DistrictLatest

ನರಕ ದರ್ಶನ ಮಾಡಿಸುವ ಸರಗೂರು ಬಸ್ ನಿಲ್ದಾಣ… ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಯಾವಾಗ?

ಸರಗೂರು: ಬಹುಶಃ ನಿಮಗೆ ನರಕ ಕಲ್ಪನೆ ಇಲ್ಲದೆ ಹೋದರೆ ಅಂತಹದೊಂದು ಲೋಕವನ್ನು ನೋಡಬೇಕೆಂದರೆ ಬೇರೆ ಎಲ್ಲೂ  ಹೋಗಬೇಕಾಗಿಲ್ಲ. ಸರಗೂರಿಗೆ ಬಂದು ಇಲ್ಲಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕುಳಿತು ಸ್ವಲ್ಪ ಹೊತ್ತು ಬಸ್ಸಿಗೆ ಕಾದರೆ ಸಾಕು ನರಕ ಇಲ್ಲಿಯೇ ದರ್ಶನವಾಗಿ ಬಿಡುತ್ತದೆ. ಆದರೆ ಇಂತಹ ನರಕದಲ್ಲಿ ನಿತ್ಯವೂ ವಿದ್ಯಾರ್ಥಿಗಳು ಸೇರಿದಂತೆ ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಕಾಲ ಕಳೆಯಲೇ ಬೇಕಾಗಿದೆ.

ಬಸ್ ನಿಲ್ದಾಣಕ್ಕೆ ಬಂದು ಹಾಗೆ ಸುಮ್ಮನೆ ಕಣ್ಣು ಹಾಯಿಸಿದರೆ ಸಾಕು ಎಲ್ಲೆಂದರಲ್ಲಿ ಹರಿಯುವ ಚರಂಡಿ ನೀರು ಮತ್ತು ಅದು ಬೀರುವ ಗಬ್ಬು ವಾಸನೆ, ತಲೆಗೆ ಹಿಕ್ಕೆ ಹಾಕುವ ಹಕ್ಕಿಗಳು, ಕಿತ್ತುಹೋದ ನೆಲಹಾಸು, ಮುರಿದ ಆಸನಗಳು ಹೀಗೆ ಅವ್ಯವಸ್ಥೆಯ ಆಗರದಲ್ಲಿ ತೇಲಾಡುತ್ತಿರುವ ಬಸ್ ನಿಲ್ದಾಣ ಕಾಣಿಸುತ್ತದೆ. ಈ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣದ ನೀರು, ಚರಂಡಿ, ಶೌಚಾಲಯ ಹಾಗೂ ಹೋಟೆಲ್ ನೀರು ಪೂರೈಕೆ ಎಲ್ಲ ವ್ಯವಸ್ಥೆಯಲ್ಲಿಯೂ ಅವ್ಯವಸ್ಥೆಯೇ ಇದ್ದು,  ಕಳೆದ 15 ವರ್ಷಗಳಿಂದ ಇದಕ್ಕೆ ಯಾವುದೇ ರೀತಿಯ ಪರಿಹಾರ ಕಂಡು ಕೊಳ್ಳುವ ಪ್ರಯತ್ನವನ್ನು ಮಾಡದ ಕಾರಣದಿಂದಾಗಿ ಇವತ್ತಿಗೂ ಸಮಸ್ಯೆಯಾಗಿಯೇ ಉಳಿದು ಹೋಗಿದೆ.

