್ನ
    ನಟರಾಜರವರು ದಿಟವಾಗಿ ಪ್ರಶಂಸನಾರ್ಹ ವ್ಯಕ್ತಿ-ಶಕ್ತಿ, ಇದು ನಮ್ಮಂಥವರ ಅನುಭವದ ವಿಶ್ಲೇಷಣೆ ಮನಃಪೂರ್ವಕ ಅಭಿಪ್ರಾಯ. ನಿಮ್ಮ ಜನಮನ ಪತ್ರಿಕೆಯನ್ನು ನಮ್ಮ ಗೆಳೆಯರ ಬಳಗಕ್ಕೆ ಪರಿಚಯ ಮಾಡಿಕೊಟ್ಟವರೇ ಕುಮಾರಕವಿ. ಈಸಲ ತುಸು ಹೆಚ್ಚಾಗಿಯೇ ಬರೆದಿದ್ದೇನೆ, ಅನ್ಯಥಾ ಭಾವಿಸದಿರಿ.

  • ಸಾಲುಮರದ ತಿಮ್ಮಕ್ಕ ಲೇಖನ ಓದಿದ ಬಳಿಕ ನನ್ನ ತನುಮನ ಕಂಪಿಸಿ ಕಣ್ಣಲ್ಲಿ ಕಂಬನಿ ಮಿಡಿಯಿತು. ಪತ್ರಿಕೆಯವರಿಗೆ ಮತ್ತು ಲೇಖಕರಿಗೆ ನಮೋ ನಮಃ.

  • ಸತ್ಯವಾಗಲೂ ಮನೋಜ್ಞ ಲೇಖನ ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ತುಂಬ ಸಂಕ್ಷಿಪ್ತವಾಗಿ ಹಾಗೂ ಸೂಕ್ಷ್ಮವಾಗಿ ಎಅಂಥವರಿಗೂ ಅರ್ಥವಾಗುವಂತೆ ಬರೆದ ಲೇಖಕ ನಟರಾಜ ಕವಿಯವರಿಗೆ ತುಂಬು ಹೃದಯದ ಅಭಿನಂದನೆ ಮತ್ತು ಸ್ವರ್ಗಸ್ಥರಾದ ತಾಯಿ ತಿಮ್ಮಕ್ಕನವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

  • ನಮಸ್ಕಾರ ಸರ್, ನಾನೊಬ್ಬ ಪಕ್ಕಾ ಆಧುನಿಕ ರೈತ. ಅಷ್ಟೇನೂ ದೊಡ್ಡ ವಿದ್ಯಾವಂತ ಅಲ್ಲ ಆದರೆ ಹೆಬ್ಬೆಟ್ ಸಾಲುಮರದ ತಿಮ್ಮಕ್ಕನ ಸಾಧನೆಯ ಬಗ್ಗೆ ಚಿಕ್ಕದಾದ, ಚೊಕ್ಕದಾದ ವಿಚಾರಗಳನ್ನು ಓದುಗರ ಮನಕರಗುವಂತೆ ಬರೆದ ಕವಿ ಕುಮಾರಕವಿ ನಟರಾಜರಿಗೆ ಧನ್ಯವಾದ, ಪತ್ರಿಕೆಯವರಿಗೂ ಧನ್ಯವಾದ

  • 114 ವರ್ಷ ಬದುಕಿ ಬಾಳಿದ ಪುಣ್ಯಾತಗಿತ್ತಿ ನಮ್ಮ ನಾಡಿನ ಹೆಮ್ಮೆಯ ಸಾಲುಮರದ ತಿಮ್ಮಕ್ಕ ಲೇಖನ ಓದಿ ತುಂಬ ಸಂತೋಷ ಮತ್ತೂ ದುಃಖ ಎರಡೂ ಆಗಿದೆ

  • ಪ್ರೇಮಾಪ್ರಭಾಕರ ಮಾಡುವ ನಮಸ್ಕಾರ
    ದೇವತೆ ಸಮಾನರಾದ ಸಾಲುಮರದ ತಿಮ್ಮಕ್ಕ ಅವರ ಸಾಧನೆ ಕುರಿತ ಲೇಖನ ನಮಗೆಲ್ಲ ತುಂಬ ಹಿಡಿಸಿತು.

  • ಸಾಲುಮರದ ತಿಮ್ಮಕ್ಕ ಅವರ ಲೇಖನ ಓದುವಾಗ ಮೈ ಜುಮ್ ಎನಿಸಿತು. ಕಣ್ಮುಂದೆ ಕಂಡಂತಾಯ್ತು, ಹಸಿರನ್ನೇ ಉಸಿರಾಗಿಸಿಕೊಂಡು ಬಾಳಿ ಬದುಕಿ, ಈಗ ನಿನ್ನೆಯ ದಿನ ಹೊರಟು ಹೋದ ಅಮ್ಮನಿಗೆ ಭಾವಪೂರ್ಣ ಶ್ರದ್ಧಾಂಜಲಿ.

