LatestNews

ಗುರುಹಿರಿಯರ ಸಮ್ಮುಖದಲ್ಲಿ ಕುಮಾರಿ ವಾಸವಿ ವಿನೂತನಳ ಭರತನಾಟ್ಯ ರಂಗಪ್ರವೇಶ..

ಬೆಂಗಳೂರು: ನಿರಂತರ ಸ್ಕೂಲ್ ಆಫ್ ಡಾನ್ಸ್ ಸಂಸ್ಥೆಯ ಗುರುಗಳಾದ ವಿದುಷಿ ಶ್ರೀಮತಿ ಸೌಮ್ಯ ಸೋಮಶೇಖರ್ ಹಾಗೂ ವಿದ್ವಾನ್ ಶ್ರೀ ಸೋಮಶೇಖರ್ ಚುಡನಾಥ್ ಇವರ ಶಿಷ್ಯಯಾದ ಕುಮಾರಿ ವಾಸವಿ ವಿನೂತನಳ ಭರತನಾಟ್ಯ ರಂಗ ಪ್ರವೇಶ ಕೆಆರ್ ಪುರಂ ನಲ್ಲಿರುವ “ಜನಪದರು” ಸಭಾಂಗಣದಲ್ಲಿ ನಡೆಯಿತು.

ಸಾಂಪ್ರದಾಯಿಕ ಪೂಜೆಯೊಂದಿಗೆ ಪ್ರಾರಂಭಿಸಿ, ಗುರುಗಳ ಬಳಿ ಗೆಜ್ಜೆಗಳನ್ನು ಪಡೆದು ಅವರ ಆಶೀರ್ವಾದದೊಂದಿಗೆ ಹಾಗೂ ತಂದೆ ತಾಯಿಯರಾದ ಶ್ರೀಮತಿ ಲಕ್ಷ್ಮಿಸುದೀಪ್ತಿ ಹಾಗೂ ಶ್ರೀ ರಾಮ್ ಕುಮಾರ್ ರವರ ಆಶೀರ್ವಾದದೊಂದಿಗೆ ಗುರುಹಿರಿಯರ  ಸಮ್ಮುಖದಲ್ಲಿ  ಶುಭ ಪ್ರಾರಂಭ ಮಾಡಿದ್ದು ವಿಶೇಷವಾಗಿತ್ತು.

ಭರತನಾಟ್ಯ ಮಾರ್ಗದ ಪ್ರಾರಂಭಿಕ ನೃತ್ಯಬಂದವಾದ ಪುಷ್ಪಂಜಲಿಯೊಂದಿಗೆ ವಿಘ್ನ ನಿವಾರಕ ವಿನಾಯಕನ ಕುರಿತಾದ “ಗಜವದನಾ ಕರುಣಾ ಸದನ” ಎಂಬ ಸ್ತುತಿಯೊಂದಿಗೆ ರಂಗಪ್ರವೇಶ ಪ್ರಾರಂಭವಾಯಿತು. ದುಷ್ಟ ಶಿಕ್ಷಣ ಶಿಷ್ಟ ರಕ್ಷಣಾ ಮಾಡುವ ಪರಿಯನ್ನು ಮಹಿಷಾಸುರ ಸಂಹಾರದೊಂದಿಗೆ ವಿವರಿಸುತ್ತಾ ದುರ್ಗೆಯ ಹಲವಾರು ರೂಪಗಳನ್ನು ದುರ್ಗಾ ಕೌತ್ವಂ ಮುಖಾಂತರ ನೃತ್ಯ ಪ್ರದರ್ಶನ ಮುಂದುವರೆಯಿತು.

ದುರ್ಗೆಯ ಸಾಕ್ಷಾತ್ಕಾರ ಬಹಳ ಸೊಗಸಾಗಿ ರೂಪುಗೊಂಡಿತು. ದಾಸ ಶ್ರೇಷ್ಠರಾದ ಪುರಂದರದಾಸರ “ವೇಂಕಟಾಚಲ ನಿಲಯಂ” ಕೃತಿಯೊಂದಿಗೆ ವಾಸವಿ ವಿನೂತ್ನ ಸಭಿಕರೆಲ್ಲರನ್ನು ವೈಕುಂಠಪುರಕ್ಕೆ ಕರೆದೊಯ್ದಳು.ಶಂಖ ಚಕ್ರ ಗದಾಪದ್ಮ ಸಹಿತನಾದ ವೆಂಕಟೇಶನ ವರ್ಣನೆಯನ್ನು ಬಹಳ ಸುಂದರವಾಗಿ ಈ ಕೃತಿಯಲ್ಲಿ ಪ್ರದರ್ಶಿಸಲಾಗಿತ್ತು. ಆ ನಂತರ ಪದವರ್ಣ ದೊಂದಿಗೆ ವಿನೂತ್ನ- ತನ್ನ ಶಕ್ತಿ ಸಾಮರ್ಥ್ಯವನ್ನು, ಜತಿಗಳ ಮೇಲಿರುವ ಹಿಡಿತವನ್ನು, ಸೃಜನಾತ್ಮಕ ಕೌಶಲ್ಯವನ್ನು, ಭಕ್ತಿರಸಭರಿತವಾದ ಅಭಿನಯದೊಂದಿಗೆ ತನ್ನ ನೃತ್ಯದ ಮುಖಾಂತರ ಸಭೆಯಲ್ಲಿದ್ದ  ಕಲಾ ರಸಿಕರ ಮನಸೆಳೆದಳು.

