Political

ಪಕ್ಷ ಸಂಘಟನೆಯಲ್ಲಿ  ವಿಫಲವಾದ ಕಾಂಗ್ರೆಸ್…  ತಳಮಟ್ಟದ ಕಾರ್ಯಕರ್ತರ ಪಡೆಯಿಲ್ಲದೆ ಸೋಲು!

ದೇಶದ ರಾಜಕೀಯವನ್ನು ಗಮನಿಸಿದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಇವತ್ತು ದೇಶದಲ್ಲಿ ಅಧಿಕಾರ ಕಳೆದುಕೊಂಡು ಕೇವಲ ಮೂರು ರಾಜ್ಯಗಳಲ್ಲಷ್ಟೆ ಅಧಿಕಾರ ನಡೆಸಲು ಸಾಧ್ಯವಾಗಿದೆ. ಇತ್ತೀಚೆಗಿನ ಚುನಾವಣೆಗಳಲ್ಲಿ ಮೇಲಿಂದ ಮೇಲೆ ಸೋಲು ಕಂಡಿದ್ದರೂ ಸೋಲಿಗೆ ಕಾರಣಗಳನ್ನು ಹುಡುಕಿಕೊಂಡು ಅದಕ್ಕೆ ಪರಿಹಾರ ಕಂಡು ಕೊಳ್ಳುವಲ್ಲಿ ವಿಫಲವಾಗುತ್ತಿರುವುದು ಎದ್ದು ಕಾಣಿಸುತ್ತಿದೆ. ಇದೆಲ್ಲದರ ನಡುವೆ ಮುಂದೆ ಬರಲಿರುವ ಪಶ್ಚಿಮಬಂಗಾಳ, ತಮಿಳುನಾಡು, ಕೇರಳ ಚುನಾವಣೆಗೆ ಕಾರ್ಯಕರ್ತರ ಪಡೆಯನ್ನು ತಯಾರು ಮಾಡುವ ಕಾರ್ಯಕ್ಕೆ ಮುಂದಾಗದಿರುವುದು ಅಚ್ಚರಿ ಮೂಡಿಸುತ್ತಿದೆ.

ಕಾಂಗ್ರೆಸ್ ನಾಯಕರು ಪ್ರತಿಭಟನೆ, ಸಮಾವೇಶಗಳಿಗೆ ಸೀಮಿತರಾಗದೆ ಜೊತೆ ಜೊತೆಯಲ್ಲಿ ಪಕ್ಷದ ಸಂಘಟನೆಗೂ ಮುಂದಾಗ ಬೇಕಾಗಿದೆ. ಈಗಾಗಲೇ ತಮ್ಮನ್ನು ಬಿಟ್ಟು ಹೋಗಿರುವ ಕಾರ್ಯಕರ್ತರನ್ನು ಮರಳಿ ಪಕ್ಷಕ್ಕೆ ತರುವ ಕೆಲಸವನ್ನು ಮಾಡಬೇಕಾಗಿದೆ. ತಳಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡದೆ ಯಾವುದೇ ಸಮಾವೇಶ, ಪ್ರತಿಭಟನೆ ಮಾಡಿದರೂ ಅದರಿಂದ ಯಾವುದೇ ಪ್ರಯೋಜನವಾಗಲಾರದು ಎಂಬುದು ಚುನಾವಣೆಗಳ ಸೋಲಿನಿಂದ ಸಾಬೀತಾಗಿದೆ.

