CinemaLatest

ಗಗನಸಖಿ ವಸುಂಧರಾದೇವಿ  ನಟಿ ಕಾಂಚನಾ ಆಗಿ ಮಿಂಚಿದ್ದು ಹೇಗೆ? ನಾಯಕಿ ನಟಿಯ ರೋಚಕ ಲೈಫ್ ಸ್ಟೋರಿ..

ನಮಗೆ ತೆರೆಮೇಲೆ ನಟಿಯರಾಗಿಯಷ್ಟೇ ಕೆಲವರು ಕಾಣಿಸುತ್ತಾರೆ. ಅವರ ಅಭಿನಯ ನೋಡಿ ಖುಷಿಪಡುತ್ತೇವೆ ಅಷ್ಟೇ ಅಲ್ಲದೆ ಅವರ ಅಭಿಮಾನಿಗಳಾಗಿಯೂ ಉಳಿದು ಬಿಡುತ್ತೇವೆ… ಇವತ್ತಿನ ಬಹುತೇಕ ನಟಿಯರು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿ ನೋಡು ನೋಡುತ್ತಿದ್ದಂತೆಯೆ ತೆರೆಯ ಹಿಂದೆ ಸರಿದು ಹೋಗಿ ಬಿಡುತ್ತಾರೆ.. ಆದರೆ ಹಿಂದಿನ ನಟಿಯರ ಸಿನಿಮಾ ಬದುಕನ್ನು ನೋಡಿದ್ದೇ ಆದರೆ ಅವರು ದೀರ್ಘ ಕಾಲದವರೆಗೆ ನಾಯಕಿ ನಟಿಯಾಗಿ ಆ ನಂತರ ಪೋಷಕ ನಟಿಯಾಗಿ ತಮ್ಮ ಬದುಕಿನುದ್ದಕ್ಕೂ ನಟನೆಯಲ್ಲಿಯೇ ಬದುಕು ಸವೆಸಿದ್ದನ್ನು ನಾವು ಕಾಣಬಹುದಾಗಿದೆ. ಅಂತಹ ನಟಿಯರಲ್ಲಿ ವಸುಂಧರಾದೇವಿ(ಕಾಂಚನಾ) ಒಬ್ಬರಾಗಿದ್ದಾರೆ. ಈ ಬಾರಿ ಅವರ ಸಿನಿಮಾ ಬದುಕನ್ನು ಕುಮಾರಕವಿ ನಟರಾಜ್ ಅವರು ನಿಮ್ಮ ಮುಂದೆ ತೆರೆದಿಟ್ಟಿದ್ದಾರೆ.

ದಿನಾಂಕ 16ನೇ ಆಗಸ್ಟ್ 1939ರಂದು ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ (ಇಂದಿನ ಆಂಧ್ರಪ್ರದೇಶದ) ಪ್ರಕಾಶಂ ಜಿಲ್ಲೆಯ ಕಾರವಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಹೆಣ್ಣು ಮಗು ವಸುಂಧರಾದೇವಿ. ಇವರ ತಂದೆ ಬಿಸ್ ನೆಸ್‌ ಮನ್ ತಾಯಿ ಗೃಹಿಣಿ. ವ್ಯಾಪಾರದಲ್ಲಿ ನಷ್ಟ ಉಂಟಾದ್ದರಿಂದ ವಿಧಿ ಇಲ್ಲದೆ ಈಕೆಯ ತಂದೆ ತನ್ನ ಕುಟುಂಬದೊಡನೆ  ಮದ್ರಾಸ್ ನಗರಕ್ಕೆ ವಲಸೆ ಬರಬೇಕಾಯ್ತು. ಅನಿವಾರ್ಯವಾಗಿ ಯುವತಿ ವಸುಂಧರದೇವಿ ತನ್ನ ವಿದ್ಯಾಭ್ಯಾಸ ಮೊಟಕುಗೊಳಿಸಿ ಉದ್ಯೋಗ ಹುಡುಕಬೇಕಾಯ್ತು. ಇಡೀ ಕುಟುಂಬದ ಹೊಣೆಹೊತ್ತು ತಾನೊಬ್ಬಳೇ ದುಡಿದು ಎಲ್ಲರನ್ನ ಸಾಕಿಸಲಹುವ ಜವಾಬ್ಧಾರಿ ಈಕೆಯ ಪಾಲಿಗೆ ಒದಗಿತು. ಸುಂದರಿಯಾಗಿದ್ದ ವಸುಂಧರಾದೇವಿಗೆ ಗಗನಸಖಿ ಹುದ್ದೆ ಲಭಿಸಿ ಜೀವನೋಪಾಯಕ್ಕೆ ಒಂದು ದಾರಿ ದೊರಕಿತು!

