LatestLife style

ನಾವು ಶಾಂತಿಯುತ ಬದುಕು ಕಟ್ಟಿಕೊಳ್ಳುವುದು ಹೇಗೆ?.. ಸ್ವಾಮಿ ಪ್ರಭುಪಾದರು ಹೇಳಿರುವುದೇನು?

ನಮ್ಮ ಆಗುಹೋಗುಗಳಿಗೆ ಹಣೆ ಬರಹ, ಅದೃಷ್ಟ, ಹೀಗೆ ಯಾವುದಾದರೂ ಒಂದರ  ಮೇಲೆ ಹಾಕಿ ಕುಳಿತುಬಿಡುವುದು ಎಷ್ಟು ಸರಿ? ಹುಟ್ಟಿನಿಂದಲೇ ಏನನ್ನೂ ತರದೆ ಬಂದ ನಾವು ಆ ನಂತರ ಬದುಕಿನುದ್ದಕ್ಕೂ ಗಳಿಸಿಕೊಳ್ಳುತ್ತಾ… ಕಳೆದುಕೊಳ್ಳುತ್ತಾ.. ಸಾಗಬೇಕು.. ಕೊನೆಗೆ ನಾವೇ ಇಲ್ಲದ ಆದ ದಿನ ಈ ಸಮಾಜ ನಾವು ಮಾಡಿಟ್ಟ ಆಸ್ತಿ ಬಗ್ಗೆ ಮಾತನಾಡದಿದ್ದರೂ ನಾವು ಹೇಗೆ ಬದುಕಿದ್ದೆವು ಎನ್ನುವುದರ ಬಗ್ಗೆ ಮಾತನಾಡುತ್ತದೆ. ಹೀಗಾಗಿ ನಾವು ನಮ್ಮ ಬದುಕನ್ನು ಅದರಲ್ಲೂ ಶಾಂತಿಯುತ, ಬೇರೆಯವರಿಗೆ ಕೆಡುಕನ್ನುಂಟು ಮಾಡದ ರೀತಿಯಲ್ಲಿ ಬದುಕುವುದನ್ನು ರೂಢಿಸಿಕೊಳ್ಳುವುದು ಒಳ್ಳೆಯದು..

ಇದನ್ನೂ ಓದಿ: ಯಶಸ್ಸು ಪುಕ್ಕಟೆ ಸಿಗುವ ವಸ್ತುವಲ್ಲ..  ಅದು ನಿರಂತರ ಶ್ರಮದ ಫಲ…

ನಾವು ಹೇಗೆ ಬದುಕುತ್ತಿದ್ದೇವೆ ಎನ್ನುವುದಕ್ಕಿಂತ ನಮ್ಮ ಬದುಕಲ್ಲಿ ನೆಮ್ಮದಿ, ಆರೋಗ್ಯದ ಬದುಕನ್ನು ಕಟ್ಟಿಕೊಂಡು ಬಿಟ್ಟರೆ ಅದಕ್ಕಿಂತ ಇನ್ನೇನಿದೆ? ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಶಾಂತಿ ಬಯಸುತ್ತದೆ. ಈ ಶಾಂತಿಯೇ ಪ್ರತಿ ಜೀವಿಯ ಬದುಕನ್ನು ಹಸನಾಗಿಸುತ್ತದೆ. ಮನುಷ್ಯನಿಗೆ ಎಲ್ಲವೂ ಇದ್ದು ಶಾಂತಿಯಿಲ್ಲದೆ ಹೋದರೆ ಅದು ಬದುಕಾಗಿ ಉಳಿಯಲು ಸಾಧ್ಯವೇ ಇಲ್ಲದಾಗುತ್ತದೆ.

