LatestMysore

ಸಫಾರಿ ಸ್ಥಗಿತದಿಂದ ರೆಸಾರ್ಟ್ ಗಳು ಖಾಲಿ ಖಾಲಿ.. ಸಂಕಷ್ಟದಿಂದ ಪಾರು ಮಾಡಲು ಸಫಾರಿ ಆರಂಭಿಸಲು ಮನವಿ…

ಮೈಸೂರು: ಇತ್ತೀಚೆಗಿನ ವರ್ಷಗಳಲ್ಲಿ ನಗರದಿಂದ ಹಳ್ಳಿತನಕ ಪ್ರವಾಸೋದ್ಯಮ ಬೆಳೆದು ನಿಂತಿದೆ. ಪರಿಣಾಮ ಸಹಸ್ರಾರು ಮಂದಿಗೆ ಬದುಕು ಕಟ್ಟಿಕೊಡುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಿಗೂ ಪ್ರವಾಸಿಗರು ಭೇಟಿ ನೀಡಿ ಸಮಯ ಕಳೆಯುವುದರಿಂದ ರೆಸಾರ್ಟ್ ಮತ್ತು ಹೋಂಸ್ಟೇ ಗಳು ನಿರ್ಮಾಣವಾಗಿದ್ದು, ಇದನ್ನು ನಂಬಿ ಸಹಸ್ರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇದೀಗ ಮೈಸೂರಿನ  ಎಚ್.ಡಿ. ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದಲ್ಲಿ ಅರಣ್ಯದಲ್ಲಿ ಸಫಾರಿ ನಿಲ್ಲಿಸಿರುವುದರಿಂದ ಪ್ರವಾಸಿಗರು ರೆಸಾರ್ಟ್‌ಗಳಿಗೆ ಬಾರದ ಹಿನ್ನಲೆ ಸಂಕಷ್ಟ ಶುರುವಾಗಿದೆ.

ಕಳೆದ ಕೆಲವು ಸಮಯದಿಂದ ಸಫಾರಿ ಬಂದ್ ಮಾಡಿರುವುದರಿಂದ ಪ್ರವಾಸಿಗರು ಇತ್ತ ಮುಖ ಮಾಡಿಲ್ಲ. ಪ್ರವಾಸಿಗರು ಬಾರದ್ದರಿಂದ  ಈ ವ್ಯಾಪ್ತಿಯಲ್ಲಿರುವ ರೆಸಾರ್ಟ್ ಗಳು ಖಾಲಿ ಖಾಲಿಯಾಗಿದ್ದು, ಆದಾಯ ಖೋತಾ ಆಗಿ ನಷ್ಟ ಅನುಭವಿಸುವಂತಾಗಿದೆ.  ಇದರ ಪರಿಣಾಮ ರೆಸಾರ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2000 ಉದ್ಯೋಗಿಗಳ ಬದುಕಿಗೆ  ತೊಂದರೆ ಉಂಟಾಗಿದೆ. ಹೀಗಾಗಿ ಅವರು  ಆಕ್ರೋಶ ವ್ಯಕ್ತಪಡಿಸಿ ಸಫಾರಿ ನಡೆಸುವಂತೆ ಕೋರಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ಪರಿಸ್ಥಿತಿಗೆ ಬಂದಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಹೆಚ್ ಡಿ ಕೋಟೆ  ತಾಲ್ಲೂಕಿನ ತೆರಾ ವೈಲ್ಡ್ ಲೈಫ್ ರೆಸಾರ್ಟ್‌ನ ಹೊಸಮಾಳ ಸ್ವಾಮಿ ಮಾತನಾಡಿ, ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಸುಮಾರು 12 ರೆಸಾರ್ಟ್ ಗಳ ಕಾರ್ಮಿಕರು ಜಮಾಯಿಸಿ ಸಫಾರಿ ಸ್ಥಗಿತವನ್ನು ವಿರೋಧಿಸಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಎಚ್.ಡಿ. ಕೋಟೆ ತಾಲ್ಲೂಕು ಪ್ರಾಣಿ, ವನ್ಯ ಮತ್ತು ಜಲ ಸಂಪತ್ತಿನಿಂದ ಕೂಡಿರುವುದರಿಂದ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿ ತಾಲ್ಲೂಕಿನಲ್ಲಿ ಹಲವು ರೆಸಾರ್ಟ್‌ ಗಳು ತಲೆ ಎತ್ತಿವೆ, ಸುಮಾರು 2000 ಮಂದಿ ತಾಲ್ಲೂಕಿನ ನಿರುದ್ಯೋಗಿಗಳಿಗೆ ಉದ್ಯೋಗಗಳು ಸಹ ದೊರೆತಿವೆ. ತಾಲ್ಲೂಕಿನಲ್ಲಿ ಯಾವುದೇ ಕಾರ್ಖಾನೆಗಳಿಲ್ಲದ್ದರಿಂದ ರೆಸಾರ್ಟ್‌ ಗಳೇ ಇಲ್ಲಿನ ಜನರಿಗೆ ಉದ್ಯೋಗವನ್ನು ನೀಡಿವೆ, ಆದರೀಗ ಏಕಾಏಕಿ ಸಫಾರಿ ನಿಲ್ಲಿಸಿರುವುದರಿಂದ ನಮ್ಮ ಉದ್ಯೋಗಕ್ಕೆ‌ಕುತ್ತು ಬಂದೊದಗಿದೆ ಎಂದು ಬೇಸರಿಸಿದರು.

