ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸರಿಯಾಗಿ ಎರಡೂವರೆ ವರ್ಷವಾಗುತ್ತಿದ್ದಂತೆಯೇ ಸಿಎಂ ಗಾದಿಯ ಹಸ್ತಾಂತರದ ಒಳಜಗಳ ತಾರಕಕ್ಕೇರಿದೆ. ಸಿದ್ದರಾಮಯ್ಯ ನಾಕೊಡೆ ಎನ್ನುತ್ತಿದ್ದರೆ ಡಿ.ಕೆ.ಶಿವಕುಮಾರ್ ನಾ ಬಿಡೆ ಎನ್ನುತ್ತಿದ್ದಾರೆ. ಹೀಗಾಗಿ ಸಿಎಂ ಸ್ಥಾನ ಉಳಿಸಿಕೊಳ್ಳಲು ಮತ್ತು ಗಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತುಗಳು ನಡೆಯುತ್ತಿವೆ. ನಮ್ಮಲ್ಲಿ ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಹೇಳಿಕೊಂಡು ಕೈ ನಾಯಕರು ಓಡಾಡುತ್ತಿದ್ದರೂ ನಡೆಯುತ್ತಿರುವ ವಿದ್ಯಮಾನಗಳು ಕಾಂಗ್ರೆಸ್ ನಲ್ಲಿ ಕುರ್ಚಿ ಕಚ್ಚಾಟ ಜೋರಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆ.
ಇಡೀ ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಷ್ಟೇ ಅಧಿಕಾರದಲ್ಲಿರುವ ಕಾಂಗ್ರೆಸ್ ನ ಹೈಕಮಾಂಡ್ ಗೆ ರಾಜ್ಯದಲ್ಲಿ ನಡೆಯುತ್ತಿರುವ ನವೆಂಬರ್ ಕ್ರಾಂತಿ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದೀಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎಂಬ ದಿಗ್ಗಜ ನಾಯಕರನ್ನು ಹೇಗೆ ಸಮಾಧಾನಪಡಿಸಬೇಕೆಂದು ಗೊತ್ತಾಗದೆ ಮೌನಕ್ಕೆ ಶರಣಾಗಿರುವುದು ಗೋಚರಿಸುತ್ತಿದೆ. ಅದರಲ್ಲೂ ಸುಪ್ರೀಂನಾಯಕ ರಾಹುಲ್ ಗಾಂಧಿಯಂತು ಯಾರಿಗೂ ಸಿಗದೆ ಓಡಾಡುತ್ತಿದ್ದಾರೆ. ಹೀಗಾಗಿ ಸಿಎಂ ಕುರ್ಚಿ ಕದನಕ್ಕೆ ವಿರಾಮ ಬೀಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ..

2023ರಲ್ಲಿ ಅಧಿಕಾರ ಪಡೆದಾಗ ಸಿಎಂ ಸ್ಥಾನ ನೀಡುವ ಸಂದರ್ಭ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಮತ್ತು ಡಿಸಿಎಂ ಸ್ಥಾನ ನೀಡುವಾಗ ಯಾವ ರೀತಿಯ ಸೂಚನೆಗಳನ್ನು ನೀಡಿದ್ದಾರೆ? ಅವರ ನಡುವೆ ಯಾವ ರೀತಿಯ ಒಪ್ಪಂದಗಳಾಗಿವೆ ಎನ್ನುವುದು ಇದುವರೆಗೆ ಬಯಲಾಗಿಲ್ಲ. ಎಲ್ಲವೂ ಗೌಪ್ಯವಾಗಿದೆ. ಇಲ್ಲಿ ಏನಾಗಿದೆ ಎಂಬುದರ ಸತ್ಯಾಸತ್ಯತೆಗಳು ಅವರಿಗಷ್ಟೆ ಗೊತ್ತು. ಆದರೆ ಆ ನಂತರದ ನಡವಳಿಕೆಗಳು, ಹೇಳಿಕೆಗಳು ಇಬ್ಬರ ನಡುವೆ ಸಿಎಂ ಅಧಿಕಾರ ಹಸ್ತಾಂತರದ ಒಪ್ಪಂದಗಳಾಗಿವೆ ಎಂಬ ಸಂಶಯವನ್ನು ಹೆಚ್ಚೆಚ್ಚು ಮಾಡಿವೆ.
