ಹಾಸನ(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ರಾಜ್ಯದಲ್ಲೀಗ ಸಿಎಂ ಕುರ್ಚಿ ಪೈಟ್ ಜೀವಂತವಾಗಿರುವಾಗಲೇ ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಕಾಂಗ್ರೆಸ್ ಪಕ್ಷದೊಳಗೆ ಸದ್ದಿಲ್ಲದೆ ಶೀತಲ ಸಮರ ಜೋರಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಾವಿಬ್ಬರು ಬ್ರದರ್ಸ್ ಎಂದು ಹೇಳಿಕೆ ನೀಡುತ್ತಿದ್ದರೂ ಇಲ್ಲಿವರೆಗಿನ ಬೆಳವಣಿಗೆಯನ್ನು ನೋಡಿದವರು ಅದನ್ನು ಸುಲಭವಾಗಿ ಒಪ್ಪುತ್ತಿಲ್ಲ. ಒಂದೆಡೆ ಡಿಕೆಶಿ ಸಿಎಂ ಸ್ಥಾನಕ್ಕೆ ಹವಣಿಸುತ್ತಿದ್ದರೆ, ಸಿದ್ದರಾಮಯ್ಯ ಬಿಟ್ಟುಕೊಡಲು ತಯಾರಿಲ್ಲ. ಇದೆಲ್ಲದರ ನಡುವೆ ದಲಿತ ಸಿಎಂ ಕೂಗು ಮುನ್ನಲೆಗೆ ಬಂದಿದ್ದು ಡಾ.ಜಿ.ಪರಮೇಶ್ವರ್ ತಾನೂ ಆಕಾಂಕ್ಷಿ ಎಂಬುದನ್ನು ಹೊರಗೆಡವಿದ್ದಾರೆ.
ಇದೆಲ್ಲದರ ನಡುವೆ ಹಾಸನ ಜಿಲ್ಲೆಯ ಅರಸೀಕೆರ ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿ ಮಠಕ್ಕೆ ಸೋಮವಾರ ಮುಂಜಾನೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿರುವುದು ಅಚ್ಚರಿ ಮೂಡಿಸಿದೆ. ಏಕೆಂದರೆ ಬರೋಬ್ಬರಿ 1 ಗಂಟೆಗೂ ಹೆಚ್ಚು ಕಾಲ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹಾಗೂ ಪರಮೇಶ್ವರ್ ಮಾತುಕತೆ ನಡೆಸಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಹೇಳಿ ಕೇಳಿ ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ವಿಚಾರ ನಿತ್ಯ ಸುದ್ದಿಯಾಗುತ್ತಿದೆ. ಮತ್ತೊಂದೆಡೆ ದಲಿತ ಸಿಎಂ ಕೂಗು ಸಹ ಪಿಸುಗುಡುತ್ತಿದೆ. ಇದೆಲ್ಲವೂ ಹಸಿರಾಗಿರುವಾಗಲೇ ಈ ಭೇಟಿ ಎಲ್ಲರ ಕಣ್ಣು ಪರಮೇಶ್ವರ ಅವರತ್ತ ನೋಡುವಂತಾಗಿದೆ.

ಅದರಲ್ಲೂ ಪರಮೇಶ್ವರ್ ಭೇಟಿ ನೀಡುವ ವೇಳೆ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಯಾವೊಬ್ಬ ಸ್ಥಳೀಯ ಕಾಂಗ್ರೆಸ್ ಮುಖಂಡರಿಗಾಗಲೀ, ಅವರದೇ ಇಲಾಖೆಯ ಪೊಲೀಸ್ ಇಲಾಖೆಗೂ ಮಾಹಿತಿ ನೀಡದೆ ಏಕಾಂಗಿಯಾಗಿ ಬಂದು ಗೌಪ್ಯವಾಗಿ ಸ್ವಾಮೀಜಿಯವರೊಂದಿಗೆ ರಹಸ್ಯ ಮಾತುಕತೆ ನಡೆಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಅದರಲ್ಲೂ ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ವಿದ್ಯಾಮಾನಕ್ಕೂ, ಕೋಡಿ ಶ್ರೀಗಳೊಂದಿಗೆ ಪರಮೇಶ್ವರ್ ಅವರು ದಿಢೀರ್ ಭೇಟಿ ನೀಡಿ ನಡೆಸಿದ ಮಾತುಕತೆಗೂ ಏನೋ ಇದೆ ಎಂಬ ಚರ್ಚೆ ಜೋರಾಗಿದೆ.
ಕೋಡಿ ಶ್ರೀಗಳು ಪ್ರಳಯ, ಮಳೆ, ರಾಜಕೀಯ ಅವಾಂತರ, ಏರಿಳಿತಗಳ ಬಗ್ಗೆ ತಾಳೆ ಭವಿಷ್ಯ ನುಡಿಯುವುದರಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ. ಹೀಗಾಗಿ ಮುಂದಿನ ರಾಜಕೀಯ ಏನಾಗಲಿದೆ, ಎತ್ತ ಸಾಗಲಿದೆ ಎಂದು ತಿಳಿಯಲು ಸಚಿವರು ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇನ್ನೊಂದೆಡೆ ಈ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಪರಮೇಶ್ವರ್ ಶ್ರೀ ಮಠದ ಸದ್ಭಕ್ತರು, ಆಗಾಗ್ಗೆ ಮಠಕ್ಕೆ ಭೇಟಿ ನೀಡುತ್ತಾರೆ. ಅದೇ ರೀತಿ ಇಂದೂ ಸಹ ಮಠಕ್ಕೆ ಭೇಟಿ ನೀಡಿ ಶಿವಲಿಂಗಜ್ಜಯ್ಯ ಮತ್ತು ನೀಲಮ್ಮಜ್ಜಯ್ಯ ಗದ್ದುಗೆ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಇಷ್ಟು ಬಿಟ್ಟರೆ ಬೇರೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂದುವರಿದು ಸಂಕ್ರಾಂತಿ ಬಳಿಕವಷ್ಟೇ ಭವಿಷ್ಯ ಹೇಳೋದು ಎಂದರು.

ಈಗಾಗಲೇ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ತಮ್ಮ ಸಮುದಾಯದ ಸ್ವಾಮೀಜಿಗಳು ಹೇಳಿಕೆ ನೀಡುತ್ತಿರುವುದು ಒಂದೆಡೆಯಾದರೆ ಇತ್ತ ಪರಮೇಶ್ವರ್ ಅವರು ಕೋಡಿ ಮಠಕ್ಕೆ ಭೇಟಿ ನೀಡಿರುವುದು ತಮ್ಮ ರಾಜಕೀಯ ಭವಿಷ್ಯವನ್ನು ಕೇಳಲು ಇರಬಹುದಾ ಎಂಬ ಪ್ರಶ್ನೆಗಳು ಜನವಲಯದಲ್ಲಿ ಕೇಳಿಬರುತ್ತಿದೆ..








