ArticlesLatest

ಕಾರು ಖರೀದಿಸುವ ಕನಸನ್ನು ನನಸು ಮಾಡುವುದೀಗ ಬಹು ಸುಲಭ… ಕಾರಿನ ಇತಿಹಾಸ ಹೇಳುವುದೇನು?

ಒಂದು ಕಾಲದಲ್ಲಿ ಮಧ್ಯಮವರ್ಗಕ್ಕೆ ಕಾರನ್ನು ಖರೀದಿಸುವುದು ಕನಸಿನ ಮಾತಾಗಿತ್ತು. ಆದರೆ ಬದಲಾದ ಕಾಲದಲ್ಲಿ ಅವರವರ ಶಕ್ತ್ಯಾನುಸಾರ ಕಾರನ್ನು ಖರೀದಿಸಿ ಅದರಲ್ಲಿ ಓಡಾಡುವುದು ಕಷ್ಟವೇನಲ್ಲ… ಅದರಲ್ಲೂ ಇಎಂಐ ಸೌಲಭ್ಯ ಬಂದ ಬಳಿಕ ಕಾರು ಖರೀದಿಸುವುದು ಕಷ್ಟವಾಗಿ ಉಳಿದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಮನೆಗೊಂದು ಕಾರು ಬಯಸುವುದಲ್ಲದೆ, ಕಾರಿದ್ದವರು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದಂತೆಯೇ ತಮ್ಮಲ್ಲಿದ್ದ ಹಳೆಯ ಕಾರನ್ನು ಮಾರಿ ಹೊಸ ಕಾರಿನ ಕಡೆಗೆ ಚಿತ್ತಹರಿಸುವುದು ಮಾಮೂಲಿಯಾಗಿದೆ. ಇನ್ನು ಕಾರಿನ ಬಗ್ಗೆ  ಹತ್ತಾರು ವಿಶೇಷತೆಗಳಿದ್ದು ಅವುಗಳು ಏನೆಂದು ತಿಳಿಯಬೇಕಾದರೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರ ಲೇಖನ  ಓದಲೇ ಬೇಕಾಗುತ್ತದೆ…

“ಕಾರ್…ಕಾರ್…ಕಾರ್…..ಎಲ್ನೋಡಿ ಕಾರ್” ಎಂದು “ಅಮೆರಿಕ ಅಮೆರಿಕ” ಕನ್ನಡ ಚಿತ್ರದಲ್ಲಿ ಹಾಡಿ ಹೊಗಳಿರುವಂತೆ, ಕಾರ್ ಗೆ ತನ್ನದೇ ಚರಿತ್ರೆ ಇರುವುದು ಮಾತ್ರವಲ್ಲದೆ ಅದರ ಹಿಂದೆ ರೋಚಕ ಕಥೆಯೂ ಇದೆ. ಈ ಲೇಖನ ಬರೆಯುವಂತೆ ಪ್ರೇರೇಪಿಸಿದ ಈ ನಾಲ್ಕು ಚಕ್ರದ ಮೋಟಾರ್ ಬಂಡಿಯನ್ನು ಪ್ರಪಂಚದಲ್ಲಿ ಪ್ರಥಮ ಬಾರಿಗೆ ಕ್ರಿ.ಶ.1920ರಲ್ಲಿ ಅಮೆರಿಕದ ಹೆನ್ರಿ ಫೋರ್ಡ್ ವಿಜ್ಞಾನಿ ಕಂಡುಹಿಡಿದು, ತಯಾರಿಸಿದನು. 1920ರಿಂದ ಇಂದಿನವರೆಗೆ ಪ್ರಪಂಚದಾದ್ಯಂತ 35 ದೇಶಗಳ 88 ಕಂಪನಿಗಳು 25 ಸಾವಿರಕ್ಕು ಮಿಕ್ಕ ಮಾಡೆಲ್, ಡಿಸೈನ್ ಕಾರುಗಳನ್ನು ತಯಾರಿಸಿವೆ.