ಸಂದೇಶ್ ವಾಟರ್ ಎಡ್ಜ್ ಸಿಬ್ಬಂದಿ ದೇವಯ್ಯ ಮಾತನಾಡಿ ತಾಲ್ಲೂಕಿನಲ್ಲಿರುವ ಅಧಿಕೃತ ರೆಸಾರ್ಟ್‌ಗಳು ತಾಲ್ಲೂಕಿನಲ್ಲಿ ನಡೆಯುವ ಅನೇಕ ಜನಪರ‌ ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡುತ್ತಾ ಸ್ಥಳೀಯರಿಗೆ ಆಸರೆಯಾಗಿವೆ, ಉದ್ಯೋಗ ನೀಡುವುದರ ಮೂಲಕ ಅನೇಕ ನಿರುದ್ಯೋಗಿಗಳು ಉದ್ಯೋಗಿಗಳಾಗಿದ್ದಾರೆ. 2000 ಸಾವಿರ ಕುಟುಂಬಸ್ಥರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು, ಜೊತೆಗೆ ಇಲ್ಲಿನ ರೆಸಾರ್ಟ್ ಗಳು ಸ್ಥಳೀಯರಿಗೆ ಉದ್ಯೋಗವನ್ನು ನೀಡಿ ತಾಲ್ಲೂಕಿನ ಜನತೆಯ ಮನಗೆದ್ದಿದ್ದರು.

ಈಗ ಸಫಾರಿ ನಿಂತಿರುವ ಕಾರಣ ಅದೇ ರೆಸಾರ್ಟ್ ಗಳು ತಮ್ಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ತೆಗೆಯುವ ನಿರ್ಧಾರಕ್ಕೆ ಬಂದಿವೆ, ಇದರಿಂದ ಅದೆಷ್ಟೋ ಕುಟುಂಬಗಳು ಬೀದಿಪಾಲಾಗುವ ಜೊತೆಗೆ ಇದನ್ನೆ ನಂಬಿರುವ ನಮ್ಮಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆಯಾಗಲಿದ್ದು ಇದಕ್ಕೆ ಸರ್ಕಾರವೇ ನೇರ ಕಾರಣ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.

ಕಾರ್ಮಿಕ ಮಹಿಳೆ ಯಶೋಧ ಮಾತನಾಡಿ ನಾವು ಜಮೀನಿನಲ್ಲಿ‌ ಕೂಲಿ‌ ಮಾಡಲು ಸಾಧ್ಯವಿಲ್ಲ, ಇದರಿಂದಾಗಿ ಸ್ಥಳೀಯವಾಗಿ ರೆಸಾರ್ಟ್ ನಲ್ಲಿ ದಿನಗೂಲಿ ನೌಕರಳಾಗಿ ಸೇವೆ ಮಾಡುತ್ತಿದ್ದೇವೆ ಆದರೀಗ ನಮ್ಮ ಕೆಲಸಕ್ಕೆ ಕುತ್ತು ಬಂದೊದಗಿದೆ, ಅಧಿಕಾರಿಗಳು ಯೋಚಿಸಿ ನಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಮನವಿ ಪತ್ರ ಸ್ವೀಕರಿಸಿದ ತಹಸಿಲ್ದಾರ್ ಶ್ರೀನಿವಾಸ್ ಮಾತನಾಡಿ ಈ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.  ಈ ವೇಳೆ ಅಧಿಕೃತ ರೆಸಾರ್ಟ್ ಗಳಾದ ವಾಟರ್ ವುಡ್ ಲಾಡ್ಜ್ ಅಂಡ್ ರೆಸಾರ್ಟ್ಸ್, ಸರಾಯ್ ರೆಸಾರ್ಟ್, ಸಂದೇಶ್ ವಾಟರ್ ಎಡ್ಜ್, ಕಾವ್ ರೆಸಾರ್ಟ್, ರೆಡ್ ಅರ್ಥ್, ಡಿಸ್ಕವರಿ ವಿಲೇಜ್, ವೈಲ್ಡ್ ಆರೆಂಜ್ ಕಬಿನಿ, ಕಬಿನಿ ಲೇಖ್ ವೀವ್, ಕಬಿನಿ ಸ್ಪ್ರಿಂಗ್ಸ್, ಫೈರ್ ಫೈಲ್ಸ್ ಸೇರಿದಂತೆ ವಿವಿಧ ರೆಸಾರ್ಟ್ ನ ಸಿಬ್ಬಂದಿ ಷಣ್ಮುಗ, ಮಂಜು, ಶಿವಪ್ಪ, ಚಂದ್ರು, ಸ್ವಾಮಿ, ಮೂರ್ತಿ, ವಿನೋದ್, ಸ್ವಾಮಿ, ಪ್ರತಾಪ್ ಸಿಂಹ, ವಿಜಯಕುಮಾರ್, ದೇವೇಶ್,  ಯಶೋಧಮ್ಮ, ರವಿ, ರಾಕಿ, ಸಲೀಂ, ಕುಮಾರ್, ಮಹೇಶ್, ಗುರುಸ್ವಾಮಿ, ಭೈರ, ನವೀನ್, ಸಿದ್ದು, ಕೃಷ್ಣ, ಚಿಕ್ಕಣ್ಣ, ಪ್ರತಾಪ್, ಅರುಣ್  ಭಾಗವಹಿಸಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want