ಹುಣಸೂರು: ಸೆಸ್ಕಾಂ ಜೂನಿಯರ್ ಪವರ್ ಮ್ಯಾನ್ ನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಹೀಗೆ ಪ್ರಾಣತ್ಯಾಗ ಮಾಡಿಕೊಳ್ಳಲು ನಿಗದಿತ ಕಾರಣವೇನು ಎಂಬುದು ತಿಳಿದು ಬಂದಿಲ್ಲ.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕರ್ಣಕುಪ್ಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಗಪ್ಪ ಮಾಲೆಕೊಪ್ಪ(32) ಸಾವನ್ನಪ್ಪಿದ ದುರ್ದೈವಿ. ಈತ ಹುಣಸೂರಿನ ಗೋಕುಲ ಬಡಾವಣೆಯ ಬಾಡಿಗೆ ಮನೆಯಲ್ಲಿ ಸಂಸಾರ ನಡೆಸುತ್ತಿದ್ದರು. ಇವರಿಗೆ ಪತ್ನಿ, ತಂದೆ, ತಾಯಿ ಇದ್ದಾರೆ. ಆದರೆ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ಏನಾಗಿತ್ತು ಎಂಬುದು ಇನ್ನಷ್ಟೇ ಗೊತ್ತಾಗ ಬೇಕಾಗಿದೆ.
ಹಾಗೆನೋಡಿದರೆ ಮೃತ ಸಂಗಪ್ಪ ಸ್ಥಳೀಯನಾಗಿರದೆ ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಂಕನಕೊಪ್ಪ ಗ್ರಾಮದ ನೇಕಾರ ಕಾಲೊನಿಯ ಗುರಪ್ಪ ಮಾಲೇಕೊಪ್ಪನವರ ಪುತ್ರ ಎಂದು ತಿಳಿದು ಬಂದಿದೆ. ಉದ್ಯೋಗದ ನಿಮಿತ್ತ ಹುಣಸೂರಿಗೆ ಬಂದು ನೆಲೆಯೂರಿದ್ದರು.

ಕಳೆದ 9 ವರ್ಷಗಳಿಂದ ಹನಗೋಡು ಉಪವಿಭಾಗದಲ್ಲಿ ಜೂನಿಯರ್ ಪವರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಿನಂತೆ ಸೋಮವಾರ ಕರ್ತವ್ಯ ಮುಗಿಸಿ ಮನೆಗೆ ಬಂದು ರಾತ್ರಿ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿದ್ದಾರೆ. ಬೆಳಗ್ಗೆ ಅಲರಾಂ ನಿಂದ ಎಚ್ಚರಗೊಳ್ಳದ ಪತಿಯನ್ನು ಎಬ್ಬಿಸಲು ಹೋದಾಗ ಆತ್ಮಹತ್ಯೆ ಮಾಡಿಕೊಂಡಿರು ವುದು ತಿಳಿದಿದೆ. ಪತ್ನಿ ಶ್ವೇತಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹುಣಸೂರಿನ ಶವಾಗಾರದಲ್ಲಿ ಮೃತ ದೇಹವನ್ನು ರವನಿಸಲಾಗಿದ್ದು ಶವಪರೀಕ್ಷೆ ನಂತರ ಸ್ವಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಇ ಜಗದೀಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಮೃತದೇಹವನ್ನು ಸ್ವಗ್ರಾಮಕ್ಕೆ ಸಾಗಿಸಲು ನೆರವಾದರು ಎಂದು ತಿಳಿದು ಬಂದಿದೆ.








