ಮೈಸೂರು: ಶೃಂಗೇರಿ ಶಾರದಾಪೀಠದ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಸ್ವಾಮಿಗಳು ಸನ್ಯಾಸ ಸ್ವೀಕರಿಸಿ 50ನೇ ವರ್ಷದ ಶುಭ ಸಂದರ್ಭದ ಹಿನ್ನಲೆಯಲ್ಲಿ ಶನಿವಾರ(ಡಿ.20) ಸಂಜೆ ಮೈಸೂರು ಅರಮನೆ ಅಂಗಳದಲ್ಲಿ ಸುವರ್ಣಭಾರತೀ ಎಂಬ ಶೀರ್ಷಿಕೆಯ ಅಡಿಯಲ್ಲಿ ಆಯೋಜಿಸಿದ್ದ ಕಲ್ಯಾಣವೃಷ್ಟಿ ಮಹಾಭಿಯಾನದ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನೆರೆದು ಶಂಕರ ಸ್ತೋತ್ರಗಳನ್ನು ಪಠಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಈ ವೇಳೆ ಶೃಂಗೇರಿ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಮಾತನಾಡಿ, ಸ್ತೋತ್ರಕ್ಕೆ ಅಪಾರವಾದ ಶಕ್ತಿಯಿದೆ. ನಮ್ಮ ಆರಾಧ್ಯ ದೈವದ ಜತೆ ಮಾತನಾಡಲು ಸ್ತೋತ್ರದಿಂದ ಸಾಧ್ಯವಾಗಲಿದೆ. ಒಬ್ಬರ ಜತೆ ಮಾತಾನಾಡಿದ ರೀತಿಯಲ್ಲಿ ಮತ್ತೊಬ್ಬರ ಜತೆ ಮಾತನಾಡಲು ಸಾಧ್ಯವಿಲ್ಲ. ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಶೈಲಿ ಬೇರೆಯಾಗಿರುತ್ತದೆ. ಭಗವಂತನ ಜತೆ ಮಾತನಾಡಲು ಅತ್ಯಂತ ಉತ್ಕೃಷ್ಟವಾಗಿರುವುದೇ ಸ್ತೋತ್ರ ಎಂದರು.
ವೈದಿಕ ಧರ್ಮದ ಉದ್ಧಾರಕರಾದ ಆದಿಶಂಕರರ ರಚಿಸಿದ ಸ್ತೋತ್ರಗಳು ಪ್ರಭಾವಶಾಲಿಯಾಗಿದೆ. ಸ್ತೋತ್ರಗಳ ಮೂಲಕ ನಮ್ಮ ಆರಾಧ್ಯ ದೈವದೊಂದಿಗೆ ಮಾತನಾಡಲು ಸಾಧ್ಯವಿದೆ. ಅಂತಹ ಭಾಷೆಯೇ ಪರಂಪರೆಯಾಗಿ ಬಂದಿರುವ ಸ್ತೋತ್ರಗಳಾಗಿದ್ದು, ಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ನೀಡಿ, ಅದರ ಸಾಕ್ಷಾತ್ಕಾರಕ್ಕೆ ಅಗತ್ಯವಿರುವ ಉಪದೇಶಗಳನ್ನು ನೀಡುವ ಮೂಲಕ ಭಗವಂತನೊಂದಿಗೆ ಮಾತನಾಡುವ ರೀತಿ, ಏನನ್ನು ಕೇಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ನಾವು ಏನನ್ನು ಪ್ರಾರ್ಥನೆ ಮಾಡಬೇಕೆಂದು ಶಂಕರರು ತೋರಿಸಿಕೊಟ್ಟಿದ್ದಾರೆ. ಸ್ತೋತ್ರಗಳ ಮೂಲಕ ನಮ್ಮ ಮನಸ್ಸಿನ ಅಭಿಪ್ರಾಯವನ್ನು ದೇವರ ಚರಣದಲ್ಲಿಟ್ಟಾಗ ನೆರವೇರಿಸುತ್ತಾರೆ. ಅದ್ಭುತವಾದ ಸ್ತೋತ್ರಗಳನ್ನು ಶಂಕರರು ರಚನೆ ಮಾಡಿದ್ದಾರೆ. ಸ್ತೋತ್ರಗಳ ವೈಶಿಷ್ಟ್ಯ ಅನಂತವಾದುದು ಎಂದು ಹೇಳಿದರು.

