ಮೈಸೂರಿನ ಸಂಪತ್ ಕುಮಾರ್ ಕನ್ನಡಿಗರ ವಿಷ್ಣುವರ್ಧನ್ ಆಗಿದ್ದೇಗೆ…? ಸಿನಿ ಬದುಕಿನ ಜರ್ನಿ ಇಲ್ಲಿದೆ…!

ವಿಷ್ಣುವರ್ಧನ್ ಯಾವತ್ತೊ ಒಂದಿನ ನೆನೆಯುವ ವ್ಯಕ್ತಿಯಲ್ಲ. ಪ್ರತಿದಿನ ಪ್ರತಿಕ್ಷಣ ಕನ್ನಡಿಗರ ಮನದಲ್ಲಿ ನಂದಾದೀಪವಾಗಿ ಬೆಳಗುವ ತಾರೆ. ಇವರನ್ನು ಸದಾ ನೆನಪಾಗಿಟ್ಟುಕೊಳ್ಳಲೆಂದೇ ಅವರ ನೂರಾರು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಆ ನೆನಪುಗಳನ್ನು ಹೆಕ್ಕಿತಂದು ಇಲ್ಲಿ ಹರಡುವ ಕೆಲಸ ಮಾಡಿದ್ದಾರೆ ಹಿರಿಯ ಬರಹಗಾರ ಕುಮಾರಕವಿ ನಟರಾಜ್.
ಮೈಸೂರು ನಗರದ ಸೌತ್ ನಲ್ಲಿದ್ದ ಸಂಪ್ರದಾಯಸ್ಥ ಕುಟುಂಬದ ಸಂಪತ್ ಕುಮಾರ್. ಪೋಷಕರ ಆಸೆಯಂತೆ ಪದವೀಧರನಾಗುವ ಬದಲು ದೈವೇಚ್ಚೆಯಂತೆ ಕಲಾಧರನಾಗಿ ವಂಶವೃಕ್ಷ ಚಿತ್ರದ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟರು. ಅಷ್ಟೊತ್ತಿಗಾಗಲೇ ಶ್ರೀನಾಥ್ ಲೋಕೇಶ್ ಗಂಗಾಧರ್ ಚಂದ್ರಶೇಖರ್ ರಾಮಕೃಷ್ಣ ಅನಂತನಾಗ್ ಶಂಕರನಾಗ್ ಮುಂತಾದ ನಟರು ಅವರವರ ಇನ್ನಿಂಗ್ಸ್ ಪ್ರಾರಂಭಿಸಿದ್ದರು. ಮೇರುಪರ್ವತಗಳಾದ ರಾಜ್, ಉದಯ್, ಕಲ್ಯಾಣ್, ಕುಮಾರತ್ರಯರು, ರಾಜಾಶಂಕರ್, ರಾಜೇಶ್ ಮುಂತಾದವರನ್ನು ಎದುರಿಸಬೇಕಾದ ಟಫ್ ದಿನಗಳವು. ಇವರೆಲ್ಲರಿಗೂ ಪೈಪೋಟಿ ನೀಡಿ ಮುನ್ನುಗ್ಗುವುದು ಸುಲಭದ ಮಾತಾಗಿರಲಿಲ್ಲ.

ಚಂದನವನವು ಸಮರ್ಥ ಹೀರೋಗಳ ಸಮೃದ್ಧಿಯಿಂದಾಗಿ ತೀವ್ರ ಸ್ಫರ್ಧೆಯಿಂದ ಕೂಡಿತ್ತು. ಇಂಥ ಸುನಾಮಿಯಲ್ಲಿ ಈಜಿ ದಡ ಸೇರಿ ಉತ್ತಮ ಕಲಾವಿದನಾಗಿ ಬೇರೂರಿದ್ದು ಸಾಮಾನ್ಯದ ಸಾಮರ್ಥ್ಯವಲ್ಲ! ಗಾಡ್ ಫಾದರ್ ಪುಟ್ಟಣ್ಣಕಣಗಾಲ್, ಸಿದ್ಧಲಿಂಗಯ್ಯ, ಎಸ್.ವಿ.ರಾಜೇಂದ್ರಸಿಂಗ್‌ಬಾಬು, ರವಿ, ಡಿ.ರಾಜೇಂದ್ರಬಾಬು, ದ್ವಾರಕೀಶ್, ಭಾರ್ಗವ, ಜೋಸೈಮನ್, ಸಾಯಿಪ್ರಕಾಶ್ ಪಿ.ವಾಸು ವಿಜಯಾನಂದ್ ಮುಂತಾದ ಅತಿರಥ ಮಹಾರಥರ ಗರಡಿಯಲ್ಲಿ ಪಳಗಿ ಚಂದನವನ ಮೈಲಿಗಲ್ಲಾದರು. ದಕ್ಷಿಣ ಭಾರತ ಚಿತ್ರರಂಗದ ನಾಯಕನಟರಲ್ಲಿ ಅಗ್ರಸ್ಥಾನ ಪಡೆದು ಇತಿಹಾಸ ಸೃಷ್ಟಿಸಿದರು!
