LatestLife style

ಬಾಳೆ ಹಣ್ಣು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.. ಇದರಲ್ಲಿ ಯಾವ್ಯಾವ ಔಷಧೀಯ ಗುಣಗಳಿವೆ ಗೊತ್ತಾ?

ಎಲ್ಲ ಕಾಲದಲ್ಲಿಯೂ ಸುಲಭವಾಗಿ ಮತ್ತು ಕೈಗೆ ಎಟಕುವ ಬೆಲೆಯಲ್ಲಿ ಸಿಗುವ ಯಾವುದಾದರೊಂದು ಹಣ್ಣು ಇದ್ದರೆ ಅದು ಬಾಳೆಹಣ್ಣು ಮಾತ್ರ. ಇದನ್ನು ಹಿತ್ತಲಲ್ಲಿ ಒಂದಿಷ್ಟು ಜಾಗವಿದ್ದರೂ ಬೆಳೆಯಲು ಅವಕಾಶವಿದೆ. ಈ ಹಣ್ಣು ದೇವರಪೂಜೆಯಿಂದ ಆರಂಭವಾಗಿ ಎಲ್ಲ ಸಮಾರಂಭಗಳಲ್ಲಿಯೂ ತನ್ನದೇ ಆದ ಪಾತ್ರ ವಹಿಸುತ್ತದೆ. ಹಾಗೆಯೇ ನೂರಾರು ಬಗೆಯ ತಳಿಗಳಿದ್ದು ಎಲ್ಲವೂ ತನ್ನದೇ ಆದ ರುಚಿ ಮತ್ತು ಆರೋಗ್ಯಕಾರಿ ಗುಣಗಳನ್ನು ಹೊಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಬಾಳೆಹಣ್ಣಿನ ಬಗ್ಗೆ ತಿಳಿದುಕೊಂಡು ಅವುಗಳನ್ನು ತಮ್ಮ ನಿತ್ಯ ಬಳಕೆಯಲ್ಲಿ ಬಳಸಿಕೊಂಡಿದ್ದೇ ಆದರೆ ಒಂದೊಳ್ಳೆಯ ಆರೋಗ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ.

ಇಷ್ಟಕ್ಕೂ ಬಾಳೆಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಏನೇನು ಗುಣಗಳಿವೆ ಎನ್ನುವುದನ್ನು ನೋಡಿದ್ದೇ ಆದರೆ ಒಂದಲ್ಲ ಎರಡಲ್ಲ ಹತ್ತಾರು ಆರೋಗ್ಯಕಾರಿ ಗುಣಗಳಿರುವುದು ಬೆಳಕಿಗೆ ಬರುತ್ತದೆ. ಇದರಲ್ಲಿ ಶಕ್ತಿವರ್ಧಕ ಗುಣಗಳಿದ್ದು ನಮ್ಮ ಶರೀರದ ಹಿತವನ್ನು ಸದಾ ಕಾಪಾಡುತ್ತದೆ. ಹೇರಳವಾದ ವಿಟಮಿನ್‌ಗಳು, ಕಾರ್ಬೋಹೈಡ್ರೇಟ್ಸ್, ನಾರಿನಾಂಶ, ಕ್ಯಾಲ್ಸಿಯಂ, ಪ್ರೋಟೀನ್, ಎಲ್ಲದಕ್ಕಿಂತಲೂ ಮುಖ್ಯವಾಗಿ  ಪೊಟ್ಯಾಶಿಯಂ ಗುಣಗಳಿದ್ದು, ಇದು ಹೃದ್ರೋಗ ಹಾಗೂ ರಕ್ತದೊತ್ತಡದ ತೊಂದರೆಯುಳ್ಳವರಿಗೆ ಉಪಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಬಾಳೆಹಣ್ಣನ್ನು ಕಿತ್ತಳೆ ಹಣ್ಣಿನೊಂದಿಗೆ ಸೇರಿಸಿ ಸೇವಿಸುತ್ತಾ ಬಂದರೆ ದೇಹದಲ್ಲಿ ರಕ್ತದ ಉತ್ಪಾದನೆ ಹೆಚ್ಚಾಗಿ ರಕ್ತಹೀನತೆಗೆ ಪರಿಹಾರ ಸಿಗಲಿದೆ.. ನರಗಳಿಗೆ ಬೇಕಾದ ರಂಜಕಾಂಶವನ್ನು ಬಾಳೆಹಣ್ಣು ಒದಗಿಸಿಕೊಡುವುದರಿಂದ  ಸ್ನಾಯುಗಳು ಬಲವಾಗುತ್ತವೆ. ಹೆಚ್ಚಿನ ಪೊಟ್ಯಾಷಿಯಂ ಅಂಶ ಇದರಲ್ಲಿ ಇರುವುದರಿಂದ ಮೂಳೆಗಳಿಗೆ ಬಲ ನೀಡುತ್ತದೆ. ಆದ್ದರಿಂದ ಸದಾ  ವ್ಯಾಯಾಮ ಮಾಡುವವರು  ಆಟಗಾರರು, ಬಾಳೆಹಣ್ಣನ್ನು ಸೇವಿಸುತ್ತಿರಬೇಕು. ಮತ್ತೊಂದು ವಿಚಾರ ಏನೆಂದರೆ ಬಾಳೆಹಣ್ಣು ಸೇವಿಸುವುದರಿಂದ ಮಾರಕ ಕ್ಯಾನ್ಸರ್  ರೋಗದಿಂದ ದೂವಿರಬಹುದು ಎಂದು ಕೆಲ ಸಂಶೋಧನೆಗಳು ಹೇಳಿವೆ.