ಕಾಲಕ್ರಮೇಣ ವಿಧಿಲೀಲೆ ಎಂಬಂತೆ ತಂದೆಯಿಂದಲೇ ಮೋಸ ಹೋದರು. ತಮ್ಮ ದುಡಿಮೆಯಿಂದ ಗಳಿಸಿದ್ದ ಆಸ್ತಿಯನ್ನು ಅನಿವಾರ್ಯವಾಗಿ ಬಂದೊದಗಿದ ಘಟನೆಯಿಂದ ವಿನಾಕಾರಣ ನ್ಯಾಯಾಲಯದ ಮೂಲಕ ಮರುವಶಕ್ಕೆ ಪಡೆದರು. ಆದರೆ ದುರದೃಷ್ಟವಶಾತ್ ಇವರಿಗೆ ಕಂಕಣಬಲ ಕೂಡಿ ಬರಲೇ ಇಲ್ಲ. ಹೀಗಾಗಿ ಅವಿವಾಹಿತೆ ಆಗಿಯೇ ಉಳಿದು ಬಿಟ್ಟರು. ಬಹುಶಃ ಇದೇ ಕಾರಣದಿಂದ ಇರಬಹುದು ಈಕೆ ತಮ್ಮ ತಂದೆ ವಿರುದ್ಧದ ಕೇಸ್ ಗೆದ್ದು ಮರಳಿಪಡೆದ ಅಂದಾಜು 25 ಕೋಟಿ ರೂ.ಬೆಲೆಯುಳ್ಳ ಚೆನ್ನೈ ಟಿ.ನಗರ ಸ್ವಯಾರ್ಜಿತ ಆಸ್ತಿಯನ್ನು 2010ರಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟಿಗೆ ದಾನ ಮಾಡಿದ ಅದ್ಭುತ ಅಭಿನೇತ್ರಿ!

ಗಗನಸಖಿಯಾಗಿದ್ದ ವಸುಂಧರಾ ದೇವಿ ಕಾಂಚನಾ ಆಗಿ ಸಿನಿಮಾರಂಗದಲ್ಲಿ ಮಿಂಚಿದ್ದು ಮಾತ್ರ ರೋಚಕವೇ… ಪ್ರತಿಯೊಬ್ಬರ ಬದುಕಿನಲ್ಲಿಯೂ ತಿರುವು ಇರುತ್ತದೆ ಎಂಬುದಕ್ಕೆ ಇವರ ಬದುಕು ಸಾಕ್ಷಿಯಾಗಿದೆ. ಅದು ಹೇಗೆಂದರೆ? ಭಾರತದ ಪ್ರತಿಷ್ಠಿತ ಚಿತ್ರಾಲಯ ಸಂಸ್ಥೆಯ ಖ್ಯಾತ ಚಿತ್ರೋದ್ಯಮಿ ಶ್ರೀಧರ್‌ ರವರ ಮಿತ್ರರು ವಿಮಾನದಲ್ಲಿ ಪ್ರಯಾಣಿಸುವಾಗ ವಸುಂಧರಾ ದೇವಿಯ ಪರಿಚಯವಾಯ್ತು. ನಂತರ ಅನಿರೀಕ್ಷಿತವಾಗಿ ಈ ಗಗನಸಖಿಯನ್ನು ಸಿನಿಮಾ ಪ್ರಪಂಚಕ್ಕೆ ಕರೆತಂದು ಕಾಂಚನಾ ಎಂಬ ಹೆಸರಿಂದ ಹೀರೋಯಿನ್ ಮಾಡಿದರು.

