ಬಸವಮಾರ್ಗದಲ್ಲಿ “ವಚನಗಳಲ್ಲಿ ವ್ಯಸನಮುಕ್ತ ಜೀವನ’…. ಇದು ವ್ಯಸನಮುಕ್ತ ಜೀವನ ಕುರಿತ ಉಪನ್ಯಾಸ!

ಮೈಸೂರು : ಶರಣ ಸಾಹಿತ್ಯ ತಾಲೂಕು ಪರಿಷತ್ತು ಮತ್ತು ಬಸವಮಾರ್ಗ ಫೌಂಡೇಷನ್(ರಿ) ವತಿಯಿಂದ ನಗರದ ಶ್ರೀರಾಮಪುರದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ “ವಚನಗಳಲ್ಲಿ ವ್ಯಸನಮುಕ್ತ ಜೀವನ’ ಕುರಿತು ಎರಡನೇ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
‘ವಚನಗಳಲ್ಲಿ ವ್ಯಸನಮುಕ್ತ ಜೀವನ’ ವಿಷಯ ಕುರಿತು, ಹಿರಿಯ ವಿದ್ವಾಂಸ ಪ್ರೊ.ಕೆ.ಅನಂತರಾಮು ಮಾತನಾಡಿ, ಯಾರು ತಮಗಾಗಿ ಬದುಕುತ್ತಾರೋ ಅವರು ಸತ್ತಂತೆ, ಯಾರು ಇತರರಿಗಾಗಿ ಬದುಕುತ್ತಾರೋ ಅವರು ಮಾತ್ರ ಬದುಕುತ್ತಾರೆ. ಮಾನವ ಜನ್ಮದ ದೊಡ್ಡದು, ಪವಿತ್ರವಾದದ್ದು. ಇದನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಅದಕ್ಕಾಗಿ ವ್ಯಸನಮುಕ್ತ ಜೀವನ ಮಾಡಬೇಕು ಎಂದು ಸಲಹೆ ನೀಡಿದರು.

ಸಹಜ, ಸುಂದರ ಜೀವನಕ್ಕೆ ಬಸವಣ್ಣ ಅವರು ಮಹತ್ವದ ಸಂದೇಶ ಕೊಟ್ಟಿದ್ದಾರೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇತರರ ಅಳೆಯಬೇಡ, ತನ್ನ ಬಣ್ಣಿಸಬೇಡ, ಇದೇ ಅಂತರಂಗ ಶುದ್ಧಿ ,ಇದೆ ಬಹಿರಂಗ ಶುದ್ಧಿ. ಬಸವಾದಿ ಶರಣರ ಈ ಏಳು ತತ್ವ ಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವ್ಯಸನದಿಂದ ಮನುಷ್ಯ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ವ್ಯಸನ ಜೀವನವನ್ನೇ ನಾಶ ಮಾಡುತ್ತದೆ. ದ್ರವ್ಯನಾಶ, ಬುದ್ದಿನಾಶ, ಶಕ್ತಿನಾಶ, ಆರೋಗ್ಯ ನಾಶ, ಬಂಧುತ್ವ ನಾಶಮಾಡುತ್ತದೆ. ಎಲ್ಲದಕ್ಕೂ ಮನಸ್ಸೆ ಕಾರಣ. ಹಾಗಾಗಿ ಬಸವಣ್ಣ ಅವರು ಮನಸ್ಸನ್ನು ಸರಿಯಾದ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಂದು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ವ್ಯಸನಕ್ಕೆ ದಾಸರನ್ನಾಗಿಸುವುದು ಸರ್ಕಾರ ಹಾಗೂ ಇತರರ ಕೆಲಸವಾದರೆ, ನಾವು ವ್ಯಸನಮುಕ್ತ ಜೀವನ ಮಾಡುವುದೇ ನಮ್ಮ ಮೊದಲ ಕೆಲಸವಾಗಬೇಕು. ಚಟಕ್ಕೆ ತಳ್ಳುವುವರು ಸಾವಿರಾರು ಜನರು ಇದ್ದಾರೆ. ಹಾಗಾಗಿ ಯಾರೇ ಏನೇ ಹೇಳಿದರೂ, ನಾವು ನಮ್ಮ ಮನಸ್ಸನ್ನು ಘಾಸಿಗೊಳಿಸಿಕೊಳ್ಳಬಾರದು. ಸಮರ್ಪಕವಾಗಿ ನಮ್ಮ ಮನಸ್ಸನ್ನು ಇಟ್ಡುಕೊಂಡು ವ್ಯಸನಮುಕ್ತ ಜೀವನ ಮಾಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಎಂ.ಆರ್.ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಾದಿ ಶರಣರು ವ್ಯಸನಮುಕ್ತ ಜೀವನಕ್ಕೆ ದೊಡ್ಡ ಸಂದೇಶ ಸಾರಿದರು. ಅವರ ಆಶಯಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವ್ಯಸನಗಳು ಸಮಾಜದ ದಿಕ್ಕನ್ನು ತಪ್ಪಿಸುತ್ತಿದೆ. ಯುವ ಸಮುದಾಯ ದಾರಿತಪ್ಪುತ್ತಿದೆ. ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಅವರನ್ನು ದಾರಿ ತಪ್ಪಿಸಲು ಹಲವು ಮಾರ್ಗಗಳು ಇಂದು ವೈವಿದ್ಯಮಯವಾಗಿ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮ ಸಮಾಜ ನಿರ್ಮಾಣ ಶರಣರ ಕನಸಾಗಿತ್ತು. ತಾರತಮ್ಯ ಇರಬಾರದು ಎಂದು ತಮ್ಮ ವಚನಗಳ ಮೂಲಕ ಬಹುದೊಡ್ಡ ಸಂದೇಶ ಸಾರಿದರು. ಅದರಲ್ಲಿ ಬಸವಣ್ಣ ಅವರ ಪಾತ್ರ ಇತಿಹಾಸ ಪುಟಗಳಲ್ಲಿ ಅಚ್ಚಳಿಯದ ರೀತಿಯಲ್ಲಿ ಹಡಗಿದೆ. ವಚನಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಬದುಕನ್ನು ಕಟ್ಡಿಕೊಳ್ಳಬೇಕು. ಕ್ಷಣಿಕ ಸುಖಕ್ಕೆ ಬಲಿಯಾಗಬಾರದು. ಜೀವನದಲ್ಲಿ ಪರಿವರ್ತನೆ ತಂದುಕೊಳ್ಳುವ ಮೂಲಕ ವ್ಯಸನಮುಕ್ತ ಜೀವನ ಮಾಡಬೇಕು ಎಂದು ಸಲಹೆ ನೀಡಿದರು.
ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಅಣ್ಣ ಬಸವಣ್ಣ ಹೇಳಿದ ಮಾತು ಪ್ರಸ್ತುತ. ವ್ಯಸನಕ್ಕೆ ದಾಸರಾದ ನಿಮ್ಮಿಂದ ಹಲವಾರು ಉಪಯುಕ್ತ ಕೆಲಸ ಸಮಾಜ, ಕುಟುಂಬಕ್ಕೆ ಆಗಬೇಕು. ಈ ದಿಕ್ಕಿನಲ್ಲಿ ಚಿಂತನೆ ಮಾಡಿ, ನಡೆಯಬೇಕು. ವ್ಯಸನ ದೂರವಾಗಬೇಕು ಎಂದು ಸಲಹೆ ನೀಡಿದರು.

ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶರಣ ದೇವರಾಜು ಪಿ.ಚಿಕ್ಕಹಳ್ಳಿ(ದೇಚಿ) ಮಾತನಾಡಿ, ತಾಲೂಕು ಶರಣ ಸಾಹಿತ್ ಪರಿಷತ್ತಿನ ಸೇವೆ ಎಲ್ಲ ವರ್ಗದ ಜನರಿಗೂ ಸಿಗಬೇಕು ಎಂದು ಮನಗಂಡು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದೆ. ವಚನ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ನಿಜವಾದ ಮಾರ್ಗ ಅಡಗಿದೆ. ಶಾಲಾ, ಕಾಲೇಜು, ವಸತಿ ನಿಲಯಗಳು ಹೀಗೆ ಹತ್ತು ಹಲವು ಸಂಘ, ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಬಸವಮಾರ್ಗ ಫೌಂಡೇಷನ್(ರಿ) ಸಂಸ್ಥಾಪಕ ಅಧ್ಯಕ್ಷ ಎಸ್. ಬಸವರಾಜು ಮಾತನಾಡಿ, ಸತತ 17 ವರ್ಷಗಳ ಕಾಲ ನಾನು ಕುಡಿತದ ವ್ಯಸನಕ್ಕೆ ದಾಸನಾಗಿದೆ. ಅದರಿಂದ ಹೊರ ಬಂದ ನಂತರ ವ್ಯಸನಕ್ಕೆ ದಾಸರಾದವರನ್ನು ವ್ಯಸನದಿಂಸ ಹೊರತರಬೇಕು ಎಂದು ಮನಗಂಡು ಬಸವಮಾರ್ಗ ಸಂಸ್ಥೆ ಪ್ರಾರಂಭಮಾಡಲಾಯಿತು. 6 ವರ್ಷಗಳಲ್ಲಿ 55 ಕುಡಿತ ಬಿಡಿಸುವ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಇದುವರೆಗೆ 15 ಸಾವಿರ ವ್ಯಸನಿಗಳಿಗೆ ಸೇವೆ ನೀಡಿದೆ ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ.ಹೆಳವರಹುಂಡ ಸಿದ್ದಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಶಾಖಾ ವ್ಯವಸ್ಥಾಪಕರಾದ ವಸಂತ್ ಕುಮಾರ್, ಸಂಜಯ್, ರಾಘವೇಂದ್ರ ಇತರರು ಇದ್ದರು.