ಹಿರಿಯಣ್ಣ ಅಮೆರಿಕ ದೇಶದಲ್ಲಿ ಪ್ರತಿಶತ 90 ಮಂದಿ ಕಾರ್ ಉಳ್ಳವರಾಗಿದ್ದು, ಇವರಲ್ಲಿ ಪ್ರತಿ ಶತ 30ರಷ್ಟು ಮಹಿಳೆಯರಿದ್ದಾರೆ! ಭಾರತದಲ್ಲಿ ಪ್ರತಿಶತ 15 ಮಂದಿ ಕಾರ್ ಉಳ್ಳವರಿದ್ದು, ಪ್ರತಿಶತ 3ರಷ್ಟು ಮಾತ್ರ ಮಹಿಳೆಯರಿದ್ದಾರೆ! ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಕಾರ್ ಹೊಂದಲು ಅಥವಾ ಚಾಲನೆ ಮಾಡಲು ಇಚ್ಚಿಸುತ್ತಾರಾದರೂ ಇದು ಶ್ರೀಮಂತ ಮತ್ತು ಮಧ್ಯಮ ವರ್ಗದವರಿಗಷ್ಟೇ ಎಟುಕುವಂತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಪ್ರತಿ ಸಾವಿರಕ್ಕೆ 2ಮಂದಿ ಮಾತ್ರ ಕಾರುಳ್ಳವರು ಇದ್ದು ಸ್ವಾತಂತ್ರ್ಯದ ನಂತರ ಇದು 4ಕ್ಕೆ ಏರಿತು.

ಆ ಕಾಲದಲ್ಲಿ ಕಾರು ಕೊಳ್ಳುವುದೆಂದರೆ ಶ್ರೀಮಂತಿಕೆಯ ಪ್ರತಿಷ್ಠೆಯಾಗಿ ಅಧಿಕಾರಿಗಳ, ರಾಜಕಾರಣಿಗಳ, ಗೌರವ-ಘನತೆಯಾಗಿತ್ತು, ಖಾಸಗಿ ಕ್ಷೇತ್ರದ ಹೊಟೇಲ್/ಸಿನಿಮಾ ಟಾಕೀಸ್ ಮಾಲೀಕರು, ಎಸ್ಟೇಟ್ ಪ್ಲಾಂಟರ್, ಲ್ಯಾಂಡ್ ಲಾರ್ಡ್‍ಗಳಿಗೆ ಸೀಮಿತಗೊಂಡಿತ್ತು! ಒಂದು ಕಾಲಕ್ಕೆ ಓರ್ವ ಸರ್ಕಾರಿ ಅಧಿಕಾರಿ ತನ್ನ ನಿವೃತ್ತಿ ಸಮಯದಲ್ಲೂ, ಒಬ್ಬ ಮಧ್ಯಮ ವರ್ಗದ ವ್ಯಕ್ತಿ ತನ್ನ ಜೀವಮಾನ ಸಂಪಾದನೆಯನ್ನೆಲ್ಲ ಉಳಿಸಿದರೆ ಕಾರ್ ಕೊಳ್ಳುವ ಸಾಧ್ಯತೆ ಇತ್ತು! ಈ ಪರಿಸ್ಥಿತಿ 1980ರವರೆಗೆ ಉತ್ತಮಗೊಳ್ಳಲಿಲ್ಲ. ಕ್ರಮೇಣ, ಜಪಾನಿ ಸಂಸ್ಥೆಯೊಂದು ಭಾರತಕ್ಕೆ ಅಡಿಯಿಟ್ಟು ಮಾರುತಿ-ಸುಜುಕಿ 800ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತು.

