ಯಾವುದೇ ರೋಗಗಳು ಬರಲಿ ಅದು ಮೊದಲಿಗೆ ಕಾಣಿಸಿಕೊಳ್ಳುವುದು ಕೇರಳದಲ್ಲಿ ಎನ್ನುವುದನ್ನು ತಳ್ಳಿ ಹಾಕಲಾಗದು.. ಹೀಗಿರುವಾಗ ಮೆದುಳು ತಿನ್ನುವ ಅಮೀಬಾ ಸೋಂಕು ಕಾಣಿಸಿಕೊಂಡಿದ್ದು, ಹೀಗಾಗಿ ನಮ್ಮ ರಾಜ್ಯದ ಮೈಸೂರು, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಕೇರಳದಿಂದ ಸೋಂಕು ಸುಲಭವಾಗಿ ನಮ್ಮ ರಾಜ್ಯಕ್ಕೆ ತಗಲುವ ಸಾಧ್ಯತೆ ಹೆಚ್ಚಿರುವುದರಿಂದ ಪ್ರತಿಯೊಬ್ಬರೂ ಈ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಬಹು ಅಗತ್ಯವಾಗಿದೆ.
ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಕೇರಳದ ಶಬರಿ ಮಲೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು ಆಗಮಿಸುತ್ತಿದ್ದು ಇದೇ ಸಮಯದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಅಲ್ಲಿ ಕಾಣಿಸಿಕೊಂಡಿರುವುದು ಜನ ಆತಂಕಪಡುವಂತಾಗಿದೆ. ಈ ಸಮಯದಲ್ಲಿ ಎಚ್ಚರಿಕೆ ವಹಿಸುವ ಮೂಲಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿ ಚಾಚೂ ತಪ್ಪದೆ ಪಾಲಿಸುವುದರೊಂದಿಗೆ ಸೋಂಕು ತಗುಲದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಇದೀಗ ಕೇರಳದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ. ಆದರೆ ಕೇರಳ ಸರ್ಕಾರ ನಿರೀಕ್ಷೆ ಮಾಡದ ಪರಿಸ್ಥಿತಿ ಅಲ್ಲಿ ಎದುರಾಗಿದೆ. ಇಷ್ಟುವರೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರೆ, ಈ ಬಾರಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಹೀಗಾಗಿ ಭಕ್ತರನ್ನು ನಿಯಂತ್ರಿಸುವುದು ಅಲ್ಲಿನ ಸರ್ಕಾರಕ್ಕೆ ಸವಾಲ್ ಆಗಿದೆ. ಇದರಿಂದ ಅವ್ಯವಸ್ಥೆಗಳು ತಾಂಡವವಾಡುತ್ತಿವೆ. ಇಂತಹ ಸಂದರ್ಭದಲ್ಲಿಯೇ ಇಲ್ಲಿ ಮೆದುಳು ತಿನ್ನುವ ಅಮೀಬಾ ರೋಗ ಹಾವಳಿ ಮಾಡುತ್ತಿದ್ದು, ಅಯ್ಯಪ್ಪ ಮಾಲಾಧಾರಿಗಳು ಸೇರಿದಂತೆ ಎಲ್ಲರೂ ಭಯದಲ್ಲಿ ಕಾಲಕಳೆಯುವಂತಾಗಿದೆ.

ಶಬರಿಮಲೆಗೆ ಅಯ್ಯಪ್ಪ ಭಕ್ತರು ಎಲ್ಲ ರಾಜ್ಯಗಳಿಂದ ಬರುತ್ತಿದ್ದು, ಇದು ಸುಲಭವಾಗಿ ಪಸರಿಸಬಹುದು ಎಂಬ ಭಯವೂ ಜನರನ್ನು ಕಾಡಲಾರಂಭಿಸಿದೆ. ಈಗ ಎಲ್ಲರ ಮುಂದಿರುವುದು ಅದರಿಂದ ಪಾರಾಗುವುದು, ಅದು ಬರದಂತೆ ತಡೆಯುವುದಾಗಿದೆ. ಹೀಗಾಗಿ ಸರ್ಕಾರ ಎಚ್ಚರವಹಿಸಿದ್ದು ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಬರಿಮಲೆ ಅಯ್ಯಪ್ಪ ಭಕ್ತರಿಗಾಗಿ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿ ಪಾಲಿಸುವಂತೆ ಮನವಿ ಮಾಡಿದೆ. ಕೇರಳದಲ್ಲಿ ಈಗಾಗಲೇ ಹಲವರಿಗೆ ರೋಗ ಬಾಧಿಸುತ್ತಿದ್ದು, ಸೋಂಕು ಅಲ್ಲಿಂದ ಬೇರೆಡೆಗೆ ಹರಡುವ ಮುನ್ನ ಎಚ್ಚರಿಕೆ ವಹಿಸುವುದು ಬಹುಮುಖ್ಯವಾಗಿದೆ. ಆದುದರಿಂದ ಮಾರ್ಗಸೂಚಿಯನ್ನು ಪಾಲಿಸಬೇಕಾಗಿದೆ.