ಕಾಂಗ್ರೆಸ್ 2024ರ ಲೋಕಸಭಾ ಚುನಾವಣೆ ನಂತರ ರಾಜಕೀಯವಾಗಿ ತೆಗೆದುಕೊಳ್ಳುತ್ತಿರುವ ನಿಲುವುಗಳು ಅವರಿಗೆ ವಿಧಾನಸಭಾ ಚುನಾವಣೆಗೆ ಯಾವುದೇ ರೀತಿಯಲ್ಲಿ ಉಪಯೋಗವಾಗ ಆದಂತೆ ಕಾಣುತ್ತಿಲ್ಲ. ಅವರ ಇಲ್ಲಿವರೆಗಿನ ಹೋರಾಟಗಳು ಚುನಾವಣೆಯಲ್ಲಿ ಗೆಲುವು ಇರಲಿ ಮತಬ್ಯಾಂಕ್ ನ್ನು ಹೆಚ್ಚಿಸಿದಂತೆಯೂ ಗೋಚರಿಸುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಅವರು ತಮ್ಮ ಹೋರಾಟಗಳ ಜತೆಗೆ ಪಕ್ಷದ ಸಂಘಟನೆಗೆ ಒತ್ತು ನೀಡದೆ ಹೋದರೆ  ಉಳಿಗಾಲವಿಲ್ಲದಾಗಿದೆ.

ಪ್ರತಿಭಟನೆ, ಸಮಾವೇಶಕ್ಕೆ ಜನರನ್ನು ಸೇರಿಸಿ ವೀರಾವೇಶದ ಭಾಷಣಗಳನ್ನು ಮಾಡಿದ ತಕ್ಷಣ ಮತಗಳು ಹುಟ್ಟಿಕೊಳ್ಳುವುದಿಲ್ಲ. ಈಗಾಗಲೇ ತಮ್ಮನ್ನು ಬಿಟ್ಟು ಹೋಗಿರುವ ಮತಗಳನ್ನು ಮತ್ತೆ ತಮ್ಮ ಕಡೆಗೆ ಬರುವಂತೆ ಮಾಡುವುದು ಅನಿವಾರ್ಯವಾಗಿದೆ. ಅದಕ್ಕೇನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸದೆ ಈಗಿರುವ ತಮ್ಮ ಮತಬ್ಯಾಂಕ್ ಸುತ್ತಲೇ ಗಿರಕಿ ಹೊಡೆಯುತ್ತಿರುವುದೇ ಕಾಂಗ್ರೆಸ್ ನ ಇವತ್ತಿನ ಹೀನಾಯ ಸ್ಥಿತಿಗೆ ಕಾರಣವಾಗಿದೆ.

ಕಳೆದ ಲೋಕಸಭಾ ಚುನಾವಣೆಯಿಂದ ಇಲ್ಲಿವರೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ (ವೋಟ್ ಚೋರಿ)ದ ಆರೋಪಗಳನ್ನು ಮಾಡುತ್ತಾ ಬರಲಾಗುತ್ತಿದೆ. ಈ ವಿಚಾರವನ್ನಿಟ್ಟುಕೊಂಡೇ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರ, ಸಮಾವೇಶ, ಪ್ರತಿಭಟನೆ, ಪಾದಯಾತ್ರೆ ಹೀಗೆ ಎಲ್ಲವನ್ನು ಮಾಡಿದ್ದಾರೆ. ಆದರೆ ಅದು ಎಲ್ಲಿಯೂ ಅವರಿಗೆ ಮತ ತಂದುಕೊಟ್ಟಿಲ್ಲ. ಯಾವುದೇ ಹೋರಾಟಗಳಿರಲಿ ಅದನ್ನು ಸಂವಿಧಾನಾತ್ಮಕವಾಗಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ.

ಇವತ್ತು ಕಾಂಗ್ರೆಸ್ ಅದರಲ್ಲೂ ರಾಹುಲ್ ಗಾಂಧಿ ಅವರು ಮುಖ್ಯವಾಗಿ ವೋಟ್ ಚೋರಿ ವಿಚಾರವನ್ನಿಟ್ಟುಕೊಂಡು ಮೋದಿಯನ್ನು ವಿರೋಧಿಸುತ್ತಿದ್ದಾರೆ. ಅದು ರಾಜಕೀಯವಾಗಿ ಸರಿಯೇ ಇದೆ. ಆದರೆ ಕೇವಲ ಆರೋಪಗಳನ್ನು ಮಾಡಿಕೊಂಡು ಬೀದಿ ಹೋರಾಟ ಮಾಡುವುದರ ಜೊತೆಗೆ ಕಾನೂನಿನ ನೆಲೆಯಲ್ಲಿಯೂ ಹೋರಾಟ ಮಾಡಬಹುದಲ್ಲವೆ? ಇದರ ಜತೆಗೆ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತಂತೆ ಇದುವರೆಗೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರುವುದು ಕಾಂಗ್ರೆಸ್ ಗೆ ತಳಮಟ್ಟದಲ್ಲಿಯೇ ಹೊಡೆತ ನೀಡುತ್ತಿದೆ.