1963ರಲ್ಲಿ ಚಿತ್ರಾಲಯ ಬ್ಯಾನರ್ ಅಡಿ ಶ್ರೀಧರ್ ನಿರ್ಮಿಸಿ-ನಿರ್ದೇಶಿಸಿ ತೆರೆಕಂಡ ಬ್ಲಾಕ್ ಬಸ್ಟರ್ ಕಾದಲಿಕ್ಕ ನೇರಮಿಲ್ಲೈ ಚಿತ್ರದ ಮೂಲಕ ಸಿನಿಲೋಕಕ್ಕೆ ಪರಿಚಯವಾದರು. ಅಂದಿನ ಭಾರತೀಯ ಚಿತ್ರರಂಗದ ಖ್ಯಾತನಟಿ ವೈಜಯಂತಿಮಾಲಾ ತಾಯಿಯೂ ಓರ್ವ ನಟಿಯಾಗಿದ್ದು ಆಕೆಯ ಹೆಸರೂ ವಸುಂಧರಾದೇವಿ ಎಂದಿತ್ತು. ಈ ಕಾರಣದಿಂದ ಇವರ ಹೆಸರನ್ನು ಕಾಂಚನಾ ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಮತ್ತೆಂದೂ ಹಿಂದಿರುಗಿ ನೋಡದ ಬ್ಯುಟಿಫುಲ್ ಯಕ್ರ್ಟೆಸ್ ಕಾಂಚನಾ ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ದೇಶದ ಶ್ರೇಷ್ಠ ಕಲಾವಿದರ ಸಾಲಿಗೆ ಸೇರಿ ಜನಪ್ರಿಯ ನಟಿ ಎನಿಸಿದರು.

ಸುಮಾರು 35 ವರ್ಷ ಅಭಿನಯ ಕಲೆಯ ಅಮೋಘ ಸೇವೆ ಮಾಡಿದ ಕಾಂಚನಾ ಭಾರತ ಚಿತ್ರರಂಗ ಕಂಡಂಥ ಅಪ್ರತಿಮ ನಟಿ. ಮೇರು ನಟರ ಪಂಕ್ತಿ ಸೇರಿದ ಈ ಅಪೂರ್ವ ಕಲಾವಿದೆ, ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ 5ಭಾಷೆಗಳ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ 1962-1992 ಅವಧಿಯಲ್ಲಿ ಅದ್ಭುತ ದರ್ಬಾರ್ ನಡೆಸಿ ಮಿಂಚಿದವರು! ಅತಿರಥ ಮಹಾರಥರಾದ ಡಾ.ರಾಜಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್, ಶಂಕರನಾಗ್, ರವಿಚಂದ್ರನ್, ಕೆ.ಎಸ್.ಅಶ್ವಥ್, ಶಿವರಾಜಕುಮಾರ್, ರಾಘಣ್ಣರಾಜಕುಮಾರ್, ಪುನೀತ್(ಅಪ್ಪು), ದ್ವಾರಕೀಶ್, ಎಂ.ಜಿ.ಆರ್, ಶಿವಾಜಿಗಣೇಶನ್, ಜೆಮಿನಿಗಣೇಶನ್, ಮುತ್ತುರಾಮನ್, ಎನ್‌.ಟಿ.ರಾಮರಾವ್, ಎ. ನಾಗೇಶ್ವರರಾವ್, ರವಿಶಂಕರ್, ಜೈಶಂಕರ್, ಎಸ್ಸೆಸ್‌ ರಾಜೇಂದ್ರನ್, ಧರ್ಮೇಂದ್ರ ಜಿತೇಂದ್ರ ರಾಜೇಶ್‌ಖನ್ನ ಮುಂತಾದ ದಿಗ್ಗಜರೊಡನೆ ಅಭಿನಯಿಸಿ ಖ್ಯಾತಿ ಪಡೆದರು. ಇವರ ಕಟ್ಟಕಡೆ ಕನ್ನಡ ಫಿಲಂ ಡಾ.ರಾಜ್ ಅಭಿನಯದ 200ನೇ ಚಿತ್ರ “ದೇವತಾಮನುಷ್ಯ”.

