DistrictLatest

ಜೆಎಸ್ ಎಸ್ ಮೈಸೂರು ಅರ್ಬನ್ ಹಾತ್ ನ ಗಾಂಧಿ  ಶಿಲ್ಪ ಬಜಾರ್ ನಲ್ಲಿ  ಕರಕುಶಲ ವಸ್ತುಗಳ ಸಮ್ಮಿಲನ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಎಲ್ಲ ತಿಂಗಳುಗಳಲ್ಲಿ ಯಾವುದಾದರೂ ಮೇಳ ನಡೆಯುತ್ತದೆ ಎನ್ನುವುದಾದರೆ ಅದು ಮೇಟಗಳ್ಳಿಯ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಮಾತ್ರ. ಇದೀಗ ಇಲ್ಲಿ ನವೆಂಬರ್ 20ರವರೆಗೆ ಗಾಂಧಿ ಶಿಲ್ಪ ಬಜಾರ್ ಮೇಳ ನಡೆಯುತ್ತಿದ್ದು, ಇಲ್ಲಿ ಇದುವರೆಗೆ ನೂರಾರು ಮೇಳಗಳು ಯಶಸ್ವಿಯಾಗಿ ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಮೇಳದ ಇನ್ನೊಂದು ವಿಶೇಷ ಏನೆಂದರೆ ಮೇಳದಲ್ಲಿ ಸುಮಾರು 20 ರಾಜ್ಯಗಳ  ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳಿದ್ದು, ಇದು ಕರಕುಶಲ ಕರ್ಮಿಗಳು ಮತ್ತು ಗ್ರಾಹಕರ ನಡುವೆ ನೇರ ಸಂಬಂಧವನ್ನು ಏರ್ಪಡಿಸುತ್ತಿದೆ.

ಈಗ  ಸುಮಾರು 50 ಮಳಿಗೆಗಳಲ್ಲಿ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ. ಜತೆಗೆ  ಕೈಗೆಟಕುವ ಬೆಲೆಯಲ್ಲಿ ನೇರವಾಗಿ ಕರಕುಶಲಕರ್ಮಿಗಳಿಂದ ಗ್ರಾಹಕರಿಗೆ ಲಭ್ಯವಾಗುತ್ತಿವೆ. ಇಲ್ಲಿ ರಾಜ್ಯದ  ರಾಮನಗರ ಜಿಲ್ಲೆಯ ಶ್ರೀ ಹಾಲೇಶ್  ಅವರು ತಯಾರಿಸಿರುವ ಮಣ್ಣಿನ ಮಡಕೆಗಳಿಗೆ ಮತ್ತು ಮಣ್ಣಿನ ಕಲಾಕೃತಿಗಳಂತೂ ಮನೆ ಸೆಳೆಯುತ್ತಿವೆ. ಅವರ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ವ್ಯಾಪಾರ ಬಿರುಸಿನಿಂದ ನಡೆಯುತ್ತಿದೆ. ಹಾಗೆಯೇ  ರಾಜಸ್ತಾನ ರಾಜ್ಯದ ಜೋಧ್ ಪುರ ಜಿಲ್ಲೆಯ ಶ್ರೀ ಪೂಶಾರಾಮ್ ರಾಮವತ್ ಅವರ ಕೈಗಳಲ್ಲಿ ಮೂಡಿರುವ ಮೆಟಲ್ ಕ್ರಾಫ್ಟ್ ಕಲಾ ಆಸಕ್ತರ ಕಣ್ಮನ ಸೆಳೆಯುತ್ತಿದೆ. ಆಂಧ್ರಪ್ರದೇಶದ ಶ್ರೀಮತಿ ಶೋಭಾರಾಣಿ, ವೆಂಕಟಗಿರಿ  ಅವರ ಮಳಿಗೆಯಲ್ಲಿರುವ ಕಲಂಕಾರಿ ಸೀರೆಗಳು, ಡ್ರೆಸ್ ಮೆಟೀರಿಯಲ್ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿವೆ.