ಬಸ್ ನಿಲ್ದಾಣದಲ್ಲಿರುವ ಎರಡು ಓವರ್‌ ಹೆಡ್ ನೀರಿನ ಟ್ಯಾಂಕ್‌ಗಳ ನಡುವೆ ಅಸಮರ್ಪಕ ಸಂಪರ್ಕದ ಪರಿಣಾಮವಾಗಿ ಶೌಚಾಲಯದ ಟ್ಯಾಂಕ್ ತುಂಬಿದರೆ ಇಲ್ಲಿರುವ ಹೋಟೆಲ್‌ ನ ಟ್ಯಾಂಕ್ ನಲ್ಲಿ ನೀರು ಹೊರಚಿಮ್ಮುತ್ತದೆ. ಹೋಟೆಲ್ ಟ್ಯಾಂಕ್ ತುಂಬಿದರೆ ಶೌಚಾಲಯದ ಟ್ಯಾಂಕ್ ನೀರು ಪೋಲಾಗುತ್ತದೆ. ಇದರಿಂದ ಪ್ರತಿ ದಿನ ಸಾವಿರಾರು ಲೀಟರ್ ನೀರು ವ್ಯರ್ಥವಾಗುತ್ತಿದ್ದು, ಇದನ್ನು ತಡೆಯುವ ಗೋಜಿಗೆ ಹೋಗದ ಕಾರಣದಿಂದಾಗಿ ನೀರು ಹರಿದು ಪಾಚಿಕಟ್ಟಿದ್ದು ಇದನ್ನು ತುಳಿದು ಜನ ಜಾರಿ ಬೀಳುತ್ತಿದ್ದಾರೆ.  ಸುಮಾರು 10 ವರ್ಷಕ್ಕೂ ಹಿಂದೆ ನಿರ್ಮಿಸಿದ್ದ ಶೌಚಾಲಯ ಪಿಟ್ ಇನ್ನೂ ಹೊಸದಾಗಿ ನಿರ್ಮಿಸಲ್ಪಡದ ಕಾರಣದಿಂದಾಗಿ ಅದೇ ಪಿಟ್‌ನಲ್ಲಿ ನೀರು ಸಂಗ್ರಹವಾಗಿ, ಒಳಗಡೆ ಚರಂಡಿಯಂತೆಯೇ ದುರ್ವಾಸನೆ ಬೀರುತ್ತಿದ್ದು, ಇಲ್ಲಿ ಅಶುಚಿತ್ವ ತಾಂಡವಾಡುತ್ತಿದೆ.

ಇನ್ನು ಫಿಲ್ಟರ್ ನೀರು ಹೊರಗೆ ಹೋಗಬೇಕಾದ ಸ್ಥಳದಲ್ಲಿ ಚಿಕ್ಕ ಇಂಗು ಗುಂಡಿಯಿದ್ದು  ಅಲ್ಲಿ  ನೀರು ನಿಂತು ದೊಡ್ಡ ಹೊಂಡಗಳಾಗಿವೆ. ನೀರು ನಿಂತಲ್ಲೇ ನಿಲ್ಲುವುದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಜತೆಗೆ  ಪಕ್ಕದ ಟ್ರಾನ್ಸ್ ಫಾರ್ಮರ್  ಕೆಳಗೆ ನೀರು ನಿಂತು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇಲ್ಲಿನ ಸಮಸ್ಯೆ ಬಗ್ಗೆ ಹಲವು ಸಂಘಸಂಸ್ಥೆಗಳು ಸಂಬಂಧಿಸಿದವರ ಗಮನಸೆಳೆದಿದ್ದು ಶೀಘ್ರವೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರೂ ಅದು ಬರೀ ಭರವಸೆಯಾಗಿಯೇ ಉಳಿದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ವತಿಯಿಂದ ವರ್ಷಕ್ಕೆ ಲಕ್ಷಾಂತರ ರೂ ಕಂದಾಯ ಸಲ್ಲಿಸುತ್ತಿದ್ದರೂ ಸ್ಥಳೀಯ ಪಟ್ಟಣ ಪಂಚಾಯಿತಿಗೆ ನೀಡುತ್ತಿದರೂ, ಬಸ್ ನಿಲ್ದಾಣದ ನೀರು ಚರಂಡಿಗೆ ಹೋಗುವ ಮೂಲಭೂತ ವ್ಯವಸ್ಥೆಯನ್ನು ಮಾಡದೆ ಕಾಲಹರಣ ಮಾಡುತ್ತಿದೆ ಎಂದು ಜನ ದೂರುತ್ತಿದ್ದಾರೆ.