ಸಂಪತ್ ಕುಮಾರ ‘ವಿಷ್ಣುವರ್ಧನ’ ನಾಗಿದ್ದು…. ಸ್ಯಾಂಡಲ್‌ವುಡ್ ನ ಪ್ರಥಮ ಎಡಗೈ,ಎಡಚ,ಲೊಡ್ಡೆ ಹ್ಯಾಂಡ್ಸಮ್ ಸಂಪತ್ ಕುಮಾರ, ಪುಟ್ಟಣ್ಣ ಕಣಗಾಲರಿಂದ ‘ವಿಷ್ಣುವರ್ಧನ’ನಾಗಿ ನಾಮಕರಣಗೊಂಡು ನಟಿಸಿದ ಮೊದಲ ಈಸ್ಟ್ಮನ್ ಕಲರ್ ಸ್ಲೋ ಮೋಶನ್ ಫಿಲಂ ನಾಗರಹಾವು! ಡಾ.ರಾಜ್ ನಂತರದ ಮೊದಲ ಸ್ಥಾನವನ್ನು 30 ವರ್ಷಕಾಲ ಉಳಿಸಿಕೊಂಡಿದ್ದ ಮೈಸೂರು ರತ್ನ ಸಾಹಸಸಿಂಹ ಡಾಕ್ಟರೇಟ್ ಬಿರುದಾಂಕಿತ ಜನಪ್ರಿಯ ನಟ.

ದಾಖಲೆಗಳ ಸರ್ದಾರ… ಅತಿಹೆಚ್ಚು ರೀಮೇಕ್ ಚಿತ್ರಗಳಲ್ಲಿ ಮತ್ತು ಕನ್ನಡೇತರ (ಹಿಂದಿ, ಮರಾಠಿ, ತೆಲುಗು, ತಮಿಳು, ಮಲೆಯಾಳಂ, ತುಳು, ಕೊಂಕಣಿ) ಚಿತ್ರಗಳಲ್ಲಿ ನಟಿಸಿದ ಕನ್ನಡದ ಪ್ರಪ್ರಥಮ ನಾಯಕನಟ! ಒಟ್ಟು 8 ಭಾಷೆಗಳ 223 ಚಿತ್ರಗಳಲ್ಲಿ ನಟಿಸಿದ ಅಭಿನಯ ಭಾರ್ಗವ. ಮೈಸೂರಿನ ಲಕ್ಷ್ಮೀಟಾಕೀಸಲ್ಲಿ ವಿಷ್ಣುವಿನ ಚೊಚ್ಚಲ ತಮಿಳ್ ಫಿಲಂ ‘ಅಲೈಗಳ್’ ಸೇರಿದಂತೆ ಅತಿಹೆಚ್ಚು ಚಿತ್ರಗಳು ಪ್ರದರ್ಶನ ಕಂಡಿವೆ! ಅತಿಹೆಚ್ಚು ಚಿತ್ರಗಳಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡ ಪ್ರಥಮ ನಾಯಕನಟ. ಅತಿಹೆಚ್ಚು (59) ಹೀರೋಯಿನ್ ಜತೆ ಅಭಿನಯಿಸಿದ ಪ್ರಥಮ ಹೀರೋ. ಜಿಮ್ಮಿಗಲ್ಲು (ತುತ್ತು ಅನ್ನ ತಿನ್ನೋಕೆ….) ಮೂಲಕ ಹಿನ್ನೆಲೆಗಾಯಕ. 8 ಖಳನಟರು ಒಟ್ಟಿಗೆ ಅಭಿನಯಿಸಿದ್ದ ಚೊಚ್ಚಲ ಕನ್ನಡಚಿತ್ರ ಸಾಹಸಸಿಂಹ! ವಿಷ್ಣುವರ್ಧನ್- ಸಂಗೀತ ಬಿಜ್ಲಾನಿ ಜೋಡಿಯ ‘ಪೊಲೀಸ್ ಮತ್ತು ದಾದಾ’ ಹಾಗೂ ‘ಇನ್ಸ್ ಪೆಕ್ಟರ್ ಧನುಷ್’ ಕನ್ನಡ+ಹಿಂದಿ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡ ಕನ್ನಡ ನಟನ ಪ್ರಥಮ ಚಿತ್ರ! ಖ್ಯಾತ ನಟ, ಗಾಯಕ ರಾಜ್ ಕುಮಾರ್ ಮತ್ತೊಬ್ಬ ಖ್ಯಾತ ನಟ, ಗಾಯಕ ವಿಷ್ಣುವಿಗೆ ಹಿನ್ನೆಲೆಗಾಯಕನಾಗಿ ಧಣಿ ಚಿತ್ರದಲ್ಲಿ ‘ನೀಕಂಡ ಆಲೋಕ’ ಹಾಡಿದ್ದು ಪ್ರಪಂಚದ ಸಿನಿಮಾ ಚರಿತ್ರೆಯಲ್ಲೇ ನೂತನ ದಾಖಲೆ.!

ಭಾರತಿ ನಟಿಸಿದ 100ನೇಚಿತ್ರ ‘ಭಾಗ್ಯಜ್ಯೋತಿ’ ವಿಶೇಷ.. ಈ ಫಿಲಂನ ಚಿತ್ರೀಕರಣ ವೇಳೆ ನಟಿ ಭಾರತಿಯೊಡನೆ ವಿಷ್ಣುವಿನ ವಿವಾಹ ಜರುಗಿತು! ಈ ಚಿತ್ರದ ‘ದಿವ್ಯಗಗನ ನಿವಾಸಿನಿ’ ಸಂಸ್ಕೃತ ಯುಗಳಗೀತೆಗೆ ಅಭಿನಯಿಸಿದ ಪ್ರಪ್ರಥಮ ತಾರಾದಂಪತಿ! ಭೂತಯ್ಯನಮಗ ಅಯ್ಯು ಚಿತ್ರೀಕರಣ ಸಂದರ್ಭದಲ್ಲಿ ತಮ್ಮ ತಂದೆಯ ನಿಧನವಾರ್ತೆ ಕೇಳಿಯೂ ಶೂಟಿಂಗ್ ಮುಂದುವರೆಸಿ ದಾಗ ಚಿತ್ರತಂಡದ ಒತ್ತಾಯಕ್ಕೆ ಮಣಿದು ಅಂತ್ಯಕ್ರಿಯೆಗೆ ತೆರಳಿದ ಮಹಾನ್‌ಕಲಾವಿದ! ಚಿತ್ರೀಕರಣ ವೇಳೆ ಬಿಡುವು ಸಿಕ್ಕಾಗ ಪುಸ್ತಕ ಓದುವ ಹವ್ಯಾಸವಿದ್ದ ಅಪರೂಪದ ನಟ. ಬರೋಬ್ಬರಿ 200 ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಪ್ರಪ್ರಥಮ ಹೀರೋ!
