LatestPolitical

ಹೈಕಮಾಂಡ್ ಗೆ ತಲೆನೋವಾದ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವಿನ ಸಿಎಂ ಗಾದಿ ಗುದ್ದಾಟ

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಎರಡೂವರೆ ವರ್ಷವಾಗುತ್ತಿದ್ದಂತೆಯೇ ಸಿಎಂ ಗಾದಿ ಹಸ್ತಾಂತರದ ಸುದ್ದಿ ಸದ್ದು ಮಾಡುತ್ತಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಇಲ್ಲಿವರೆಗಿನ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದಿದ್ದು, ಒಂದೆಡೆ ಸಿದ್ದರಾಮಯ್ಯ ಬೆಂಬಲಿಗ ಸಚಿವರು ಶಾಸಕರು ಡಿನ್ನರ್ ಸಭೆ ನಡೆಸಿ ತಂತ್ರ ನಡೆಸಿದರೆ ಅತ್ತ ಡಿಕೆಶಿ ಬಣದವರು ದೆಹಲಿಯಾತ್ರೆ ಜೊತೆಗೆ ಶಾಸಕರ ಬೆಂಬಲ ಪಡೆಯುತ್ತ ಹರಸಾಹಸ ಮಾಡುತ್ತಿದ್ದಾರೆ.

ಶಾಸಕರು  ಮತ್ತು ಸಚಿವರ ನಡೆ ರಾಜ್ಯ ರಾಜಕೀಯದಲ್ಲಿ ಏನೇನೋ ನಡೆಯುತ್ತಿದೆ ಎಂಬುದನ್ನು ತೋರಿಸುತ್ತಿದ್ದರೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದೆಲ್ಲದರ ನಡುವೆ  ಸಿಎಂ ಸಿದ್ದರಾಮಯ್ಯ ನಾನೇ ಸಿಎಂ ಎಂದು ಪುನರುಚ್ಚರಿಸಿದ್ದಾರೆ. ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ. ನಾನೇ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ. ನಿಮಗೆ ಯಾಕೆ ಅನುಮಾನ. ಯಾಕೆ ಮತ್ತೆ ಮತ್ತೆ ಅದನ್ನು ಕೇಳುತ್ತೀರಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.

ಈಗಾಗಲೇ ಡಿಕೆ ಶಿವಕುಮಾರ್ ಆಪ್ತರು ದೆಹಲಿಗೆ ಹಾರಿರುವುದು ಕುತೂಹಲಕ್ಕೆ ಕಾರಣವಾಗಿತ್ತು. ಅಲ್ಲದೆ ವಚನ ಪಾಲನೆ ಸಿಎಂ ಕರ್ತವ್ಯ ಎಂದು ಡಿಕೆ ಸುರೇಶ್ ಮಾರ್ಮಿಕವಾಗಿ ನುಡಿದಿದ್ದು ಸಂಚಲನಕ್ಕೆ ಕಾರಣವಾಗಿತ್ತು. ಈ ನಡುವೆ ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಮಾತನಾಡಿದೆಯಾ? ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಎಲ್ಲದನ್ನೂ ತೀರ್ಮಾನ ಮಾಡುವುದು ಹೈಕಮಾಂಡ್. ಹಾಗಾದರೆ ಮತ್ತೆ ಯಾಕೆ ಆ ಪ್ರಶ್ನೆ? ಹೈಕಮಾಂಡ್ ಹೇಳುವುದನ್ನು ನಾನು ಪಾಲಿಸಬೇಕು, ಶಾಸಕರೂ ಪಾಲಿಸಬೇಕು ಎಂದಿರುವುದು ಇಬ್ಬರು ನಾಯಕರ ನಡುವೆ ನಾಕೊಡೆ ನಾಬಿಡೆ ಎಂಬ ಹಠಕ್ಕೆ ಬಿದ್ದಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ.

ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಾರೆ ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಹೌದು, ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಕೊಟ್ಟ ಮಾತಿನಂತೆ ಗ್ಯಾರೆಂಟಿ ಜಾರಿ ಮಾಡಿದ್ದೇನೆ. ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸಿದ್ದೇನೆ ಎಂದು ಡಿ.ಕೆ.ಬ್ರದರ್ಸ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಲ್ಲದೆ, ದೆಹಲಿಗೆ ಹೋಗಿರುವ ಚೆಲುವರಾಯಸ್ವಾಮಿ ಜತೆಗೆ ನಾನೇ ಮಾತಾಡಿದ್ದೇನೆ. ಇಲಾಖೆ ಕೆಲಸದ ಹಿನ್ನೆಲೆಯಲ್ಲಿ ಹೋಗಿರುವುದಾಗಿ ಹೇಳಿದ್ದಾರೆ. ಶಾಸಕರು, ಸಚಿವರು ದೆಹಲಿಗೆ ಹೋಗಬಾರದಾ? ಎಂದು ಪ್ರಶ್ನೆ ಮಾಡಿದ ಅವರು, ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಾನು ಕೂಡ ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲಿದ್ದು, ಈ ಬಗ್ಗೆ ಏಕೆ ಸ್ಪಷ್ಟನೆ ನೀಡಲಿ ಎಂದು ಕೇಳಿದ್ದಾರೆ. ಒಟ್ಟಾರೆ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಸಿಎಂ ಗಾದಿಯ ಹಗ್ಗಜಗ್ಗಾಟ ರಾಷ್ಟ್ರ ಮಟ್ಟದ ಸುದ್ದಿಯಾಗಿ ಬಿಂಬಿತವಾಗುತ್ತಿದ್ದು, ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ ಮುಂದೇನು ಎಂಬುದನ್ನು ಕಾದು ನೋಡಬೇಕಾಗಿದೆ.

admin
the authoradmin

Leave a Reply