ಅಂದಿನಿಂದ ಇಂದಿನವರೆಗೂ ಕಾರ್ ಕ್ರೇಜ್

ಅಂದು ಪ್ರಾರಂಭಗೊಂಡ ಕಾರ್ ಕೊಳ್ಳುವವರ ಸಂಖ್ಯೆ ಇಂದಿನವರೆಗೂ ಇಳಿಮುಖವಾಗಲೇ ಇಲ್ಲ. ಅದರಲ್ಲೂ 2001ನೇ ಇಸವಿಯಿಂದ ಈಚೆಗೆ ಎಂ.ಎನ್.ಸಿ.ಯ ಐಟಿ-ಬಿಟಿ ಕಂಪನಿಗಳ, ಜಾಗತೀಕರಣ ಉದ್ಯಮಿಗಳ ಆಗಮನದಿಂದಾಗಿ ಮತ್ತು ವಿಶ್ವವಿದ್ಯಾನಿಲಯ ಅಧ್ಯಾಪಕರುಗಳಿಗೆ ಸುನಾಮಿ ಪರಿಯಲ್ಲಿ ಯು.ಜಿ.ಸಿ.ವೇತನ ನೀಡಲಾಗಿ ದಿನದಿಂದ ದಿನಕ್ಕೆ ಕಾರ್ ಕೊಳ್ಳುವವರ ಸಂಖ್ಯೆ ಆಶ್ಚರ್ಯಕರ ರೀತಿಯಲ್ಲಿ ಏರುತ್ತಿದೆ.   ತತ್ಪರಿಣಾಮವಾಗಿ, ಡಿ-ದರ್ಜೆ ನೌಕರನಿಂದ ಹಿಡಿದು ಲಾಟರಿ, ಫಾಸ್ಟ್ ‍ಫುಡ್, ಕೇಟರಿಂಗ್, ಇನ್ನಿತರ ವರ್ಗದ ಶ್ರೀಸಾಮಾನ್ಯನೂ ಸಹ ಸೆಕೆಂಡ್-ಥರ್ಡ್ ಹ್ಯಾಂಡ್ ಕಾರ್ ಕೊಳ್ಳುವಂತೆ ಆಗಿರೋದು 8ನೇ ಅದ್ಭುತವೇ ಸರಿ! 2012 ರಲ್ಲಿ ಭಾರತ ದೇಶದ ಕಾರ್ ಮಾರುಕಟ್ಟೆ ಏರಿಕೆ ಕಂಡಿದೆ.

ಪೆಟ್ರೋಲ್-ಡೀಸೆಲ್ ಕಾರ್ ಗಳ ನಡುವೆ ಇದೀಗ ಬ್ಯಾಟರಿಯ ಕಾರ್ ಗಳು ಲಗ್ಗೆಯಿಟ್ಟಿದ್ದು ಟೆಸ್ಲಾ ಹೊಸ ದಾಖಲೆ ಬರೆದಿದೆ. ಇದು ಅಮೇರಿಕನ್ ಕಂಪನಿಯಾಗಿದೆ, ಇದನ್ನು “ಟೆಸ್ಲಾ, ಇಂಕ್” ಎಂದು ಕರೆಯಲಾಗುತ್ತದೆ. ಈ ಕಂಪನಿಯನ್ನು 2003 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದರ ಹೆಸರನ್ನು ವಿಜ್ಞಾನಿ ನಿಕೋಲಾ ಟೆಸ್ಲಾ ಅವರ ಗೌರವಾರ್ಥ ಇಡಲಾಗಿದೆ. ಗ್ಯಾಸ್ ಇಂಧನದ ಕಾರ್ ಗಳು ಇವೆ.  ಮುಂಬರುವ ದಿನಗಳಲ್ಲಿ ‘ಸೋಲಾರ್ ಕಾರ್’ ಗಳು ಮಾರುಕಟ್ಟೆಗೆ ಬಂದರೆ ಮತ್ತೊಂದು ಜಮಾನ ಆರಂಭವಾಗಲಿದೆ.

ಕಾಸಿಗೊಂದು ಕೊಸರಿಗೊಂದು ಹಳೆಯ ಕಾರ್ ಸಿಗುವ ಅವಕಾಶವಿದ್ದು ಪ್ರತಿಯೊಬ್ಬರೂ ಕಾರ್ ಕೊಳ್ಳುವ ಆಸೆಯನ್ನು ಈಡೇರಿಸಿಕೊಳ್ಳುತ್ತಾರೆ. ಭವಿಷ್ಯತ್ಕಾಲದಲ್ಲಿ ಭಾರತದಲ್ಲೂ ಶೇ.80ರಷ್ಟು ಮಂದಿ ಕಾರ್ ಮಾಲೀಕರಾಗುವ ಅವಕಾಶ ಬಂದೊದಗ ಬಹುದು! ‘ಲೇಟೆಸ್ಟ್ ಟೆಕ್ನಾಲಜಿ’ ಯಿಂದಾಗಿ ಮಾತನಾಡುವ ಕಾರ್ ಬರಲಿದೆ. ಆಕಸ್ಮಾತ್ ಕಾರುಗಳಿಗೆ ಮಾತು ಬಂದದ್ದಾದರೆ ಅಪಘಾತಗಳು ತಪ್ಪಬಹುದು? ಇಷ್ಟಾದರೂ ಅನಿಶ್ಚಿತವಾದ ಇಂಧನ ದರ ಏರಿಕೆಯು ಕಾರ್ ಮಾರುಕಟ್ಟೆ ಮೇಲೆ ಪ್ರಮುಖ ಪರಿಣಾಮ ಬೀರುತ್ತಾ ಬಂದಿದೆ.