ಇಂದಿನ ವೈಜ್ಞಾನಿಕ ಯುಗದಲ್ಲಿ ಪ್ರತಿಯೊಬ್ಬರೂ ದಿನಪೂರ್ತಿ ದುಡಿಯುತ್ತಿದ್ದು, ಪೈಪೋಟಿ ಸ್ಪರ್ಧೆಗಳ ನಡುವೆ  ತಮ್ಮ ಬದುಕನ್ನು, ವ್ಯವಹಾರವನ್ನು ಭದ್ರಪಡಿಸಿಕೊಳ್ಳಲು ಹೋರಾಟ ನಡೆಸುತ್ತಲೇ ಇರುತ್ತಾರೆ.  ಹೀಗಾಗಿ ಬರೀ ಹಣ, ದುಡಿಮೆಯ ಬಗ್ಗೆಯೇ ಆಲೋಚಿಸುವ ನಾವು ಎಲ್ಲೋ ಒಂದು ಕಡೆ ನಮ್ಮನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ ಎಂಬುವುದೇ ಅರಿವಿಗೆ ಬಾರದೆ ಹೋಗುತ್ತದೆ. ಜೊತೆಗೆ  ಸದಾ ಹಣ ಸಂಪಾದನೆಯತ್ತಲೇ ಗಮನಹರಿಸುವ ಪರಿಣಾಮ ಶಾಂತಿ ನಮ್ಮಿಂದ ದೂರವಾಗುತ್ತಾ ಹೋಗುತ್ತದೆ.

ಇದನ್ನೂ ಓದಿ: ಕಾಯಕವೇ ಕೈಲಾಸ…. ನಾವು ನಮಗಾಗಿ ಕೆಲಸ ಮಾಡುವುದನ್ನು ಕಲಿಯೋಣ

ಒಂದು ಕ್ಷಣ ಯೋಚಿಸಿ ನೋಡಿದರೆ ಈ ಬದುಕಿನಲ್ಲಿ ಏನಿದೆ? ಇಂದು ಹುಟ್ಟಿ ನಾಳೆ ಸಾಯುವ ನಾವು ಕೊಂಡೊಯ್ಯುವುದು ಏನನ್ನೂ ಇಲ್ಲ. ಹೀಗಿದ್ದರೂ ಹೋರಾಡುತ್ತೇವೆ, ಕೂಡಿಡುತ್ತೇವೆ. ಮತ್ತೊಬ್ಬರನ್ನು ಮಣಿಸಿ ನಮ್ಮ ಸಾಮ್ರಾಜ್ಯವನ್ನು ಗಟ್ಟಿ ಮಾಡಿಕೊಳ್ಳುತ್ತೇವೆ. ನಾನು, ನನ್ನದು ಎಂಬ ವ್ಯಾಮೋಹದಲ್ಲಿ ಸಂಬಂಧಗಳನ್ನು ದೂರ ಮಾಡಿಕೊಳ್ಳುತ್ತೇವೆ. ಆದರೆ ಕೊನೆಗೊಂದು ದಿನ ಶಾಂತಿಯನ್ನು ಕಳೆದುಕೊಂಡು ಮಾನಸಿಕ ವ್ಯಸನಿಗಳಂತೆ, ರೋಗ ರುಜಿನಗಳಿಗೆ ದಾಸರಾದಾಗ ನಾವು ಎಡವಿದ್ದೆಲ್ಲಿ ಎಂಬುದು ಗೊತ್ತಾಗುತ್ತದೆ. ಆದರೆ ಕಾಲ ಮಿಂಚಿ ಹೋಗಿರುತ್ತದೆ.