ಸರಗೂರು ಪಟ್ಟಣದಲ್ಲಿ ಇಲ್ಲಿಯವರೆಗೆ ಒಳಚರಂಡಿಯ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಸಮಸ್ಯೆಗಳಾಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಇಲ್ಲಿನ ಹೋಟೆಲ್ ನೀರು ಜಾಲರಿ ಮುಖಾಂತರ  ಫಿಲ್ಟರ್ ಆಗಿ ಹೊರಗಡೆ ಬಂದರೂ ಈ ನೀರು ಹೊರಗಡೆ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು ಬಸ್ ನಿಲ್ದಾಣ ಗಬ್ಬು ನಾರಲು ಕಾರಣವಾಗಿದೆ. ಬೇಸಿಗೆಯಲ್ಲಿ ಒಂದು ರೀತಿಯ ಸಮಸ್ಯೆಯಾದರೆ ಮಳೆಗಾಲದಲ್ಲಿ ನಿತ್ಯ ನರಕವಾಗಿ ಬಿಡುತ್ತದೆ. ಏಕೆಂದರೆ ಮಳೆಗಾಲದಲ್ಲಿ ಬಸ್ ನಿಲ್ದಾಣದ ಮುಂಭಾಗದ ಮುಖ್ಯ ರಸ್ತೆಯಲ್ಲಿ ಹರಿಯುವ ನೀರೆಲ್ಲವೂ ಒಳಗಡೆ ಹರಿದು ಬಂದು ಬಸ್ ನಿಲ್ದಾಣವನ್ನು ಸೇರುವುದರಿಂದ ಇಡೀ ನಿಲ್ದಾಣ ಕೆರೆಯಂತಾಗಿ ಬಿಡುತ್ತದೆ. ಬಸ್ ನಿಲ್ದಾಣದ ಸುತ್ತ ತೇಗದ ಮರಗಳನ್ನು ಬೆಳೆಯಲಾಗಿದೆ. ಆದರೆ ಇದರ ನಿರ್ವಹಣೆ ಇಲ್ಲದೆ  ಸಮಸ್ಯೆಯಾಗುತ್ತಿದೆ.

ಪ್ರತಿದಿನ ಪ್ರಯಾಣಿಕರು ಬೇರೆ, ಬೇರೆ ಊರುಗಳಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬರುತ್ತಿದ್ದು, ಬಸ್ ನ್ನು ಕಾಯುತ್ತಾ ಕುಳಿತುಕೊಳ್ಳಲು ಸೂಕ್ತ ಆಸನದ ವ್ಯವಸ್ಥೆ ಇಲ್ಲ. ಹೀಗಾಗಿ ನೆಲದ ಮೇಲೆ ಕೂರಬೇಕಾಗಿದೆ. ಈ ವೇಳೆ ಪ್ರಯಾಣಿಕರ ಮೇಲೆ ಪಾರಿವಾಳಗಳು  ಹಿಕ್ಕೆ ಹಾಕುವುದು ಮಾಮೂಲಿಯಾಗಿದ್ದು, ಪ್ರಯಾಣಿಕರು ಹಿಡಿಶಾಪ ಹಾಕಿಕೊಂಡು ಹಿಕ್ಕೆಯನ್ನು ತೊಳೆದುಕೊಂಡು ಮುಂದೆ ಹೋಗಬೇಕಾಗುತ್ತದೆ.

ಬಸ್ ನಿಲ್ದಾಣದಲ್ಲಿ ಈಗ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಈ ಹಿಂದೆ  ಬಸ್ ನಿಲ್ದಾಣ ಆರಂಭವಾದಾಗ ಕುಡಿಯುವ ನೀರಿನ ವ್ಯವಸ್ಥೆ ಇತ್ತು. ಆದರೆ ಅದನ್ನು  ಕೆಲವೇ ಕೆಲವು ಸಮಯದಲ್ಲಿ ಹೆಚ್.ಡಿ ಕೋಟೆ ಬಸ್  ಘಟಕಕ್ಕೆ ಸ್ಥಳಾಂತರಿಸಿದ್ದು, ಇಲ್ಲಿಗೆ ಯಾವುದೇ ರೀತಿಯ ನೀರಿನ ವ್ಯವಸ್ಥೆ ಮಾಡದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಸದ್ಯ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿರುವ ಸರಗೂರು ಬಸ್ ನಿಲ್ದಾಣದತ್ತ ಸಂಬಂಧಿಸಿದವರು ಗಮನಹರಿಸಿ ಅದಕ್ಕೆ ಮುಕ್ತಿ ತೋರಿಸಿದರೆ ಅಷ್ಟೇ ಸಾಕು ಎನ್ನವಂತಾಗಿದೆ ಇಲ್ಲಿಗೆ ಬರುವ ಪ್ರಯಾಣಿಕರ ಪರಿಸ್ಥಿತಿ…

admin
the authoradmin

Leave a Reply