ಹುಣಸೂರು: ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ. ನಗರದ ನಿಜಾಂ ಮೊಹಲ್ಲಾದ ನಿವಾಸಿ ದಾದಾಪೀರ್ ಪುತ್ರ ಖಾಜಾಪೀರ್(44) ಕೊಲೆಯಾದವನು.
ಕೊಲೆಯಾದವನಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಮೃತ ಖಾಜಾಪೀರ್ ನ ಸ್ನೇಹಿತ ನಗರದ ಮುಸ್ಲಿಂಬ್ಲಾಕ್‌ನ ಜಾವಿದ್ ಹಾಗೂ ಇನಾಯತುಲ್ಲಾ ಕೊಲೆ ಮಾಡಿದ ಆರೋಪಿಗಳಾಗಿದ್ದು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕ ಹಾಗೂ ಲೋಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೃತ ಖಾಜಾಪೀರ್ ಮತ್ತು ಆರೋಪಿಗಳಾದ ಜಾವಿದ್ ಹಾಗೂ ಇನಾಯತುಲ್ಲಾರವರು ಸ್ನೇಹಿತರಾಗಿದ್ದು, ಕುಡಿತದ ದಾಸರಾಗಿದ್ದರು. ಕೊಲೆ ಆರೋಪಿ ಜಾವಿದ್ ನಗರದ ವ್ಯಕ್ತಿಯೊಬ್ಬರಿಂದ 15ಸಾವಿರ ರೂ ಸಾಲ ಪಡೆದಿದ್ದ, ಸಾಲ ಮರುಪಾವತಿಗೆ ಒತ್ತಾಯಿಸುತ್ತಿದ್ದರೂ ಹಿಂತಿರುಗಿಸಲು ವಿಫಲನಾಗಿದ್ದರಿಂದ ಸಾಲ ನೀಡಿದ ವ್ಯಕ್ತಿ ಜಾವಿದ್‌ನ ಬೈಕನ್ನು ವಶಕ್ಕೆ ಪಡೆದು ಸಾಲ ತೀರಿಸಿ ವಾಪಸ್ ಪಡೆಯುವಂತೆ ಸೂಚಿಸಿದ್ದರು.

ಬೈಕ್ ಕಿತ್ತುಕೊಳ್ಳಲು ಕೊಲೆಯಾದ ಖಾಜಾಪೀರ್ ಕಾರಣವಾಗಿದ್ದಾನೆಂದು ಗುರುವಾರ ಮಧ್ಯ ರಾತ್ರಿ ಮಂಟಿ ಸರ್ಕಲ್ ಬಳಿಯಲ್ಲಿ ಮೂವರ ನಡುವೆ ಜಗಳವಾಗಿದೆ. ಕುಡಿದ ಮತ್ತಿನಲ್ಲಿ ಮರದ ರಿಪೀಸ್ ಪಟ್ಟಿಯಲ್ಲಿ ಬಡಿದಾಡಿಕೊಂಡಿದ್ದು, ತೀವ್ರ ಪೆಟ್ಟು ಬಿದ್ದಿದ್ದ ಖಾಜಾಪೀರ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿದು ಕೃತ್ಯ ನಡೆದ ಸ್ಥಳಕ್ಕೆ ಎಸ್.ಪಿ.ವಿಷ್ಣುವರ್ಧನ್, ಡಿವೈಎಸ್‌ಪಿ. ರಾಜು, ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್ ಭೇಟಿ ನೀಡಿ ಪರಿಶೀಲಿಸಿದರು. ಅರೋಪಿಗಳನ್ನು ನಗರದ ಎಪಿಎಂಸಿ ಮಾರುಕಟ್ಟೆ ಬಳಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೆ ಇದೇ ಮಾದರಿ ಕೊಲೆ ಎಚ್.ಡಿ.ಕೋಟೆಯಲ್ಲಿ ನಡೆದಿರುವುದನ್ನು ಸ್ಮರಿಸಬಹುದು.