ಇತ್ತೀಚೆಗೆ ಇಂಧನ ಬಿಕ್ಕಟ್ಟಿಗೆ ಚೀನಾ ಮತ್ತು ಭಾರತ ಕಾರಣ ಎಂಬ ಅಮೆರಿಕದ ದೂಷಣೆಗೆ ಭಾರತೀಯರು ಮಾತ್ರವಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳೆಲ್ಲಾ ಖಂಡ ತುಂಡವಾಗಿ ಖಂಡಿಸಿದ್ದಾರೆ.   ಅಷ್ಟಕ್ಕೂ ಭಾರತೀಯರು ಕಾರು ಓಡಿಸಲು ದೊಡ್ಡಣ್ಣನ ಅಪ್ಪಣೆ ಏಕೆ ಬೇಕು?  ಏಕೆಂದರೆ, ಇವತ್ತಿಗೂ ಅಮೆರಿಕೆಯಲ್ಲಿ ಭಾರತೀಯರಿಲ್ಲವಾದರೆ ಅದರ ವೈಜ್ಞಾನಿಕ ಮತ್ತು ಆರ್ಥಿಕ ಅಭಿವೃದ್ಧಿ ಇಲ್ಲವೆಂದರ್ಥ.ಈ ಕಟುಸತ್ಯ ದೊಡ್ಡಣ್ಣನಿಗಷ್ಟೇ ಅಲ್ಲ ಇಡೀ ಪ್ರಪಂಚಕ್ಕೆ ತಿಳಿದಿದೆ !

ಭಾರತದಲ್ಲಿನ ಗಣ್ಯರ ಕಾರುಗಳ ವಿಶೇಷತೆ

ಭಾರತದ ರಾಷ್ಟ್ರಪತಿ-ರಾಜ್ಯಪಾಲರ ಕಾರುಗಳಿಗೆ ನಂಬರ್ ಪ್ಲೇಟ್ ಇರುವುದಿಲ್ಲ.  ಬಹಳ ವರ್ಷಗಳ ಕಾಲ ರಾಜ-ಮಹಾರಾಜರ ಕಾರುಗಳಿಗೂ ನಂಬರ್ ಪ್ಲೇಟ್ ಇರಲಿಲ್ಲ.  ಆದರೆ 1971ರ ನಂತರ ಮಹಾರಾಜರನ್ನು ಸಾಮಾನ್ಯ ಪ್ರಜೆಯೆಂದು ಪರಿಗಣಿಸಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್‍ಗಳನ್ನು ಕಡ್ಡಾಯವಾಗಿ ಜಾರಿ ಗೊಳಿಸಲಾಯಿತು. ಮೈಸೂರಿನ ಅಂತಿಮ ಮಹಾರಾಜ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಹಾದೂರ್ ಅವರ ಬಳಿ 35ಕ್ಕೂ ಹೆಚ್ಚು ವಿದೇಶೀ ಮಾಡೆಲ್ ಕಾರ್ ಗಳು ಇದ್ದವು.  ಅವುಗಳಲ್ಲಿ ಬಿ.ಎಂ.ಡಬ್ಲ್ಯು ಕಂಪನಿಯ 25 ಕಾರ್ ಗಳಿದ್ದು, ಎಲ್ಲಾ ಕಾರುಗಳಿಗೆ ಆರ್.ಟಿ.ಓ. ರಿಜಿಸ್ಟ್ರೇಶನ್ ನಂಬರ್ 1953 ಇದ್ದುದು ಒಂದು ದಾಖಲೆ ಮತ್ತು ಆಶ್ಚರ್ಯಕರ ಸಂಗತಿ.