ಪ್ರತಿಯೊಂದು ಸ್ತೋತ್ರಗಳಲ್ಲಿನ ವೈಶಿಷ್ಟ್ಯ ಅನಂತವಾದದ್ದು, ಈ ಸ್ತೋತ್ರಗಳನ್ನು ಎಲ್ಲರೂ ಪಠಣ ಮಾಡುವುದರ ಮೂಲಕ ಎಲ್ಲರೂ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕೆಂಬ ಉದ್ದೇಶದೊಂದಿಗೆ ಸ್ತೋತ್ರ ಪಾರಾಯಣ ಅಭಿಯಾನ ಆರಂಭಿಸಲಾಯಿತು. ಅದರಂತೆ ಅರಮನೆ ಆವರಣದಲ್ಲಿ ನಡೆದ ಸ್ತುತಿಶಂಕರ ಸ್ತೋತ್ರ ಪಾರಾಯಣದಲ್ಲಿ ಸಹಸ್ರಾರು ಮಂದಿ ಏಕಕಂಠದಲ್ಲಿ ಸ್ತೋತ್ರಗಳ ಪಠಣೆ ಮಾಡಿರುವುದು ಸಂತಸ ತಂದಿದೆ ಎಂದರು.
ಇದಕ್ಕೂ ಮುನ್ನಾ ಮಾತನಾಡಿದ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಬ್ರಹ್ಮಾನಂದ ಭಾರತಿ ಸ್ವಾಮೀಜಿ, ನಮ್ಮ ಹಣೆ ಬರಹವನ್ನು ನಾವೇ ತಿದ್ದಬೇಕು. ಬಹಳ ಜನಗಳಿಗೆ ಸ್ತೋತ್ರ ಎಂದರೆ ಅದೆಂತಹುದೋ ಭಾವನೆಯಿದೆ. ಸ್ತೋತ್ರಗಳು ನಮ್ಮ ಹಣೆ ಬರಹವನ್ನು ಬದಲಿಸುತ್ತವೆ. ಈ ಮಾತನ್ನು ವೈದ್ಯರು ಸಹ ಹೇಳುತ್ತಾರೆ. ಸ್ವತಃ ಶಂಕರರು ಈ ಮಾತನ್ನು ಹೇಳಿದ್ದಾರೆ. ನಕ್ಷತ್ರ ಮಾಲಿಕ ಸ್ತೋತ್ರಕ್ಕೆ ವಿಶಿಷ್ಟ ಮಹತ್ವವಿದೆ ಎಂದರು.
ಒಂದು ಲಕ್ಷ ಜನಕ್ಕೆ ಇದನ್ನು ತಲುಪಿಸುವ ಗುರಿಯೊಂದಿಗೆ ಮೈಸೂರಿನಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಅರಮನೆ ಮೊದಲು ಕೂಡ ಗುರು ಮನೆಯಾಗಿತ್ತು. ಅರಮನೆ ಇಂದಿಗೂ ಗುರುಮನೆಯಾಗಿಯೇ ಉಳಿದಿದೆ. ಗುರುಗಳ ಬಗ್ಗೆ ರಾಜಮನೆತನಕ್ಕೆ ಅಪಾರವಾದ ಶ್ರದ್ದಾ ಭಕ್ತಿಯಿದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ. ಪ್ರಮೋದಾದೇವಿ ಒಡೆಯರ್ ಒತ್ತಾಸೆಯಿಂದಾಗಿ ಪ್ರತಿವರ್ಷ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲು ಸಾಧ್ಯವಾಗಿದೆ. ಇದಕ್ಕೆ ಯದುವೀರ್ ಒಡೆಯರ್ ಕೂಡ ಸಹಕಾರ ನೀಡುತ್ತಾ ಬಂದಿರುವುದು ಸ್ತುತ್ಯಾರ್ಹವಾಗಿದೆ ಎಂದು ಹೇಳಿದರು.
ಈ ಸಂದರ್ಭ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ವೇದಾಂತ ಭಾರತಿ ಸ್ವಾಮೀಜಿ, ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕುಟುಂಬ, ಶಾಸಕ ಶ್ರೀವತ್ಸ, ಸ್ತುತಿಶಂಕರ ಸಂಚಾಲನ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರಶೆಟ್ಟಿ, ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಯೋಗಾತ್ಮ ಶ್ರೀಹರಿ, ಕಾಂಗ್ರೆಸ್ ಮುಖಂಡ ಎಚ್ .ವಿ ರಾಜೀವ್, ಬಿಜೆಪಿ ಮುಖಂಡ ರಘು ಕೌಟಿಲ್ಯ ಸೇರಿದಂತೆ ಅನೇಕರು ಇದ್ದರು.