ನಮಗೆ ಶಾಂತಿ ಬೇಕಾದರೆ ನಾವೇನು ಮಾಡಬೇಕು ಎಂಬುವುದನ್ನು ಆಧ್ಯಾತ್ಮಿಕ ಚಿಂತಕರು ವಿವಿಧ ರೀತಿಯಲ್ಲಿ ಹೇಳಿದ್ದಾರೆ. ದೇವರ ಬಗ್ಗೆ ಭಕ್ತಿಯುಳ್ಳವನು, ಸದಾ ದೇವರ ಸ್ಮರಣೆಯಲ್ಲಿಯೇ ಇರುವ ಯೋಗಿಗಳು ಶಾಂತಚಿತ್ತರಾಗಿರುತ್ತಾರೆ. ಶಾಂತಿಯನ್ನು ನಾವು ಹೇಗೆ ಪಡೆಯಬಹುದು ಎಂಬುವುದನ್ನು ಸ್ವಾಮಿ ಪ್ರಭುಪಾದರು ತಮ್ಮ ಬರವಣಿಗೆಯಲ್ಲಿ ವಿವರಿಸಿದ್ದಾರೆ. ಅದರಂತೆ ಪ್ರಪಂಚದಲ್ಲಿ ಪ್ರತಿಯೊಬ್ಬನಿಗೂ ಶಾಂತಿ ಬೇಕು. ಶಾಂತಿವಾದಿಗಳಿಗೆ ಶಾಂತಿಯನ್ನು ಹೇಗೆ ಪಡೆಯಬೇಕೆಂಬುವುದೇ ಗೊತ್ತಿಲ್ಲ. ಆದರೆ ಶಾಂತಿ ಬೇಕು. ನಾನು ಕ್ಯಾಂಟರ್‌ಬರಿಯ ಚರ್ಚ್ ಬಿಷಪ್‌ರ ಭಾಷಣ ಓದಿದೆ. ಅದು ಹೀಗಿತ್ತು.

ಇದನ್ನೂ ಓದಿ: ಒತ್ತಡದ ಬದುಕಿನಲ್ಲಿ ಮರೀಚಿಕೆಯಾಗುತ್ತಿರುವ ಮಾನಸಿಕ ನೆಮ್ಮದಿ…

ನಿಮಗೆ ದೇವರಿಲ್ಲದ ದೇವ ಸಾಮ್ರಾಜ್ಯ ಬೇಕು. ಇದು ನಮ್ಮ ದೋಷ, ನಮಗೆ ಶಾಂತಿ ಬೇಕೇ ಬೇಕಾದರೆ ಆಗ ಭಗವಂತನನ್ನು ಅರಿಯುವುದೇ ಶಾಂತಿ ಪಡೆಯುವ ವಿಧಾನ ಎಂದು ಅರ್ಥಮಾಡಿಕೊಳ್ಳಿ. ಇದನ್ನು ಭಗವದ್ಗೀತೆಯಲ್ಲಿಯೂ ಹೇಳಿದೆ. ಪರಮ ಪ್ರಭುವಾದ ಕೃಷ್ಣನ ಸಂಪರ್ಕವಿಲ್ಲದೆ ನಿಮಗೆ ಶಾಂತಿ ದೊರಕದು. ಆದ್ದರಿಂದ ನಮ್ಮ ಹತ್ತಿರ ಬೇರೆಯೇ ಆದ ಶಾಂತಿ ಸೂತ್ರವಿದೆ.  ನಿಜವಾದ ಶಾಂತಿ ಸೂತ್ರವೆಂದರೆ, ಭಗವಂತನು ಇಡೀ ಜಗತ್ತಿನ ಒಡೆಯ ಎಂಬುವುದನ್ನು ಅರಿಯಬೇಕು. ಆದರೆ, ಇಂದು ನಾವು ನಮಗೆ ನಾವೇ ಒಡೆಯರು ಎಂಬಂತೆ ತಿಳಿದುಕೊಂಡಿದ್ದೇವೆ. ಹಾಗಾಗಿ ಕಾದಾಟ, ವೈಷಮ್ಯಗಳು ಹುಟ್ಟಿಕೊಳ್ಳುತ್ತಿದ್ದು ಶಾಂತಿಯನ್ನು ಹರಣ ಮಾಡುತ್ತಿವೆ.