ಮಾನಸಿಕ ಖಿನ್ನತೆಗೂ ಬಾಳೆಹಣ್ಣು ರಾಮಬಾಣವಾಗಿದ್ದು, ಇದರಲ್ಲಿರುವ  ಟ್ರಿಪ್ರೋಪ್ಯಾನ್ ಎಂಬ ಪ್ರೊಟೀನ್ ಮನಸ್ಸನ್ನು ಉಲ್ಲಸಿತವಾಗಿಡಲು ಸಹಕರಿಸುತ್ತದೆಯಂತೆ. ಜತೆಗೆ ಹೀಮೋಗ್ಲೋಬಿನ್  ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಮೆದುಳಿಗೆ ಆಮ್ಲಜನಕವನ್ನು ಪೂರೈಕೆ ಮಾಡಿ ಮೆದುಳು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತದೆ. ಬಾಳೆಹಣ್ಣಿನಲ್ಲಿ  ವಿಟಮಿನ್ ಎ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯ ಜತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ. ಬಾಳೆಹಣ್ಣಿನ ಸೇವನೆಯಿಂದ ಪಾರ್ಶ್ವವಾಯು ರೋಗವು ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದು ಎಂಬುದನ್ನು ಸಂಶೋಧನೆ ಹೇಳಿದೆ.

ಬಾಳೆಹಣ್ಣಿನ ಜತೆಗೆ ಸಿಪ್ಪೆಯಲ್ಲಿ   ವಿಟಮಿನ್ ಎ. ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಅಷ್ಟೇ ಅಲ್ಲದೆ, ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಇರುವ ಆಂಟ್ಯಿ ಓಕ್ಷಿಡೆಂಟ್ ಇದ್ದು  ವಿಟಮಿನ್ ಬಿ  ಹೇರಳವಾಗಿದೆ. ಕಣ್ಣಿನ ಆರೋಗ್ಯ ಕಾಪಾಡುವ ಲುಟೈನ್ ಎಂಬ ಪದಾರ್ಥವೂ ಇದೆ. (ಆದರೆ ಬಾಳೆಹಣ್ಣಿನ ಸಿಪ್ಪೆಯನ್ನು ಉಪಯೋಗಿಸುವ ಮುನ್ನ ಎಚ್ಚರವಾಗಿರುವುದು ಒಳಿತು ಕಾರಣ ಇತ್ತೀಚೆಗೆ ಕಾಯಿಯನ್ನು ಹಣ್ಣು ಮಾಡಲು ರಾಸಾಯನಿಕವನ್ನು ಬಳಸುವುದರಿಂದ ಅದು ಸಿಪ್ಪೆಯಲ್ಲಿ ಉಳಿದುಕೊಂಡು ಮಾರಕವಾಗಿ ಪರಿಣಮಿಸುವ ಸಾಧ್ಯತೆಯೂ ಇದೆ.) ಹಣ್ಣಿನಲ್ಲಿ ಪಾಲಿಕ್ ಆಸಿಡ್ ಹೇರಳವಾಗಿರುವುದರಿಂದ ಗರ್ಭಾಶಯದಲ್ಲಿರುವ ಮಗುವಿನ ಬೆಳವಣಿಗೆಗೆ ಹೆಚ್ಚು ಸಹಾಯ ಮಾಡುವುದರಿಂದ ಗರ್ಭಿಣಿ ಮಹಿಳೆಯರು ಪ್ರತಿದಿನ ಬಾಳೆ ಹಣ್ಣು ಸೇವಿಸುವುದನ್ನು ರೂಢಿ ಮಾಡಿಕೊಳ್ಳುವುದು ಒಳ್ಳೆಯದು.