ಕಾಂಚನಾ ಗಳಿಸಿದ ಪ್ರಶಸ್ತಿಗಳು: ತಮಿಳುನಾಡು ರಾಜ್ಯ ಪ್ರಶಸ್ತಿ-ಅತ್ಯುತ್ತಮನಟಿ, ಆಂಧ್ರಪ್ರದೇಶ ರಾಜ್ಯ ಪ್ರಶಸ್ತಿ-ಅತ್ಯುತ್ತಮ ನಟಿ, ಕರ್ನಾಟಕ ರಾಜ್ಯಪ್ರಶಸ್ತಿ-ಅತ್ಯುತ್ತಮ ಪೋಷಕನಟಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿ, ಪ್ರತಿಷ್ಠಿತ ಎ.ನಾಗೇಶ್ವರರಾವ್ ಸ್ವರ್ಣಕಂಕಣಂ ಪ್ರಶಸ್ತಿ, ಪ್ರತಿಷ್ಠಿತ ಎಂ.ಜಿ. ರಾಮಚಂದ್ರನ್ ಪ್ರಶಸ್ತಿ,

ಕಾಂಚನಾ ಅಭಿನಯದ ಕನ್ನಡ ಫಿಲಂಸ್: ಮಕ್ಕಳರಾಜ್ಯ, ರತ್ನಮಂಜರಿ, ಪತಿಯೇದೈವ, ಬಬ್ರುವಾಹನ, ನಾನೊಬ್ಬಕಳ್ಳ, ಶಂಕರ್‌ಗುರು, ಬಿಳಿಗಿರಿಯಬನದಲ್ಲಿ,ಪೆದ್ದಗೆದ್ದ, ಆರದಗಾಯ, ಜೀವಕ್ಕೆಜೀವ, ಭಾಗ್ಯವಂತ, ನ್ಯಾಯಎಲ್ಲಿದೆ,ಪ್ರಚಂಡಕುಳ್ಳ,ಆನಂದಭೈರವಿ, ಭಕ್ತಪ್ರಹ್ಲಾದ, ಮರ್ಯಾದೆಮಹಲ್,ರಕ್ತತಿಲಕ, ಬಂಧನ, ಪ್ರಳಯಾಂತಕ, ಸಮಯದಗೊಂಬೆ, ವೀರಾಧಿವೀರ, ನನ್ನಪ್ರತಿಜ್ಞೆ, ಚದುರಂಗ, ಬಿಡುಗಡೆಯಬೇಡಿ, ರಥಸಪ್ತಮಿ, ಬೀಗರಪಂದ್ಯ, ಮದುವೆಮಾಡು ತಮಾಷೆನೋಡು, ಆಫ್ರಿಕಾದಲ್ಲಿಶೀಲಾ, ವಿಜಯೋತ್ಸವ, ಜಯಸಿಂಹ, ಸಿಂಹದ ಮರಿಸೈನ್ಯ, ಚಿರಂಜೀವಿಸುಧಾಕರ್, ಧರ್ಮಪತ್ನಿ ಹಾಗೂ ದೇವತಾಮನುಷ್ಯ.