ನಾವು ಮೊದಲಿಗೆ ದೇವರೇ ಎಲ್ಲದರ ಒಡೆಯನೆಂದು ಒಪ್ಪಿಕೊಳ್ಳಬೇಕು. ನಾವು ಈ ಜಗತ್ತಿಗೆ ಬರಿ ಅತಿಥಿಗಳಷ್ಟೆ. ನಾವು ಬರುತ್ತೇವೆ, ಹೋಗುತ್ತೇವೆ ಅಷ್ಟೆ. ಆದರೆ ನಾವು ಇದು ನನ್ನ ಜಮೀನು, ಇದು ನನ್ನ ಕುಟುಂಬ, ಇದು ನನ್ನ ಶರೀರ. ಇದು ನನ್ನ ಆಸ್ತಿ ಎಂದುಕೊಳ್ಳುತ್ತೇವೆ. ದೇವರ ಆಜ್ಞೆ ಬಂದಾಗ ಎಲ್ಲವನ್ನೂ ಬಿಟ್ಟು ಹೋಗಲೇ ಬೇಕಾಗುತ್ತದೆ. ಈ ದೇಹದ ಒಡೆಯನೂ ಸಹ ನಾನಲ್ಲ. ಆದರೂ ನಾನೇ ಈ ದೇಹವೆಂದು ಹೇಳುತ್ತೇನೆ. ನಿಜವಾಗಿ ಇದು ಮೂರ್ಖತನವಾದ್ದರಿಂದ ಶಾಂತಿ ಹೊಂದಲು ಹೇಗೆ ಸಾಧ್ಯ ಎಂದು ಸ್ವಾಮಿ ಪ್ರಭುಪಾದರು ಪ್ರಶ್ನಿಸುತ್ತಾರೆ. ಜೊತೆಗೆ ಭಗವಂತನೇ ಎಲ್ಲದರ ಒಡೆಯ ಎಂಬುವುದನ್ನು ಅರಿತಾಗ ಮತ್ತು ಅದನ್ನು ಒಪ್ಪಿದಾಗ ಶಾಂತಿ ಸಿಗುತ್ತದೆ ಎಂಬ ಮಾತನ್ನು ಹೇಳುತ್ತಾರೆ.

ಇದನ್ನೂ ಓದಿ: ನಿಮಗೆ ಗೊತ್ತಾ ನಿಮ್ಮ ಬಯಕೆಗಳೇ ನಿಮಗೆ ವೈರಿಯಂತೆ… ಅದು ಹೇಗೆ? ಏಕೆ?..

ನಾವು ದೇವರಲ್ಲಿ ಅನುರುಕ್ತರಾಗಬೇಕು. ದೇವರು ಪ್ರತಿಯೊಬ್ಬರ ಮಿತ್ರ ಎಂಬುವುದನ್ನು ಅರಿಯಬೇಕು.  ಅವನೇ ಒಡೆಯ ಎಂಬುವುದನ್ನು ಒಪ್ಪಿಕೊಳ್ಳಬೇಕು. ಹಾಗೆ ತಿಳಿದಾಗ ಮಾತ್ರ ನಿಮಗೆ ಶಾಂತಿ ಸಿಗುತ್ತದೆ. ಇದೇ ಶಾಂತಿ ಸೂತ್ರ ಎಂಬುವುದಾಗಿ ಆಧ್ಯಾತ್ಮಿಕ ಗ್ರಂಥಗಳಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದಾಗಿದೆ. ಅದು ಏನೇ ಇರಲಿ  ಇವತ್ತಿನ ಬದುಕು ಸುಖಮಯವಾಗಿಯಂತು ಇಲ್ಲ. ದಿನನಿತ್ಯವೂ ಒಂದಲ್ಲ ಒಂದು ರೀತಿಯ ಸಂಕಷ್ಟವನ್ನು ಎದುರಿಸಿ ಬದುಕಲೇ ಬೇಕಾಗಿದೆ. ಹೀಗಿರುವಾಗ ಬೇರೆಯವರಿಗೆ ನಮ್ಮಿಂದ ಉಪಯೋಗ ಆಗದೆ ಇದ್ದರೂ ಪರ್ವಾಗಿಲ್ಲ ಉಪದ್ರವವಂತು ಆಗಲೇ ಬಾರದು. ನಾವು ಯಾರಿಗೂ ಕೆಡುಕು ಬಯಸದೆ ತಮ್ಮಷ್ಟಕ್ಕೆ ತಮ್ಮ ಬದುಕನ್ನು ಮುನ್ನಡೆಸಿಕೊಂಡು ಹೋದರೂ ಸಾಕು ಸದ್ದಿಲ್ಲದೆ ಶಾಂತಿ ನಮ್ಮಲ್ಲಿ ನೆಲೆಸಿಬಿಡುತ್ತದೆ…

 

B M Lavakumar

admin
the authoradmin

Leave a Reply