CrimeLatest

ದಕ್ಷಿಣಕೊಡಗಿನಲ್ಲಿ ನಾಲ್ಕು ಮಂದಿಯನ್ನು ಕೊಂದ ಹಂತಕನಿಗೆ ವಿರಾಜಪೇಟೆ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆ

ದಕ್ಷಿಣಕೊಡಗಿನ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮದ ಬಾಳಂಗಾಡು ಎಂಬಲ್ಲಿ ಗಂಡನಿಂದ ದೂರವಿದ್ದ ಮಹಿಳೆಯನ್ನು ತನ್ನ ಬಲೆಗೆ ಬೀಳಿಸಿಕೊಂಡು ಬಳಿಕ ಅವಳಿಗೂ ಚಳ್ಳೆ ಹಣ್ಣು ತಿನ್ನಿಸಿ ಓಡಿ ಹೋಗಿ ಮತ್ತೆ ಬಂದು ಅವಳು ಸೇರಿದಂತೆ ಅವಳ ಮಗಳು, ಅಜ್ಜ, ಅಜ್ಜಿ ಹೀಗೆ ನಾಲ್ವರನ್ನು ನಿರ್ಧಯಿಯಾಗಿ ಕೊಚ್ಚಿ ಕೊಂದು  ಹಾಕಿದ್ದನು. ಈತ ಮಾಡಿದ ಕೃತ್ಯದ ಆರೋಪ ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನಲೆಯಲ್ಲಿ ಕೊಡಗಿನ ವೀರಾಜಪೇಟೆಯ ಎರಡನೇ ಅಪರ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೂಲತ: ಕೇರಳದ ವೈನಾಡು ಜಿಲ್ಲೆಯ ತಿರುನಲ್ಲಿಯ ಉಣಿತು ಪರಂಬು ಗ್ರಾಮದ ನಿವಾಸಿ ಗಿರೀಶ್ ಎಂಬಾತನೇ ಮರಣದಂಡನೆ ಶಿಕ್ಷೆಗೊಳಗಾದ ವ್ಯಕ್ತಿ. ಈತನದೇ ಬದುಕೇ ಒಂದು ರೋಚಕ ಕ್ರೈಂ ಸ್ಟೋರಿ ಎಂದರೆ ತಪ್ಪಾಗಲಾರದು. ಒಂಥರಾ ಸೈಕೋ ಕಿಲ್ಲರ್ ಆಗಿದ್ದ ಗಿರೀಶ್ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮದ ಬಾಳಂಗಾಡು ಎಂಬಲ್ಲಿಗೆ ಬಂದು ಒಂದು ಇಡೀ ಕುಟುಂಬವನ್ನು ಬಲಿ ಪಡೆದಿದ್ದು ಮಾತ್ರ ದುರಂತವೇ.. ಈತನಿಗೆ ಬಲಿ ಪಡೆದವರು ಅಮಾಯಕರು, ಬಡವರು, ಕೂಲಿ ಮಾಡಿಕೊಂಡು ಮುರುಕಲು ಗುಡಿಸಲಲ್ಲಿ ಬದುಕುತ್ತಿದ್ದವರು. ಬುಡಕಟ್ಟು ಜನಾಂಗದ ಈ ಕುಟುಂಬವನ್ನು ಬರ್ಬರವಾಗಿ ಕೊಂದು ಜೈಲ್ ಸೇರಿರುವ ಹಂತಕ ಸೈಕೋ ಕಿಲ್ಲರ್ ಎಂದರೆ ತಪ್ಪಾಗಲಾರದು.

ಸೈಕೋ ಕಿಲ್ಲರ್ ಗಿರೀಶನ ಕೃತ್ಯಕ್ಕೆ ಬಲಿಯಾದ ಕರಿಯ, ಗೌರಿ, ನಾಗಿ ಮತ್ತು ಆರು ವರ್ಷದ ಬಾಲಕಿ ಕಾವೇರಿ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮದ ಬಾಳಂಗಾಡಿನ ನಿವಾಸಿಗಳು ಇವರು ಇಲ್ಲಿ ಕಳೆದ 40 ವರ್ಷಗಳಿಂದ ವಾಸಿಸುತ್ತಿದ್ದು, ಇವರು ಗುಡಿಸಲವಾಸಿಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಅದರಲ್ಲಿ ಜೀವನ ಮಾಡಿಕೊಂಡು ಬದುಕು ಸಾಗಿಸುತ್ತಾ ಬರುತ್ತಿದ್ದರು. ಸುತ್ತಮುತ್ತಲಿನ ತೋಟಗಳಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಗುಡಿಸಲ ಜೀವನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಸ್ಥಳೀಯರು ಹೇಳುವ ಪ್ರಕಾರ ಇವರಿಗೆ ಸರ್ಕಾರದ ಯಾವ ಸೌಲಭ್ಯಗಳು ಸಿಗುತ್ತಿರಲಿಲ್ಲ. ಮನೆಗೆ ಖಾತೆ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹೀಗೆ ಯಾವುದೂ ಇಲ್ಲದೆ ನಿಕೃಷ್ಟರಾಗಿ ಬದುಕುತ್ತಿದ್ದರು.

