ಮದ್ದೂರಿನ ಯುವಕನನ್ನು ಮಡಿಕೇರಿಗೆ ಕರೆಯಿಸಿಕೊಂಡ ಯುವತಿ ಮಾಡಿದ್ದೇನು? ಇಲ್ಲಿದೆ ರೋಚಕ ಸ್ಟೋರಿ…!

ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನಿಂದ ಹಣಪಡೆದ ಯುವತಿ ಆತ ವಾಪಸ್ ಹಣ ಕೇಳಿದ ವೇಳೆ ನೀನು ಬಾ ಎಂದು ಕರೆಯಿಸಿಕೊಂಡು ಬಳಿಕ ಆತನನ್ನು ಮನೆಯೊಂದರಲ್ಲಿ ಕೂಡಿ ಹಾಕಿ, ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಲ್ಲದೆ, ಹಣಕ್ಕಾಗಿ ಬೇಡಿಕೆಯಿಟ್ಟ ಘಟನೆ ಕೊಡಗಿನ ಮಡಿಕೇರಿಯಲ್ಲಿ ನಡೆದಿದೆ. ಆದರೆ ಯುವಕ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರಿಂದ ಪ್ರಕರಣ ಬಯಲಾಗಿದೆ.
ಫೇಸ್ ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗಿ ನಂತರ ಅದು ಬೇರೆ, ಬೇರೆ ತಿರುವು ಪಡೆದುಕೊಂಡು ಕೊನೆಗೆ ಕ್ರೈಂ ಮೂಲಕ ಅಂತ್ಯಗೊಳ್ಳುವುದು ಮಾಮೂಲಿಯಾಗಿದೆ. ಯುವಕ, ಯುವತಿ, ಮಹಿಳೆ, ಪುರುಷ ಹೀಗೆ ಎಲ್ಲರೂ ಒಂದಲ್ಲ ಒಂದು ರೀತಿಯ ವಿಷವರ್ತುಲದಲ್ಲಿ ಸಿಲುಕಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಬಹಳಷ್ಟು ಫೋರ್ ಟ್ವೆಂಟಿಗಳಿಗೆ ಇದೇ ಉದ್ಯೋಗವಾಗಿದೆ.

ಇಲ್ಲಿ ಹೇಳಲು ಹೊರಟಿರುವ ಕಥೆ ಖತರ್ ನಾಕ್ ತಾಯಿ ಮಗಳ ವಂಚನೆಯ ಸ್ಟೋರಿ… ಇದನ್ನು ನಾವು ಹನಿಟ್ರ್ಯಾಪ್ ಎಂದರೂ ತಪ್ಪಾಗಲಾರದು. ಹಾಗೆಯೇ ತೆಳ್ಳಗೆ ಬೆಳ್ಳಗೆ ಮಾಡ್ರನ್ ಆಗಿ ಕಾಣುವ ಪ್ರೊಪೈಲ್ ಫೋಟೋ ನೋಡಿ ಫ್ರೆಂಡ್ ಶಿಪ್ ಮಾಡಿಕೊಂಡು ಏನಾದರೂ ಆಟ ಆಡೋಣ ಅಂಥ ಕಾಮುಕರು ಹೊರಟಿದ್ದರೆ ಅಂಥವರಿಗೆ ಇದು ಪಾಠಕಲಿಸುವ ಕಥೆಯಾಗಿದೆ. ಫೇಸ್ ಬುಕ್ ನಲ್ಲಿ ಪೋರ್ಕಿಗಳೇ ತುಂಬಿದ್ದು, ಹೆಣ್ಣುಮಕ್ಕಳಿಗೆ ಅಶ್ಲೀಲ ಕಾಮೆಂಟ್, ಮೆಸೇಜ್ ಮಾಡುವುದು, ಅಸಹ್ಯ ಫೋಟೋ ಕಳಿಸುವುದು ಹೀಗೆ ದುರ್ವರ್ತನೆ ತೋರುವವರಿಗೇನು ಕೊರತೆಯಿಲ್ಲ.