ಸದರಿ ಒಡೆಯರ್ ರವರ ಎಲ್ಲ ಕಾರ್  ಗಳಿಗೂ ಒಂದೇ ಸಂಖ್ಯೆಯನ್ನೇಕೆ ಆರಿಸಿಕೊಂಡಿದ್ದರು ಎಂದರೆ ಅವರು ಜನಿಸಿದ ಇಸವಿ 1953  ಆದ್ದರಿಂದ.    ಇವರ ಕಾರುಗಳು ಸರಾಸರಿ 100ಕೋಟಿ ಬೆಲೆಯುಳ್ಳದ್ದಾಗಿದ್ದು ಬುಲೆಟ್‍ಪ್ರೂಫ್ ಮತ್ತು ಅಸಾಧಾರಣ ಗುಣ-ವಿಶೇಷಣಗಳನ್ನು ಹೊಂದಿರುತ್ತವೆ.  ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ಜಪಾನ್, ಚೈನಾ ಹಾಗೂ ಇನ್ನಿತರ ಐರೋಪ್ಯ ದೇಶಗಳ ಪ್ರಧಾನಿ, ರಾಷ್ಟ್ರಪತಿ ಬಳಸುವಂಥ ಕಾರುಗಳೂ ಸಹ ಅಂದಾಜು ರೂ.400, 500 ಕೋಟಿ ಬೆಲೆಯುಳ್ಳದ್ದಾಗಿರುತ್ತವೆ!   ಇನ್ನು ರೇಸ್‍ಗಳಲ್ಲಿ ಭಾಗವಹಿಸುವ ಕಾರ್ ಗಳಂತೂ ನೂರಾರು ಕೋಟಿ ಮೌಲ್ಯದ್ದಾಗಿದ್ದು, ಆಯ ತಪ್ಪಿದರೆ ಅಪಘಾತಕ್ಕೀಡಾಗಿ ಕೆಲವೇ ಗಂಟೆಗಳಲ್ಲಿ ಸಾವಿರಾರು ಕೋಟಿ ಮಾಯವಾಗುತ್ತದೆ!

ಹಾಲಿವುಡ್ (ಉದಾ-007 ಜೇಮ್ಸ್ ಬಾಂಡ್) ಸೇರಿದಂತೆ ಬಾಲಿವುಡ್, ಟಾಲಿವುಡ್, ಸ್ಯಾಂಡಲ್‍ವುಡ್ ಚಲನಚಿತ್ರಗಳಲ್ಲಿ ಅತ್ಯಂತ ವಿಭಿನ್ನ ಮತ್ತು ದುಬಾರಿ ವೆಚ್ಚದ ಕಾರುಗಳನ್ನು ಕಾಣಬಹುದು!  ವಿಶೇಷವಾಗಿ ಕಾರುಗಳ ಬಗ್ಗೆ ಅನೇಕ ಚಲನಚಿತ್ರಗಳನ್ನು ತಯಾರಿಸಲಾಗಿದ್ದು ಅವೆಲ್ಲವೂ ಬಾಕ್ಸಾಫೀಸ್ ದಾಖಲೆಯೊಡನೆ ಯಶಸ್ವಿ ಪ್ರದರ್ಶನ ಕಂಡಿವೆ. ಉಧಾ:- ಟೂ ಫಾಸ್ಟ್ & ಟೂ ಫ್ಯೂರಿಯಸ್ ಸೀರಿಯಲ್ ದಿ-ರೇಸ್, ದಿ-ಕಾರ್, ದಿ-ಡೆತ್ ರೇಸ್, ಗ್ರ್ಯಾಂಡ್ ಪ್ರಿ, ಮುಂತಾದ್ ಅನೇಕ ಚಿತ್ರಗಳು ಅತ್ಯಂತ ಜನಪ್ರಿಯ ಮತ್ತು ಹಣ ಗಳಿಸಿವೆ.