ಆದರೆ ತಲೆ ಮಾರುಗಳಿಂದ ಯಾರದ್ದೋ ಮನೆಯಲ್ಲಿ ಕೆಲಸ ಮಾಡಿ ಅವರು ಕೊಟ್ಟ ಕೂಲಿಯಲ್ಲಿ ಹೊಟ್ಟೆ ತುಂಬಿಸಿಕೊಂಡು ಅದರಲ್ಲಿಯೇ ತೃಪ್ತಿ ಪಡುತ್ತಿದ್ದ ಕರಿಯ ಮತ್ತು ಗೌರಿ ತನ್ನ ಮೊಮ್ಮಗಳು ನಾಗಿ  ಮತ್ತು ಮರಿಮಗಳು ಕಾವೇರಿ ಎಲ್ಲರೂ  ಗುಡಿಸಲಲ್ಲಿಯೇ ವಾಸವಾಗಿದ್ದರು. ಮೊಮ್ಮಗಳು ನಾಗಿಯನ್ನು ಸುಬ್ರಮಣಿ ಎಂಬಾತ ಮದುವೆಯಾಗಿದ್ದು ಆತನ ಮಗಳೇ ಕಾವೇರಿ.

ನಾಗಿ ಮತ್ತು ಸುಬ್ರಮಣಿ ಮದುವೆಯ ನಂತರ ದಾಂಪತ್ಯ ಸರಿ ಹೋಗಿರಲಿಲ್ಲ. ಹೀಗಾಗಿ ಅಜ್ಜನ ಮನೆಯಲ್ಲಿ ನಾಗಿ ಸೇರಿಕೊಂಡಿದ್ದಳಲ್ಲದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಹತ್ತಿರದ ತೋಟಗಳಲ್ಲದೆ ಜೀಪುಗಳಲ್ಲಿ ಹೆಂಗಸರೊಂದಿಗೆ ಬೇರೆಡೆಗೆ ಹೋಗಿ ಕೆಲಸ ಮಾಡುತ್ತಿದ್ದಳು ಹೀಗಿರುವಾಗಲೇ ಅವಳಿಗೆ ಪರಿಚಯವಾದವನೇ ಸೈಕೋ ಗಿರೀಶ್. ಈತ ಮೂಲತ: ಕೇರಳದ ವೈನಾಡು ಜಿಲ್ಲೆಯ ತಿರುನಲ್ಲಿಯ ಉಣಿತು ಪರಂಬು ಗ್ರಾಮದವನಾಗಿದ್ದು, ತಲಪುಝ ಠಾಣಾ ವ್ಯಾಪ್ತಿಯ ಅತ್ತಿಮಲ ಕಾಲೋನಿಯ ಮತ್ತು ತಿರುನೆಲ್ಲಿಯ ಉಂಡಿಗ ಪರಂಬು ಕಾಲೋನಿಯಲ್ಲಿ ಹೆಚ್ಚಾಗಿರುತ್ತಿದ್ದನು. ಈತ ನಿಯತ್ತಿನ ಪ್ರಾಣಿ ಅಂತು ಅಲ್ಲವೇ ಅಲ್ಲ. ಅದಾಗಲೇ ಆತ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದನು. ಅಷ್ಟೇ ಅಲ್ಲದೆ ಶೋಕಿಲಾಲನಾಗಿದ್ದ ಆತ ಹೆಂಗಸರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುವುದರಲ್ಲಿಯೂ ನಿಸ್ಸೀಮನಾಗಿದ್ದನು.