ಇದರ ನಡುವೆಯೂ ಕೆಲವು ತಲೆ ಮಾಸಿದ ಹೆಂಗಸರು ಗಂಡಸರಿಗೆ ಗತಿ ಕಾಣಿಸುವ ಪ್ರಕರಣಗಳಿಗೇನು ಕೊರತೆಯಿಲ್ಲ. ಅದರಲ್ಲೂ ಹನಿಟ್ರ್ಯಾಪ್ ನಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದರೂ ಕೆಲವೇ ಕೆಲವು ಪ್ರಕರಣಗಳಷ್ಟೇ ಬೆಳಕಿಗೆ ಬರುತ್ತವೆ. ಉಳಿದಂತೆ ಹೆಚ್ಚಿನ ಪ್ರಕರಣಗಳು ಮಾನ ಮರ್ಯಾದೆಗೆ ಅಂಜಿ ಪೊಲೀಸ್ ಠಾಣೆವರೆಗೆ ಹೋಗದೆ ಮುಚ್ಚಿ ಹೋಗಿ ಬಿಡುತ್ತವೆ. ಸದ್ಯ ಈ ಪ್ರಕರಣವನ್ನು ಗಮನಿಸಿದರೆ ಆತ ಪೊಲೀಸ್ ಠಾಣೆಗೆ ಹೋಗದಿದ್ದರೆ ಇನ್ಯಾವ ತಿರುವು ಪಡೆಯುತ್ತಿತ್ತೋ ಗೊತ್ತಿಲ್ಲ. ಆದರೆ ಮಡಿಕೇರಿಯ ಆ ತಾಯಿ ಮಗಳ ಅಸಲಿ ಕಥೆ ಬಯಲಾಗಿದೆ.

ಈ ಪ್ರಕರಣದ ಸೂತ್ರಧಾರಿ ರಚನಾ… ಆಕೆಗೆ ಬೆನ್ನಿಗೆ ನಿಂತವಳು ತಾಯಿ. ಮಡಿಕೇರಿ ನಿವಾಸಿಯಾಗಿರುವ ಮಹಿಳೆ ಈ ಹಿಂದೆಯೇ ಮದುವೆಯಾಗಿದ್ದು, ಗಂಡನಿಂದ ವಿಚ್ಛೇಧನೆ ಪಡೆದು ಮಗಳ ಜತೆಯಲ್ಲಿ ವಾಸವಿದ್ದಳು ಎನ್ನಲಾಗಿದೆ. ಮಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಫೇಸ್ ಬುಕ್ ಬಗೆ, ಬಗೆಯ ಫೋಟೋ, ರೀಲ್ಸ್ ಗಳನ್ನು ಮಾಡುತ್ತಾ ಪಡ್ಡೆ ಹುಡುಗರ ನಿದ್ದೆ ಗೆಡಿಸುವ ಕೆಲಸ ಮಾಡಿದ್ದಳು. ಇನ್ನು ಫೇಸ್ ಬುಕ್ ನಲ್ಲಿ ಪರಿಚಯವಾಗುವವರೊಂದಿಗೆ ಚಾಟ್ ಮಾಡುತ್ತಾ ಅವರಿಂದ ಹಣ ಪೀಕುವುದರಲ್ಲಿ ನಿಸ್ಸೀಮಳಾಗಿದ್ದಳು. ಹೀಗಿರುವಾಗಲೇ ಅವಳಿಗೆ ಫೇಸ್ ಬುಕ್ ನಲ್ಲಿ ಪರಿಚಯವಾದವನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಕೆರೆ ನಿವಾಸಿಯಾಗಿದ್ದು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹದೇವ್(39).