  • ಕನ್ನಡಿಗರ ಅವ್ವ, ದೇಶದ ಅಮ್ಮ, ಪ್ರಪಂಚದ ಅಮ್ಮಮ್ಮ, ಇಡೀ ಮನುಷ್ಯ ಜಾತಿಯ ದೇವರು ಸಾಲುಮರದ ತಿಮ್ಮಕ್ಕ. ಇಂಥವರ ಬಗ್ಗೆ ಲೇಖನ ಬರೆದ ನಟರಾಜ ಕವಿಯೇ ಧನ್ಯರು….. ಇದನ್ನು ಓದಿದ ನಾವೂ ಸಹ ಧನ್ಯರು… ಜನಮನ ಕನ್ನಡ ಪತ್ರಿಕೆಯ ಬಳಗಕ್ಕೆ ನಮ್ಮೆಲ್ಲರ ಕೃತಜ್ಞತೆಗಳು.

  • Srikanth Rathod
    November 15, 2025 at 6:01 pm
    ನನ್ನ 72 ವರ್ಷದ ಜೀವಮಾನದಲ್ಲಿ ಈ ತಹಲ್ ವರೆಗೂ ನೂರಾರು ಲೇಖಕರ
    ಸಾವಿರಾರು ಲೇಖನ ಓದಿದ್ದೇನೆ. ವಿಶೇಷವಾಗಿ ಎಚ್ಚೆಸ್ಕೆ, ಹಾ.ಮಾ.ನಾಯಕ, ಸಿ.ಪಿ.ಕೆ. ಬೀchi,ಟಿ.ಪಿ.ಅಶೋಕ,ಶ್ಯಾಮಸುಂದರಕುಲಕರ್ಣಿ,ಜಿ.ಹೆಚ್.ನಾಯಕ,
    ಭೂಸನೂರಮಠ, ಹನ್ನೆರಡುಮಠ, ಮುಂತಾದ ಖ್ಯಾತ ಲೇಖಕರ ಬರವಣಿಗೆ ಬಹಳ ಸೊಗಸು. ಈಗಿನ ಕಾಲದ ಹಿರಿಯ ಲೇಖಕರಲ್ಲಿ ಕುಮಾರಕವಿಯವರ ಬರವಣಿಗೆಯ ಸೊಗಡು, ಸೊಬಗು, ವಿಚಾರವಂತಿಕೆ, ಸಾಮಾಜಿಕ ಕಳಕಳಿ ಇದೆ.
    ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ಪತ್ರಿಕೋದ್ಯಮ, ಸಿನಿಮಾರಂಗ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಅಗಾಧ ಪ್ರತಿಭೆ ತೋರಿಸುತ್ತ ಬಂದಿರುವ ಸಾಹಿತ್ಯರತ್ನ
    ನಟರಾಜರವರು ದಿಟವಾಗಿ ಪ್ರಶಂಸನಾರ್ಹ ವ್ಯಕ್ತಿ-ಶಕ್ತಿ, ಇದು ನಮ್ಮಂಥವರ ಅನುಭವದ ವಿಶ್ಲೇಷಣೆ ಮನಃಪೂರ್ವಕ ಅಭಿಪ್ರಾಯ. ನಿಮ್ಮ ಜನಮನ ಪತ್ರಿಕೆಯನ್ನು ನಮ್ಮ ಗೆಳೆಯರ ಬಳಗಕ್ಕೆ ಪರಿಚಯ ಮಾಡಿಕೊಟ್ಟವರೇ ಕುಮಾರಕವಿ. ಈಸಲ ತುಸು ಹೆಚ್ಚಾಗಿಯೇ ಬರೆದಿದ್ದೇನೆ, ಅನ್ಯಥಾ ಭಾವಿಸದಿರಿ

  • ಸಾಲುಮರದ ತಿಮ್ಮಕ್ಕ ಸೂರ್ಯ ಚಂದ್ರ ಇರೋವರೆಗೂ ಉಳಿವಂಥ ಅಗಾಧ ಶಕ್ತಿ-ಭಕ್ತಿ-ವ್ಯಕ್ತಿ, ಇವರ ಕುರಿತಾದ ಲೇಖನ ಬಹಳ ಚೆನ್ನಾಗಿದೆ, ನಮಸ್ಕಾರ, ತುಂಬ ತುಂಬ ಧನ್ಯವಾದ ಮಹಾಶಯರೇ

  • ಸಾಲುಮರದ ತಿಮ್ಮಕ್ಕ ಸೂರ್ಯ ಚಂದ್ರ ಇರೋವರೆಗೂ ಉಳಿವಂಥ ಅಗಾಧ ಶಕ್ತಿ-ಭಕ್ತಿ-ವ್ಯಕ್ತಿ, ಇವರ ಕುರಿತಾದ ಲೇಖನ ಬಹಳ ಚೆನ್ನಾಗಿದೆ, ನಮಸ್ಕಾರ, ತುಂಬ ತುಂಬ ಧನ್ಯವಾದ ಮಹಾಶಯರೇ,
    ಮಾನ್ವಿತಾ ಶೆಟ್ಟಿ

ನಿಮ್ಮದೊಂದು ಉತ್ತರ

Translate to any language you want