ಕೇರಳದಲ್ಲಿದ್ದಾಗಲೇ ಈತ  ಎರಡು ಮದುವೆಯಾಗಿದ್ದು, ಮೊದಲ ಹೆಂಡತಿ ಪ್ರಿಯಗೆ ಐದು ಮಕ್ಕಳಿದ್ದು,  ಮೂರು ಮಕ್ಕಳು ಪ್ರಿಯ ಜತೆಗಿದ್ದರೆ ಇನ್ನಿಬ್ಬರು ಆತನ(ಗಿರೀಶ) ತಂದೆ ತಾಯಿ ಬಳಿಯಿದ್ದಾರೆ. ಮೊದಲ ಮದುವೆ ಬಳಿಕ ಆಗಾಗ್ಗೆ ಹೆಂಡತಿ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗುತ್ತಿದ್ದ ಈತ  ಮಾನಂದವಾಡಿಯಲ್ಲಿ ಮತ್ತೊಬ್ಬಾಕೆಯನ್ನು ಮದುವೆಯಾಗಿದ್ದನು ಒಂದಷ್ಟು ದಿನ ಆಕೆ ಜತೆಗಿದ್ದು ಆಕೆಯ ಜತೆಗೂ ಜಗಳವಾಡಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದ ಗಿರೀಶ ಅಲ್ಲಿಂದ ಕೆಲಸ ಹುಡುಕಿಕೊಂಡು ಕೊಡಗಿನತ್ತ ಬಂದಿದ್ದನು.

ಕೇರಳದಲ್ಲಿದ್ದಾಗಲೇ ಈತ ಹಲವು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಆರೋಪವಿತ್ತು. ಜತೆಗೆ ಕೊಡಗಿಗೆ ಬಂದ ಬಳಿಕ ಇಲ್ಲಿಯೂ ಖತರ್ ನಾಕ್ ಕೆಲಸ ಮಾಡಿದ್ದನು. ಅದು ಏನೆಂದರೆ, ವಯನಾಡು ಜಿಲ್ಲೆಯ ತಲಪುಝ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಪಾನಮತ್ತನಾಗಿ ಡಿಕ್ಕಿಪಡಿಸಿದ ಪರಿಣಾಮ ಆತ ಸಾವನ್ನಪ್ಪಿದ್ದನು  ಈ ಪ್ರಕರಣದಲ್ಲಿ ಹಲವು ಬಾರಿ ವಾರೆಂಟ್ ಇದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ಪೋಲೀಸರ ಕಣ್ಣು ತಪ್ಪಿಸಿ ಕೊಡಗು, ಕೇರಳದಲ್ಲಿ ಓಡಾಡಿಕೊಂಡಿದ್ದನು. ಇನ್ನು ಕೊಡಗಿಗೆ ಬಂದ ಬಳಿಕ ಪೊನ್ನಂಪೇಟೆಯ ಠಾಣಾ ವ್ಯಾಪ್ತಿಯಲ್ಲಿ ಶ್ರೀಗಂಧ ಮಾರಾಟ ಪ್ರಕರಣದಲ್ಲೂ ಈತ ಭಾಗಿಯಾದ ಬಗ್ಗೆ ಪ್ರಕರಣವಿದೆ.

ಜತೆಗೆ ಕಾಫಿ ಕೊಯ್ಲು ಸಂದರ್ಭ ಕೇರಳದಿಂದ ತನ್ನದೇ ಜೀಪಿನಲ್ಲಿ ಕೊಡಗಿಗೆ ಕಾರ್ಮಿಕರನ್ನು ತಂದು ಬಿಡುತಿದ್ದ ಗಿರೀಶ ಕಾರ್ಮಿಕರ ಹಣವನ್ನು ತಾನೇ ಪಡೆದು ಹಣ ನೀಡದೆ ವಂಚಿಸುತ್ತಿದ್ದ ಬಗ್ಗೆಯೂ ಈತನ ಮೇಲೆ ಪ್ರಕರಣವಿದೆ.  ಕೇರಳದಿಂದ ಕೆಲಸದವರನ್ನು ವಾಹನದಲ್ಲಿ ಕರೆ ತಂದು ತೋಟಗಳಿಗೆ ಕೆಲಸಕ್ಕೆ ಬಿಡುವ ಸಂದರ್ಭ ತೋಟದ ಕೆಲಸಕ್ಕೆ ಹೋಗುತ್ತಿದ್ದ ನಾಗಿಯ ಪರಿಚಯವಾಗಿತ್ತು. ಅದಾಗಲೇ ನಾಗಿ ಗಂಡ ಸುಬ್ರಹ್ಮಣಿಯಿಂದ ದೂರವಿರುವ ವಿಚಾರ ಗಿರೀಶನಿಗೆ ಗೊತ್ತಾಗಿತ್ತು. ಹೀಗಾಗಿ ಅವಳನ್ನು ಪಟಾಯಿಸುವ ಕೆಲಸ ಮಾಡಿದ್ದನು. ನಾಗಿಗೂ ಆತನ ಪೂರ್ವಾಪರ ಗೊತ್ತಿರಲಿಲ್ಲ. ಹೀಗಾಗಿ ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಮನೆಗೆ ಬಂದವನು ಒಂದಷ್ಟು ದಿನ ಜತೆಗಿದ್ದು, ತನ್ನ ಕಾಮತೃಷೆ ತೀರಿಸಿಕೊಂಡಿದ್ದನು. ಆದರೆ ಸಂಸಾರದ ಜವಬ್ದಾರಿ  ಹೊತ್ತುಕೊಳ್ಳಲು ತಯಾರಿರಲಿಲ್ಲ. ಅಲ್ಲದೆ ಎಂದಿನಂತೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿ ಕೇರಳದ ಕಡೆಗೆ ಹೋದರೆ ಮತ್ತೆ ಬರುತ್ತಿರಲಿಲ್ಲ.