ಈತನೊಂದಿಗೆ ಕ್ಲೋಸ್ ಆಗಿ ಚಾಟ್ ಮಾಡುತ್ತಿದ್ದರಿಂದ ಆಕೆಯ ಮೇಲೇ ಆತನಿಗೆ ನಂಬಿಕೆ ಬಂದಿತ್ತು. ಪ್ರತಿ ದಿನ ಚಾಟ್ ಫೋನ್ ಅಂಥ ದಿನಗಳು ಕಳೆದಿದ್ದವು. ಈ ನಡುವೆ ಆತನ ಬಗ್ಗೆ ತಿಳಿದುಕೊಂಡು ಅವನಿಂದ ಫೋನ್ ಪೇ ಮೂಲಕ 5ಸಾವಿರ ಹಣವನ್ನು ಪೀಕಿದ್ದಳು. ಆದರೆ ಅದನ್ನು ವಾಪಸ್ ಕೊಡುವ ಗೋಜಿಗೆ ಹೋಗಿರಲಿಲ್ಲ. ಹೇಳಿದ ತಕ್ಷಣವೇ ಆತ ಹಣ ಹಾಕಿದ್ದರಿಂದ ಮತ್ತೊಮ್ಮೆ ಹಣ ಹಾಕಿಸಿಕೊಂಡಿದ್ದಳು. ಹೀಗೆ ಸುಮಾರು 10ಸಾವಿರದಷ್ಟು ಹಣವನ್ನು ಪಡೆದಿದ್ದಳು. ಆದರೆ ಆಕೆ ಕೊಡಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಹಣ ನೀಡುವಂತೆ ಕೇಳಲಾರಂಭಿಸಿದನು. ಯಾವಾಗ ಆತ ಹಣ ಕೇಳಲು ಆರಂಭಿಸಿದನೋ ಆಕೆ ಅವನನ್ನು ಬದಿಗಿಡುವ ಪ್ರಯತ್ನ ಮಾಡಿದಳು.

ಈ ನಡುವೆ ಆಕೆಗೆ ಕೊಟ್ಟ ಹಣ ಸಿಗಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಮೇಲಿಂದ ಮೇಲೆ ಹಣಕೊಡುವಂತೆ ಮಹದೇವ್ ಒತ್ತಾಯಿಸತೊಡಗಿದನು. ಹೀಗಾಗಿ ಇವನಿಂತ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದರಿತ ಆಕೆ ತನ್ನ ತಾಯಿ ಮತ್ತು ಪರಿಚಿತರಾದ ದಿನೇಶ್, ಸುಜಿತ್, ದರ್ಶನ್ ಅವರೊಂದಿಗೆ ಸೇರಿ ಮಹದೇವನನ್ನು ಮಡಿಕೇರಿಗೆ ಕರೆಯಿಸಿಕೊಂಡು ಅವನ ಸಾಲವನ್ನು ಮರು ಪಾವತಿ ಮಾಡುವ ಬದಲಿಗೆ ಅವನಿಂದಲೇ ಹಣಪೀಕುವ ಸಂಚು ರೂಪಿಸಿದ್ದರು.

ಯುವತಿಗೆ ಫೋನ್ ಮಾಡಿದ ಮಹದೇವನಿಗೆ ನಿನ್ನ ಹಣ ಕೊಡಲು ಸಾಧ್ಯವಾಗಲ್ಲ. ಬದಲಿಗೆ ನೀನು ಬಂದರೆ ನಿನಗೆ ಸುಖ ನೀಡುವುದಾಗಿ ಹೇಳಿದ್ದಲ್ಲದೆ, ನೀನು ಬಂದರೆ ಕುಶಾಲನಗರ ಅಥವಾ ಮೈಸೂರಿನಲ್ಲಿ ರೂಂ ಮಾಡಿಕೊಂಡು ಜಾಲಿಯಾಗಿ ಕಳೆಯೋಣ ಎಂದಿದ್ದಾಳೆ. ಆತ ಹಿಂದೆ ಮುಂದೆ ಆಲೋಚಿಸದೆ ಡಿಸೆಂಬರ್ 12ರಂದು ಬೆಂಗಳೂರಿನಿಂದ ಮಡಿಕೇರಿ ಬಸ್ ಹತ್ತಿದ್ದಾನೆ. ರಾತ್ರಿ 10.30ರ ವೇಳೆಗೆ ಮಡಿಕೇರಿ ಬಸ್ ನಿಲ್ದಾಣ ತಲುಪಿದ ಮಹದೇವ ಅಲ್ಲಿಂದ ರಚನಾಗೆ ಫೋನ್ ಮಾಡಿದ್ದಾನೆ.