ಈಗಾಗಲೇ ಪವರ್ ಶೇರಿಂಗ್ ಕುರಿತಂತೆ ಮಾಧ್ಯಮಗಳಲ್ಲಿ ಚರ್ಚೆಗಳಾಗಿವೆ. ನಾಯಕರನ್ನು ಕೇಳಿದಾಗಲೂ ಅವರೆಲ್ಲರೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಅಲ್ಲದೆ ಈ ವಿಚಾರ ತಾರಕಕ್ಕೇರಿದಾಗಲೂ ಅಂತಹದೊಂದು ಒಪ್ಪಂದವಾಗಿಲ್ಲ ಎಂದು ಖಡಕ್ ಆಗಿ ಹೇಳುವ ಪ್ರಯತ್ನವನ್ನು ಹೈಕಮಾಂಡ್ ಮಾಡಿಲ್ಲ. ಈ ಬಗ್ಗೆ ಸಚಿವರು, ಶಾಸಕರು ಬಹಿರಂಗ ಹೇಳಿಕೆ ನೀಡಿದಾಗಲೂ ಅವರ ಮೇಲೆ ಕ್ರಮ ಕೈಗೊಂಡು ಅಂತಹದೊಂದು ಒಪ್ಪಂದವಾಗಿಲ್ಲ ಎನ್ನುವುದನ್ನು ಹೇಳುವ ಧೈರ್ಯವನ್ನು ಅವರು ತೋರಿಲ್ಲ.
ಹೈಕಮಾಂಡ್ ನ ಈ ನಡೆ ಇವತ್ತು ಕಾಂಗ್ರೆಸ್ ನಾಯಕರು ಸೇರಿದಂತೆ ರಾಜ್ಯದ ಜನರು ಸಂಶಯದಿಂದ ನೋಡುವಂತೆ ಮಾಡಿದೆ. ಅಷ್ಟೇ ಅಲ್ಲದೆ ರಾಜ್ಯ ಕಾಂಗ್ರೆಸ್ನಲ್ಲಿ ಡಿಕೆಶಿ, ಸಿದ್ದು ಮತ್ತು ತಟಸ್ಥ ಹೀಗೆ ಮೂರು ಬಣಗಳು ಇದ್ದಂತೆ ಗೋಚರಿಸುತ್ತಿದೆ.. ಸಿಎಂ ಅಧಿಕಾರ ಪಡೆದ ಸಿದ್ದರಾಮಯ್ಯ ಅವರು ಇದೀಗ ಆ ಅಧಿಕಾರ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದಾರಾ? ತಾವೇ ಮುಂದುವರೆಯಲು ರಾಜಕೀಯ ತಂತ್ರ ಮಾಡುತ್ತಿದ್ದಾರಾ? ಅಹಿಂದ ತಂತ್ರ ಬಳಸುತ್ತಿದ್ದಾರಾ? ದಲಿತ ಸಚಿವರು ಮತ್ತು ಶಾಸಕರನ್ನು ಮುಂದಿಟ್ಟುಕೊಂಡು ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರಾ? ಹೀಗೊಂದು ಸಂಶಯಗಳು ಅವರ ಬೆಂಬಲಿಗ ಸಚಿವರು, ಶಾಸಕರ ನಡೆಯಿಂದ ಗೊತ್ತಾಗುತ್ತಿದೆ.