ನಾಗಿ ಜತೆಗಿದ್ದಾಗ ಸೆಲ್ಪಿ ತೆಗೆದುಕೊಂಡು ಆಕೆಯ ಜತೆಗೆ ಜಾಲಿಯಾಗಿದ್ದನಲ್ಲದೆ ತನ್ನದೆಲ್ಲ ಮುಗಿದ ಬಳಿಕ ಹೆಂಡ ಕುಡಿದು ಆಕೆಯ ಜತೆಗೆ ಜಗಳ ತೆಗೆದು ಹೊಡಿದು ಬಡಿದು ಮಾಡಿ ಪರಾರಿಯಾಗಿ ಬಿಟ್ಟಿದ್ದನು. ಆತ ಹೋದ ಬಳಿಕ ಹಳೆಯ ಗಂಡನ ಪಾದವೇ ಗತಿ ಎಂಬ ಸ್ಥಿತಿ ನಾಗಿಯದ್ದಾಗಿತ್ತು. ಹೀಗಾಗಿ ಅವಳು ಹಳೆಯ ಗಂಡ ಸುಬ್ರಹ್ಮಣಿ ಜತೆಗೆ ಮತ್ತೆ ಕ್ಲೋಸ್ ಆಗಿದ್ದಳು ಹೀಗಾಗಿ ಗಿರೀಶನ ದೂರವಿಟ್ಟಿದ್ದಳು. ಈ ನಡುವೆ ನಾಗಿ ಮತ್ತು ಸುಬ್ರಹ್ಮಣಿ ಹತ್ತಿರವಾಗಿರುವ ವಿಚಾರ ತಿಳಿದ ಗಿರೀಶ ಬುಡಕ್ಕೆ ಮೆಣಸಿಟ್ಟುಕೊಂಡವನಂತೆ ಆಡಿದ್ದನು. ಅಲ್ಲದೆ ನಾಗಿಗೂ ಆವಾಜ್ ಹಾಕಿದ್ದನು. ಆದರೆ ಆಕೆ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಆತನಿಗೆ ಅವಳ ಮೇಲೆ ದ್ವೇಷ ಹುಟ್ಟಿಕೊಂಡಿತ್ತು.

ನನ್ನನ್ನು ಬಿಟ್ಟು ಮತ್ತೆ ಗಂಡನ ಜತೆಗೆ ಹೋಗಿದ್ದ ನಾಗಿಯ ಮೇಲೆ ಇನ್ನಿಲ್ಲದ ಕೋಪ ಬಂದಿತ್ತಲ್ಲದೆ ಆಕೆಯನ್ನು ಮುಗಿಸಿಯೇ ಬಿಡಬೇಕೆಂಬ ತೀರ್ಮಾನಕ್ಕೆ ಗಿರೀಶ ಬಂದು ಬಿಟ್ಟಿದ್ದನು. ಹೀಗಾಗಿ ಮಾರ್ಚ್ 28, 2025ರಂದು ಗುರುವಾರ ರಾತ್ರಿ ಹೆಂಡವನ್ನಿಟ್ಟುಕೊಂಡು ನಾಗಿಯಿದ್ದ ಮನೆಗೆ ಹೋಗಿದ್ದನು. ಎಲ್ಲರಿಗೂ ಹೆಂಡಕೊಟ್ಟು ತಾನು ಕುಡಿದಿದ್ದಾನೆ. ರಾತ್ರಿ ನಾಗಿ ಜತೆಗೆ ಜಗಳ ತೆಗೆದಿದ್ದಾನೆ. ಅದು ಅತಿರೇಕಕ್ಕೆ ಹೋಗುತ್ತಿದ್ದಂತೆಯೇ ಕತ್ತಿಯನ್ಮು ಆಕೆ ಮೇಲೆ ಬೀಸಿದ್ದಾನೆ. ಅಷ್ಟೇ ಅಲ್ಲದೆ ರಾಕ್ಷಸ ಅವತಾರ ತಾಳಿದ ಆತ ಮನೆಯಲ್ಲಿದ್ದ ಕರಿಯ, ಗೌರಿ, ನಾಗಿ ಮತ್ತು ಬಾಲಕಿ ಮೇಲೆ ಕತ್ತಿ ಬೀಸಿ ಹೇಗೆಂದರೆ ಹಾಗೆ ಕೊಚ್ಚಿ ಹಾಕಿದ್ದಾನೆ.