ಈ ವೇಳೆ ಮಡಿಕೇರಿ ಪಟ್ಟಣದ ನಕ್ಷತ್ರ ಸೂಪರ್ ಮಾರ್ಕೇಟ್ ಬಳಿಗೆ ಬರುವಂತೆ ರಚನಾ ಹೇಳಿದ್ದು ಅದರಂತೆ ಅವನು ಅಲ್ಲಿಗೆ ಹೋಗಿದ್ದಾನೆ. ಆ ನಂತರ ರಚನಾ ಅವನನ್ನು ರಾತ್ರಿ 11.45ರ ವೇಳೆಗೆ ಮಂಗಳಾದೇವಿ ನಗರದ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದು, ಮನೆಯ ರೂಂನಲ್ಲಿ ಕುಳಿತು ಆತನೊಂದಿಗೆ ಮಾತನಾಡಿದ್ದಾಳೆ. ಆದರೆ ಹೊರಗೆ ಏನು ಮಾಡಬೇಕು ಎಂಬುದರ ಬಗ್ಗೆ ಮೊದಲೇ ತಾಯಿ ಮತ್ತು ದಿನೇಶ್ ಗೆ ತಿಳಿಸಿದ್ದರಿಂದ ಅದರಂತೆ ಯುವತಿ ನಡೆದುಕೊಂಡಿದ್ದಾಳೆ. ಪಾನೀಯ ಕೊಟ್ಟು ಉಪಚರಿಸುವ ಮೂಲಕ ಯಾವುದೇ ಸಂಶಯ ಬಾರದಂತೆ ನೋಡಿಕೊಂಡಿದ್ದಾಳೆ. ಅಷ್ಟರಲ್ಲಿಯೇ ಆಕೆಯ ತಾಯಿ ದಿನೇಶ್ ಮನೆಯೊಳಗೆ ನುಗ್ಗಿ ಮಹದೇವನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ದಿನೇಶ್ ನೀವು ಹೋಗಿ ನಾವು ನೋಡಿಕೊಳ್ಳುತ್ತೇವೆ ಎನ್ನುತ್ತಾ ಅವರನ್ನು ಹೊರ ಕಳಿಸಿದ್ದು, ಬಳಿಕ ದಿನೇಶ್ ಗೆಳೆಯರಾದ ಸುಜಿತ್, ದರ್ಶನ್ ಗೆ ಫೋನ್ ಮಾಡಿ ಅಲ್ಲಿಗೆ ಕರೆಯಿಸಿಕೊಂಡಿದ್ದು ನಂತರ ಮೂವರು ಸೇರಿಕೊಂಡು ಮಹದೇವನಿಗೆ ಕೈಗಳಿಂದ, ದೊಣ್ಣೆಯಿಂದ ಮತ್ತು ಕತ್ತಿಯ ಹಿಡಿಯಿಂದ ಮುಖಕ್ಕೆ ಬಾಯಿಗೆ, ಎಡ ಎದೆಯ ಭಾಗಕ್ಕೆ ಹಾಗೂ ಎಡ ಕಾಲಿನ ಮಂಡಿಗೆ ಹೊಡೆದಿದ್ದು, ಬಟ್ಟೆಯನ್ನು ಬಲವಂತವಾಗಿ ಬಿಚ್ಚಿ ಬೆತ್ತೆಲೆ ಮಾಡಿ ಮೊಬೈಲ್ ಗಳಿಂದ ಅವನ ಬೆತ್ತಲೆ ವಿಡಿಯೋವನ್ನು ಮಾಡಿಕೊಂಡು 50 ಲಕ್ಷ ಹಣ ಕೊಡು ಇಲ್ಲದಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೆದರಿಸಿದ್ದಾರೆ.