ಅತ್ತ ಡಿ.ಕೆ.ಶಿವಕುಮಾರ್ ಈ ಬಾರಿ ಸಿಎಂ ಸ್ಥಾನವನ್ನು ಪಡೆಯದೆ ಹೋದರೆ ಮುಂದೆ ಸಾಧ್ಯವಿಲ್ಲ. ಹೀಗಾಗಿ ಶತಾಯಗತಾಯ ಪಡೆದೇ ತೀರಬೇಕೆನ್ನುವ ಆತುರದಲ್ಲಿದ್ದಾರೆ. 2018ರಲ್ಲಿ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಚುನಾವಣೆಗೆ ಹೋದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆ ನಂತರ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿದಿತ್ತು. ಅದಾದ ನಂತರ ಕಾಂಗ್ರೆಸ್ ನ ವರ್ಚಸ್ಸು ಕುಗ್ಗಿ ಹೋಗಿತ್ತು. ಈ ಸಂದರ್ಭದಲ್ಲಿ ಫೀನಿಕ್ಸ್ ನಂತೆ ಪುಟಿದು ನಿಂತಿದ್ದು ಇದೇ ಡಿ.ಕೆ.ಶಿವಕುಮಾರ್.. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಬಳಿಕ ಬಿಜೆಪಿ ವಿರುದ್ಧ ಸೆಟೆದು ನಿಂತರು. ಪಕ್ಷಕ್ಕಾಗಿ ತನುಮನಧನ ಮೂರನ್ನೂ ತ್ಯಾಗ ಮಾಡಿದರು. ಜೆಡಿಎಸ್ ಕಡೆಗೆ ಮುಖ ಮಾಡಿದ್ದ ಒಕ್ಕಲಿಗರನ್ನು ತಮ್ಮತ್ತ ಸೆಳೆದರು. ಒಕ್ಕಲಿಗ ಸಿಎಂ ಆಗೋದಕ್ಕೆ ಸಹಾಯ ಮಾಡಿ ಎಂದು ಅಂಗಲಾಚಿದರು.
ಒಕ್ಕಲಿಗ ನಾಯಕನನ್ನು ಸಿಎಂ ಆಗಿ ನೋಡುವುದು ಒಕ್ಕಲಿಗರ ಬಯಕೆಯಾಗಿತ್ತು. ಹೀಗಾಗಿ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಕಡೆಗೆ ವಾಲಿದರು. ಅದರ ಪರಿಣಾಮ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಸೆಡ್ಡು ಹೊಡೆದು ಕಾಂಗ್ರೆಸ್ ನ್ನು ಗೆಲ್ಲಿಸಿದರು. ಆದರೆ ಇದೀಗ ಡಿ.ಕೆ.ಶಿವಕುಮಾರ್ ಗೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸ್ಥಾನವನ್ನು ಹಸ್ತಾಂತರಿಸದೆ ಹೋದರೆ ಅದರ ಪರಿಣಾಮಗಳು ಮುಂದಿನ 2028ರ ವಿಧಾನಸಭಾ ಚುನಾವಣೆ ಮೇಲೆ ಕಾಣಿಸುವ ಸಾಧ್ಯತೆಯಿದೆ.

ಈಗಾಗಲೇ ಎಲ್ಲ ರಾಜ್ಯಗಳಲ್ಲೂ ಕಳಪೆ ಸಾಧನೆ ಮಾಡುತ್ತಿರುವ ಕಾಂಗ್ರೆಸ್ ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಈಗಿನಂತೆ ದಿಗ್ವಿಜಯ ಸಾಧಿಸುತ್ತದೆ. ಆಗ ನಾನು ಸಿಎಂ ಆಗಬಹುದು ಎಂಬ ನಂಬಿಕೆಯೂ ಡಿ.ಕೆ.ಶಿವಕುಮಾರ್ ಅವರಿಗೆ ಇಲ್ಲದಾಗಿದೆ. ಈಗಾಗಲೇ ಸತೀಶ್ ಜಾರಕಿ ಹೊಳೆ 2028ಕ್ಕೆ ನಾನೇ ಸಿಎಂ ಎಂಬಂತಹ ಆಶಾಭಾವನೆಯ ಮಾತುಗಳನ್ನಾಡುತ್ತಿದ್ದಾರೆ. ಒಂದು ವೇಳೆ ಡಿ.ಕೆ.