ಮೆದುಳು ತಿನ್ನುವ ಅಮೀಬಾದ ಬಗ್ಗೆ ಹೇಳಬೇಕೆಂದರೆ ನೇಗ್ಲೇರಿಯಾ ಫೌಲೇರಿ ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಉದಾಹರಣೆಗೆ ನಿಂತ ನೀರು, ಕೊಳ, ಈಜು ಕೊಳಗಳು ಹಾಗೂ ಕೆರೆಗಳಲ್ಲಿ ಇದು ಹೇರಳವಾಗಿರುತ್ತದೆ. ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ ಆದರೆ ನೇಗ್ಲೇರಿಯಾ ಫೌಲೇರಿ ಅತ್ಯಂತ ವಿಷಕಾರಿ ಸೂಕ್ಷ್ಮಜೀವಿಯಾಗಿದ್ದು, ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ಅದು ಮೆದುಳನ್ನು ತಲುಪಿ, ಅಮೀಬಿಕ್ ಮೆನಿಂಗೊ ಎನ್ಸೆಫಲೈಟಿಸ್ ಎನ್ನುವ ಅಪರೂಪದ ಗಂಭೀರ, ಮಾರಣಾಂತಿಕ ಕಾಯಿಲೆಯನ್ನು ಉಂಟು ಮಾಡುತ್ತದೆ.

ಆದುದರಿಂದ ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಅಯ್ಯಪ್ಪ ಭಕ್ತರು ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್ ಗಳನ್ನು ಬಳಸಿ ಅಥವಾ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಜ್ವರ, ತೀವು ತಲೆನೋವು, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತುರ್ತು ಆರೈಕೆಯನ್ನು ಪಡೆಯಲು ಹತ್ತಿರದ ಸರ್ಕಾರಿ ಆಸ್ಪತ್ರೆ,ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ಸಾಮಾನ್ಯವಾಗಿ ನಿಂತ ನೀರು, ಕೊಳಗಳು ಮತ್ತು ಸರೋವರಗಳಲ್ಲಿ ಈ ಅಮೀಬಾ ಬೆಳೆಯುತ್ತೆ. ಒಂದು ವೇಳೆ ಅಂತಹ ನೀರಿನಲ್ಲಿ ಈಜಾಡಿದರೆ, ಆ ಅಮೀಬಾವು ಮೂಗಿನ ಮೂಲಕ ನಮ್ಮ ಮೆದುಳನ್ನ ಹೊಕ್ಕು ನೇರವಾಗಿ ಕೇಂದ್ರ ನರವ್ಯೂಹಕ್ಕೆ ಹಾನಿಯುಂಟು ಮಾಡುತ್ತದೆ. ಕೆಲವೊಮ್ಮೆ ಸೋಂಕಿನ ಪ್ರಮಾಣ ಹೆಚ್ಚಾದರೆ ಸಾವು ಕೂಡ ಸಂಭವಿಸಬಹುದು. ಸದ್ಯ ನಮ್ಮರಾಜ್ಯದಲ್ಲಿ ಯಾವುದೇ ರೀತಿ ನೇಗ್ಲೇರಿಯಾ ಫೌಲೇರಿ ಸೋಂಕು ಕಾಣಿಸಿಕೊಂಡಿಲ್ಲ. ಆದರೂ ಕೂಡ ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗುತ್ತಿದೆ. ಸಾರ್ವಜನಿಕರು ಈ ವಿಚಾರದಲ್ಲಿ ಎಚ್ಚರವಾಗಿರುವುದು ಒಳಿತು. ಒಳಗೆ ಜ್ವರ, ತೀವು ತಲೆನೋವು, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆ ಹೀಗೆ ಏನಾದರೂ ಲಕ್ಷಣ ಕಾಣಿಸಿದರೆ, ನಿರ್ಲಕ್ಷ್ಯ ವಹಿಸದೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಒಳಿತು.