ಇದೆಲ್ಲದರ ನಡುವೆ ಮತ್ತೊಂದು ಉಪಕಾರವೂ ಇದೆ. ಅದೇನೆಂದರೆ ಸಾಮಾನ್ಯವಾಗಿ ಧೂಮಪಾನ ಚಟ ಹತ್ತಿಸಿಕೊಂಡು ಸಿಗರೇಟ್ ಸೇವನೆ ಮಾಡದೆ ಬದುಕೋದಕ್ಕೆ ಸಾಧ್ಯವಿಲ್ಲ ಎಂಬಂತೆ ಇರುವ ಜನರು ಸಿಗರೇಟ್‌ನಿಂದ ದೂರವಿರಲು ಬಾಳೆಹಣ್ಣನ್ನು ಉಪಯೋಗಿಸಬಹುದು ಎಂಬುದನ್ನು ಸಂಶೋಧನೆಯೊಂದು ಬೆಳಕಿಗೆ ತಂದಿದೆ. ಈ ಬಗ್ಗೆ ಸಂಶೋಧನೆ ನಡೆಸಿದ ತಜ್ಞರು ಧೂಮಪಾನ ಮಾಡುವ ವ್ಯಸನಿಗೆ ಆತ ಸಿಗರೇಟು ಸೇದಬೇಕೆನಿಸಿದಾಗಲೆಲ್ಲ ಆತನಿಗೆ ಬಾಳೆಹಣ್ಣು ನೀಡತೊಡಗಿದರಂತೆ. ಹಾಗೆ ಬಾಳೆಹಣ್ಣು ಸೇವಿಸುತ್ತಾ ಬಂದಿದ್ದರಿಂದ ಆತನ ದೇಹದ ಮೇಲೆ ಹಣ್ಣಿನಲ್ಲಿದ್ದ ಬಿ-6, ಬಿ12, ಮ್ಯಾಂಗನೀಸ್ ಅಂಶಗಳು ಪರಿಣಾಮ ಬೀರಲು ಆರಂಭಿಸಿ ಆತನ ಮನಸ್ಸು ಉಲ್ಲಾಸಗೊಂಡು ಚಟ ಮುಕ್ತನಾದನಂತೆ. ಇದರಿಂದ ಬಾಳೆಹಣ್ಣು ಸರ್ವರಿಗೂ ಸಹಕಾರಿ ಎನ್ನುವುದು ಅರಿವಾಗುತ್ತದೆ.

ಬಾಳೆಹಣ್ಣನ್ನು ನೇರವಾಗಿ ತಿನ್ನುವುದಲ್ಲದೆ ಅದರಿಂದ ಹತ್ತಾರು ಬಗೆಯ ತಿನಿಸುಗಳನ್ನು ಕೂಡ ಮಾಡಬಹುದಾಗಿದೆ. ಹೀಗಾಗಿ ಅದನ್ನು ನೇರವಾಗಿ ಅಥವಾ ಬೇರೆ, ಬೇರೆ ಬಗೆಯ ಜ್ಯೂಸ್, ಖಾದ್ಯಗಳಲ್ಲಿ ಬಳಸಿ ಸೇವಿಸುವುದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂಬುದನ್ನು ನಾವು ಮರೆಯಬಾರದು.

ಬಾಳೆಹಣ್ಣಿನಿಂದ ಮಾಡಬಹುದಾದ ತಿನಿಸುಗಳು ಇಲ್ಲಿವೆ.. ನೀವು ಮನೆಯಲ್ಲಿಯೇ ಮಾಡಿ ನೋಡಿ!

B M Lavakumar

admin
the authoradmin

Leave a Reply