ರೋಲ್ಸ್‍ರಾಯ್[ಅರಬ್ ದೊರೆ, ಇಂಗ್ಲೆಂಡ್‍ ಭಾರತದ ಬರೋಡ, ಜಯಪುರ, ಮೈಸೂರು, ಹೈದರಾಬಾದ್, ಗ್ವಾಲಿಯರ್, ಇತ್ಯಾದಿ ಮಹಾರಾಜ-ಮಹಾರಾಣಿ ಬಳಸುತ್ತಿದ್ದ ಐತಿಹಾಸಿಕ ಪರಂಪರೆಯುಳ್ಳ ಬ್ರಾಂಡೆಡ್ ಕಾರು], ಆಸ್ಟಿನ್‍ಆಫ್ ಇಂಗ್ಲೆಂಡ್, ಫೋರ್ಡ್, ಮರ್ಸಿಡೆಸ್ ಬೆಂಜ್, ಫಗ್ರ್ಯುಸನ್ಸ್, ಫಾರ್ಗೋ, ಬಿಎಂಡಬ್ಲ್ಯು, ಡಾಡ್ಜ್, ಶೆವ್ರೊಲೆ, ಪ್ಲೈಮೌತ್ ಇಂಪಾಲ, ಅಂಬಾಸಿಡರ್, ಫಿಯಟ್, ಟಾಟಾ, ಮಾರುತಿ, ಹೆರಾಲ್ಡ್,  ಹ್ಯೂಂಡಾಯ್, ಹೋಂಡ, ಕವಸಾಕಿ, ಯಮಹ, ನಿಸಾನ್, ಇವಾಲಿಯ, ಟೊಯೊಟ, ಡಾಲ್ಫಿನ್, ಮಹೀಂದ್ರ, ಬಜಾಜ್, ಬ್ಯೂಕ್, ಕ್ರಿಸ್ಲರ್, ಡಸ್ಟರ್, ಕ್ಯಾಡಿಲಾಕ್, ಸಮ್ಮರಿ, ರೆನಾಲ್ಟ್, ಫೆರ್ರಾರಿ, ಜಾಗುವರ್, ಮಿಟ್ಸುಬಿಷಿ, ಲ್ಯಾಂಡ್ರೋವರ್, ವೊಲ್ಕ್ಶ್‍ವ್ಯಾ ವೋಲ್ ಕ್ ಶ್ ವ್ಯಾಗನ್, ವೋಲ್ವೊ, ಲೋಟಸ್, ಇತ್ಯಾದಿ ಮಾಡೆಲ್‍ಗಳು.

ಕಾರು ಖರೀದಿಸುವ ಮುನ್ನ ಗಮನವಿರಲಿ…

ಕಾರುಗಳು ಯಾವುದೇ ಇರಲಿ ಅದನ್ನು ಬಯಸುವುದು ಮನುಷ್ಯನ ಸಹಜಗುಣ ಕೆಲವರಿಗೆ ಜೀವನದಲ್ಲಿ ಕಾರು ತೆಗೆಯುವುದು ಒಂದು ಗುರಿಯೂ ಹೌದು. ಆದ್ದರಿಂದ ಕಾರು ತೆಗೆಯುವ ಮುನ್ನ ಅದರ ಬಗ್ಗೆ ಒಂದಷ್ಟು ತಿಳಿದುಕೊಳ್ಳುವುದು ಒಳ್ಳೆಯದು. ಹಾಗಾದರೆ ಏನಿದು ಟಿಪ್ಸ್ ಅಂತಿರಾ ಇಲ್ಲಿದೆ ನೋಡಿ.. ಬಹಳಷ್ಟು ಕಾರು ಮಾಲೀಕರ ಗಮನಕ್ಕೆ ಬಂದ ಒಂದು ವಿಚಾರ ಏನೆಂದರೆ ಕಾರನ್ನು ಕೊಳ್ಳುವುದು ಸುಲಭ ಸಾಧ್ಯವಾದರೆ, ಅದನ್ನು ನಿರ್ವಹಿಸುವುದು ಕಷ್ಟಸಾಧ್ಯ! ಎನ್ನುವುದಾಗಿದೆ.

