ಮಡಿಕೇರಿ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ವಿಮೆ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮಕ್ಕೆ ರಿಪಬ್ಲಿಕ್ ಟಿವಿ ನೆಟ್‌ವರ್ಕ್ ಹಾಗೂ ಹೆಡ್ ಇಂಟರ್ ನ್ಯಾ?ನಲ್ ಬಿಸಿನೆಸ್ ಸಂಸ್ಥೆ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ ಚಾಲನೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ವಿಮೆ ಕಾರ್ಡ್ ಹಸ್ತಾಂತರಿಸಿ ಮಾತನಾಡಿದ ಕಿಶನ್ ಮಾದಪ್ಪ ಅವರು, ಸಮಾಜಕ್ಕಾಗಿ ದುಡಿಯುವ ಪತ್ರಕರ್ತರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪತ್ರಕರ್ತರ ಸಂಕಷ್ಟಗಳಿಗೆ ವೈಯಕ್ತಿಕವಾಗಿಯು ಸ್ಪಂದಿಸುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗವನ್ನು ಸರಕಾರ ನಿರ್ಲ್ಯಕ್ಷಿಸುತ್ತ ಬಂದಿದೆ. ಸರಕಾರಗಳು ಪತ್ರಕರ್ತರ ಪರ ಚಿಂತನೆ ಮಾಡಿ ಅವರಿಗೆ ಶಕ್ತಿ ತುಂಬಿ ಭದ್ರತೆ ನೀಡುವ ಜವಾಬ್ದಾರಿ ಹೊಂದಿರಬೇಕು. ಜನರಿಗೆ ಸರಕಾರದ ವೈಫಲ್ಯ ಕಂಡುಬಂದಲ್ಲಿ ಬದಲಿಸುವ ಶಕ್ತಿಯಿದೆ. ಈ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಧ್ಯಮ ಕ್ಷೇತ್ರ ಮಾಡುತ್ತಿದೆ ಎಂದರು.

ವಾರ್ತಾ ಮತ್ತು ಪ್ರಚಾರ ಇಲಾಖೆ ಕೇವಲ ಜಾಹೀರಾತು ನೀಡಲು ಮೀಸಲಾಗಬಾರದು. ಮಾಧ್ಯಮದ ಭದ್ರತೆಗೆ ಮುಕ್ತ ವಾತಾವರಣ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಆಯೋಗ ರಚನೆಯಾಗಬೇಕು. ವ್ಯವಸ್ಥೆಯನ್ನು ವರದಿಗಾರಿಕೆ ಮೂಲಕ ಪ್ರಶ್ನಿಸಿದರೆ ಮೊಕದ್ದಮೆ ಭಯ ಪತ್ರಕರ್ತರನ್ನು ಕಾಡುತ್ತದೆ. ಇದನ್ನು ತಪ್ಪಿಸಲು ಕಾನೂನು ರೂಪಿಸಬೇಕಾದ ಅಗತ್ಯತೆ ಇದೆ. ರಾಜಕೀಯ ಪಕ್ಷಗಳು ಪತ್ರಕರ್ತರಿಗೆ ಮಹತ್ವ ನೀಡಬೇಕು ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವ ವಿಧಾನಪರಿಷತ್ತು ಹಾಗೂ ರಾಜ್ಯಸಭೆಗಳಲ್ಲಿ ಪತ್ರಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡಬೇಕು. ಸರಕಾರಗಳ ಮುಂಗಂಡ ಪತ್ರದಲ್ಲಿ ಪತ್ರಕರ್ತರಿಗೆ ಸೌಲಭ್ಯ ಘೋಷಣೆಯಾಗಬೇಕು ಎಂದು ಸಂಕೇತ್ ಒತ್ತಾಯಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತರು ಭಯ ಮುಕ್ತವಾಗಿ ಕಾರ್ಯನಿರ್ವಹಿಸಲು ವಿಮೆ ಅಭಯ ನೀಡುತ್ತದೆ. ಮಾಧ್ಯಮ ಕ್ಷೇತ್ರಕ್ಕೆ ಗುಣಮಟ್ಟದ ಪತ್ರಕರ್ತರು ಬರಬೇಕು. ಸಮಾಜಕ್ಕೆ ಇಂದಿಗೂ ಮಾಧ್ಯಮದ ಮೇಲೆ ನಂಬಿಕೆ ಇದ್ದು, ಅದನ್ನು ಉಳಿಸುವ ಕೆಲಸವಾಗಬೇಕೆಂದು ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಸವಿತಾ ರೈ ಮಾತನಾಡಿ, ಪತ್ರಕರ್ತರು ಸಂಕಷ್ಟ ಸ್ಥಿತಿಯಲ್ಲಿದ್ದು, ಈ ವಿಮೆ ಸೌಲಭ್ಯ ಅಭಯ ನೀಡುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಜಿಲ್ಲೆಯ ಪತ್ರಕರ್ತರು ಆರ್ಥಿಕ ಸಂಕಷ್ಟದಲ್ಲಿದ್ದು, ಆರೋಗ್ಯ ಸಮಸ್ಯೆ ಎದುರಾದಾಗ ಸಂಘದಿಂದ ಗರಿಷ್ಟ ರೂ. 10ಸಾವಿರ ಹಣ ಮಾತ್ರ ನೀಡಲು ಸಾಧ್ಯವಿದೆ. ಈ ಹಿನ್ನೆಲೆ ಪತ್ರಕರ್ತರಿಗಾಗಿ ವಿಮೆ ಮಾಡಿಸಲು ಮುಂದಾಗಿದ್ದೇವೆ. ವಾರ್ಷಿಕ ರೂ. 550 ಮೌಲ್ಯದ ವಿಮೆಯನ್ನು ಸಂಘದ ಸದಸ್ಯರಿಗಾಗಿ ಅಂಚೆ ಕಚೇರಿ ಮೂಲಕ ಮಾಡಿಸಲಾಗಿದೆ. ಅಪಘಾತದಿಂದ ಜೀವ ಕಳೆದುಕೊಂಡರೆ ಅಥವಾ ಅಂಗ ವೈಕಲ್ಯ ಉಂಟಾದಲ್ಲಿ ರೂ. 10 ಲಕ್ಷ, ಚಿಕಿತ್ಸೆಗಾಗಿ ರೂ. 1ಲಕ್ಷದ ತನಕ ಹಣ ವಿಮೆ ಮೂಲಕ ಸಂದಾಯವಾಗಲಿದೆ ಎಂದರು.
ಅಂಚೆ ಇಲಾಖೆ ಶಾಖಾ ವ್ಯವಸ್ಥಾಪಕ ಬಬಿನ್ ಹಾಗೂ ಅಧಿಕಾರಿ ಅಶೋಕ್ ವಿಮೆ ಸೌಲಭ್ಯದ ಕುರಿತು ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ವಿಮೆ ಸೌಲಭ್ಯ ಕಲ್ಪಿಸಲು ಆರ್ಥಿಕ ನೆರವು ನೀಡಿದ ಚೇರಂಡ ಕಿಶನ್ ಮಾದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲೆಯ ವಿವಿಧೆಡೆಗಳ ಪತ್ರಕರ್ತರಿಗೆ ವಿಮೆ ಸೌಲಭ್ಯ ಮಾಡಿಸಲಾಯಿತು.
ಸದಸ್ಯ ಕುಡೆಕಲ್ಲು ಗಣೇಶ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಸ್ವಾಗತಿಸಿ, ಖಜಾಂಚಿ ಸುನಿಲ್ ಪೊನ್ನೇಟಿ ನಿರೂಪಿಸಿ, ನಿರ್ದೇಶಕ ಜಿ.ಆರ್ ಪ್ರಜ್ವಲ್ ವ್ಯಕ್ತಿ ಪರಿಚಯ ಮಾಡಿದರು.