ಈ ಚಿತ್ರಗಳಲ್ಲಿ ಅಡಗಿರುವ ವಿಷ್ಣುವರ್ಧನ್ ನಟಿಸಿರುವ ನಾಲ್ಕು ಸಿನಿಮಾದ ಹೆಸರುಗಳನ್ನು ಊಹಿಸಿ…
ಮುತ್ತಿನಹಾರ.. ಹಿಮಾಲಯದ ತಪ್ಪಲಲ್ಲಿ ಮೈನಸ್ 5-10ಡಿಗ್ರಿ ಸೆಲ್ಶಿಯಸ್ ಇದ್ದಾಗ ಚಿತ್ರೀಕರಿಸಿದ ಚೊಚ್ಚಲ ಕನ್ನಡ ಚಿತ್ರ. ಆ ಸಂದರ್ಭದಲ್ಲಿ ಗಾಯಗೊಂಡು ಅನಾರೋಗ್ಯದ ನೋವು ಅನುಭವಿಸಿದರೂ ನೈಜತೆಗೆ ಒತ್ತು ನೀಡುವ ಉದ್ದೇಶದಿಂದ ತಮ್ಮ ತಲೆಗೂದಲು ಬೋಳಿಸಿಕೊಂಡು ವಿಗ್ ಧರಿಸದೆ ನಟಿಸಿ ಇಡೀ ಚಿತ್ರರಂಗವೆ ಅಚ್ಚರಿ ಪಡುವಂತೆ ಮಾಡಿದ ಧೀರ! ತಮ್ಮ 50ನೇ ಹುಟ್ಟುಹಬ್ಬದ ನಂತರ ಸ್ವಯಂ ಇಷ್ಟಪಟ್ಟು ವೈರಾಗ್ಯದೆಡೆ ಜಾರಿಕೊಂಡ ಶ್ರೇಷ್ಠನಟ! ಆಪ್ತಮಿತ್ರ, ಆಪ್ತರಕ್ಷಕ ಚಿತ್ರಗಳು ಇವರ ಮನಸ್ಸಿನ ಮೇಲೆ ಅಗಾಧವಾಗಿ ಗಂಭೀರ ಪರಿಣಾಮವನ್ನುಂಟು ಮಾಡಿತ್ತು? ಬಾಲ್ಯದಿಂದಲೂ ಹಸನ್ಮುಖಿಯಾಗಿದ್ದು ಕೀಟಲೆಯ ಹಾಸ್ಯಪ್ರವೃತ್ತಿ ಉಳ್ಳವರಾಗಿದ್ದ ವಿಷ್ಣುದಾದಾ ಇದ್ದಕ್ಕಿದ್ದಂತೆ ನಿರ್ಲಿಪ್ತತೆಯೆಡೆ ಒಲವು ತೋರಿಸಿ ಆಧ್ಯಾತ್ಮಿಕ ಅಪ್ಪಿಕೊಂಡ ಅಪರೂಪದ ಅಸಾಮಾನ್ಯ ಕಲಾವಿದ!

ವಿಷ್ಣುವರ್ಧನ್ ಖುದ್ದುಹೇಳಿದ್ದು… ಅಂತಿಮ ಆಸೆ ಮೈಸೂರಿನಲ್ಲಿ ನೆಲೆಸುವುದು, ಮೆಚ್ಚಿನ ವೃತ್ತಿ ಉಪಾಧ್ಯಾಯ ವೃತ್ತಿ, ಮೆಚ್ಚಿನ ಕಾರು ಮರ್ಸಿಡಿಸ್ ಬೆಂಜ್, ಮೆಚ್ಚಿನಗೆಳೆಯ ಅಂಬರೀಶ್, ಮೆಚ್ಚಿನ ನಿರ್ಮಾಪಕ ದ್ವಾರಕೀಶ್, ಮೆಚ್ಚಿನ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ಮೆಚ್ಚಿನ ನಟಿ ಕಲ್ಪನಾ, ಮೆಚ್ಚಿನ ಕ್ರೀಡೆ ಕ್ರಿಕೆಟ್ (ತತ್ಪರಿಣಾಮವೇ ವಿಷ್ಣುಕಪ್ ಕ್ರಿಕೆಟ್ ಪಂದ್ಯಾವಳಿ ಪ್ರಾರಂಭ)
ವಿಷ್ಣುವರ್ಧನ್ ಅಚ್ಚುಮೆಚ್ಚಿನ ಫಿಲಂಸ್.. ಮದರ್‌ಇಂಡಿಯ(ಹಿಂದಿ) ಸತ್ಯಹರಿಶ್ಚಂದ್ರ(ಕನ್ನಡ) ಶಂಕರಾಭರಣಮು(ತೆಲುಗು) ಮರೋಚರಿತ್ರ (ತಮಿಳು) ತಾವೇ ನಟಿಸಿದ ಚಿತ್ರಗಳಲ್ಲಿ ಹೆಚ್ಚು ಇಷ್ಟಪಟ್ಟಿದ್ದು; ಬಂಧನ ಮಲಯಮಾರುತ, ಮುತ್ತಿನಹಾರ, ನಾಗರಹಾವು. ವಿಷ್ಣುವರ್ಧನ್ ಮೆಚ್ಚಿದ್ದ ನಟನಟಿಯರು.. ರಾಜ್‌ಕಪೂರ್, ದಿಲೀಪ್‌ಕುಮಾರ್, ಮೀನಾಕುಮಾರಿ, ರೇಖಾ, ಶಿವಾಜಿಗಣೇಶನ್, ರಜನಿಕಾಂತ್, ಡಾ.ರಾಜ್‌ಕುಮಾರ್, ಕಲ್ಪನ, ಜಯಂತಿ, ಬಿ.ಸರೋಜಾದೇವಿ, ಶಂಕರ್‌ನಾಗ್ ಸುದೀಪ್. ವಿಷ್ಣುವರ್ಧನ್ ತಾವು ದುಡಿದ ಹಣದಲ್ಲಿ ಸ್ವಲ್ಪ ಭಾಗ ದಾನ ಮಾಡುವುದರಿಂದ ತೃಪ್ತಿ ಇದೆ ಎಂದು ನಂಬಿದ್ದರು.