ಮುಂದಿನ ನೃತ್ಯ ಬಂದಗಳನ್ನು ಶ್ರೀಕೃಷ್ಣನಿಗೆ ಸಮರ್ಪಿಸುತ್ತಾ ಜಾವಳಿಯೊಂದಿಗೆ ಪ್ರಾರಂಭಿಸಿದಳು. ವಿದ್ವಾನ್ ಶ್ರೀ ಪ್ರಸನ್ನಕುಮಾರ್ ರವರ ರಚನೆಯ “ನೋಡಿದಾಕ್ಷಣ” ಎಂಬ ಜಾವಳಿಗೆ ವಿನೂತನಳ ರಸಭರಿತವಾದ ಅಭಿನಯ ಶ್ರೀ ಕೃಷ್ಣನಿಗಾಗಿ ಕಾತುರದಿಂದ ಕಾಯುವ ಗೋಪಿಯ ಮನಸ್ಸನ್ನು ಪ್ರತಿಬಿಂಬಿಸಿತು. ಕಾಣುವಷ್ಟು ಹತ್ತಿರದಲ್ಲಿದ್ದ ರೂಸಿಗದಷ್ಟು ದೂರದಲ್ಲಿದ್ದ ಕೃಷ್ಣನ ಕೈಯಲ್ಲಿದ್ದ ಕೊಳಲು, ತಲೆಯ ಮೇಲಿನ ನವಿಲುಗರಿ ತಾನಾಗ ಬಾರದೇ ಎಂಬ ಹಂಬಲ ಬಹಳ ಸುಂದರವಾಗಿ ರೂಪುಗೊಂಡಿತು. ಈ ಚಿತ್ರಣವನ್ನು ಮುಂದಕ್ಕೆ ಕೊಂಡೊಯ್ಯುತ್ತಾ “ವಾರಣಂ ಆಯಿರಂ” ನಲ್ಲಿ ಆಂಡಾಳ್ (ಗೋದಾದೇವಿ) ಆಗಿ, ಕನಸಿನಲ್ಲಿ ಶ್ರೀ ಕೃಷ್ಣನೊಂದಿಗೆ ವಿವಾಹವಾದ ವಿವರಣೆಯನ್ನು ಸೊಗಸಾಗಿ ಪ್ರದರ್ಶಿಸಲಾಯಿತು.

ಡಾ. ಬಾಲಮುರಳಿಕೃಷ್ಣರವರ ರಚನೆಯ ಕದನ ಕುತೂಹಲ ರಾಗದ ತಿಲ್ಲಾನ ಜನಮನಸೂರೆಗೊಂಡಿತು. ಸುಮಾರು 90 ನಿಮಿಷಗಳ ಕಾಲನೃತ್ಯ ಪ್ರದರ್ಶನ ಮಾಡಿದ್ದರೂ ಯಾವುದೇ ರೀತಿಯಲ್ಲಿ ಶಕ್ತಿಗುಂದದೆ, ಚೈತನ್ಯಭರಿತಳಾಗಿ ತಿಲ್ಲಾನವನ್ನು ಮಾಡಿದಳು. ಪುಟ್ಟಪರ್ತಿಸಾಯಿಬಾಬಾರವರ 100ನೇ ಜನ್ಮದಿನವಾದ್ದರಿಂದ ಅವರ ಆರತಿಯೊಂದಿಗೆ ಮಂಗಳವನ್ನು ಮಾಡಿದಳು.

ಪ್ರಖ್ಯಾತ ನೃತ್ಯ ಗುರುಗಳಾದ ವಿದುಷಿ ಡಾ. ಮಾನಸಕಂಟಿ, ವಿದುಷಿ ಶ್ರೀಮತಿ ರೇಖಾಜಗದೀಶ್ ಹಾಗೂ ಪ್ರಸಿದ್ದ ಹೋಮಿಯೋಪತಿ ವೈದ್ಯರಾದ ಡಾ.ರಾಜೀವ್ ರವರು ಮುಖ್ಯಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ವಿದ್ವಾನ್ ಶ್ರೀ ರಾಜೀವ್ ರಾಜಗೋಪಾಲನ್ ರವರ ಗಾಯನ, ವಿದ್ವಾನ್ ಶ್ರೀ ವಿದ್ಯಾಶಂಕರ್, ವಿದ್ವಾನ್ ಶ್ರೀ ರಘುಸಿಂಹ, ವಿದ್ವಾನ್ ಶ್ರೀ ಶ್ರೀನಿಧಿಮಾಥುರ್, ವಿದ್ವಾನ್ ಶ್ರೀ ಮಿಥುನ್ ಶಕ್ತಿರವರ ವಾದ್ಯವೃಂದ ಅತ್ಯದ್ಭುತವಾದ ಸಹಕಾರವನ್ನು ವಿನೂತನಾತಳಿಗೆ ನೀಡಿದರು.

– ಮಾನಸ ಬಿ ಆರ್

admin
the authoradmin

Leave a Reply