admin
the authoradmin

9 ಪ್ರತಿಕ್ರಿಯೆಗಳು

  • ಶ್ರೇಷ್ಠನಟಿ ಸೌಂದರ್ಯಲಹರಿ ನನ್ನ ಜಮಾನದ ಯುವಜನರ ನಿದ್ದೆ ಕೆಡಿಸಿದ್ದ ಕನಸಿನ ಚೆಲುವೆ ಕಾಂಚನಾ ಲೇಖನವು ಮತ್ತೊಮ್ಮೆ ನನ್ನನ್ನು flash back ದಿನಗಳಿಗೆ ಕರೆದೊಯ್ದು ಬೇಹತ್ ದಿಲ್ ಖುಷ್ ತಂದಿತು. ನನ್ನ ಸಮಕಾಲೀನ (ಬಹುಶಃ ಇರಬಹುದು ಎಂದು ನನ್ನಊಹೆ)ಹಾಗೂ ನಮ್ಮೆಲ್ಲರ ಆಚ್ಚುಮೆಚ್ಚಿನ ಕವಿನಟರಾಜರಿಗೆ ಮತ್ತು ಎಂದಿನಂತೆ ತುಂಬ ಸೊಗಸಾಗಿ ಪ್ರಕಟಿಸಿರುವ ಜನಮನ ಕನ್ನಡ ಪತ್ರಿಕೆಗೆ ಅನೇಕಾನೇಕ ಧನ್ಯವಾದಗಳು

  • ಒಂದು ಕಾಲಕ್ಕೆ ದ.ಭಾರತದ ಚಿತ್ರರಂಗದಲ್ಲಿ ಕಾಂಚನಾ ಎಂದರೆ ಸೌಂದರ್ಯದ ಗಣಿ ಯುವಕರ ಕನಸಿನರಾಣಿ. ಇಂಥವರ ಬಗ್ಗೆ ಯಾರೂ ಬರೆಯುವುದೇ ಇಲ್ಲ. ಈಗ ಹಿರಿಯ ಬರಹಗಾರರಾದ ನಟರಾಜ ಕವಿಯವರು ಬರೆದು ನಮ್ಮೆಲ್ಲರ ದಾಹ ತೀರಿಸುವ ಉತ್ತಮ ಪ್ರಯತ್ನಕ್ಕೆ ನನ್ನ ಮತ್ತು ನನ್ನ ಗೆಳೆಯರ ಬಳಗದ ಸಹಸ್ರ ಧನ್ಯವಾದಗಳು

  • ಕಾಂಚನ ಮೇಡಂ ಅಷ್ಟೊಂದು ಸುಂದರಿ ಮತ್ತು ಫೇಮಸ್ ಎಂಬ ವಿಷಯ ತಿಳಿದಾಕ್ಷಣ ನನಗೆ, ನನ್ನ ಗೆಳತಿಯರಿಗೆಲ್ಲ ಹೆಮ್ಮೆ ಎನಿಸಿತು ಲೇಖಕರಿಗೆ ಮತ್ತು ಪತ್ರಿಕೆಯವರಿಗೆ ನಮ್ಮ ಕೃತಜ್ಞತೆಗಳು

  • ಕಾಂಚನಾ ಮೇಡಂ ರವರಂಥ ಅಪೂರ್ವ ನಟಿಯನ್ನು ಪರಿಚಯಿಸುವ ಈ ಉತ್ತಮ ಬರೆವಣಿಗೆ ಬರೆದ ಕವಿ ಸರ್ ಗೆ ಥ್ಯಾಂಕ್ಸ್ ಸರ್. ಬಹಳ ದಿನಗಳಿಂದ ಇಂತಹ ಪ್ರಯೋಜನ ಇರುವ ಮಾಹಿತಿ ಇರುವ ಒಂದೂ ಲೇಖನ ಓದಿರಲಿಲ್ಲ.
    ಕುಮಾರಕವಿಯವರ ನಟರಾಜರವರಿಗೆ ವಂದನಾರ್ಹ ಧನ್ಯವಾದ

ನಿಮ್ಮದೊಂದು ಉತ್ತರ

Translate to any language you want