ಗಾಂಧಿ ಶಿಲ್ಪ ಬಜಾರ್ ನಲ್ಲಿ ನಮ್ಮ ರಾಜ್ಯದ ಕುಶಲಕರ್ಮಿಗಳು ಮೂಡಿಸಿರುವ ಮರದ ಕೆತ್ತನೆಗಳು, ಚನ್ನಪಟ್ಟಣದ ಪ್ರಸಿದ್ಧ ಗೊಂಬೆಗಳು, ಚಿತ್ರಕಲೆಗಳು, ತಮಿಳುನಾಡು ರಾಜ್ಯದ ಕಾಂಜೀವರಂ ರೇಷ್ಮೆ ಸೀರೆಗಳು, ಕೇರಳ ರಾಜ್ಯದ ಬೆಡ್ ಶೀಟ್ ಗಳು, ಟೇಬಲ್ ಕವರ್ ಗಳು,  ಪಶ್ಚಿಮ ಬಂಗಾಳದ ಕಾಂತ ಸೀರೆಗಳು, ಬಲುಚೂರಿ ಸೀರೆ, ಸೆಣಬಿನಿಂದ ಮಾಡಿದ ಆಲಂಕಾರಿಕ ವಸ್ರುಗಳು, ವಾಲ್ ಹ್ಯಾಂಗಿಂಗ್, ಜಾರ್ಖಂಡ್ ರಾಜ್ಯದ ತಸ್ಸರ್ ರೇಷ್ಮೆ ಸೀರೆಗಳು, ದೆಹಲಿ ಮತ್ತು ಗೋವಾ ರಾಜ್ಯದ ಕುಶಲಕರ್ಮಿಗಳು ರಚಿಸಿರುವ ನೆಲಹಾಸುಗಳು, ಬಿಹಾರ ರಾಜ್ಯದ ಟಸ್ಸರ್ ಸೀರೆಗಳು ಮೇಳದಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ.

ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ  ಗಾಂಧಿ ಶಿಲ್ಪ ಬಜಾರ್ ಮೇಳವನ್ನು 50 ಮಳಿಗೆಗಳಲ್ಲಿ ಆಯೋಜನೆ ಮಾಡಿದ್ದಾರೆ. ಇಲ್ಲಿಗೆ ಆಗಮಿಸುವವರಿಗೆ ಹತ್ತಾರು ಅನುಕೂಲಗಳಿದ್ದು, ತಾವು ಇಷ್ಟಪಡುವ  ಜವಳಿಯಿಂದ ಆರಂಭವಾಗಿ ಕರಕುಶಲ ವಸ್ತುಗಳವರೆಗೆ ಎಲ್ಲವೂ ದೊರೆಯಲಿದೆ. ಹೀಗಾಗಿ ನಗರಕ್ಕೆ ಭೇಟಿ ನೀಡುವ ಜನರು ಅರ್ಬನ್ ಹಾತ್ ಗೆ ತೆರಳಿ ಮೇಳದಲ್ಲಿ ಅಡ್ಡಾಡುತ್ತಾರೆ.

ಗಾಂಧಿ ಶಿಲ್ಪ ಬಜಾರ್ ಮೇಳಕ್ಕೊಂದು ಸುತ್ತು ಹೊಡೆದರೆ ನಮ್ಮ ದೇಶದ 20 ಕ್ಕೂ ಹೆಚ್ಚು ರಾಜ್ಯಗಳ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕರಕುಶಲಕರ್ಮಿಗಳು ಹಾಗೂ ಕೈಮಗ್ಗ ನೇಕಾರರು ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳು ಒಂದೇ ಸೂರಿ ನಡಿಯಲ್ಲಿ ಮೈಸೂರಿನ ಸಂಸ್ಕೃತಿ ಪ್ರಿಯರಿಗೆ ಲಭ್ಯವಾಗುವಂತೆ ಈ ಮೇಳದಲ್ಲಿ ವ್ಯವಸ್ಥೆ ಮಾಡಿರುವುದು ಕಂಡು ಬರುತ್ತದೆ. ಇಲ್ಲಿರುವ ನೂರಿಪ್ಪತ್ತಕ್ಕೂ ಹೆಚ್ಚು ಮಳಿಗೆಗಳು ವಿಶೇಷತೆಗಳಿಂದ ಕೂಡಿದ್ದು ಇಲ್ಲಿ ಆಕರ್ಷಣೀಯ ವಸ್ತುಗಳು ಗಮನಸೆಳೆಯುತ್ತವೆ.

