ArticlesLatest

ವಾಹನ ಚಲಾಯಿಸುವವರೇ ನಿಮ್ಮನ್ನು ಕಾಯುವವರು ಮನೆಯಲ್ಲಿದ್ದಾರೆ!… ಪೊಲೀಸ್ ಇಲಾಖೆ ಮನವಿ ಏನು?

 ನಮ್ಮದೀಗ ಧಾವಂತದ ಬದುಕು ಎಲ್ಲವೂ ತಕ್ಷಣದಲ್ಲಿಯೇ ಆಗಬೇಕು… ಸ್ವಲ್ಪವೂ ಕಾಯುವ ವ್ಯವಧಾನವಿಲ್ಲ. ಹೀಗಾಗಿಯೇ ದಿನನಿತ್ಯವೂ ಒಂದಲ್ಲ ಒಂದು ದುರಂತಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಅದರಲ್ಲೂ ವಾಹನಗಳ ವಿಚಾರದಲ್ಲಿ ಅದನ್ನು ಚಲಾಯಿಸುವ ವಿಷಯದಲ್ಲಿ ಬಹುತೇಕರಿಗೆ ತಾಳ್ಮೆಯೇ ಇಲ್ಲದಂತಾಗಿದೆ. ನಿಜವಾಗಿಯೂ ವಾಹನ ಚಲಾಯಿಸುವಾಗ ಇರಬೇಕಾದ ಎಚ್ಚರಿಕೆ ಮತ್ತು ತಾಳ್ಮೆ ಕಳೆದು ಹೋಗಿದೆ. ಅದರಲ್ಲೂ ನಿಧಾನವಾಗಿ ಚಲಾಯಿಸುವ, ಕಾದು ಮುಂದೆ ಸಾಗುವ ಮನಸ್ಸಂತು  ಹೆಚ್ಚಿನವರಿಗೆ ಇಲ್ಲದಾಗಿದೆ. ಬದುಕಿನಲ್ಲಿ ಎಲ್ಲವನ್ನೂ ಕಾಯುವ ನಾವು ಸಿಗ್ನಲ್ ನಲ್ಲಿ ಮತ್ತು ವಾಹನಗಳನ್ನು ಹಿಂದಿಕ್ಕುವ ಸಂದರ್ಭದಲ್ಲಿ ಸ್ವಲ್ಪವೂ ಕಾಯುವ ಗೋಜಿಗೆ ಹೋಗುವುದಿಲ್ಲ ಇದರ ಪರಿಣಾಮವೇ ಅಪಘಾತಗಳಾಗಿವೆ.

ಇವತ್ತು ಅಪಘಾತಗಳಿಂದ ಏನೆಲ್ಲ ಸಮಸ್ಯೆಯಾಗಿದೆ ಎಂಬುದು ಅಪಘಾತಕ್ಕೀಡಾದ ಕುಟುಂಬಗಳಿಗಷ್ಟೇ ಗೊತ್ತು. ಎಲ್ಲವನ್ನು ಸ್ವತಃ ಅನುಭವಿಸಿದಾಗಲಷ್ಟೆ ಅದರ ಕಷ್ಟನಷ್ಟಗಳು, ನೋವುಗಳು ಅರ್ಥವಾಗುವುದು. ವಾಹನ ಚಲಾಯಿಸುವ ವಿಚಾರದಲ್ಲಿ ಹತ್ತು ಹಲವು ರೀತಿಯ ಸಲಹೆಗಳನ್ನು ನೀಡಿದರೂ ಅದನ್ನು ಗಾಳಿಗೆ ತೂರುವ ವಾಹನ ಚಾಲಕರು ಅದರಿಂದ ತಾವು ಮಾತ್ರ ಕಷ್ಟನಷ್ಟಗಳನ್ನು ಅನುಭವಿಸದೆ ಬೇರೆಯವರಿಗೂ ಹಂಚಿ ಬಿಡುತ್ತಾರೆ. ಬಹಳಷ್ಟು ಸಂದರ್ಭಗಳಲ್ಲಿ ಅಮಾಯಕರು ಬಲಿಯಾಗಿ ಬಿಡುತ್ತಾರೆ.

ಇದ್ಯಾವುದೂ ಗೊತ್ತಿಲ್ಲದ ವಿಚಾರವೇನಲ್ಲ.. ಗೊತ್ತಿದ್ದೂ ಮಾಡುವ ಪ್ರಮಾದವಷ್ಟೆ.. ಇಂತಹವರಿಗಾಗಿಯೆ ಪೊಲೀಸ್ ಇಲಾಖೆ ಮನವಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇದರಲ್ಲಿರುವ ವಿಚಾರವನ್ನು ವಾಹನ ಚಲಾಯಿಸುವ ಪ್ರತಿಯೊಬ್ಬರು ಓದಿ ಮನದಟ್ಟು ಮಾಡಿಕೊಂಡರೆ ಅಪಘಾತಗಳ ಸಂಖ್ಯೆ ಕಡಿಮೆ ಆಗಬಹುದೇನೋ? ಬೇರೆಯವರು ಏನು ಮಾಡುತ್ತಾರೆ ಎಂಬುದು ಮುಖ್ಯವಲ್ಲ ನಾವೇನು ಮಾಡುತ್ತೇವೆ ಎನ್ನುವುದು ಮುಖ್ಯ ಹೀಗಾಗಿ ನಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾಡೋಣ.. ವಾಹನ ಚಲಾಯಿಸುವ ವೇಳೆ ಹಲವು ಸಂದರ್ಭಗಳಲ್ಲಿ ಒಂದು ನಿಮಿಷಲೂ ಕಾಯದೆ ಮಾಡಿಕೊಳ್ಳುವ ಪ್ರಮಾದಗಳು ಜೀವನ ಪರ್ಯಂತ ನಮ್ಮನ್ನು ನಾವೇ ಅಥವಾ ಬೇರೆಯವರು ಕಾಯುವಂತೆ ಮಾಡಿ ಬಿಡುತ್ತದೆ.