ಬೆಳಗೆದ್ದರೆ ಮೋದಿಯನ್ನು ಟಾರ್ಗೆಟ್ ಮಾಡುವುದರ ಜತೆಗೆ ಕಾಂಗ್ರೆಸ್ ನಾಯಕರನ್ನು ಪಕ್ಷ ಸಂಘಟನೆಗೆ ಹಚ್ಚುವ ಕೆಲಸವನ್ನು ರಾಹುಲ್ ಗಾಂಧಿ ಮಾಡಬೇಕಾಗಿದೆ. ಆದರೆ ಅದ್ಯಾವುದೂ ನಡೆಯದ ಕಾರಣಗಳಿಂದಾಗಿ ತಳಮಟ್ಟದಲ್ಲಿ ಕಾರ್ಯಕರ್ತರು ಸೊರಗಿದ್ದಾರೆ. ಇರುವ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸಗಳು ನಡೆಯುತ್ತಿರುವಂತೆ ಕಾಣುತ್ತಿಲ್ಲ. ಎಲ್ಲರೂ ನಾಯಕರಾಗುತ್ತಿದ್ದಾರೆ. ತಳಮಟ್ಟದಲ್ಲಿ ಕೆಲಸ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಸಮಸ್ಯೆಗಳಾಗುತ್ತಿವೆ. ಇರುವ ಕಾರ್ಯಕರ್ತರು ಜಾತಿ, ಧರ್ಮ ಸಮುದಾಯ ಮತ್ತು ತಮ್ಮದೇ ನಾಯಕರ ಬಣಗಳಲ್ಲಿ ಹಂಚಿ ಹೋಗಿದ್ದಾರೆ. ಅವರನ್ನು ಈಚೆಗೆ ತಂದು ಪಕ್ಷದ ವೇದಿಕೆಯಲ್ಲಿ ಒಗ್ಗಟ್ಟಾಗಿಸಿ ನಿಲ್ಲಿಸುವ ಕೆಲಸವನ್ನು ಮಾಡಬೇಕಾಗಿದೆ.

ಕೇವಲ ಮೋದಿಯನ್ನು ಟಾರ್ಗೆಟ್ ಮಾಡಿಕೊಂಡು ಹೋರಾಟ ಮಾಡುವುದು, ಅವರ ವಿರುದ್ಧ ಕೆಟ್ಟದಾಗಿ ಹೇಳಿಕೆಗಳನ್ನು ನೀಡುವುದು, ಎಐ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದು, ಇದ್ಯಾವುದೂ ಕಾಂಗ್ರೆಸ್ ಗೆ ಮತ ತಂದುಕೊಡುವುದಿಲ್ಲ ಎಂಬುದು ಈಗಾಗಲೇ ನಡೆದಿರುವ ಚುನಾವಣೆಗಳು ತೋರಿಸಿವೆ. ಆದ್ದರಿಂದ ಇನ್ನಾದರೂ ಕಾಂಗ್ರೆಸ್ ನಾಯಕರು ಪಕ್ಷದ ಸಂಘಟನೆಯತ್ತ ಚಿತ್ತ ಹರಿಸದೆ ಹೋದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬುದನ್ನು ಅರಿಯಬೇಕಾಗಿದೆ.

 

 

B M Lavakumar

admin
the authoradmin

Leave a Reply