ಪೆಟ್ರೋಲ್, ಡೀಸೆಲ್, ಗ್ಯಾಸ್, ಎಲೆಕ್ಟ್ರಾನಿಕ್  ಇವುಗಳಲ್ಲಿ ಯಾವುದು ಅನುಕೂಲ, ಉಳಿತಾಯಕರ?,  ಖಾಸಗಿ ಉಪಯೋಗಕ್ಕೋ, ಸಾರ್ವಜನಿಕ ಉಪಯೋಗಕ್ಕೋ ಅಥವಾ ಎರಡೂ ಬಗೆಯ ಉಪಯೋಗಕ್ಕೋ? ,  ಖಾಸಗಿ ಮಾತ್ರವಾದರೆ, ಕುಟುಂಬವು ಚಿಕ್ಕದೋ, ದೊಡ್ಡದೋ, ಪ್ರತಿದಿನ,ವಾರ, ತಿಂಗಳ, ವರ್ಷದ ಪ್ರಯಾಣಕ್ಕೋ? ಪ್ರತಿ ಟ್ರಿಪ್‍ನಲ್ಲಿನ ಪ್ರಯಾಣಿಕರ ಸಂಖ್ಯೆಎಷ್ಟು?, ಬಳಸಿದ ಕಾರಿಗೆ ಟ್ರೂವ್ಯಾಲ್ಯು ಸದಾವಕಾಶ ಇರುತ್ತದೋ ಇಲ್ಲವೋ?,  ಮಾಡೆಲ್ ಬಣ್ಣ ಆಕಾರ ಅಳತೆ ರಿಜಿಸ್ಟೇಷನ್ ನಂಬರ್ ಇತ್ಯಾದಿಗಳು ತಮ್ಮ ಹೆಸರುಬಲಕ್ಕೆ ಅಥವಾ ವಾಸ್ತುಪ್ರಕಾರಕ್ಕೆ ಮಾರಕವೋ? ಪೂರಕವೋ?

ಪ್ರತ್ಯೇಕ ಚಿಕ್ಕಕುಟುಂಬದ ಅವಿಭಾಜ್ಯ ದೊಡ್ಡ ಕುಟುಂಬದ ಸದಸ್ಯರಲ್ಲಿ ಎಲ್ಲರೂ ಒಬ್ಬರು ಚಾಲನೆ ಮಾಡಬೇಕೆ?, ಬಂಧು, ಮಿತ್ರರುಗಳು ಅಪೇಕ್ಷಿಸಿದಾಗ ಕಾರನ್ನು ಅವರ ಸುಪರ್ಧಿಗೆ ನೀಡಬೇಕೆ, ಬೇಡವೇ? ದಾಕ್ಷಿಣ್ಯಕ್ಕೆ ಕೊಡುವುದು, ನಿರ್ಧಾಕ್ಷಿಣ್ಯದಿಂದ ಕೊಡದಿರುವುದು? ಏಕೆಂದರೆ ಯಾವಾಗಲೂ ಸಿಂಗಲ್‍ಹ್ಯಾಂಡ್ ನಿರ್ವಹಣೆ ಉತ್ತಮದ್ದಾಗಿರುತ್ತದೆ.  ಕೊಳ್ಳುವುದು ಹೊಸಕಾರೊ, ಹಳೆಕಾರೊ?,  ಒಂದು ವೇಳೆ ಹಳೆಯ ಕಾರು ಕೊಳ್ಳುವಾಗ ಅದರ ಹಿನ್ನೆಲೆ, ಅಪರಾಧ ಮಾಹಿತಿ, ದಾಖಲೆಪತ್ರ, ತಾಂತ್ರಿಕದೋಷ ಇತ್ಯಾದಿಗಳ ಬಗ್ಗೆ ಪರಿಶೀಲನೆ ಹಾಗೂ ಕೊಳ್ಳುವ ಅಥವಾ ಮಾರುವ ಪ್ರಕ್ರಿಯೆಗಳು ಮೋಟಾರು ವಾಹನ ಕಾಯಿದೆ ಪ್ರಕಾರವಿರಲಿ ಮತ್ತು   ಕಾನೂನು ಚೌಕಟ್ಟಿನೊಳಗಣ ನಿಯಮಗಳ ಸಹಿತ ಇರಲಿ.

admin
the authoradmin

9 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