District

ಕೌಟಿಲ್ಯ ಸಾಂಸ್ಕೃತಿಕ ಪರ್ವ-2025.. ಕಿರಿಯರ ಕೀರ್ತಿಗೆ, ಹಿರಿಯರ ಸ್ಫೂರ್ತಿಗೆ ಸಾಕ್ಷಿಯಾದ ಕಾರ್ಯಕ್ರಮ

ಮೈಸೂರು: ಕೌಟಿಲ್ಯ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ವಿಭಿನ್ನ ಮತ್ತು ವಿಶಿಷ್ಟವಾಗಿ ನೆರವೇರಿತು.

ಈ ವಾರ್ಷಿಕೋತ್ಸವ ಹಲವು ವಿಶೇಷತೆಗೆ ಸಾಕ್ಷಿಯಾಯಿತು. ಕಾರ್ಯಕ್ರಮದಂದು ಬೆಳಿಗ್ಗೆ  `ಕಿರಿಯರ ಕೀರ್ತಿಗೆ, ಹಿರಿಯರ ಸ್ಫೂರ್ತಿ’ ಎಂಬ ಕಾರ್ಯಕ್ರಮವನ್ನು ನಡೆಯುವುದರೊಂದಿಗೆ ಗಮನಸೆಳೆಯಿತು. ಹಿರಿಯರ ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ಬೆಸೆಯುವ ಈ ವಿಶೇಷ, ವಿನೂತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿಯಾದ ಡಾ.ಎಂ.ಜಗನ್ನಾಥ್ ಶಣೈ ಹಾಗೂ ಆರ್.ವಿ.ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ರಾಮ್‌ಕುಮಾರ್ ಕಕನಿ ಅವರು  ಭಾಗವಹಿಸಿದ್ದರು.

ಸಂಜೆ ನಡೆದ  “ಕೌಟಿಲ್ಯ ಸಾಂಸ್ಕೃತಿಕ ಪರ್ವ” ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಶ್ರೀ ನಿತೇಶ್ ಪಾಟೀಲ್, (ಐಎಎಸ್)  ಉದ್ಯಮಿ, ಲೋಕೋಪಕಾರಿ, ಪರಿಸರವಾದಿ ಶ್ರೀಮತಿ ರೇವತಿ ಕಾಮತ್,  ಕರ್ನಾಟಕ ವಿಧಾನಸಭೆಯ ಮಾಜಿ ಸದಸ್ಯರಾದ ಶ್ರೀ ಅಶೋಕ್ ಖೇಣಿ, ಆರ್‌.ವಿ ಡೆಂಟಲ್ ಕಾಲೇಜಿನ ಅಧ್ಯಕ್ಷರಾದ ಎಂ.ಎಸ್.ಪ್ರಕಾಶ್‌ ಭಾಗವಹಿಸಿದ್ದು ಅವರನ್ನು ಪೂರ್ಣಕುಂಬ ಹಾಗೂ ಪೊಲೀಸ್ ವಾದ್ಯಗೋಷ್ಠಿಯೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ಈ ವೇಳೆ ಮಾತನಾಡಿದ ಡಾ.ಎಂ.ಜಗನ್ನಾಥ್ ಶಣೈ ರವರು ಮೈಸೂರು ನಗರವು ಯಾವಾಗಲೂ ಸಾಂಸ್ಕತಿಕ ಮತ್ತು ಪರಂಪರೆಯ ನಗರಕ್ಕೆ ಹೆಸರುವಾಸಿಯಾಗಿದೆ. ಕೌಟಿಲ್ಯ ವಿದ್ಯಾಲಯದ ವಿದ್ಯಾರ್ಥಿಗಳು ಇಂದು ಅದನ್ನು ಸಾಬೀತು ಪಡಿಸಿದ್ದಾರೆ ಎಂದು ತಿಳಿಸಿದರೆ, ಆರ್.ವಿ.ವಿಶ್ವವಿದ್ಯಾಲಯದ ಕುಲಪತಿಗಳಾದ  ಪ್ರೊ. ರಾಮ್‌ಕುಮಾರ್ ಕಕನಿಯವರು ವಿದ್ಯಾರ್ಥಿಗಳು ಸಾಮಾಜಿಕ ದುಶ್ಚಟಗಳಿಂದ ದೂರವಿರಬೇಕು. ಕೆಟ್ಟ ವ್ಯಸನಗಳಿಗೆ ಒಳಗಾಗಬಾರದು ಎಂದು ಹೇಳುತ್ತಾ, ಬೆಳಗು, ಬೆಳಗಿಸು, ಜ್ಞಾನವಾಗು, ಜ್ಞಾನಹಂಚು” ಎಂದು ತಿಳಿಸಿದರು.

ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ನಿತೇಶ್ ಪಾಟೀಲ್ ಅವರು “ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ, ವಿಧೇಯತೆ ಮತ್ತು ಸೃಜನಶೀಲತೆಯೊಂದಿಗೆ ಶ್ರೇಷ್ಠತೆಯನ್ನು ಸಾಧಿಸಲು ಪ್ರೋತ್ಸಾಹಿಸಿದರು. ಉದ್ಯಮಿ, ಲೋಕೋಪಕಾರಿ, ಪರಿಸರವಾದಿ ಶ್ರೀಮತಿ ರೇವತಿ ಕಾಮತ್ ರವರು ವಿದ್ಯಾಭ್ಯಾಸದ ಜೊತೆಗೆ ಸಂಗೀತದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿದ  ಕರ್ನಾಟಕ ವಿಧಾನಸಭೆಯ ಮಾಜಿ ಸದಸ್ಯರಾದ ಅಶೋಕ್ ಖೇಣಿಯವರು  ಮಾತನಾಡುತ್ತ ಇಂದಿನ ವಿದ್ಯಾರ್ಥಿಗಳಿಗೆ ಸೈನಿಕರು, ವೈದ್ಯರು ಮತ್ತು ರೈತರ ಪ್ರಾಮುಖ್ಯತೆಯನ್ನು ತಿಳಿಸಿದರು.

ಸಮಾರಂಭದಲ್ಲಿ ಕೌಟಿಲ್ಯವಿದ್ಯಾಲಯದಲ್ಲಿ ಐದು ವರ್ಷಗಳ ಸೇವೆಯನ್ನು ಪೂರೈಸಿದ ಮಾನವ ಸಂಪನ್ಮೂಲ ವಿಭಾಗದಲ್ಲಿ ಸೇವೆಸಲ್ಲಿಸಿದವರಿಗೆ “ಕೌಟಿಲ್ಯ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜೊತೆಗೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾಲಯದ ವತಿಯಿಂದ ಪುರಸ್ಕರಿಸಲಾಯಿತು.

ಮಾಂಟೆಸರಿ ವಿಭಾಗದಿಂದ ಪಿಯುಸಿ ತರಗತಿವರೆಗಿನ ವಿದ್ಯಾರ್ಥಿಗಳು ವೇದಘೋಷ, ಯೋಗಾಸನದ ನೃತ್ಯ, ಬ್ರಹ್ಮ ಕಳಸ ನೃತ್ಯ, ಜಾನಪದದಿಂದ ಪೌರಾಣಿಕ ನೃತ್ಯಗಳು, ಮಹಿಳಾ ಸಬಲೀಕರಣದ ನೃತ್ಯಗಳು, ಮಹಾಭಾರತದ ಏಕಲವ್ಯ-ದ್ರೋಣಚಾರ್ಯ ನೃತ್ಯ ನಾಟಕ. ಶಿವ ನೃತ್ಯ, ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ನೃತ್ಯ, ದೈವಭಕ್ತಿಯಿಂದ ಕೂಡಿದ ನೃತ್ಯಗಳು, ಇಂಗ್ಲೀಷ್ ನಾಟಕ, ದೈಹಿಕ ವಿಭಾಗದ ಕ್ರೀಡಾನೃತ್ಯ, ತೆನಾಲಿರಾಮಕೃಷ್ಣನ ಕನ್ನಡ ನಾಟಕ, ಸಾಲುಮರದ ತಿಮ್ಮಕ್ಕನವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವ ನೃತ್ಯ, ಇನ್ನು ಹಲವಾರು ಚಿತ್ತಾಕರ್ಷಕ ಕಾರ್ಯಕ್ರಮಗಳನ್ನು ನಡೆಸಿ ಕೊಡುವುದರ ಮೂಲಕ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವಲ್ಲಿ ಯಶಸ್ವಿಯಾದರು.

ಸಂಸ್ಥೆಯ ಅಧ್ಯಕ್ಷರಾದ ಟಿ.ಬಾಬುರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲೆಯ ನಿರ್ದೇಶಕರು ಮತ್ತು ಪ್ರಾಂಶುಪಾಲರಾದ ಶ್ರೀಮತಿ ಡಾ.ಎಸ್. ಜಯಶ್ರೀ ಮುರಳಿಧರ್‌ರವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಪ್ರಾಂಶುಪಾಲರು ಶ್ರೀಮತಿ ಡಾ.ರಮ್ಯ ಅರಸ್ ವಂದಿಸಿದರು. ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ಪೋಷಕ ವೃಂದ, ಹಾಗೂ ವಿದ್ಯಾರ್ಥಿಗಳನ್ನೊಳಗೊಂಡಂತೆ ಎಲ್ಲರೂ ಸಂಸ್ಥೆಯ ವಾರ್ಷಿಕೋತ್ಸವದ ಯಶಸ್ವಿಗೆ ಶ್ರಮಿಸಿದ್ದು ಕಂಡು ಬಂದಿತು.

admin
the authoradmin

Leave a Reply