ಈ ಮೇಳದ ವಿಶೇಷತೆ ಏನೆಂದರೆ ಕುಶಲಕರ್ಮಿಗಳು ತಮ್ಮ ಕಲಕುಶಲತೆಯನ್ನು ಗ್ರಾಹಕರ ಅಗತ್ಯ ಮತ್ತು ಅಭಿರುಚಿಗೆ ತಕ್ಕಂತೆ ತಯಾರು ಮಾಡಿದ್ದು ಮಾರುಕಟ್ಟೆಯಲ್ಲಿ ಜನ ಇಷ್ಟಪಡುವಂತಹ ನವೀನ ವಿನ್ಯಾಸದ ವಸ್ತುಗಳನ್ನು ತಯಾರಿಸಿಟ್ಟಿದ್ದಾರೆ. ಇಲ್ಲಿ ಏನೆಲ್ಲ ಇದೆ ಎಂಬುದನ್ನು ನೋಡಿದ್ದೇ ಆದರೆ, ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಮಣ್ಣಿನ ಮಡಿಕೆಗಳು, ಪೇಪರ್, ರತ್ನಗಂಬಳಿ, ಹತ್ತಿ ಜಮಕಾನ, ಇಮಿಟೇಶನ್ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕಾರಿ ಚಿತ್ರಕಲೆ, ಚರ್ಮದ ಅಕರ್ಷಕ ವಸ್ತುಗಳು,ಕಲಾತ್ಮಕ ಚರ್ಮದ ಚಪ್ಪಲಿಗಳು ಆಕರ್ಷಿಸುತ್ತವೆ.

ಪ್ರತಿ ತಿಂಗಳು ಒಂದಲ್ಲ ಒಂದು ಉದ್ದೇಶವನ್ನಿಟ್ಟುಕೊಂಡು ಇಲ್ಲಿ ಮೇಳವನ್ನು ಆಯೋಜನೆ ಮಾಡಲಾಗುತ್ತಿದ್ದು, ಏಕೆ ಈ ಮೇಳ ಯಶಸ್ಸು ಕಾಣುತ್ತಿದೆ ಎಂದರೆ, ಮಧ್ಯವರ್ತಿಗಳು ಇಲ್ಲದೆ ಗ್ರಾಹಕರು ಮತ್ತು ಉತ್ಪಾದಕರ ಮಧ್ಯೆ ನೇರ ಸಂಪರ್ಕ ಮತ್ತು ಸಂವಹನಕ್ಕೆ ಅವಕಾಶ ಕಲ್ಪಿಸುವುದರಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಗ್ರಾಹಕ ಮತ್ತು ಕುಶಲಕರ್ಮಿಗಳ ಬಾಂಧವ್ಯ ವೃದ್ಧಿಯ ಮೇಳ ಎಂದರೂ ತಪ್ಪಾಗಲಾರದು. ಈ ಗಾಂಧಿ ಶಿಲ್ಪ ಬಜಾರ್ ಮೇಳದಲ್ಲಿ ಭಾಗವಹಿಸುತ್ತಿರುವ ಕುಶಲಕರ್ಮಿಗಳಿಗೆ ಉಚಿತವಾಗಿ ಮಳಿಗೆಗಳನ್ನು ನೀಡುತ್ತಿರುವುದು, ಜತೆಗೆ ಪ್ರಯಾಣ ಭತ್ಯೆ, ದಿನಭತ್ಯೆನ್ನೂ ಕರಕುಶಲ ಅಭಿವೃದ್ಧಿ ಅಯುಕ್ತರ ಕಚೇರಿಯಿಂದ ನೀಡುತ್ತಿರುವುದು ಕರಕುಶಲ ಕರ್ಮಿಗಳ ಅಭಿವೃದ್ಧಿಗೆ ಹಿಡಿದ ಕೈಕನ್ನಡಿಯಾಗಿದೆ.

 

 

admin
the authoradmin

Leave a Reply