ತಮ್ಮ ದತ್ತುಪುತ್ರಿ ಮತ್ತು ಅಳಿಯನ ಸಾಂಗತ್ಯದ ವಾತ್ಸಲ್ಯದಲ್ಲಿ ನೆಮ್ಮದಿ ಕಂಡಿದ್ದರು. ಆ ಮೂಲಕ ತಮಗೆ ಸ್ವಂತ ಮಕ್ಕಳಿಲ್ಲವೆಂಬ ಚಿಂತೆ ಮರೆತಿದ್ದ ಹೃದಯ ಸಿರಿವಂತ! ಎಲ್ಲಾ ವರ್ಗದ ಎಲ್ಲಾ ವಯಸ್ಸಿನ ಸಾಮಾನ್ಯರೊಡನೆ ಬೆರೆಯುತ್ತಿದ್ದ ಜನನಾಯಕ. ರಾಜ್ಯದಾದ್ಯಂತ ವಿಷ್ಣುವರ್ಧನ್ ಚಾರಿಟಬಲ್ ಟ್ರಸ್ಟ್ ಸಹಾಯವಾಣಿ ಕೇಂದ್ರಗಳು ಮತ್ತು ಡಾ.ವಿಷ್ಣುಸೇನಾಸಮಿತಿ ಅಸ್ತಿತ್ವಕ್ಕೆ ಬಂದು ಕನ್ನಡ ಕಲೆ ಸಾಹಿತ್ಯ ನಾಟಕ ಸಂಸ್ಕೃತಿ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಮಾಡುತ್ತಿವೆ.
2009 ಡಿಸೆಂಬರ್ 30ರಂದು ವಿಷ್ಣುವರ್ಧನ್ ರವರು ತೀವ್ರ ಹೃದಯಾಘಾತದಿಂದ ಮೈಸೂರಿನ ವಿಕ್ರಂ ಆಸ್ಪತ್ರೆಯಲ್ಲಿ ದೈವಾಧೀನರಾದರು. ಇವರು ಸ್ವರ್ಗಸ್ಥರಾದ ಮೇಲೆ 2012ರಲ್ಲಿ ಇವರ ಹೆಸರಿನ ಶೀರ್ಷಿಕೆಯ “ವಿಷ್ಣುವರ್ಧನ” ಚಿತ್ರವೂ ಯಶಸ್ವಿ ಕಂಡಿತ್ತು. ಈ ಚಿತ್ರದ ನಿರ್ಮಾಪಕ ಇವರ ಮೆಚ್ಚಿನ ಕುಳ್ಳ ದ್ವಾರಕೀಶ್. 2016ರಲ್ಲಿ ಬಿಡುಗಡೆಯಾದ ಗ್ರಾಫಿಕ್ಸ್ ವಿಷ್ಣುವರ್ಧನ್ ಸೃಷ್ಟಿಸಿ ನಿರ್ಮಿಸಿದ ಚಿತ್ರ “ನಾಗರಹಾವು” ಪ್ರಪ್ರಥಮ ಪ್ರಯತ್ನ, ವಿನೂತನ ಪ್ರಯೋಗ, ಚಂದನವನ ಚರಿತ್ರೆಯಲ್ಲಿ ಹೊಸದೊಂದು ದಾಖಲೆ ನಿರ್ಮಿಸಿತು!

ಚಿತ್ರಗಳನ್ನು ಊಹಿಸಿ…. ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ನಾಲ್ಕು ಸಿನಿಮಾಗಳನ್ನು ಹೆಸರಿಸಿ….







ಧನ್ಯವಾದ ಲವ ಸರ್