ಸರಗೂರು ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಮತ್ತೊಂದು ಹುಲಿ ಸೆರೆ.. ನೆಮ್ಮದಿಯುಸಿರು ಬಿಟ್ಟ ರೈತರು…

ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಹಂಚೀಪುರ ಹಾಗೂ ಹೆಗ್ಗನೂರು ಸಮೀಪ ಆಗಾಗ್ಗೆ ಕಾಣಿಸಿಕೊಂಡು, ಜಾನುವಾರುಗಳನ್ನು ಬಲಿಪಡೆಯುವ ಮೂಲಕ ಅಕ್ಕ ಪಕ್ಕದ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದ್ದ ಹುಲಿಯನ್ನು ಮಂಗಳವಾರ ಬೆಳಗಿನ ಜಾವ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಮಂಗಳವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಹೆಗ್ಗನೂರು ಸಮೀಪದ ದೇವಲಾಪುರದ ಪುರದಶೆಡ್ಡು ಬಳಿಯ ಅಳಗಂಚಿ ವಲಯದ ಕಾಡಂಚಿನ ಭಾಗದ ಜಮೀನೊಂದರಲ್ಲಿ ಹುಲಿ ಇರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸುಮಾರು 6-7 ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಹಂಚೀಪುರ ಹಾಗೂ ಹೆಗ್ಗನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಜಾನುವಾರುಗಳನ್ನು ಈ ಹುಲಿ ದಾಳಿ ನಡೆಸುತಿತ್ತು, ಅಲ್ಲದೇ ವಾರದ ಹಿಂದೆಯಷ್ಟೇ ಈ ಹುಲಿ ಸಂಚಾರ ಮಾಡಿದ ಫೋಟೋಗಳು ಅರಣ್ಯ ಇಲಾಖೆಯ ಕ್ಯಾಮರಾಗೆ ಸೆರೆಯಾಗಿತ್ತು. ಹುಲಿ ಚಿತ್ರ ನೋಡಿ ಆತಂಕಗೊಂಡ ಗ್ರಾಮಸ್ಥರು ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದು ಹಂಚೀಪುರ ಗ್ರಾಮಸ್ಥರು ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆಯನ್ನು ನಡೆಸಿದ್ದರು.

ಸ್ಥಳೀಯರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಮೊಳೆಯೂರು ವಲಯದ ಅಳಗಂಚಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿಯಿಂದಲೇ ಸಾಕಾನೆಗಳಾದ ಭೀಮಾ, ಮಹೇಂದ್ರ, ಧನಂಜಯ, ಇಂದ್ರನನ್ನು ಬಳಸಿಕೊಂಡು ಸುಮಾರು 60 ಮಂದಿಗೂ ಹೆಚ್ಚು ಸಿಬ್ಬಂದಿ ಕೂಂಬಿಂಗ್ ಆರಂಭಿಸಿದ್ದರು. ಸೋಮವಾರ ಎಂದಿನಂತೆ ಡ್ರೋನ್ ಕ್ಯಾಮರಾ ಮೂಲಕ ಕಾರ್ಯಾಚರಣೆ ಮಾಡಿದ್ದು, ಮಂಗಳವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಹುಲಿಯ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ವೈದ್ಯರು ಡಾ.ವಾಸಿಂ ಮಿರ್ಜಾ ಮತ್ತು ಡಾ.ಆದರ್ಶ್ ಸಹಕಾರದಿಂದ ಶಾರ್ಪ ಶೂಟರ್ ಗಳಾದ ಅಕ್ರಂಪಾಷ ಮತ್ತು ರಂಜನ್ ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಹುಲಿಯನ್ನು ಬಂಡೀಪುರ ಮುಖ್ಯ ಕಚೇರಿಗೆ ರವಾನಿಸಲಾಗಿದ್ದು, ಮೇಲಧಿಕಾರಿಗಳ ಆದೇಶದಂತೆ ಮುಂದಿನ ಕ್ರಮವಹಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ 15 ಹುಲಿಗಳನ್ನು ಸೆರೆ ಹಿಡಿಯಲಾಗಿದೆ.
ಸ್ಥಳದಲ್ಲಿ ಡಿಸಿಎಫ್ ಗಳಾದ ಪರಮೇಶ್, ಪ್ರಭಾಕರನ್, ಎಸಿಎಫ್ ಗಳಾದ ಸುಮಿತ್ರ, ಡಿ.ಪರಮೇಶ್, ಆರ್ ಎಫ್ ಒ ಗಳಾದ ನಾರಾಯಣ್, ಅಕ್ಷಯ್, ಅರ್ಪಿತಾ.ಹಾಗೂ ಡ್ರೋನ್ ತಂಡ, ಆನೆ ಕಾರ್ಯಪಡೆ, ಚಿರತೆ ಕಾರ್ಯಪಡೆ ಸೇರಿದಂತೆ ಪೊಲೀಸ್ ಇಲಾಖೆ, ಮೈಸೂರು ಅರಣ್ಯ ವಿಭಾಗ ಮತ್ತು ಬಂಡೀಪುರ ಅರಣ್ಯ ವಿಭಾಗದ ಸಿಬ್ಬಂದಿ ಮತ್ತು ಗ್ರಾಮದ ಮುಖಂಡರು ಸಿದ್ದರಾಜು,ತ್ರಿಶಂಭು,ಮೋಹನ್ ಕುಮಾರ್ ಎಂ.ಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಮಾಜಿಕ ಜಾಲತಾಣ ಸಮಿತಿ, ಶಿವಚಂದ್ರ, ರೈತ ಕಲ್ಯಾಣ ಯುವ ಘಟಕದ ಅಧ್ಯಕ್ಷರು ಗಿರೀಶ್, ರಾಜೇಶ್, ಬಸವರಾಜ್ ಇನ್ನಿತರರು ಇದ್ದರು.