ಇಷ್ಟಕ್ಕೂ ಪೊಲೀಸ್ ಇಲಾಖೆಯ ಕಳಕಳಿ ಏನು ಎಂಬುದನ್ನು ನೋಡುತ್ತಾ ಹೋದರೆ ಹತ್ತಾರು ವಿಚಾರಗಳು ಮನದಟ್ಟಾಗುತ್ತದೆ. ಅದೇನೆಂದರೆ  ಈ ಭೂಮಿಯಲ್ಲಿ ಮತ್ತೆ ಹುಟ್ಟಲು ನಾವು ತಾಯಿಯ ಗರ್ಭದಲ್ಲಿ 9 ತಿಂಗಳು ಕಾಯಬೇಕು, ನಡೆಯಲು 2 ವರ್ಷಗಳು, ಶಾಲೆಗೆ ಹೋಗಲು 3 ವರ್ಷಗಳು, ಮತ ಚಲಾಯಿಸಲು 18 ವರ್ಷಗಳು,  ಉದ್ಯೋಗ ಪಡೆಯಲು 25 ವರ್ಷಗಳು,  ಮದುವೆಯಾಗಲು 25 ರಿಂದ 30 ವರ್ಷಗಳು… ಹೀಗೆ  ನಾವು ಜೀವನದುದ್ದಕ್ಕೂ ಕಾಯುತ್ತಲೇ ಬಂದಿದ್ದೇವೆ.

ಆದರೆ ವಾಹನಗಳನ್ನು ಹಿಂದಿಕ್ಕುವಾಗ… ಚಾಲನೆ ಮಾಡುವಾಗ, ನಾವು 30 ಸೆಕೆಂಡುಗಳ ಕಾಲ ನಿಲ್ಲಲು ತಯಾರಿರುವುದಿಲ್ಲ. ಇಲ್ಲಿ ನಾವು ಕಾಯಲು ತಯಾರಿಲ್ಲದೆ ಮಾಡುವ ಚಿಕ್ಕ ತಪ್ಪುಗಳಿಂದ ದೊಡ್ಡ ಅಪಘಾತವಾಗಿ ಗಂಟೆಗಳು, ದಿನಗಳು, ವಾರಗಳು, ತಿಂಗಳುಗಳು ಮತ್ತು ಅಗತ್ಯವಿದ್ದರೆ ವರ್ಷಗಳ ಕಾಲ ಆಸ್ಪತ್ರೆಯಲ್ಲಿ ನಮ್ಮ ದೇಹ ಮತ್ತು ಆರೋಗ್ಯವನ್ನು ಕಾಯುವ ಪರಿಸ್ಥಿತಿ ಬಂದೊದಗುತ್ತದೆ. ಅದಕ್ಕಿಂತ ಹೆಚ್ಚಾಗಿ ನಮ್ಮ ಜೀವವೇ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ  ಕೆಲವು ಸೆಕೆಂಡುಗಳ ಅಜಾಗರೂಕತೆಯು ಉಂಟು ಮಾಡುವ ಭಯಾನಕ ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಯೋಚಿಸಲೇ ಬೇಕಾಗಿದೆ.

ಮುಂದೆ ಹೋಗುವವರು ಹೋಗಲಿ… ಹಿಂದೆ ಇರುವವರು ಆರಾಮವಾಗಿ ಹೋಗಲಿ…. ನಾವು ನಿಧಾನ ಮತ್ತು ಜಾಗರೂಕತೆಯಿಂದ ಮುಂದೆ ಸಾಗೋಣ ಎಂಬ ಆಲೋಚನೆ ನಮ್ಮದಾಗ ಬೇಕಾಗಿದೆ. ವಾಹನ ಚಲಾಯಿಸುವವರು ಸಂಚಾರ ನಿಯಮಗಳನ್ನು ಪಾಲಿಸುತ್ತಾ ಸರಿಯಾದ ವೇಗದಲ್ಲಿ, ಸರಿಯಾದ ದಿಕ್ಕಿನಲ್ಲಿ ಅನುಸರಿಸುತ್ತಾ.. ಹೆಲ್ಮೆಟ್ ಧರಿಸಿ… ಮತ್ತು ವಾಹನಗಳನ್ನು ನಿಯಂತ್ರಣದಲ್ಲಿಟ್ಟು  ಮುಂದೆ ಸಾಗಿದರೆ  ಗಮ್ಯಸ್ಥಾನವನ್ನು ಸುರಕ್ಷಿತವಾಗಿ ತಲುಪಲು ಸಾಧ್ಯವಾಗಲಿದೆ. ಏಕೆಂದರೆ ಪ್ರತಿಯೊಬ್ಬರಿಗೂ ಕಾಯುವವರು ಅಂಥ ಒಬ್ಬರು ಇದ್ದೇ ಇರುತ್ತಾರೆ ಅಲ್ಲವೆ…? ಪೊಲೀಸ್ ಇಲಾಖೆಯ ಈ ಪ್ರಕಟಣೆ ಎಷ್ಟೊಂದು ಅರ್ಥಪೂರ್ಣ ಅಲ್ಲವೆ?

admin
the authoradmin

Leave a Reply