ಶಿವಕುಮಾರ್ ಅವರಿಗೆ ಈ ಬಾರಿ ಸಿಎಂ ಸ್ಥಾನ ಕೊಡದೆ ಹೋದರೆ ಒಕ್ಕಲಿಗರು ಕಾಂಗ್ರೆಸ್ ನ್ನು ಕೈಬಿಡುವ ಎಲ್ಲ ಲಕ್ಷಣಗಳಿವೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಾಗಿ ಹೋರಾಡುವುದರಲ್ಲಿಯೇ ಸಮಯ ಕಳೆದು ಹೋಗಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಕಳೆದ ಎರಡೂವರೆ ವರ್ಷಗಳಿಂದ ಆಗಾಗ್ಗೆ ಅಧಿಕಾರ ಹಸ್ತಾಂತರ ವಿಚಾರಗಳೇ ಮುನ್ನಲೆಗೆ ಬರುತ್ತಿದ್ದು, ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಟ್ಟಿಗೆ ಇದುವರೆಗೆ ದಿನಗಳನ್ನು ಕಳೆದುಕೊಂಡು ಬರಲಾಗಿದೆ. ಈ ಬಾರಿ ಏನಾದರೊಂದು ತೀರ್ಮಾನಕ್ಕೆ ಹೈಕಮಾಂಡ್ ಬಾರದೆ ಹೋದರೆ ಕಾಂಗ್ರೆಸ್ ಪಕ್ಷದಲ್ಲಿ ಒಳ್ಳೆಯ ಬೆಳವಣಿಗೆಗಳಂತು ಆಗುವುದಿಲ್ಲ ಎನ್ನುವುದಂತು ನಿಜ..
ಬಿಹಾರ ಚುನಾವಣೆಯಲ್ಲಿ ಮಕಾಡೆ ಮಲಗಿರುವ ಕಾಂಗ್ರೆಸ್ ಮುಂದೆ ಬರಲಿರುವ ತಮಿಳುನಾಡು, ಪಶ್ಚಿಮ ಬಂಗಾಳ ಚುನಾವಣೆಗಳತ್ತ ಚಿತ್ತ ಹರಿಸಲೇ ಬೇಕಾಗಿದೆ. ಅಲ್ಲಿ ಚುನಾವಣೆ ಎದುರಿಸಬೇಕಾದರೆ ಕರ್ನಾಟದ ಸಹಕಾರ ಅಗತ್ಯವಾಗಿದೆ. ಹೀಗಿರುವಾಗ ಇಲ್ಲಿಯೇ ಪರಿಸ್ಥಿತಿ ಬಿಗಡಾಯಿಸಿದರೆ ಮುಂದೇನು? ಎಂಬ ಚಿಂತೆಯೂ ಹೈಕಮಾಂಡ್ ನ್ನು ಕಾಡಲಾರಂಭಿಸಿದೆ. ಇವತ್ತಿನ ರಾಜ್ಯ ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ನೋಡಿದರೆ ಈ ಇಬ್ಬರು ನಾಯಕರು ಹೈಕಮಾಂಡ್ ಗೆ ಸೆಡ್ಡು ಹೊಡೆಯುವ ಮಟ್ಟಿಗೆ ಹೋದರೂ ಅಚ್ಚರಿಯಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಹೈಕಮಾಂಡ್ ನಾಯಕರ ಕೊಡುಗೆ ತೀರಾ ಶೂನ್ಯ.. ಇಲ್ಲಿ ಕಾಂಗ್ರೆಸ್ ಗೆಲುವು ಕಂಡಿದ್ದರೆ ಅದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರವರ ವರ್ಚಸ್ಸಿನಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೋದಿ ನೋಡಿ ಮತಹಾಕುವಂತೆ ರಾಹುಲ್ ಗಾಂಧಿಯನ್ನು ನೋಡಿ ರಾಜ್ಯದ ಜನ ಮತ ಹಾಕಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಬಿಹಾರದಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದ ಬಳಿಕ ಹೈಕಮಾಂಡ್ ನಾಯಕರು ಭ್ರಮನಿರಸನರಾಗಿದ್ದಾರೆ. ಅವರು ಸುಧಾರಿಸಿಕೊಳ್ಳುವ ಮೊದಲೇ ರಾಜ್ಯದಲ್ಲಿ ಕುರ್ಚಿ ಕದನ ಶುರುವಾಗಿರುವುದರಿಂದ ಅದನ್ನು ಹೇಗೆ ನಿಭಾಯಿಸುವುದು ಎಂಬುದೇ ಗೊತ್ತಾಗದೆ ಪರದಾಡುತ್ತಿದ್ದಾರೆ.