ನೀನು ಹಣ ಕೊಡದಿದ್ದರೆ ಬಿಡಲ್ಲ ಎನ್ನುತ್ತಾ ಆ ರಾತ್ರಿ ಪೂರ್ತಿ ನಿಕ್ಕರ್ ನಲ್ಲಿ ಮನೆಯೊಳಗೆ ಕೂಡಿ ಹಾಕಿದ್ದಾರೆ. ಬೆಳಗ್ಗೆ ಮಹದೇವ್ ಬಾತ್ ರೂಮಿಗೆ ಹೋಗುವುದಾಗಿ ಹೇಳಿ ಧರಿಸಿದ್ದ ಒಳಚೆಡ್ಡಿಯೊಂದಿಗೆ ಮನೆಯಿಂದ ತಪ್ಪಿಸಿಕೊಂಡಿದ್ದಾನೆ. ಈ ವೇಳೆ ರವಿಯನ್ನು ಕರೆಯಿಸಿ ಆತನ ಆಟೋದಲ್ಲಿ ಆರೋಪಿಗಳು ಅವನನ್ನು ಹಿಂಬಾಲಿಸಿದ್ದಾರೆ. ಆದರೆ ಅದ್ಯಾಗೋ ಅಲ್ಲಿಂದ ತಪ್ಪಿಸಿಕೊಂಡ ಮಹದೇವ್ ಅವರಿವರನ್ನು ಕೇಳಿಕೊಂಡು ಮಡಿಕೇರಿ ನಗರ ಪೊಲೀಸ್ ಠಾಣೆಯನ್ನು ತಲುಪಿ ನಡೆದ ಕಥೆಯನ್ನು ಪೊಲೀಸರ ಮುಂದೆ ಹೇಳಿದ್ದಾನೆ. ಪೊಲೀಸರು ಮಂಗಳಾದೇವಿ ನಗರದ ಮನೆ ತಲುಪುವ ಹೊತ್ತಿಗೆ ಅವರು ಅಲ್ಲಿಂದ ಪರಾರಿಯಾಗಿದ್ದರು. ಸದ್ಯ ಮಹದೇವ್ ನೀಡಿದ ದೂರಿನ ಮೇರೆಗೆ ಯುವತಿ, ಆಕೆಯ ತಾಯಿ ಮತ್ತು ದರ್ಶನ್ ಆಟೋ ಚಾಲಕ ರವಿ ಎಂಬುರನ್ನು ಬಂಧಿಸಲಾಗಿದೆ. ದಿನೇಶ್ ಮತ್ತು ಸುಜಿತ್ ಗಾಗಿ ಹುಡುಕಾಟ ನಡೆಸಿದ್ದಾರೆ.

ಕೊಡಗು ಪ್ರವಾಸೋದ್ಯಮ ಜಿಲ್ಲೆಯಾಗಿದ್ದು, ಇಲ್ಲಿಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಹೀಗಿರುವಾಗ ಇಂತಹ ಘಟನೆಗಳಿಂದ ಜಿಲ್ಲೆಯ ಬಗ್ಗೆ ಕೆಟ್ಟ ಸಂದೇಶ ಹೊರಹೋಗಬಾರದು. ಇನ್ನು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಸಂಬಂಧಿಸಿದವರು ಕಠಿಣ ಕ್ರಮ ಕೈಗೊಳ್ಳಬೇಕಿದೆ.
-ಬಿ.ಎಂ.ಲವಕುಮಾರ್