ಆ ಭೀಕರ ದೃಶ್ಯ ಹೇಗಿತ್ತೆಂದರೆ, ಇಡೀ ಗುಡಿಸಲು ರಕ್ತದಲ್ಲಿ ತೇವವಾಗಿತ್ತು. ಬಾಲಕಿಯ ಅಂಗಗಳೇ ಬೇರ್ಪಟ್ಟಿದ್ದವು.  ತುಂಡಾದ ದೇಹಗಳು ಕೃತ್ಯದ ಭೀಕರತೆಯನ್ನು ಹೇಳುತ್ತಿದ್ದವು. ಆ ಗುಡಿಸಲ ಪಕ್ಕದಲ್ಲಿ ಯಾರ ಮನೆಯೂ ಇಲ್ಲದ ಕಾರಣ ಇಂತಹದೊಂದು ಕೃತ್ಯ ನಡೆದಿದೆ ಎಂಬುದೇ ಗೊತ್ತಾಗಿರಲಿಲ್ಲ. ಕೊಲೆ ಮಾಡಿದ ಬಳಿಕ ಗಿರೀಶ್ ಅಲ್ಲಿಂದ ಎಸ್ಕೇಪ್ ಆಗಿದ್ದನು.  ಹಾಗೆ ಹೋದವನು ತನ್ನ ವಾಟ್ಸಪ್ ನಲ್ಲಿ ನಾಗಿಯ ಫೋಟೋ ಹಾಕಿ ಮಲಯಾಳದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದನು. ಇತ್ತ ಮಾರನೆಯ ದಿನ ಅಂದರೆ ಮಾರ್ಚ್ 28, ಶುಕ್ರವಾರ ಎಂದಿನಂತೆ ಕೆಲಸ ಮಾಡುವವರು ಬಂದಿದ್ದರು. ಗುಡಿಸಲ ಬಳಿ ಸದ್ದೇ ಕೇಳಿಸದಾಗ ಬಂದು ನೋಡಿದ್ದಾರೆ ಆಗ ಕೃತ್ಯ ಬಯಲಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು  ಪೊನ್ನಂಪೇಟೆ ಪೊಲೀಸರು ಹಾಗೂ ಕೊಡಗು ಎಸ್ಪಿ ರಾಮರಾಜನ್, ಹೆಚ್ಚುವರಿ ಎಸ್ಪಿ ಸುಂದರ್ ರಾಜ್, ದಕ್ಷಿಣ ವಲಯ ಐಜಿಪಿ ಡಾ ಬೋರೆಲಿಂಗೇಗೌಡ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಆದರೆ ಹತ್ಯೆ ಮಾಡಿದ ಹಂತಕ ಗಿರೀಶ್  ಕೇರಳಕ್ಕೆ ಪರಾರಿಯಾಗಿದ್ದನು. ಆತನ ಕುರಿತಂತೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಅಲರ್ಟ್ ಆದ  ವೈನಾಡು ಜಿಲ್ಲೆಯ ತಾಲಪೋಯ ಪೊಲೀಸ್ ಠಾಣೆಯ ಎ ಎಸ್ ಐ  ಟಿ. ಅನೀಶ್, ವಿಶೇಷ ಶಾಖೆಯ ಠಾಣಾಧಿಕಾರಿ ಜಿ ಅನಿಲ್, ಸಿಬ್ಬಂದಿ ಶಫೀರ್ ಆರೋಪಿಯನ್ನು ಬಂಧಿಸಿದ್ದರಲ್ಲದೆ, ಆ ನಂತರ ಆತನ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ  ವೀರಾಜಪೇಟೆಯ ಎರಡನೇ ಅಪರ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

 

 

-ಬಿ.ಎಂ.ಲವಕುಮಾರ್

admin
the authoradmin

Leave a Reply