ಸದ್ಯ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಕ್ಕೆ ಬಂದಿದ್ದು ಅವರು ಯಾವ ರೀತಿಯಲ್ಲಿ ಗೊಂದಲವನ್ನು ಬಗೆಹರಿಸುತ್ತಾರೆ? ರಾಹುಲ್ ಗಾಂಧಿ ಎಂಟ್ರಿ ಹೇಗಿರಲಿದೆ? ಇಷ್ಟಕ್ಕೂ ಹೈಕಮಾಂಡ್ ಮಾತು ಕೇಳಿ ಇಬ್ಬರೂ ನಾಯಕರು ಮೌನರಾಗುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು ಪ್ರತಿಯೊಬ್ಬರನ್ನು ಕಾಡುತ್ತಲೇ ಇದೆ. ಆದರೆ ಯಾವುದಕ್ಕೂ ಉತ್ತರ ಸದ್ಯಕ್ಕೆ ಸಿಗುವ ಲಕ್ಷಣಗಳು ಗೋಚರಿಸದೆ ಇರುವ ಕಾರಣದಿಂದಾಗಿ ಸಿಎಂ ಕುರ್ಚಿ ಕದನಕ್ಕೆ ವಿರಾಮ ಬೀಳುವುದು ಕಷ್ಟವೇ..

ಪರಿಸ್ಥಿತಿ ಇಷ್ಟು ಮುಂದುವರೆಯಲು ಬಿಟ್ಟಿದ್ದೇ ಹೈಕಮಾಂಡ್ ನ ಮೊದಲ ತಪ್ಪು.. ಜತೆಗೆ ಒಪ್ಪಂದ ಆಗಿದೆಯೋ ಇಲ್ಲವೋ ಎಂಬುದಕ್ಕೆ ಸ್ಪಷ್ಟನೆ ನೀಡದೆ ಹೋಗಿದ್ದು ಎರಡನೇ ತಪ್ಪು, ಹೀಗೆ ತಪ್ಪುಗಳೆಲ್ಲವನ್ನು ತಮ್ಮ ಬಳಿಯಿಟ್ಟುಕೊಂಡು ಹೈಕಮಾಂಡ್ ತಮಾಷೆ ನೋಡುತ್ತಿದೆಯಾ? ಎಂದು ಜನ ಕೇಳುತ್ತಿದ್ದಾರೆ. ಬರೀ ಕುರ್ಚಿ ಕದನದಲ್ಲಿ ದಿನ ಕಳೆದು ಹೋಗುತ್ತಿದ್ದು, ಮತ ನೀಡಿದ ತಪ್ಪಿಗೆ ರಾಜ್ಯದ ಜನ ಸಂಕಷ್ಟ ಅನುಭವಿಸುವಂತಾಗಿದೆ. ಆದುದರಿಂದ ಹೈಕಮಾಂಡ್ ಕುರ್ಚಿ ಕದನಕ್ಕೆ ಶೀಘ್ರದಲ್ಲಿಯೇ ವಿರಾಮ ಎಳೆಯಬೇಕಿದೆ. ಇಲ್ಲದೆ ಹೋದರೆ ಕರ್ನಾಟಕದಲ್ಲೊಬ್ಬ ಏಕನಾಥ ಸಿಂಧೆ ಸೃಷ್ಟಿ ಆದರೂ ಅಚ್ಚರಿಯಿಲ್ಲ..
–ಬಿ.ಎಂ.ಲವಕುಮಾರ್








